ಎದೆತುಂಬಿ ಹಾಡುವೆನು: ಉಗ್ಗು ಸಮಸ್ಯೆ ಮೆಟ್ಟಿ ಕನ್ನಡಿಗರ ಹೃದಯ ಗೆದ್ದ ಸೂರ್ಯಕಾಂತ್‌

By Suvarna News  |  First Published Aug 23, 2021, 4:15 PM IST

ಕಲರ್ಸ್ ಕನ್ನಡದ ಎದೆತುಂಬಿ ಹಾಡುವೆನು ಕಾರ್ಯಕ್ರಮದಲ್ಲಿ ಕನ್ನಡಿಗರ ಹೃದಯ ಗೆದ್ದದ್ದು ಸೂರ್ಯಕಾಂತ್‌ ಎಂಬ ಗಾಯಕ. ಉಗ್ಗಿನ ಸಮಸ್ಯೆಯಿಂದ ಒದ್ದಾಡುವ ಇವರ ಅಮೋಘ ಗಾಯನಕ್ಕೆ ಕನ್ನಡಿಗರು ಹೃದಯ ತುಂಬಿ ಹರಸಿದ್ದಾರೆ.


ಎಸ್‌ಪಿ ಬಾಲಸುಬ್ರಹ್ಮಣ್ಯಂ ಅವರು ನಡೆಸಿಕೊಡುತ್ತಿದ್ದ ಎದೆ ತುಂಬಿ ಹಾಡುವೆನು ಕಾರ್ಯಕ್ರಮವನ್ನು ಕಲರ್ಸ್ ಕನ್ನಡ ವಾಹಿನಿ ಮುಂದುವರಿಸುತ್ತಿದೆ. ಈಗಾಗಲೇ ಈ ಹಾಡುಗಳ ರಿಯಾಲಿಟಿ ಶೋ ಪ್ರಸಾರವಾಗುತ್ತಿದ್ದು. ರಾಜ್ಯದ ಹಲವಾರು ಪ್ರತಿಭೆಗಳು ತಮ್ಮ ಹಾಡುಗಳ ಮೂಲಕ ಗಮನ ಸೆಳೆಯುತ್ತಿದ್ದಾರೆ. ಎಸ್‌ಪಿ ಬಾಲಸುಬ್ರಹ್ಮಣ್ಯಂ ಈ ಕಾರ್ಯಕ್ರಮ ನಡೆಸಿಕೊಡುತ್ತಿದ್ದಾಗ ಎಲ್ಲೂ ಕಲಾವಿದರಿಗೆ ನೋವಾಗುವಂತೆ, ಅವರು ಅಳುವಂತೆ ಮಾಡುತ್ತಿರಲಿಲ್ಲ. ಆಮೇಲೆ ಬಂದ ಹಾಡುಗಳ ರಿಯಾಲಿಟಿ ಶೋಗಳಲ್ಲಿ ಹಾಡುಗಾರರಿಗೆ ಒತ್ತಡ ಹೇರುವುದು, ಅವರ ಕಣ್ಣಲ್ಲಿ ನೀರು ತರಿಸುವುದು, ಆ ಮೂಲಕ ಟಿ ಆರ್‌ ಪಿ ಹೆಚ್ಚಿಸಿಕೊಳ್ಳುವ ಪ್ರಯತ್ನ ನಡೆಯುತ್ತಿತ್ತು. ಆದರೆ ಎಸ್‌ಪಿಬಿ ಎಂದೂ ಇಂಥಾ ಚೀಪ್‌ ತಂತ್ರಗಳನ್ನು ಅನುಸರಿಸಿ ಸ್ಪರ್ಧಿಗಳ ಮನ ನೋಯಿಸಿದವರಲ್ಲ. ಬದಲಿಗೆ ಅವರಲ್ಲಿ ಆತ್ಮವಿಶ್ವಾಸ ತುಂಬಿ ಹುರುಪು ಹೆಚ್ಚಿಸುತ್ತಿದ್ದರು. ಇದೀಗ ಅವರ ಪ್ರತಿಮೆಯನ್ನಿಟ್ಟು ಆರಂಭಿಸಿರುವ ಶೋನಲ್ಲಿ ಜಡ್ಜ್‌ಗಳೂ ಅವರಂತೆ ಕಲಾವಿದರನ್ನು ಉತ್ತೇಜಿಸುತ್ತಾರೆ. ಅವರ ಆತ್ಮವಿಶ್ವಾಸ ಹೆಚ್ಚಿಸಿ ಅವರ ಪ್ರತಿಭೆ ಇನ್ನಷ್ಟು ಬೆಳಗುವಂತೆ ಮಾಡುತ್ತಾರೆ. ಕಲರ್ಸ್ ಕನ್ನಡದ ಇಂಥದ್ದೊಂದು ಪ್ರಯತ್ನಕ್ಕೆ ಶ್ಲಾಘನೆ ವ್ಯಕ್ತವಾಗುತ್ತಿದೆ. 

