
ಟಿವಿಯಲ್ಲಿ ಮೊತ್ತ ಮೊದಲ ಬಾರಿಗೆ ಪ್ರಸಾರವಾದ ಬಿಆರ್ ಚೋಪ್ರಾ ಅವರ ನಿರ್ಮಾಣದ ಮಹಾಭಾರತ ಸೀರಿಯಲ್‌ನಲ್ಲಿ ದಾನಶೂರ ಕರ್ಣನ (Karna) ಪಾತ್ರ ನಿರ್ವಹಿಸಿದ್ದ ಪಂಕಜ್ ಧೀರ್ (Pankaj Dheer) ಇನ್ನಿಲ್ಲ. ಈ ಪಂಕಜ್ ಧೀರ್ ಅವರ ಹೆಸರಿನಲ್ಲಿ ದೇವಾಲಯ, ಪ್ರತಿಮೆಗಳಿವೆ ಎಂಬುದು ನಿಮಗೆ ಗೊತ್ತೆ? ಹೌದು. ಬಿಆರ್ ಚೋಪ್ರಾ ಅವರ ಮಹಾಭಾರತವು ಎಲ್ಲಾ ಕಾಲದ ಅತ್ಯಂತ ಜನಪ್ರಿಯ ಟಿವಿ ಕಾರ್ಯಕ್ರಮಗಳಲ್ಲಿ ಒಂದಾಗಿದೆ. ಇಂದಿಗೂ ಅದರ ಪಾತ್ರಗಳಿಗೆ ಅಭಿಮಾನಿಗಳಿದ್ದಾರೆ. ಅವುಗಳಲ್ಲೊಂದು ಕರ್ಣ. ಕ್ಯಾನ್ಸರ್‌ನಿಂದ ಸೋತು ತಮ್ಮ 68 ನೇ ವಯಸ್ಸಿನಲ್ಲಿ ನಿಧನರಾದ ಪಂಕಜ್ ಧೀರ್ ಕರ್ಣನ ಪಾತ್ರ ಮಾಡಿದ್ದರು. ಧೀರ್ ಅವರ ಕರ್ಣನ ಪಾತ್ರ ಎಷ್ಟು ಜನಪ್ರಿಯವಾಯಿತೆಂದರೆ, ಉತ್ತರ ಭಾರತದ ಕೆಲವು ಕಡೆ ಅವರ ಪ್ರತಿಮೆ ನಿರ್ಮಿಸಲಾಯಿತು. ದೇಶದಲ್ಲಿ ಕರ್ಣನನ್ನು ಪೂಜಿಸುವ ಎರಡು ದೇವಾಲಯಗಳಿವೆ, ಕರ್ನಾಲ್ ಮತ್ತು ಬಸ್ತಾರ್. ಪಂಕಜ್ ಧೀರ್ ಈ ಸ್ಥಳಗಳಿಗೆ ಭೇಟಿ ನೀಡಿದಾಗ ಜನ ಅವರನ್ನು ಪ್ರೀತಿ ಮತ್ತು ಭಕ್ತಿಯಿಂದ ಸ್ವಾಗತಿಸಿದ್ದರು. ಪಂಕಜ್ ಧೀರ್ ಅವರ 8 ಅಡಿ ಎತ್ತರದ ಪ್ರತಿಮೆಯನ್ನು ಸಹ ಕರ್ನಾಲ್‌ನಲ್ಲಿ ಸ್ಥಾಪಿಸಲಾಗಿದೆ. ಜನರು ಅದನ್ನು ಪೂಜಿಸುತ್ತಾರೆ.
ಇನ್ನು ದೇವತಾಭೂಮಿ ಎನಿಸಿದ ಉತ್ತರಾಖಂಡದಲ್ಲಿ ಸೂರ್ಯ ದೇವರು ಮತ್ತು ಕುಂತಿಯ ಮಗ ಕರ್ಣನಿಗೆ ಸಮರ್ಪಿತವಾದ ಪ್ರಾಚೀನ ದೇವಾಲಯವಿದೆ. ಅದು ಕರ್ಣಪ್ರಯಾಗದಲ್ಲಿದೆ. ದೇಶಾದ್ಯಂತ ಮತ್ತು ಪ್ರಪಂಚದಾದ್ಯಂತದ ಭಕ್ತರು ಈ ದೇವಾಲಯಕ್ಕೆ ಭೇಟಿ ನೀಡುತ್ತಾರೆ. ಕರ್ಣನನ್ನು ಇಲ್ಲಿ ದೇವರಂತೆ ಪೂಜಿಸಲಾಗುತ್ತದೆ. ಈ ದೇವಾಲಯ ಅಪಾರ ಮಹತ್ವವನ್ನು ಹೊಂದಿದೆ ಎಂದು ಸ್ಥಳೀಯರು ನಂಬುತ್ತಾರೆ. ಇದು ಅಲಕನಂದಾ ಮತ್ತು ಪಿಂಡಾರ್ ನದಿಗಳ ಸಂಗಮದಲ್ಲಿದೆ. ಈ ಪವಿತ್ರ ಸ್ಥಳದಲ್ಲಿ ದೊಡ್ಡ ಬಂಡೆಯ ಮೇಲೆ ದೇವಾಲಯವನ್ನು ನಿರ್ಮಿಸಲಾಗಿದೆ. ಕರ್ಣಪ್ರಯಾಗವು ಪಂಚ ಪ್ರಯಾಗಗಳಲ್ಲಿ ಒಂದು. ಹಾಗೆಂದರೆ ಅಲಕನಂದಾ ನದಿಯ ಐದು ಪವಿತ್ರ ಸಂಗಮಗಳು.
