ಇಬ್ರನ್ನೂ ಬೇಗ ಒಂದ್ಮಾಡಿ ಎಂದು ಗೋಳಾಡ್ತಿದ್ದವರೇ ಈಗ ಸೀರಿಯಲ್​ ಬೋರ್​ ಆಗ್ತಿದೆ ಅಂತಿದ್ದಾರಲ್ಲಪ್ಪ!

By Suchethana D  |  First Published Jun 12, 2024, 5:12 PM IST

ಸೀರಿಯಲ್​ಗಳಲ್ಲಿ ನಾಯಕ-ನಾಯಕಿಯನ್ನು ಒಂದು ಮಾಡಿ ಎಂದು ದಿನನಿತ್ಯ ಕಮೆಂಟ್​ ಹಾಕುತ್ತಿದ್ದವರು ಅವರು ಒಂದಾದ ಮೇಲೆ ಇನ್ನೂ ತೃಪ್ತರಾಗ್ತಿಲ್ಲ. ಏನಾಗ್ತಿದೆ ಸೋಷಿಯಲ್​  ಮೀಡಿಯಾದಲ್ಲಿ?
 


'ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೇ ಜೀವನ...' ಎಂಬ ಗೋಪಾಲ ಕೃಷ್ಣ ಅಡಿಗರ ಮಾತು ಪ್ರತಿ ಕ್ಷಣದಲ್ಲಿಯೂ ಮನುಷ್ಯನ ಸ್ವಭಾವವನ್ನು ತೋರಿಸುತ್ತದೆ.  ಮನುಷ್ಯ ಎಷ್ಟು ಅತೃಪ್ತ ಎಂದು ಹೇಳುವ ಈ ಸಾಲುಗಳು ಅದೆಷ್ಟು ನಿಜ ಅಲ್ಲವೆ? ಏನೇ ಇದ್ದರೂ, ಬೇಕೆಂದಿದ್ದೆಲ್ಲಾ ಸಿಕ್ಕರೂ ಅದು ಸಿಕ್ಕರೆ ಎಷ್ಟು ಚೆನ್ನಾಗಿತ್ತು, ಅದೊಂದು ಇಲ್ಲ, ಅವರಿಗೆ ಸಿಕ್ಕಿಬಿಟ್ಟಿತು-ನಮಗೆ ಸಿಕ್ಕಿಲ್ಲ... ಹೀಗೆ ದಿನನಿತ್ಯವೂ ಕೊರಗುವ ದೊಡ್ಡ ವರ್ಗವೇ ಇದೆ. ಅದು ಬೇಕೆಂದಾಗ ಅದು ಸಿಕ್ಕರೂ, ಇಲ್ಲದೇ ಇರುವ ಕಡೆ ಮನಸ್ಸು ಹೋಗಿ ಮತ್ತೆ ಕೊರಗುವುದು ಬಹುತೇಕ ಮಂದಿಯ ನಿತ್ಯದ ಬದುಕೇ ಆಗಿದೆ. ಈ ಮಾತು ಸೀರಿಯಲ್​ಗಳಿಗೂ ಅನ್ವಯ ಆಗುತ್ತಿದೆ.

ಸೀರಿಯಲ್​ಗಳು ಎಂದರೆ ಸಾಮಾನ್ಯವಾಗಿ 2-3 ವರ್ಷ ಇದ್ದೇ ಇರುತ್ತದೆ. ಒಂದಿಷ್ಟು ಗಂಟೆಗಳಲ್ಲಿ ಹೇಳಬೇಕಾದ ಕಥೆಯನ್ನು 2-3 ವರ್ಷ ಕೆಲವೊಮ್ಮೆ 8-10 ವರ್ಷ ಎಳೆಯುವುದೇ ಸೀರಿಯಲ್​ಗಳು ಎನ್ನುವುದು ಎಲ್ಲರಿಗೂ ತಿಳಿದದ್ದೇ. ಅದರಲ್ಲಿಯೂ ಟಿಆರ್​ಪಿ ಹೆಚ್ಚಾಗುತ್ತಿದ್ದಂತೆಯೇ ಜಾಹೀರಾತುಗಳ ಸಂಖ್ಯೆ ಹೆಚ್ಚಾಗುತ್ತಾ ಹೋಗುತ್ತದೆ. ಇದೇ ಕಾರಣಕ್ಕೆ ಸಹಜವಾಗಿ ಸೀರಿಯಲ್​ಗಳನ್ನೂ ಎಳೆಯುವುದು ಅನಿವಾರ್ಯವಾಗುತ್ತದೆ. ಇದರಿಂದಲೇ ಆರಂಭದಲ್ಲಿ ಸ್ವಾರಸ್ಯದಿಂದ ಕೂಡಿರುವ ಬಹುತೇಕ ಧಾರಾವಾಹಿಗಳು ಬರುಬರುತ್ತಾ ತೀರಾ ಸಪ್ಪೆ ಅನ್ನಿಸುವುದು ಉಂಟು, ಕೆಲವೊಮ್ಮೆ ಆರಂಭಕ್ಕೂ ಅಂತ್ಯಕ್ಕೂ ಸಂಬಂಧವೇ ಇರುವುದಿಲ್ಲ. ಇದೀಗ ಸೋಷಿಯಲ್​ ಮೀಡಿಯಾ ತುಂಬಾ ಸ್ಟ್ರಾಂಗ್​ ಆಗಿರುವ ದಿನಗಳಲ್ಲಿ, ಸೀರಿಯಲ್​ಗಳ ಪ್ರೊಮೋ ಬಿಡುಗಡೆಯಾಗುತ್ತಿದ್ದಂತೆಯೇ ಕಮೆಂಟ್​ಗಳ ಸುರಿಮಳೆಯಾಗುತ್ತದೆ.