ಇಬ್ಬರು ಸ್ಟಾರ್‌ ನಟಿಯರ ಹಿಂದೆ ಮಂಸೋರೆ!

Latest Videos

undefined

ಇತ್ತೀಚೆಗೆ 'ಎದೆತುಂಬಿ ಹಾಡುವೆನು' ಕಾರ್ಯಕ್ರಮದಲ್ಲಿ ಗಮನಸೆಳದದ್ದು ಉತ್ತರ ಕರ್ನಾಟಕದ ಪ್ರತಿಭೆ ಸೂರ್ಯಕಾಂತ್‌. ಇವರು ಕಲಬುರ್ಗಿ ಜಿಲ್ಲೆಯ ಚಿಂಚೋಳಿ ತಾಲೂಕಿನ ಗಡಿಲಿಂಗದಳ್ಳಿ ಗ್ರಾಮದ ಗಾಯಕ. ಈ ವ್ಯಕ್ತಿಯನ್ನು ಸ್ಟೇಜ್‌ಗೆ ಕರೆದು ಜಡ್ಜ್ ಗಳಲ್ಲೊಬ್ಬರಾದ ರಾಜೇಶ್‌ ಕೃಷ್ಣನ್‌ ಮಾತನಾಡಿಸಲಾರಂಭಿಸಿದಾಗ, ಇಂಥಾ ವ್ಯಕ್ತಿ ಹೇಗೆ ಹಾಡೋಕೆ ಸಾಧ್ಯ ಅನ್ನೋ ಪ್ರಶ್ನೆ ವೀಕ್ಷಕರನ್ನು ಕಾಡಿತ್ತು. ಆದರೆ ಈಗಾಗಲೇ ಹಲವು ರೌಂಡ್‌ಗಳ ಆಡಿಶನ್‌ ನಡೆಸಿಯೇ ಸ್ಪರ್ಧಿಗಳನ್ನು ಎದೆತುಂಬಿ ಹಾಡುವೆನು ರಿಯಾಲಿಟಿ ಶೋಗೆ ಸ್ಪರ್ಧಿಗಳನ್ನು ಆಯ್ಕೆ ಮಾಡಲಾಗಿತ್ತು. ಹೀಗಿರುವಾಗ ಆತ ಚೆನ್ನಾಗಿ ಹಾಡದಿದ್ದರೆ ಈ ಲೆವೆಲ್‌ವರೆಗೂ ಬರೋದು ಸಾಧ್ಯವೇ ಆಗುತ್ತಿರಲಿಲ್ಲ. ಅಷ್ಟಕ್ಕೂ ಸೂರ್ಯಕಾಂತ್‌ ಅವರಿಗೆ ಇದ್ದದ್ದು ಮಾತಿನ ಸಮಸ್ಯೆ. ರಾಜೇಶ್‌ ಕೃಷ್ಣನ್‌ ನಿಮ್ಮ ಹೆಸರು ಹೇಳಿ ಅಂದಾಗ ಅವರಿಗೆ ತನ್ನ ಹೆಸರನ್ನೇ ಸರಿಯಾಗಿ ಹೇಳಲಾಗಲಿಲ್ಲ. ಕಾರಣ ಉಗ್ಗುವ ಸಮಸ್ಯೆ. ತನ್ನ ಹೆಸರು, ಊರನ್ನು ಉಗ್ಗುವ ಸಮಸ್ಯೆಯಿಂದ ಬಹಳ ಕಷ್ಟವಾಗಿ ಹೇಳಿದ ಇವರು ಮ್ಯೂಸಿಕ್‌ ಆನ್‌ ಆದ ತಕ್ಷಣ ಹಾಡಿನ ಪವಾಡವನ್ನೇ ಮಾಡಿ ಬಿಟ್ಟರು.

