Kannadathi Serial: ಕನ್ನಡ ದ್ವೇಷಿ ಮ್ಯಾನೇಜರ್ ಮುಖಕ್ಕೆ ಮಸಿ, ಇದು ಪಾಠ ಆಗ್ಲಿ ಅಂತಿದ್ದಾರೆ ಕನ್ನಡಾಭಿಮಾನಿಗಳು!

By Suvarna NewsFirst Published Jan 16, 2023, 4:01 PM IST
Highlights

ಬೆಂಗಳೂರು ಕರ್ನಾಟಕದ ರಾಜಧಾನಿ ಆದ್ರೂ ಇಲ್ಲಿ ಕನ್ನಡಕ್ಕಿರುವ ಬೆಲೆ ದೇವರಿಗೇ ಪ್ರೀತಿ. ಹೀಗಿರುವಾಗ ಕನ್ನಡತಿ ಸೀರಿಯಲ್‌ನಲ್ಲಿ ಕನ್ನಡ ದ್ವೇಷಿಗಳಿಗೆ ಒಂದು ಪಾಠ ಇದೆ. ಇದು ಎಲ್ಲರಿಗೂ ಪಾಠ ಆಗಲಿ ಅಂತಿದ್ದಾರೆ ಕನ್ನಡತಿ ಅಭಿಮಾನಿಗಳು.

ಕನ್ನಡತಿ (kannadathi ) ಸೀರಿಯಲ್‌ (tv serial) ಆರಂಭದಿಂದಲೂ ಕನ್ನಡಾಭಿಮಾನವನ್ನು ಎತ್ತಿ ತೋರಿಸುತ್ತಲೇ ಬಂದಿರೋ ಸೀರಿಯಲ್‌. ಈ ಸೀರಿಯಲ್‌ನಲ್ಲಿ ಕನ್ನಡ ಪದಗಳ ತಪ್ಪು ಬಳಕೆ, ಸರಿಯಾದ ಬಳಕೆ ಯಾವುದು ಅನ್ನೋದರ ಬಗೆಗೂ ಪಾಠ ಇರುತ್ತಿತ್ತು. ಇದೀಗ ಕನ್ನಡತಿ ಮುಕ್ತಾಯದ ಹಂತಕ್ಕೆ ಬಂದು ನಿಂತಿದೆ. ಅಷ್ಟರಲ್ಲಾಗಲೆ ಈ ಸೀರಿಯಲ್‌ನಲ್ಲಿ ಒಂದು ಸ್ಟ್ರಾಂಗ್ ಮೆಸೇಜ್‌ ಅನ್ನೂ ನೀಡಲಾಗಿದೆ. ರೆಸ್ಟೊರೆಂಟ್‌ಗಳಲ್ಲಿ, ಕೆಫೆಗಳಲ್ಲಿ ಕನ್ನಡ ಮಾತನಾಡದವರಿಗೆ, ಕನ್ನಡವನ್ನು ದ್ವೇಷಿಸುವವರಿಗೆ ಕನ್ನಡಿಗರು ಹೇಗೆ ಪಾಠ ಕಲಿಸುತ್ತಾರೆ ಅನ್ನೋದನ್ನು ತರಲಾಗಿದೆ. ಇದಕ್ಕೆ ಪ್ರೇಕ್ಷಕರ ವಲಯದಿಂದಲೂ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಕನ್ನಡ ನಾಡಿನಲ್ಲಿದ್ದುಕೊಂಡು ಕನ್ನಡವನ್ನು ಪ್ರೀತಿಸಬೇಕು, ಕನ್ನಡದಲ್ಲೇ ವ್ಯವಹರಿಸಬೇಕು. ಅದರ ಬದಲು ಕನ್ನಡ ಮಾತಾಡೋದು ಪ್ರತಿಷ್ಠೆಗೆ ಕಡಿಮೆ, ಕನ್ನಡ ಮಾತಾಡಿದರೆ ತಮ್ಮ ಸ್ಥಾನ ಕುಸಿಯುತ್ತದೆ ಅನ್ನೋ ಮನಸ್ಥಿತಿ ಇರುವವರಿಗೆ ಈ ಎಪಿಸೋಡ್‌ನಲ್ಲಿ ತಕ್ಕ ಪಾಠ ಕಲಿಸಲಾಗಿದೆ. ಇದರ ಜೊತೆ ಇಂಥಾ ಸಂದರ್ಭದಲ್ಲೇ ಹರ್ಷ ಅಮ್ಮಮ್ಮನ ಘನತೆ ಹೆಚ್ಚಿಸೋ ಒಂದು ನಿರ್ಧಾರಕ್ಕೆ ಬಂದಿದ್ದಾನೆ. ಅದು ಏನು ಅಂತ ಸದ್ಯದಲ್ಲೇ ರಿವೀಲ್ ಆಗಲಿದೆ. 