Tap to resize

Latest Videos

ಅಮೃತಧಾರೆಗೆ 300: ಭೂಮಿಕಾ-ಗೌತಮ್​ ರೀಲ್​ ಜೋಡಿಯ ಪ್ರೇಮ ಪಯಣದ ವಿಶೇಷ ವಿಡಿಯೋ ರಿಲೀಸ್​

ಕಲರ್ಸ್​ ಕನ್ನಡ, ಜೀ ಕನ್ನಡ ವಾಹಿನಿಗಳಲ್ಲಿ ಪ್ರಸಾರ ಆಗ್ತಿರೋ  ಹಲವು ಸೀರಿಯಲ್​ಗಳು ಮಹತ್ವದ ಘಟ್ಟ ತಲುಪಿದೆ. ಸೀತಾ ರಾಮ ಯಾವಾಗ ಒಂದಾಗ್ತಾರೆ ಎಂದು ಕಾಯುತ್ತಿದ್ದವರಿಗೆ ಸೀತಾ-ರಾಮ ಮದುವೆಯ ತನಕ ಬಂದಿದೆ. ಅಮೃತಧಾರೆಯಲ್ಲಿ ದಂಪತಿ ಯಾವಾಗ ದಾಂಪತ್ಯ ಜೀವನ ನಡೆಸುತ್ತಾರೆ ಎಂದು ಕಾದು ಕುಳಿತವರಿಗೆ ಗೌತಮ್​-ಭೂಮಿಕಾ ಲವ್​ಸ್ಟೋರಿ ಫಸ್ಟ್​ನೈಟ್​ ಮುಗಿಯವವರೆಗೂ ಬಂದಿದೆ. ಇನ್ನು ಪುಟ್ಟಕ್ಕನ ಮಕ್ಕಳು ಸೀರಿಯಲ್​ನಲ್ಲಿ ಸ್ನೇಹಾ-ಕಂಠಿ ಯಾವಾಗ ಒಬ್ಬರನ್ನೊಬ್ಬರು ದಂಪತಿಯಂತೆ ಪ್ರೀತಿಸ್ತಾರೆ ಎಂದು ಕಾಯುತ್ತಿದ್ದವರಿಗೆ ಆ ಸನ್ನಿವೇಶಗಳೂ ಮುಗಿದು ಹೋಗಿವೆ, ಮಾತ್ರವಲ್ಲದೇ ಹಾವು-ಮುಂಗುಸಿಯಂತಿದ್ದ ಸ್ನೇಹಾ ಮತ್ತು ಬಂಗಾರಮ್ಮನನ್ನು ಒಂದು ಮಾಡಿ ಎಂದು ಹೇಳುತ್ತಿದ್ದ ಪ್ರೇಕ್ಷಕರ ಆಸೆಯೂ ಈಡೇರಿದೆ. ಸತ್ಯ ಸೀರಿಯಲ್​ನಲ್ಲಿಯೂ ಅತ್ತೆ-ಸೊಸೆ ಒಂದಾಗಿದ್ದಾರೆ. ಇನ್ನು ಕಲರ್ಸ್​ ಕನ್ನಡ ವಾಹಿನಿಯಲ್ಲಿ ಭಾಗ್ಯಳ ಗೋಳು ನೋಡಲಾಗ್ತಿಲ್ಲ, ತಾಂಡವ್​ ಹಿಂಸೆ ಸಾಕು ಮಾಡಿ ಎಂದೆಲ್ಲಾ ದಿನನಿತ್ಯವೂ ಸೋಷಿಯಲ್​  ಮೀಡಿಯಾಗಳಲ್ಲಿ ಬೈಯುವವರೇ ಹೆಚ್ಚಾಗಿದ್ದಾರೆ. ಈಗ ಒಂದು ಹಂತದಲ್ಲಿ ಭಾಗ್ಯಳಿಗೆ ಫೈವ್​ ಸ್ಟಾರ್​ ಹೋಟೆಲ್​ನಲ್ಲಿ ಕೆಲಸ ಸಿಕ್ಕು ಸೀರಿಯಲ್​ನಲ್ಲಿ ಟ್ವಿಸ್ಟ್​ ಬಂದಿದೆ. ಇನ್ನೇನಿದ್ದರೂ ಭಾಗ್ಯ ಮತ್ತು ತಾಂಡವ್​ ಒಂದಾಗಬೇಕಷ್ಟೇ. ಇವೆಲ್ಲಾ ಸೀರಿಯಲ್​ ಪ್ರಿಯರು ಅಂದುಕೊಂಡದ್ದು ಮುಗಿದ ಮೇಲೆ ಸೀರಿಯಲ್​ಗಳಲ್ಲಿ ಇನ್ನೇನಿದೆ ಸ್ವಾರಸ್ಯ? ಸೀರಿಯಲ್​ಗಳಲ್ಲಿ ಇರಬೇಕಾದದ್ದೇ ನಾಯಕ-ನಾಯಕಿ ಒಂದಾಗುವುದು. ಅದು ಯಾವಾಗ ಎಂದು ಸೀರಿಯಲ್​ ಪ್ರಿಯರು ಪದೇ ಪದೇ ಕೇಳುತ್ತಿದ್ದ ಪ್ರಶ್ನೆಯಾಗಿತ್ತು. 