 

ಹೂವು-ಹಸ್ತಮೈಥುನ: ನಟಿ ಸ್ವರಾ ಭಾಸ್ಕರ್‌ ಹೇಳಿದ್ದಿಷ್ಟು

"ಮೂಕನಾಗಬೇಕು.. ಜಗದೊಳು ಜ್ವಾಕ್ಯಾಗಿರಬೇಕು' ಎಂಬ ಸಾಲನ್ನು ಅದ್ಭುತವಾಗಿ ಎತ್ತಿಕೊಂಡರು. ಕಡಕೋಳ ಮಡಿವಾಳಪ್ಪಜ್ಜನವರ ತತ್ವಪದದ ಸಾಲುಗಳಿವು. ರವೀಂದ್ರ ಹಂದಿಗನೂರ ಈ ಸಾಲುಗಳಿಗೆ ಸಂಗೀತ ನೀಡಿ ಹಾಡಿದ್ದರು. ಅದನ್ನು ತನ್ನ ಶಿಷ್ಯ ಸೂರ್ಯಕಾಂತ್‌ ಅವರಿಗೂ ಕಲಿಸಿದ್ದರು. ನಿರರ್ಗಳವಾಗಿ, ಭಾವಪೂರ್ಣವಾಗಿ ಈತನಿಗೆ ಉಗ್ಗುವ ಸಮಸ್ಯೆ ಇದೆ ಅನ್ನುವ ಸಣ್ಣ ಕುರುಹೂ ಇಲ್ಲದೇ ಸೂರ್ಯಕಾಂತ್‌ ಈ ಹಾಡನ್ನು ಹಾಡಿದಾಗ ಅಲ್ಲಿದ್ದ ಎಲ್ಲರ ಕಣ್ಣುಗಳಲ್ಲೂ ನೀರಿತ್ತು. ಹಾಡುವ ಮಧ್ಯೆ ಸೂರ್ಯಕಾಂತ್‌ ಉಕ್ಕಿಬರುತ್ತಿದ್ದ ಕಣ್ಣೀರನ್ನು ಪದೇ ಪದೇ ಒರೆಸಿಕೊಂಡು, ಗದ್ಗದಿತ ಕಂಠದಲ್ಲಿ ಹಾಡುತ್ತಿದ್ದರು. ಇವರು ಹಾಡು ಮುಗಿದಾಗ ಇತರ ಸ್ಪರ್ಧಿಗಳು ಎದ್ದು ನಿಂತು ಗೌರವ ಸೂಚಿಸಿದ್ದು, ರಾಜೇಶ್‌ ಕೃಷ್ಣನ್‌ ಸ್ಟೇಜ್‌ಗೇ ಹೋಗಿ ಗಾಯನನ್ನು ಹರಸಿದ್ದು ನಾಟಕೀಯ ಅಂತ ಅನಿಸಲೇ ಇಲ್ಲ. ಬದಲಿಗೆ ಹಾಡಿನ ಮೂಲಕ ತನ್ನ ದೊಡ್ಡ ಸಮಸ್ಯೆಯನ್ನೆ ಮೆಟ್ಟಿ ನಿಂತ ಕಲಾವಿದನಿಗೆ ಸಂದ ಗೌರವ ಅನಿಸಿತು. 

ಸೂರ್ಯಕಾಂತ್‌ ಅವರ ಹಾಡನ್ನು 2 ಮಿಲಿಯನ್‌ಗೂ ಅಧಿಕ ಜನ ಕೇಳಿದ್ದಾರೆ. ಹಲವರು ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡು ದೊಡ್ಡ ಸಮಸ್ಯೆಯೊಂದನ್ನು ಮರೆತು ಗಂಧರ್ವನಂತೆ ಹಾಡುವ ಸೂರ್ಯಕಾಂತ್‌ ಅವರನ್ನು ಹಾಡಿ ಹೊಗಳಿದ್ದಾರೆ. ಆದರೆ ಹಾಡಿನ ಮೂಲಕ ಪವಾಡವನ್ನೇ ಮಾಡಿದ ಸೂರ್ಯಕಾಂತ್‌ ಅವರ ಮುಖದಲ್ಲಿ ತನ್ಮಯತೆ, ಮುಗ್ಧತೆ, ಭಾವುಕತೆ ಬಿಟ್ಟು ಗರ್ವ, ಅಹಂಕಾರದ ಲವಲೇವೂ ಇರಲಿಲ್ಲ. ಬಹುಶಃ ಅವರ ಈ ಗುಣವೇ ಅವರ ಹಾಡಿನಲ್ಲೊಂದು ದೈವಿಕತೆ ತುಂಬಿರಬೇಕು, ಅವರ ಸಮಸ್ಯೆಯನ್ನು ನಿವಾರಿಸಿ ಅದ್ಭುತವಾಗಿ ಹಾಡುವಂತೆ ಮಾಡಿರಬೇಕು ಎಂಬ ಶ್ಲಾಘನೆ ವ್ಯಕ್ತವಾಗುತ್ತಿದೆ. 

click me!