'ಲಕ್ಷ್ಮೀ ನಿವಾಸ' ಧಾರಾವಾಹಿಯಲ್ಲಿ ಜಯಂತ್-ಜಾಹ್ನವಿ ಜೋಡಿಯನ್ನ ಜನ ಎಷ್ಟು ಇಷ್ಟಪಡ್ತಾರೋ, ಭಾವನಾ-ಸಿದ್ದೇಗೌಡ್ರು ಜೋಡಿಯನ್ನು ಅಷ್ಟೇ ಇಷ್ಟಪಡ್ತಾರೆ ವೀಕ್ಷಕರು. ಮದುವೆಯಾಗುವ ಮೊದಲು, ನಂತರ ಸದಾ ಭಾವನಾಗಾಗಿ ತುಡಿಯುವ ಜೀವವಂದ್ರೆ ಅದು ಸಿದ್ದೇಗೌಡ್ರು. ತನ್ನ ಹೆಂಡ್ತಿಗಾಗಿ ಎಲ್ಲವನ್ನೂ ಎಲ್ಲರನ್ನೂ ಎದುರುಹಾಕಿಕೊಳ್ಳುವವ. ಮದುವೆಯಾದ ನಂತರ ಸಿದ್ದೇಗೌಡರನ್ನ ದ್ವೇಷಿಸುತ್ತಿದ್ದ ಭಾವನಾ, ಆ ನಂತರ ತನ್ನ ಗಂಡನ ಸ್ವಭಾವವೇನೆಂದು ತಿಳಿದು ಪಶ್ಚಾತ್ತಾಪಪಟ್ಟಳು. ಈಗೀಗ ಇಬ್ಬರ ನಡುವೆ ಅರಳಿದ್ದ ಪ್ರೀತಿಯನ್ನ ನೋಡಿ ಹೆಚ್ಚು ಅಸೂಯೆಪಟ್ಟವಳೇ ಸಿದ್ದೇಗೌಡ್ರ ಅತ್ತಿಗೆ ನೀಲು.
ಮೊದಲಿನಿಂದಲೂ ನೀಲುಗೆ ಭಾವನಾ-ಸಿದ್ದೇಗೌಡ್ರು ಮದುವೆಯಾಗುವುದು ಇಷ್ಟವಿರಲಿಲ್ಲ. ಹಾಗಾಗಿ ಏನಾದರೂ ಕುತಂತ್ರ ಮಾಡುತ್ತಲೇ ಇದ್ದಳು. ಯಾವಾಗ ಸಿದ್ದೇಗೌಡ್ರ ಪ್ರೀತಿ ಸ್ಟ್ರಾಂಗ್ ಅಂತ ಗೊತ್ತಾಯ್ತೋ, ಆಗ ಭಾವನಾಳನ್ನು ವೀಕ್ ಮಾಡಲು ಷಡ್ಯಂತ್ರ ಮಾಡಿದಳು. ಇಷ್ಟಕ್ಕೆ ಸುಮ್ಮನಾಗದೆ ಅತ್ತೆ-ಮಾವನನ್ನು ಸಹ ಎತ್ತಿ ಕಟ್ಟಿದಳು.
ಈ ಅತ್ತೆ-ಮಾವನೋ ಯಾವುದು ನಿಜ, ಯಾವುದು ಸುಳ್ಳು ಎಂದು ತಿಳಿಯದಷ್ಟು ಅವಿವೇಕಿಗಳು. ಜೊತೆಗೆ ಶ್ರೀಮಂತಿಕೆಗೆ ಬೆಲೆ ಕೊಡುವ ಇವರು ಭಾವನಾ ಏನೇ ಮಾಡಿದರೂ ಮೊಸರಲ್ಲಿ ಕಲ್ಲು ಹುಡುಕುವ ಕೆಲಸ ಮಾಡುತ್ತಾ ಬಂದರು. ಮೊನ್ನೆಯಂತೂ ಪೂಜೆಯಾದಾಗ ಭಾವನಾಳನ್ನು ಇವರು ನಡೆಸಿಕೊಂಡ ರೀತಿ ನೋಡಿ ವೀಕ್ಷಕರೇ ರೊಚ್ಚಿಗೆದ್ದಿದ್ದರು. ಇಂತಹ ಅತ್ತೆ-ಮಾವ ಈಗಲೂ ಇರುತ್ತಾರಾ? ಎಂದು ಬಾಯಿಗೆ ಬಂದ ಹಾಗೆ ಬಯ್ದಿದ್ದರು. ಇಷ್ಟು ದಿವಸ ಭಾವನಾಳನ್ನು ಅಳುಮುಂಜಿಯು ತರಹವೇ ನೋಡಿದ ನಮಗೆ ಈಗ ಭಾವನಾಳ ಇನ್ನೊಂದು ರೂಪ ನೋಡುವ ಸಮಯ ಬಂದಿದೆ.
