ಜೀ ಕನ್ನಡದಲ್ಲಿ ಪ್ರಸಾರ ಆಗ್ತಿರೋ ವಿಭಿನ್ನ ಬಗೆಯ ರಿಯಾಲಿಟಿ ಶೋ 'Super Queen'. ಬಹಳ ಕಷ್ಟದಿಂದ ಮೇಲೆ ಬಂದು ಬದುಕಲ್ಲಿ ಸಾಧನೆ ಮಾಡಿದ ಮಹಿಳೆಯರು ಈ ಶೋದಲ್ಲಿ ಭಾಗವಹಿಸುತ್ತಿದ್ದಾರೆ. ಇದರಲ್ಲಿ ಬಹಳ ಯುನೀಕ್ ಅನಿಸೋ ಸ್ಪರ್ಧಿ ಮಂಗಳಮುಖಿ ನೀತು ವನಜಾಕ್ಷಿ. ಮಿಸ್ ಇಂಟರ್‌ನ್ಯಾಶನಲ್ ಕಿರೀಟ ತೊಟ್ಟ ಭಾರತದ ಮೊದಲ ಮಂಗಳಮುಖಿ ನೀತು ಅವರ ಲೈಫ್ ನೋಡಿದ್ರೆ ನಿಜಕ್ಕೂ ಗ್ರೇಟ್ ಅನಿಸುತ್ತೆ.
'Super Queen; ಇದು ಜೀ ಕನ್ನಡದಲ್ಲಿ ಪ್ರಸಾರ ಆಗ್ತಿರೋ ರಿಯಾಲಿಟಿ ಶೋ. ಇದರಲ್ಲಿ ಬದುಕಲ್ಲಿ ಬಹಳ ಕಷ್ಟಪಟ್ಟು ಸಾಧನೆ ಮೂಲಕವೇ ಗುರುತಿಸಿಕೊಂಡ ಮಹಿಳೆಯರ ಕಥೆ, ಸ್ಪರ್ಧೆ ಎಲ್ಲವೂ ಇರುತ್ತೆ. ಇದೊಂದು ವಿಭಿನ್ನ ಬಗೆಯ ಕಾರ್ಯಕ್ರಮವೂ ಹೌದು. ರಚಿತಾ ರಾಮ್, ವಿಜಯ ರಾಘವೇಂದ್ರ ಈ ಕಾರ್ಯಕ್ರಮದ ಜಡ್ಜಸ್. ಶ್ವೇತಾ ಚೆಂಗಪ್ಪ ಈ ಕಾರ್ಯಕ್ರಮದ ನಿರೂಪಕಿ. ಗಾಯಕಿ ರೆಮೋ, ನಟಿಯರಾದ ಅಪೂರ್ವ ಶ್ರೀ, ರಜನಿ, ಗೀತಾ ಭಟ್, ಚಂದ್ರಕಲಾ ಮೋಹನ್, ಗೇಬ್ರಿಯೆಲ್ಲ ಸ್ಮಿತ್ ಮೊದಲಾದವರು ಈ ರಿಯಾಲಿಟಿ ಶೋದ ಸ್ಪರ್ಧಿಗಳು. ಇದರಲ್ಲಿ ಒಬ್ಬೊಬ್ಬ ಸ್ಪರ್ಧಿಗಳದ್ದು ಒಂದೊಂದು ಕಥೆ. ಶನಿವಾರ ಮತ್ತು ಭಾನುವಾರ ಸಂಜೆ ಆರು ಗಂಟೆಗೆ ಈ ಕಾರ್ಯಕ್ರಮ ಪ್ರಸಾರ ಆಗುತ್ತೆ. ಆದರೆ ಈ ಕಾರ್ಯಕ್ರಮದಲ್ಲಿ ಬಹಳ ಗಮನಸೆಳೆದಿರೋ ಹೆಸರು ನೀತು ವನಜಾಕ್ಷಿ. ಸೂಪರ್ ಕ್ವೀನ್ ಆಗೋ ನಿಟ್ಟಿನಲ್ಲಿ ಜರ್ನಿ ಶುರು ಮಾಡಿದ ಇವರು ಭಾರತದ ಮೊದಲ ಮಂಗಳಮುಖಿ ಮಿಸ್ ಇಂಟರ್‌ನ್ಯಾಶನಲ್ ಆಗಿ ಕಿರೀಟ ಮುಡಿಗೇರಿಸಿಕೊಂಡವರು.
