ಹೂಮಳೆ ಅನ್ನೋ ಸೀರಿಯಲ್ ಮುಕ್ತಾಯವಾಗುತ್ತೆ ಅನ್ನೋದು ತಿಂಗಳ ಹಿಂದೆಯೇ ಕನ್ ಫರ್ಮ್ ಆಗಿತ್ತು. ಇದೀಗ ತರಾತುರಿಯಲ್ಲಿ ಸೀರಿಯಲ್ ಮುಗಿದು ಹೋಗಿದೆ. ಎಂಡಿಂಗ್ ನಲ್ಲಿ ಏನಾಯ್ತು ಅನ್ನೋ ಡೀಟೈಲ್ ಇಲ್ಲಿದೆ.
ಸೀರಿಯಲ್ ಶುರುವಾದ್ರೆ ಸಾಕು, ವರ್ಷಗಟ್ಟಲೆ ಎಳೆಯುತ್ತಲೇ ಹೋಗುತ್ತೆ. ಪ್ರೊಪೋಸ್ ಮಾಡುವಂಥಾ ಸನ್ನಿವೇಶಗಳನ್ನು ಎರಡ್ಮೂರು ವಾರ ಎಳೆಯದಿದ್ದರೆ ಅದು ಸೀರಿಯಲ್ಲೇ ಅಲ್ಲ ಅನ್ನೋ ಹಾಗಾಗಿದೆ. ಹಿಂದಿಯಲ್ಲಂತೂ ಒಂದು ಸೀರಿಯಲ್ ಹನ್ನೆರಡು ವರ್ಷಗಳ ಕಾಲ ನಡೀತಿದೆ. ಕಲಾವಿದರಿಗೆ ಮದುವೆಯಾಗಿ ಮಕ್ಕಳು ದೊಡ್ಡೋರಾದ್ರೂ ಸೀರಿಯಲ್ ಮುಗೀತಿಲ್ಲ ಅನ್ನೋ ಹಾಗಾಗಿದೆ.
ಆದರೆ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ 'ಹೂಮಳೆ' ಸೀರಿಯಲ್ ವರ್ಷಕ್ಕೂ ಮೊದಲೇ ಪ್ರೇಕ್ಷಕರಿಗೆ ಗುಡ್ ಬೈ ಹೇಳಿದೆ. ತಿಂಗಳ ಹಿಂದೆಯೇ ಸೀರಿಯಲ್ ಮುಗಿಯುತ್ತೆ ಅನ್ನೋದು ಕನ್ ಫರ್ಮ್ ಆಗಿತ್ತು. ಆಮೇಲೆ ಈ ಧಾರಾವಾಹಿಯಲ್ಲಿ ಕಾರ್ಪೊರೇಟರ್ ಕಾವೇರಿಯಾಗಿ ಮನೆಮಾತಾಗಿದ್ದ ಸುಜಾತಾ ಸೀರಿಯಲ್ ಮುಗೀತಿರೋದಕ್ಕೆ ಬೇಸರ ವ್ಯಕ್ತಪಡಿಸಿದ್ರು. ಉಳಿದ ಕಲಾವಿದರಿಗೂ ಸೀರಿಯಲ್ ಮುಕ್ತಾಯವಾಗುತ್ತಿರೋದಕ್ಕೆ ಬೇಸರವಾಗಿತ್ತು.
ಹಾಗೆ ನೋಡಿದರೆ ಈ ಸೀರಿಯಲ್ 'ಚೋಟಿ ಸರ್ದಾರಿಣಿ' ಅನ್ನೋ ಹೆಸರಲ್ಲಿ ಹಿಂದಿಯಲ್ಲಿ ಪ್ರಸಾರ ಮುಂದುವರಿಸಿದೆ. ಅಲ್ಲಿ ಕಲರ್ಸ್ ಹಿಂದಿಯಲ್ಲಿ ೨೦೧೯ರಿಂದ ಈವರೆಗೂ ಈ ಧಾರಾವಾಹಿ ಮುಂದುವರಿದಿದೆ. ತಮಿಳಿನಲ್ಲಿ ೩೩೫ ಎಪಿಸೋಡ್‌ಗೆ ಮುಕ್ತಾಯವಾಗಿದೆ. ಕನ್ನಡದಲ್ಲಿ ಒಂಭತ್ತು ತಿಂಗಳ ಪ್ರಸಾರದ ಬಳಿಕ ಈಗ ಮುಕ್ತಾಯ ಕಾಣುತ್ತಿದೆ. ೨೫೪ ಎಪಿಸೋಡ್ ಗೆ ಗುಡ್ ಬೈ ಹೇಳಿದೆ.