ಕನ್ನಡತಿ ಸೀರಿಯಲ್‌ನ ಒಂದು ಭಾಗದಲ್ಲಿ ಹರ್ಷ ಮತ್ತು ಭುವಿ ಒಂದು ರೆಸ್ಟೊರೆಂಟ್‌ಗೆ ಮಧ್ಯಾಹ್ನ ಊಟಕ್ಕೆ ತೆರಳುತ್ತಾರೆ. ಆದರೆ ಅಲ್ಲಿ ಕನ್ನಡ ಮಾತಾಡುವವರನ್ನೇ ಅವಮಾನಿಸುವ ಕಾರ್ಯ ಅಲ್ಲಿಯ ಮ್ಯಾನೇಜರ್‌ನಿಂದ ಆಗುತ್ತದೆ. ಅದನ್ನು ವಿರೋಧಿಸಿದ ಹರ್ಷ ಮತ್ತು ಭುವಿಯ ಜೊತೆಗೆ ಆ ಮ್ಯಾನೇಜರ್‌ ಒಣ ಅಹಂಕಾರ ಪ್ರತಿಷ್ಠೆಯಿಂದಲೇ ಮಾತಾಡುತ್ತಾನೆ. ತನ್ನ ಗ್ರಾಹಕರು ಅನ್ನೋ ಸಾಮಾನ್ಯ ಜ್ಞಾನವೂ ಇಲ್ಲದ ಹಾಗೆ ಅವಮಾನಿಸುವ ಹಾಗೆ ಮಾತನಾಡುತ್ತಾನೆ. ನಮ್ಮ ಹೊಟೇಲಿನಲ್ಲಿ ನಮ್ಮದೇ ರೂಲ್ಸ್. ಅದನ್ನು ಯಾರೂ ಪ್ರಶ್ನೆ ಮಾಡೋ ಹಾಗಿಲ್ಲ. ಇಲ್ಲಿಗೆ ಬರೋರೆಲ್ಲ ಇಂಗ್ಲೀಷ್ ಮಾತಾಡೋರೆ. ಹೀಗಾಗಿ ಕನ್ನಡ ಮಾತಾಡೋರಿಗೆ ಇಲ್ಲಿ ಜಾಗ ಇಲ್ಲ. ನಮಗೆ ಕನ್ನಡ ಬೇಡ ಅನ್ನೋ ಧ್ವನಿಯಲ್ಲಿ ಮಾತಾಡುತ್ತಾರೆ. ಭುವಿ ಇದನ್ನು ಪ್ರಶ್ನೆ ಮಾಡಿದಾಗ ಆಕೆಗೆ ಕನಿಷ್ಠ ಗೌರವವನ್ನೂ ನೀಡದೇ ಅವಮಾನಿಸುವ ಹಾಗೆ ಆ ಮ್ಯಾನೇಜರ್ ಮಾತಾಡ್ತಾನೆ. ಭುವಿಯ ಬಗ್ಗೆ ಲಘುವಾಗಿ ಮಾತನಾಡಿದಾಗ ರೊಚ್ಚಿಗೇಳುವ ಹರ್ಷ ಮ್ಯಾನೇಜರ್‌ ಗೆ ಎಷ್ಟೇ ಬುದ್ಧಿವಾದ ಹೇಳಿದರೂ ಆತ ಅಹಂಕಾರ, ಕೊಬ್ಬಿನಲ್ಲೇ ಮಾತಾಡ್ತಾನೆ. ಹರ್ಷನ ಯಾವ ಮಾತನ್ನೂ ಕಿವಿಗೆ ಹಾಕಿಕೊಳ್ಳದೆ ತಾಳ್ಮೆ ಕಳೆದುಕೊಂಡು ಅರಚಾಡುತ್ತಾನೆ. 