ಹೌದು, ನೀಲು ಜ್ಯೋತಿಷಿಯೊಬ್ಬರ ಬಳಿ ಭಾವನಾ ಈ ಮನೆಗೆ ಕಂಟಕ, ಅನಿಷ್ಠ ಎಂದು ಅತ್ತೆ-ಮಾವನ ಬಳಿ ಹೇಳುವಂತೆ ಸುಳ್ಳು ಹೇಳಿಸಿದ್ದಳು. ಅದರಂತೆ ನಡೆದುಕೊಂಡ ಜ್ಯೋತಿಷಿ, ಭಾವನಾ ಜಾತಕ ಸರಿ ಇಲ್ಲದಿರುವುದರಿಂದ ಸಿದ್ದೇಗೌಡ್ರಿಗೆ ಕಂಟಕವಿದೆ ಎಂದು ಹೇಳಿದ್ದ. ಆ ಕಾರಣಕ್ಕೆ ಮನೆಯಲ್ಲಿ ಹೋಮ-ಹವನ, ಪೂಜೆ ಸಹ ನಡೆಯುತ್ತಿತ್ತು. ಇದೇ ಕಾರಣಕ್ಕೆ ಪ್ರತಿ ನಿತ್ಯ ಭಾವನಾ ದೇವಸ್ಥಾನಕ್ಕೆ ಹೋಗಿ ಪೂಜೆ ಮಾಡುತ್ತಾ, ಉರುಳು ಸೇವೆ ಮಾಡುತ್ತಿದ್ದಳು. ಭಾವನಾ ಈ ಕಷ್ಟವನ್ನ ನೋಡಲಾರದೆ ಸಿದ್ದೇಗೌಡ್ರು ಸಹ ಭಾವನಾಗೆ ಸಾಥ್ ನೀಡುತ್ತಿದ್ದರು. ಸಿದ್ದೇಗೌಡ್ರು ಈ ವಿಚಾರದಲ್ಲೂ ಭಾವನಾಗೆ ಸಪೋರ್ಟ್ ಮಾಡಿದ್ದನ್ನು ಕಂಡು ಭಾವನಾ ಅತ್ತೆ-ನೀಲುಗೆ ನುಂಗಲಾರದ ತುತ್ತಾಗಿತ್ತು.
ಏತನ್ಮಧ್ಯೆ, ಭಾವನಾಳ ಕಷ್ಟ ನೋಡಿದ ದೇವಸ್ಥಾನದ ಅರ್ಚಕರು "ನಿಮ್ಮ ಜಾತಕವನ್ನೊಮ್ಮೆ ಕೊಡಿ. ನಾನು ನಮ್ಮ ದೊಡ್ಡ ಗುರುಗಳ ಬಳಿ ಒಮ್ಮೆ ತೋರಿಸುವೆ" ಎಂದು ಹೇಳಿದ್ದರು. ಅಂತೆಯೇ ಅರ್ಚಕರು ಇದೀಗ ಭಾವನಾಳ ಜಾತಕವನ್ನು ಅವರ ಗುರುಗಳಿಗೆ ತೋರಿಸಿದ್ದಾರೆ. ಅವರು ಹೇಳಿದ್ದನ್ನೇ ಇದೀಗ ಅರ್ಚಕರು ಭಾವನಾಳಿಗೆ ಹೇಳಿದ್ದಾರೆ. "ನಿಮ್ಮ ಜಾತಕ ಚೆನ್ನಾಗಿದೆ, ಯಾವ ದೋಷವಿಲ್ಲ. ಇದನ್ನೆಲ್ಲಾ ನೋಡಿದರೆ ಯಾರೋ ಬೇಕು ಅಂತಲೇ ಮಾಡಿಸಿರಬೇಕು" ಎಂದು ಹೇಳುತ್ತಾರೆ. ಇದನ್ನೆಲ್ಲಾ ಕೇಳಿಸಿಕೊಂಡ ಭಾವನಾ ಈಗ ರೆಬೆಲ್ ಆಗಿದ್ದಾಳೆ.