ಇದೀಗ ಮೇಲೆ ತಿಳಿಸಿದ ಎಲ್ಲಾ ಸೀರಿಯಲ್​ಗಳಲ್ಲಿ ಇಬ್ಬರೂ ಒಂದಾದ ಮೇಲೆ ಸೀರಿಯಲ್​ಗಳು ಬೇರೆ ದಿಕ್ಕಿನತ್ತ ಸಾಗುತ್ತಿವೆ. ಈಗ ಪ್ರತಿಯೊಂದು ಸೀರಿಯಲ್​ಗಳ ಪ್ರೊಮೋ ಹಾಕಿದಾಗ ನೆಟ್ಟಿಗರು ಅಯ್ಯೋ ಈಗ ಸೀರಿಯಲ್​ ನೋಡಲು ತುಂಬಾ ಬೋರ್​ ಅನ್ನಿಸ್ತಾ ಇದೆ, ಬೇಗ ಮುಗಿಸಿ ಎಂದು ಒಂದೇ ಸಮನೆ ಗೋಳು ತೋಡಿಕೊಳ್ಳುತ್ತಿದ್ದಾರೆ. ಸುಖಾ ಸುಮ್ಮನೆ ಸೀರಿಯಲ್​ ಎಳೆಯಲಾಗುತ್ತಿದೆ. ಇಬ್ಬರೂ ಒಂದಾದ ಮೇಲೆ ಇನ್ನೇನಿದೆ, ಸೀರಿಯಲ್​ ಯಾಕೋ ಸಪ್ಪಗೆ ಅನ್ನಿಸ್ತಿದೆ, ಇದನ್ನು ನೋಡಲು ಆಗ್ತಿಲ್ಲ ಎಂಬೆಲ್ಲಾ ಕಮೆಂಟ್ಸ್​ಗಳು ದಿನನಿತ್ಯ ಮಾಮೂಲಾಗಿ ಬಿಟ್ಟಿದೆ. ಇದಕ್ಕೆ ಪ್ರತಿಕ್ರಿಯೆ ನೀಡುವ ಕೆಲವರು ನಿಮಗೆ ನೋಡಲು ಆಗಲ್ಲ ಎಂದರೆ ಯಾಕೆ ನೋಡ್ತೀರಾ ಎಂದು ಪ್ರಶ್ನಿಸುತ್ತಿದ್ದಾರೆ.  ಹೀಗೆ ಸೀರಿಯಲ್​ಗಳ ಕುರಿತು ಟೀಕೆ-ಟಿಪ್ಪಣೆ, ಪ್ರತಿಕ್ರಿಯೆ ತುಂಬಿ ಹೋಗುತ್ತಿದೆ. 

ಮನೋಕಾಮನೆ ಈಡೇರಬೇಕೆಂದರೆ 3,6,9ರ ಟಿಪ್ಸ್​ ಫಾಲೋ ಮಾಡಿ: ಸೀತಾರಾಮ ವೈಷ್ಣವಿ ಗೌಡ ಸಲಹೆ

click me!