ಕಥೆ ಏನು?
ಜಾಲಿಯಾಗಿರುವ ಮುದ್ದು ಹುಡುಗಿ ಲಹರಿ. ಈಕೆ ಕಾರ್ಪೊರೇಟ್ ಕಾವೇರಿಯ ಮಗಳು. ಸಣ್ಣ ಹೊಟೇಲ್ ನಡೆಸೋ ಮುಕುಂದ ಅನ್ನೋ ಹುಡುಗನ ಮೇಲೆ ಲವ್ವಲ್ಲಿ ಬೀಳ್ತಾಳೆ. ಅವರಿಬ್ಬರ ಮಧ್ಯೆ ಸಂಬಂಧವೂ ಬೆಳೆಯುತ್ತೆ. ಇದರಿಂದ ಲಹರಿ ಗರ್ಭಿಣಿ ಆಗ್ತಾಳೆ. ಇತ್ತ ಈ ವಿಷಯ ಕಾರ್ಪೊರೇಟ್ ಕಾವೇರಿಗೆ ತಿಳಿಯುತ್ತದೆ. ತನ್ನ ಮಗಳು ಬಡ ಹುಡುಗನನ್ನು ಮದುವೆಯಾಗೋದನ್ನು ಸಹಿಸದ ಅವಳು ಮುಕುಂದನ ಕೊಲೆ ಮಾಡುತ್ತಾಳೆ. ಲಹರಿ ಗೃಹಬಂಧಿಯಾಗುತ್ತಾಳೆ.
ಆಕೆ ಈ ಆಘಾತದಲ್ಲಿರುವಾಗಲೇ ಪತ್ನಿಯನ್ನು ಕಳೆದುಕೊಂಡು ಒಂದು ಮಗುವಿನ ತಂದೆಯಾಗಿರುವ, ರೂಲಿಂಗ್ ಪಾರ್ಟಿ ಪ್ರೆಸಿಡೆಂಟ್ ಆಗಿರುವ ಯದುವೀರನ ಜೊತೆಗೆ ಬಲವಂತದಲ್ಲಿ ಮದುವೆ ಮಾಡುತ್ತಾಳೆ. ಹೀಗೆ ಸಾಗುವ ಕತೆಯಲ್ಲಿ ಒಂದು ಹಂತದಲ್ಲಿ ಯದುವೀರನಿಗೆ ಲಹರಿಯ ಮೇಲೆ ಪ್ರೀತಿ ಬೆಳೆಯುತ್ತದೆ. ಆಕೆಯ ಹೊಟ್ಟೆಯಲ್ಲಿರುವ ಮಗುವಿಗೆ ತಾನೇ ತಂದೆಯಾಗಿ ಆಕೆಯನ್ನು ಕಾಳಜಿಯಿಂದ ನೋಡಿಕೊಳ್ಳುತ್ತಾರೆ. ಮನೆಯವರೂ ಲಹರಿ ಹೊಟ್ಟೆಯಲ್ಲಿರುವುದು ಯದುವೀರ್ ಮಗುವೇ ಎಂದು ಖುಷಿಯಲ್ಲಿರುತ್ತಾರೆ.