ಕಪ್ಪಾಗಿರುವುದಕ್ಕೆ ಅವಮಾನ ಎದುರಿಸಿರುವೆ, ಮಧ್ಯೆರಾತ್ರಿ ಅಮ್ಮ ಅಳುತ್ತಿದ್ದಳು: ಲಕ್ಷಣ ಭಾವುಕ ಕ್ಷಣ

ಸಿಟ್ಟಲ್ಲೇ ರೆಸ್ಟೊರೆಂಟಿನಿಂದ ಆಚೆ ಬರೊ ಹರ್ಷ, ಭುವಿ ಎಷ್ಟೇ ಸಮಾಧಾನ ಹೇಳಿದರೂ ಕೇಳಿಸಿಕೊಳ್ಳೋ ಸ್ಥಿತಿಯಲ್ಲಿ ಇರೋದಿಲ್ಲ. ಇಲ್ಲೀವರೆಗೆ ಕನ್ನಡದ ಬಗ್ಗೆ ಅಷ್ಟು ತಲೆ ಕೆಡಿಸಿಕೊಳ್ಳದ ಹರ್ಷ ಇದೀಗ ಸಂಪೂರ್ಣ ಕನ್ನಡಾಭಿಮಾನಿಯಾಗಿ ಬದಲಾಗಿದ್ದಾನೆ. ಭುವಿಯ ದೆಸೆಯಿಂದ ಆತನಿಗೆ ಕನ್ನಡಕ್ಕಾಗುತ್ತಿರುವ ಅವಮಾನವನ್ನೂ ಸಹಿಸಲಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಆತ ಒಂದು ನಿರ್ಧಾರಕ್ಕೆ ಬರುತ್ತಾನೆ. ಆ ನಿರ್ಧಾರ ಯಾವುದು? ಅನ್ನೋದು ಕೆಲವೇ ದಿನಗಳಲ್ಲಿ ರಿವೀಲ್ ಆಗಲಿದೆ. ಸದ್ಯಕ್ಕೀಗ ಆ ಪ್ಲಾನ್‌ ಅನ್ನು ಕಾರ್ಯಗತ ಗೊಳಿಸೋದಕ್ಕೆ ಆತ ಭುವಿಯಿಂದ ಖಾಲಿ ಹಾಳೆಗೆ ಸಹಿ ಮಾಡಿಸಿಕೊಂಡಿದ್ದಾನೆ. ಅದರಲ್ಲಿ ಸೌಪರ್ಣಿಕಾ ಅಂತ ಸಹಿ ಮಾಡೋ ಭುವಿ ಆತನ ಹೊಸ ಕೆಲಸವನ್ನು ಆತಂಕ ಮತ್ತು ಕುತೂಹಲದಿಂದ ಎದುರು ನೋಡುತ್ತಿದ್ದಾಳೆ. 

ಅಮ್ಮಮ್ಮನ ಘನತೆಯನ್ನು ಎತ್ತಿ ಹಿಡಿಯುವ ಕೆಲಸ ಮಾಡುತ್ತೇನೆ ಅಂತ ಭುವಿಗೆ ಹರ್ಷ ಹೇಳಿದ್ದಾನೆ. ಅಂಥಾ ಕೆಲಸ ಯಾವುದು? ಹರ್ಷ ಕನ್ನಡದ ಕೆಫೆ ತೆರೆಯುತ್ತಾನಾ? ಅದು ಹೇಗಿರುತ್ತೆ? ಇತರರಿಗೆ ಹೇಗೆ ಮಾದರಿ ಆಗುತ್ತೆ ಅನ್ನೋದು ಕುತೂಹಲ ಮೂಡಿಸಿದೆ. ಇನ್ನೊಂದೆಡೆ ಈ ಸೀರಿಯಲ್‌ ಮುಂದಿನ ತಿಂಗಳ ಮೊದಲ ವಾರದಲ್ಲಿ ಅಂತ್ಯವಾಗುತ್ತಿದೆ. ಆದರೆ ಈ ಸೀರಿಯಲ್‌ ನೋಡುತ್ತಿದ್ದ ಬಹಳ ಮಂದಿ ಅಭಿಮಾನಿಗಳು ಈ ಸುದ್ದಿಯಿಂದ ಬೇಸರಗೊಂಡಿದ್ದಾರೆ.

click me!