ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗ್ತಿರೋ ಭಾಗ್ಯಲಕ್ಷ್ಮಿ ಸೀರಿಯಲ್ನ ನಾಯಕ ತಾಂಡವ್ ವಿರುದ್ಧ ಪ್ರೇಕ್ಷಕರು ಗರಂ ಆಗಿದ್ದು, ಕಿಡಿ ಕಾರುತ್ತಿದ್ದಾರೆ.
ಟಿ.ವಿಗಳಲ್ಲಿ ಬರುವ ಧಾರಾವಾಹಿಯ ಜೊತೆ ಪ್ರೇಕ್ಷಕರು ಅದೆಷ್ಟು ಕನೆಕ್ಟ್ ಆಗುತ್ತಾರೆ ಎಂದರೆ, ಸೀರಿಯಲ್ನಲ್ಲಿ ಬರುವವರು ಕೇವಲ ಪಾತ್ರಧಾರಿಗಳು ಎಂದೇ ಮರೆತುಬಿಡುತ್ತಾರೆ. ಹಿಂದೆ ರಾಮಾಯಣ, ಮಹಾಭಾರತ ಧಾರಾವಾಹಿಗಳು ಬರುತ್ತಿದ್ದ ದಿನಗಳಲ್ಲಿ ಟಿ.ವಿಗೆ ಪೂಜೆ ಮಾಡಿ ಸೀರಿಯಲ್ ನೋಡುತ್ತಿದ್ದರು. ಹಾರಗಳನ್ನು ಹಾಕಿ ಪೂಜೆ ಸಲ್ಲಿಸುತ್ತಿದ್ದರು. ಇನ್ನು ಅದರ ಪಾತ್ರಧಾರಿಗಳು ಎಲ್ಲಿಯಾದರೂ ಕಂಡರೆ ಮುಗಿದೇ ಹೋಯ್ತು, ರಾಮ,ಕೃಷ್ಣ, ಸೀತೆ ಇಂಥ ಪಾತ್ರಧಾರಿಗಳನ್ನು ನೋಡಿದರೆ ಸಾಕ್ಷಾತ್ ದೇವರ ದರ್ಶನ ಮಾಡಿದಂತೆ ಕಾಲಿಗೆ ಬೀಳುತ್ತಿದ್ದುದು ಉಂಟು. ಅದೇ ವೇಳೆ, ರಾವಣನಂಥ ಖಳನಾಯಕನನ್ನು ನೋಡಿದಾಗ ಯಾವುದೇ ಕಾರ್ಯಕ್ರಮಕ್ಕೂ ಅವರಿಗೆ ಎಂಟ್ರಿ ಕೊಡದೇ ಇರುವ ಘಟನೆಗಳೂ ನಡೆದಿವೆ. ಕಾಲ ಎಷ್ಟೇ ಬದಲಾಗಿದೆ ಎಂದು ಹೇಳಲಾಗುತ್ತಿದ್ದರೂ, ಧಾರಾವಾಹಿ ವಿಷಯ ಬಂದಾಗ ಇಂದಿಗೂ ಎಷ್ಟೋ ಮಂದಿ ಇದೇ ರೀತಿ ನಡೆದುಕೊಳ್ಳುವುದು ಇದೆ. ಧಾರಾವಾಹಿಯಲ್ಲಿನ ನಾಯಕ-ನಾಯಕರಿಗೆ ಹೊರಗಡೆ ಹೋದಾಗ ಎಷ್ಟು ಮರ್ಯಾದೆ ಸಿಗುತ್ತದೆಯೋ, ವಿಲನ್ಗಳು ಹೋದಾಗ ಅವರನ್ನು ಬೈಯುವುದು, ಅವರನ್ನು ಕಂಡರೆ ನಿಜ ಜೀವನದಲ್ಲಿಯೂ ವಿಲನ್ಗಳನ್ನು ನೋಡಿದಂತೆ ಮಾಡುವುದು ಎಲ್ಲವೂ ನಡೆದೇ ಇದೆ.