ಬಾಯ್‌ಫ್ರೆಂಡ್ ಏನ್ ಗಿಫ್ಟ್ ಕೊಟ್ರೆ ಖುಷಿಯಾಗುತ್ತೆ ? ಸಾರಾ ಹೇಳಿದ್ದಿಷ್ಟು
ಆದರೆ ಒಂದು ಹಂತದಲ್ಲಿ ಅದು ಯದುವೀರ್ ಮಗುವಲ್ಲ ಅಂತ ಗೊತ್ತಾದಾಗ ಲಹರಿ ವಿರುದ್ಧ ತಿರುಗಿ ಬೀಳುತ್ತಾರೆ. ಹೇಗಾದರೂ ಆಕೆಯ ಮಗುವನ್ನು ತೆಗೆಸುವ ಸಂಚು ಹೂಡುತ್ತಾರೆ. ಅದು ಯದುವೀರ್ ಗೆ ತಿಳಿದು ಆತ ಮನೆಯವರಿಗೆ ಛೀಮಾರಿ ಹಾಕುತ್ತಾನೆ. ಸದಾ ಲಹರಿಯ ಬೆಂಬಲಕ್ಕೆ ನಿಲ್ಲುತ್ತಾನೆ. ಯದುವೀರ್ ಮಗ ಇಶಾನ್ ಅಪ್ಪನಿಗಿಂತಲೂ ಲಹರಿ ಅಮ್ಮನನ್ನೇ ಹಚ್ಚಿಕೊಂಡು, ಆಕೆಗೆ ಮಗನಿಗಿಂತಲೂ ಹೆಚ್ಚಾಗುತ್ತಾನೆ.
ಹೀಗೇ ಮುಂದುವರಿಯುವ ಸೀರಿಯಲ್‌ನಲ್ಲಿ ಒಂದು ಹಂತದಲ್ಲಿ ಲಹರಿ ತಮ್ಮನಿಗೆ ಯದುವೀರನ ಅಣ್ಣನ ಹೆಂಡತಿ, ವಿಧವೆ ಪ್ರೀತಿಯ ಮೇಲೆ ಅನುರಾಗ ಬೆಳೆಯುತ್ತದೆ. ಎಲ್ಲ ವಿರೋಧಗಳ ನಡುವೆಯೂ ಲಹರಿ ಅವರಿಬ್ಬರಿಗೆ ಬೆಂಬಲವಾಗಿ ನಿಂತು ಮದುವೆ ಮಾಡಿಸುತ್ತಾಳೆ. ಇದನ್ನು ವಿರೋಧಿಸಿ ಪ್ರೀತಿಯ ಕೊಲೆಗೂ ಸಂಚು ಮಾಡುವ ಕಾವೇರಿಯ ವಿರುದ್ಧ ಲಹರಿ ಎದ್ದು ನಿಲ್ಲುತ್ತಾಳೆ. ಆಕೆಯ ಹಿಂದಿನ ಕೃತ್ಯಗಳನ್ನೆಲ್ಲ ಯದುವೀರ್ ಗೆ ತಿಳಿಸಿ ಕಾವೇರಿಗೆ ತನ್ನ ತಪ್ಪಿನ ಅರಿವಾಗುವಂತೆ ಮಾಡುತ್ತಾಳೆ. ಇತ್ತ ಗರ್ಭಿಣಿ ಲಹರಿಯ ಮೇಲೆ ಯದುವೀರ್ ಗೆ ಪ್ರೀತಿಯಾಗಿದೆ. ಆದರೆ ಅದನ್ನು ಲಹರಿಗೆ ಹೇಳಲು ಸಂದರ್ಭ ಕೂಡಿ ಬರುವುದಿಲ್ಲ. ಆತನ ಪ್ರೊಪೋಸಿಂಗ್ ಪ್ಲಾನ್‌ಗಳೆಲ್ಲ ಒಂದಲ್ಲ ಒಂದು ಕಾರಣಕ್ಕೆ ವಿಫಲವಾಗುತ್ತಲೇ ಹೋಗುತ್ತದೆ.