ಎಂದಿನಂತೆ ಸಿದ್ದೇಗೌಡ್ರು ಭಾವನಗೋಸ್ಕರ ಉರುಳು ಸೇವೆ ಮಾಡಲು ದೇವಸ್ಥಾನಕ್ಕೆ ಬಂದಿದ್ದಾರೆ. ಆಗ ತನ್ನ ಗಂಡನನ್ನ ತಡೆದ ಭಾವನಾ "ನೀವು ಏನು ಮಾಡಬೇಕಿಲ್ಲ. ಯಾವ ಕಂಟಕವೂ ಇಲ್ಲ. ಅರ್ಚಕರು ಈಗಷ್ಟೇ ಹೇಳಿದರು" ಎಂದಿದ್ದಾಳೆ. ಇದನ್ನು ಕೇಳಿಸಿಕೊಂಡು ಹಿರಿ ಹಿರಿ ಹಿಗ್ಗಿದ ಸಿದ್ದೇಗೌಡ್ರು, ದೇವರಿಗೆ ಕೈ ಮುಗಿಯಲು ಹೋಗಿದ್ದಾರೆ. ಆಗ ಭಾವನಾ ಮನಸ್ಸಿನಲ್ಲಿಯೇ ಇಷ್ಟು ದಿನ ನಮ್ಮ ಮಧ್ಯೆ ತಡೆಗೋಡೆ ಕಟ್ಟಲು ಬಂದವರನ್ನ ಸುಮ್ಮನೆ ಬಿಡಬಾರದು. ಇಷ್ಟು ದಿನ ಜಾತಕ ಇಟ್ಟುಕೊಂಡು ಆಟವಾಡಿಸಿದರಲ್ಲ, ಅವರ ಬಾಣ ಅವರಿಗೆ ಹೇಗೆ ತಿರಗಿಸುತ್ತೇನೆ ನೋಡಿ ಅಂದುಕೊಳ್ಳುತ್ತಿದ್ದಾಳೆ. ಭಾವನಾಳ ಈ ನಡೆ ವೀಕ್ಷಕರಿಗೆ ಸಿಕ್ಕಾಪಟ್ಟೆ ಖುಷಿ ತಂದಿದೆ.
*ನೀನೇನು ಅಂತ ತೋರಿಸು ಅವರಿಗೆ. ಅಳುಮುಂಜಿ ಆಗಬೇಡ, ಸ್ಟ್ರಾಂಗ್ ಆಗಿರು.
*ಇನ್ನೂ ಸ್ವಲ್ಪ ಜೋರು ಆಗ್ಬೇಕು.. ಇಷ್ಟೇ ಸಾಲದು.
*ಕರೆಕ್ಟ್ ಭಾವನಾ ಸೂಪರ್ ತೋರಿಸು ಬಾಣ ಈಗ.
*ಒಂದು ಅಮಾಯಕ ಹೆಣ್ಣನ್ನು ಇಷ್ಟೊಂದು ಗೋಳಾಡಿಸಿದರೆ ಅದರ ಪರಿಣಾಮ ಏನು ಅನ್ನೋದನ್ನ ತೋರಿಸಿ ಭಾವನಾ ಅಕ್ಕ ನೀವು.…
*ಸೂಪರ್.. ಅಂತೆಲ್ಲಾ ಥಂಬ್ ಕೊಟ್ಟಿದ್ದಾರೆ ವೀಕ್ಷಕರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.