ಧಾರಾವಾಹಿಗಳ ಪ್ರೋಮೋ ಸಾಮಾಜಿಕ ಜಾಲತಾಣದಲ್ಲಿ ಬಿಡುಗಡೆಯಾದಾಗ ಅದರಲ್ಲಿ ಬರುವ ಕಮೆಂಟ್ಸ್ ನೋಡಿದರೆ, ಕೆಲವು ವೀಕ್ಷಕರು ಆ ಧಾರಾವಾಹಿಗೆ ಎಷ್ಟು ಅಡಿಕ್ಟ್ ಆಗಿದ್ದಾರೆ ಎನ್ನುವುದು ತಿಳಿಯುತ್ತದೆ. ಧಾರಾವಾಹಿಯಲ್ಲಿನ ಪಾತ್ರಗಳು ಕೇವಲ ಪಾತ್ರಗಳು ಮಾತ್ರ ಎನ್ನುವುದನ್ನೇ ಮರೆತು ಕಮೆಂಟ್ ಮಾಡುತ್ತಾರೆ. ಇದೀಗ ಕಲರ್ಸ್ ಕನ್ನಡ ಚಾನೆಲ್ನಲ್ಲಿ ಪ್ರಸಾರ ಆಗುವ ಭಾಗ್ಯಲಕ್ಷ್ಮಿ ಸೀರಿಯಲ್ ಕೂಡ ಜನರಿಗೆ ಸಿಕ್ಕಾಪಟ್ಟೆ ಹತ್ತಿರವಾಗುತ್ತಿದೆ ಎನ್ನುವುದಕ್ಕೆ ಇದಕ್ಕೆ ಬರುತ್ತಿರುವ ಥಹರೇವಾರಿ ಕಮೆಂಟ್ಗಳೇ ಸಾಕ್ಷಿ.
ಹೆಚ್ಚು ಓದಿಲ್ಲದ ಭಾಗ್ಯಾ ಸಂಸ್ಕಾರ ಇರೋ ಹೆಣ್ಣು ಮಗಳು. ಸಿರಿವಂತ ತಾಂಡವ್ ಮದುವೆಯಾಗಿದ್ದಾಳೆ. ಆದರೆ, ಅವನಿಗೋ ಇವಳ ಕಂಡ್ರೆ ತಾತ್ಸಾರ. ಭಾಗ್ಯಾಳ ವ್ಯಕ್ತಿತ್ವಕ್ಕೆ ಬೆಲೆ ಕೊಡೋ ಅತ್ತೆ ಇವಳನ್ನು ಓದಿಸಬೇಕು ಅಂತ ಮುಂದಾಗಿದ್ದಾಳೆ. ಅದಕ್ಕೆ ಕಲ್ಲು ಹಾಕಲು ತಾಂಡವ್ ಶತಯಾ ಗತಾಯ ಯತ್ನಿಸುತ್ತಿದ್ದು, ಅತ್ತೆ-ಸೊಸೆಗೆ ಜಗಳ ತಂದಿಡಲು ಹತ್ತು ಹಲವು ಪ್ಲ್ಯಾನ್ ಮಾಡುತ್ತಿದ್ದಾನೆ. ಇದರ ಬೆನ್ನಲ್ಲೇ ಇನ್ನೊಬ್ಬಳನ್ನು ಈತ ಪ್ರೀತಿಸುತ್ತಿದ್ದು, ಅದರ ಬಣ್ಣವೀಗ ಬಯಲಾಗಿದೆ. ಇದೇ ಕಾರಣಕ್ಕೆ ತಾಂಡವ್ನನ್ನು ಕಂಡರೆ ವೀಕ್ಷಕರೂ ಕುದಿಯುತ್ತಿದ್ದಾರೆ. ಭಾಗ್ಯಳಂಥ ಹೆಂಡತಿಯನ್ನು ಪಡೆದು ಬೇರೊಬ್ಬಳ ಹಿಂದೆ ಬಿದ್ದಿರುವುದನ್ನು ಪ್ರೇಕ್ಷಕರು ಸಹಿಸುತ್ತಿಲ್ಲ.