ಗೂಗಲ್‌ನಲ್ಲಿ ಟ್ರೆಂಡ್ ಆದ ಕನ್ನಡದ ಮೊದಲ ಕಿರುತೆರೆ ನಟ ಕಿರಣ್ ರಾಜ್
ಕೊನೆಯ ಎಪಿಸೋಡ್‌ನಲ್ಲಿ ಮನೆಯವರೆಲ್ಲರೂ ಒಂದಾಗಿ ಯದುವೀರ್ ಲಹರಿಗೆ ಪ್ರೊಪೋಸ್ ಮಾಡಲು ಸನ್ನಿವೇಶ ಸೃಷ್ಟಿಸುತ್ತಾರೆ. ಅಷ್ಟೊತ್ತಿಗೆ ಲಹರಿಗೆ ಯದುವೀರ್ ತನ್ನನ್ನು ಪ್ರೀತಿಸುವ ವಿಷಯ ತಿಳಿದು ಬಹಳ ಖುಷಿಯಾಗುತ್ತೆ. ಕೊನೆಯಲ್ಲಿ ಇನ್ನೇನು ಯದುವೀರ್ ಆಕೆಗೆ ಪ್ರೊಪೋಸ್ ಮಾಡಬೇಕು ಅನ್ನುವಾಗ ಹೆರಿಗೆ ನೋವು ಶುರುವಾಗುತ್ತೆ. ಆಸ್ಪತ್ರೆಯಲ್ಲಿ ಗಂಡು ಮಗುವಿಗೆ ಲಹರಿ ಜನ್ಮ ನೀಡುತ್ತಾಳೆ. ಮಗುವನ್ನು ಎಲ್ಲರೂ ಸ್ವಾಗತಿಸುತ್ತಾರೆ. ಯದುವೀರ್ ತನ್ನ ಮಗುವಾಗಿಯೇ ಅದನ್ನು ನೋಡುತ್ತಾನೆ. ಲಹರಿಗೆ ಆಸ್ಪತ್ರೆಯಲ್ಲೇ ಲವ್ ಯೂ ಅಂದು ಪ್ರೊಪೋಸ್ ಮಾಡುತ್ತಾನೆ. ಒಂದು ರಾತ್ರಿ ಇದ್ದಕ್ಕಿದ್ದ ಹಾಗೆ ಲಹರಿಗೆ ಎಚ್ಚರವಾಗುತ್ತದೆ.
ಪಕ್ಕದಲ್ಲಿ ಮಗುವಿಲ್ಲ, ಯದುವೀರನೂ ಇಲ್ಲ. ಎಲ್ಲಿ ಹೋದರು ಅಂತ ಹುಡುಕಿಕೊಂಡು ಬಂದರೆ ಹೊರಗೆ ಸೋಫಾದಲ್ಲಿ ಮಗುವನ್ನು ಹೆಗಲ ಮೇಲೆ ಮಲಗಿಸಿಕೊಂಡೇ ಯದುವೀರ್ ನಿದ್ದೆ ಹೋಗಿರುತ್ತಾನೆ. ಲಹರಿ ಆತನ ಹೆಗಲಿಗೆ ತಲೆಯೊರಗಿಸಿ ನೆಮ್ಮದಿಯಿಂದ ನಿದ್ದೆ ಮಾಡುತ್ತಾಳೆ. ಲಹರಿ ಅಮ್ಮನನ್ನು ಹುಡುಕಿಕೊಂಡು ಬರುವ ಪುಟ್ಟ ಇಶಾನ್ ಅವರೆಲ್ಲರಿಗೆ ಬೆಡ್ ಶೀಟ್ ಹೊದೆಸಿ, ತಾನು ಲಹರಿ ಅಮ್ಮನನ್ನು ತಬ್ಬಿಕೊಂಡು ಮಲಗುತ್ತಾನೆ. ಲಹರಿಯ ಕೈಗಳು ಪುಟ್ಟ ಇಶಾನ್‌ನನ್ನು ಹತ್ತಿರಕ್ಕೆಳೆದು ಮಲಗಿಸುವುದರೊಂದಿಗೆ ಸೀರಿಯಲ್ ಮುಕ್ತಾಯವಾಗುತ್ತದೆ.
ಹೀಗೆ ಹ್ಯಾಪಿ ಎಂಡಿಂಗ್‌ನಲ್ಲಿ ಸೀರಿಯಲ್ ಮುಕ್ತಾಯ ಕಂಡಿದೆ. ಆದರೆ ಓಪನ್ ಎಂಡಿಂಗ್ ಇರುವ ಕಾರಣ ಮುಂದೆ ಎರಡನೇ ಹಂತದಲ್ಲಿ ಬರುವ ಸೂಚನೆಯೂ ಇದೆ.