ಕ್ಷೇತ್ರಮಹಾತ್ಮೆಯ ಪ್ರಕಾರ, ತನ್ನ ತಂದೆಯಾದ ಸೂರ್ಯ ದೇವರನ್ನು ಮೆಚ್ಚಿಸಲು, ಕರ್ಣನು ಇಲ್ಲಿ ತಪಸ್ಸು ಮಾಡಿದ್ದನಂತೆ. ಆದ್ದರಿಂದ ಈ ಸ್ಥಳವನ್ನು ಕರ್ಣಪ್ರಯಾಗ ಎಂದು ಕರೆಯಲಾಗುತ್ತದೆ. ತಪಸ್ಸಿಗೆ ಮೆಚ್ಚಿ ಬಂದ ಸೂರ್ಯದೇವ, ಕರ್ಣನಿಗೆ ಅಭೇದ್ಯವಾದ ಕವಚವನ್ನು ನೀಡಿದ. ಇನ್ನೊಂದು ಕತೆಯ ಪ್ರಕಾರ, ಕರ್ಣಪ್ರಯಾಗವು ಕರ್ಣನ ದುರಂತ ಮರಣದ ನಂತರ ಅವನನ್ನು ಸಮಾಧಿ ಮಾಡಿದ ಸ್ಥಳ. ಯುದ್ಧದಲ್ಲಿ ಅರ್ಜುನನು ಕರ್ಣನಿಂದ ಮಾರಣಾಂತಿಕವಾಗಿ ಗಾಯಗೊಂಡ. ಆಗ ಕೃಷ್ಣನು, ಕರ್ಣನು ತನ್ನ ಜೀವನದುದ್ದಕ್ಕೂ ಮಾಡಿದ ಅಸಂಖ್ಯಾತ ದಾನ ಕಾರ್ಯಗಳಿಂದಾಗಿ ಧರ್ಮದೇವಿಯಿಂದ ರಕ್ಷಿಸಲ್ಪಟ್ಟಿದ್ದಾನೆ ಎಂದು ತಿಳಿದುಕೊಂಡ. ಕರ್ಣನ ಕಡೆ ಧರ್ಮ ಸದಾಚಾರ ಇರುವುದರಿಂದ ಹೀಗೇ ತಮಗೆ ಗೆಲುವು ಅಸಾಧ್ಯವೆಂದು ತಿಳಿದುಕೊಂಡ. ಬ್ರಾಹ್ಮಣನ ವೇಷ ಧರಿಸಿ ಕರ್ಣನ ಬಳಿ ಬಂದು. ಅವನಲ್ಲಿ ಕರ್ಣನ ಕುಂಡಲಗಳನ್ನು ಹಾಗೂ ಕರ್ಣನ ಎದೆಯಲ್ಲಿದ್ದ ಅಮೃತಕಲಶವನ್ನು ದಾನವಾಗಿ ಕೇಳಿದ. ಕರ್ಣನು ಮರುಮಾತಿಲ್ಲದೆ ಅದನ್ನೆಲ್ಲ ದಾನವಾಗಿ ನೀಡಿದ. ಅಮೃತಕಲಶವು ಹೊರಹೋದುದರಿಂದ ಕರ್ಣನನ್ನು ಬಾಣ ಪ್ರಯೋಗಿಸಿ ಕೊಲ್ಲುವುದು ಅರ್ಜುನನಿಗೆ ಸುಲಭವಾಯಿತು. ನಂತರ ಕರ್ಣನು ಬೇಡಿಕೊಂಡಂತೆಯೇ ಈ ಪವಿತ್ರಭೂಮಿಯಲ್ಲಿ ಆತನ ದಹನ ಕಾರ್ಯ ನೆರವೇರಿಸಲಾಯಿತು. ಅದೇ ಜಾಗ ಇದು ಎನ್ನುತ್ತಾರೆ.
ಆದರೆ ಈ ದೇವಾಲಯ ಪಂಕಜ್ ಧೀರ್‌ಗಾಗಿ ನಿರ್ಮಿಸಿದ್ದಲ್ಲ. ಇದು ಬಹಳ ಪ್ರಾಚೀನ ಕಾಲದಿಂದಲೂ ಇದೆ. ಪಂಕಜ್ ಧೀರ್ ಅವರ ಕರ್ಣನ ಪ್ರತಿಮೆಯನ್ನು ಕರ್ನಾಲ್ ಹಾಗೂ ಬಸ್ತಾರ್‌ನಲ್ಲಿ ಸ್ಥಾಪಿಸಲಾಗಿದ್ದು, ಜನ ಅದನ್ನು ಅಚ್ಚರಿಯಿಂದ ನೋಡುತ್ತಾರೆ. ಶಕುನಿ ಪಾತ್ರ ಮಾಡಿದ ಗೂಫಿ ಪೇಂಟಲ್ ಹಾಗೂ ಕೌರವನ ಪಾತ್ರ ಮಾಡಿದ ಪುನೀತ್ ಇಸ್ಸಾರ್ ಅವರ ನಡುವೆ ತಮ್ಮ ಪಾತ್ರವನ್ನು ಅಭಿನಯದಿಂದ ತುಂಬಿಸಲು ಪಂಕಜ್ ಧೀರ್ ತುಂಬಾ ಕಷ್ಟಪಟ್ಟಿದ್ದರಂತೆ. ಅವರು ಪಟ್ಟ ಕಷ್ಟಕ್ಕೆ ತಕ್ಕ ಜನಮೆಚ್ಚುಗೆಯನ್ನು ಅವರು ಕಲಾರಸಿಕರಿಂದ ಪಡೆದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.