ಇದೀಗ ಗಣೇಶನ ಹಬ್ಬದ ಸೀನ್ ಧಾರಾವಾಹಿಯಲ್ಲಿ ಶುರುವಾಗಿದೆ. ಅತ್ತ ತಾಂಡವ್ ತನ್ನ ಪ್ರೇಯಸಿಗೆ ಸಮಾಧಾನ ಪಡಿಸಲು ಹಬ್ಬದ ದಿನ ಹೋಗಿದ್ದರೆ, ಮನೆಯಲ್ಲಿ ಪೂಜೆ ನಡೆಯುತ್ತಿದೆ. ಅದಕ್ಕೆ ಅವನು ಗೈರಾಗಿದ್ದಾನೆ. ಮನೆಯಲ್ಲಿ ಎಲ್ಲರಿಗೂ ಆತನ ಮೇಲೆ ಕೋಪ. ಭಾಗ್ಯಳ ಅತ್ತೆ ಸೊಸೆಯ ಕೈಯಲ್ಲಿಯೇ ಪೂಜೆ ಮಾಡಿಸಲು ನಿರ್ಧರಿಸಿದ್ದಾಳೆ. ಅದೇ ಅತ್ತ ಕಡೆ ಮನೆಯವರಿಗೆ ತಮ್ಮ ವಿಷಯ ತಿಳಿದಿದ್ದು, ಮುಂದೇನು ಮಾಡಬೇಕು ಎಂದು ತಿಳಿಯದೇ ತಾಂಡವ್ ಮತ್ತು ಆತನ ಪ್ರೇಯಸಿ ಮಾತುಕತೆ ನಡೆಸುತ್ತಿದ್ದರೆ, ಭಾಗ್ಯಳ ತಂಗಿ ಅದರ ವಿಡಿಯೋ ಮಾಡುತ್ತಿದ್ದಾಳೆ. ಇದರ ಪ್ರೋಮೋ ನೋಡಿ ಪ್ರೇಕ್ಷಕರು ಥಹರೇವಾರಿ ಕಮೆಂಟ್ಸ್ ಹಾಕುತ್ತಿದ್ದಾರೆ. ಕೆಲವರು ವಿಡಿಯೋ ಮಾಡುತ್ತಿರುವ ತಂಗಿ ಸಿಕ್ಕಿಬಿದ್ದರೆ ಎನ್ನುವ ಆತಂಕದಲ್ಲಿದ್ದರೆ, ಇನ್ನು ಕೆಲವರು ಗಣೇಶನ ಹಬ್ಬ ಮುಗಿದು ದೀಪಾವಳಿ ಬಂದರೂ ನಿಮ್ಮ ಸೀರಿಯಲ್ನಲ್ಲಿ ಗಣೇಶನ ಮುಳುಗಿಸುವ ಹಾಗೆ ಕಾಣ್ತಿಲ್ಲ ಎಂದು ಕಾಲೆಳೆಯುತ್ತಿದ್ದಾರೆ.
ಬಿಗ್ಬಾಸ್ ಸ್ಪರ್ಧಿಗಳ ಆಯ್ಕೆ ಮಾನದಂಡದ ಕುರಿತ ಪ್ರಶ್ನೆಗೆ ಸುದೀಪ್ ಗರಂ: ಏನ್ ಹೇಳಿದ್ರು ಕೇಳಿ
ಆದರೆ ಕೆಲವು ಪ್ರೇಕ್ಷಕರು ಧಾರಾವಾಹಿಯನ್ನು ಸೀರಿಯಸ್ ಆಗಿ ತೆಗೆದುಕೊಂಡಿದ್ದು, ಗಣೇಶನ ಜೊತೆ ತಾಂಡವನನ್ನೂ ಮುಳುಗಿಸಿ, ಆಗ ಅವನಿಗೆ ಬುದ್ಧಿ ಬರುತ್ತದೆ ಎಂದರೆ, ಇನ್ನು ಕೆಲವರು ಇನ್ನೂ ಒಂದು ಹೆಜ್ಜೆ ಮುಂದಕ್ಕೆ ಹೋಗಿ, ಈ ಧಾರಾವಾಹಿ ಮುಗಿಯುವವರೆಗೆ ತಾಂಡವ್ ಮನೆಯಿಂದ ಹೊರಕ್ಕೆ ಬರಬೇಡ, ಚಪ್ಪಲಿ ಏಟು ಬೀಳುತ್ತದೆ ಎಂದಿದ್ದಾರೆ. ಇನ್ನು ಕೆಲವರು ತಾಂಡವ್ ಪ್ರೇಯಸಿ ಕೀರ್ತಿ ವಿರುದ್ಧ ಕಿಡಿ ಕಾರಿದ್ದು, ಕೀರ್ತಿ ಮಾಡುತ್ತಿರುವ ಕೆಲಸ ಸರಿ ಇಲ್ಲ. ಒಂದು ಸಂಸಾರ ಇದ್ದಮೇಲೆ ಅಲ್ಲಿ ಯಾವ ಹೆಂಗಸ್ಸು ಹೋಗಬಾರದು. ಒಂದು ಸಂಸಾರ ಹಾಳಾಗುವುದು ಒಂದು ಹೆಣ್ಣಿನಿಂದ ಒಂದು ಸಂಸಾರ ಉದ್ದಾರ ಆಗುವುದು ಒಂದು ಹೆಣ್ಣಿನಿಂದ ಎಂದಿದ್ದಾರೆ. ಒಟ್ಟಿನಲ್ಲಿ ಈ ಧಾರಾವಾಹಿ ಏನಾಗಬಹುದು ಎನ್ನುವ ಕುತೂಹಲ ಪ್ರೇಕ್ಷಕರದ್ದು.