ನೀತು ಹುಟ್ಟಿದ್ದು ಗದಗದ ಮಧ್ಯಮ ವರ್ಗದ ಕುಟುಂಬವೊಂದರಲ್ಲಿ. ಎಲ್ಲ ಟ್ರಾನ್ಸ್ ಜೆಂಡರ್ ಗಳಂತೆ ಇವರು ಗಂಡಾಗಿ ಹುಟ್ಟಿದ್ದು. ಬಾಲ್ಯದ ಹೆಸರು ಮಂಜುನಾಥ್. ಏಳನೇ ಕ್ಲಾಸ್‌ವರೆಗೆ ಎಲ್ಲ ಸರಿ ಇತ್ತು. ಆದರೆ ಏಳನೇ ಕ್ಲಾಸಿಗೆ ಬಂದಾಗ ತಾನು ಉಳಿದ ಹುಡುಗರಂತೆ ಅಲ್ಲ, ತಾನು ಬೇರೆ ಅನಿಸತೊಡಗಿತು. ತನ್ನ ಶರೀರದೊಳಗೆ ತಾನೇ ಬಂಧಿಯಾದಂಥಾ ಭಾವನೆ. ಪ್ರೌಢಾವಸ್ಥೆಯಲ್ಲಿ ಇವರ ಸ್ನೇಹಿತರೆಲ್ಲ ಹುಡುಗಿಯರ ಕನಸು ಕಾಣುತ್ತಿದ್ದರೆ ಇವರಿಗೆ ಹುಡುಗಿಯರಂತೆ ಬದುಕೋದು, ಅವರಂತೆ ಡ್ರೆಸ್, ಮೇಕಪ್ ಮಾಡಿಕೊಳ್ಳೋದು ಇಷ್ಟ ಆಗ್ತಿತ್ತು. ಆದರೆ ಮನೆಯವರಿಂದ ತಿರಸ್ಕೃತನಾಗಬಹುದು, ಸ್ನೇಹಿತರಿಂದ ಅಪಹಾಸ್ಯಕ್ಕೆ ಗುರಿಯಾಗಬಹುದು ಅನ್ನೋ ಭಯದಲ್ಲಿ ಅದನ್ನು ತನ್ನೊಳಗೇ ಅದುಮಿಡುತ್ತಾರೆ.
ಆತ್ಮಹತ್ಯೆಗೆ ಯತ್ನಿಸಿದ ಕಿರುತೆರೆ ನಟಿ ಅಪೂರ್ವ; ಕರಾಳ ಸತ್ಯ ಕೇಳಿ ಎಲ್ಲರೂ ಶಾಕ್...
ಸದ್ಯಕ್ಕೀಗ ನೀತು ಟ್ಯಾಟೂ ಆರ್ಟಿಸ್ಟ್ ಆಗಿ ಗುರುತಿಸಿಕೊಂಡಿದ್ದಾರೆ. ಇನ್ನೊಂದೆಡೆ ಉತ್ತರ ಕರ್ನಾಟಕ ತಿನಿಸುಗಳ 'ಗಮ ಗಮ' ಅನ್ನೋ ಹೊಟೇಲ್ ಶುರು ಮಾಡೋ ಮೂಲಕ ಹೊಟೇಲ್ ಉದ್ಯಮಿ ಆಗಿದ್ದಾರೆ. ಜೊತೆಗೆ ಮಾಡೆಲಿಂಗ್‌ನಲ್ಲಿ, ಬ್ಯೂಟಿ ಪೇಟೆಂಟ್ ಗಳಲ್ಲಿ ಗುರುತಿಸಿಕೊಂಡಿದ್ದಾರೆ. ತಾನು ಓದಿ ಒಂದು ಹಂತ ತಲುಪಿದ ಮೇಲೆ ತನ್ನ ನೈಜ ವಿಚಾರವನ್ನು ಬಹಿರಂಗ ಮಾಡಿದ ಕಾರಣ ಇದೆಲ್ಲ ಸಾಧ್ಯವಾಯ್ತು ಅಂತ ಆತ್ಮವಿಶ್ವಾಸದಿಂದ ಹೇಳುತ್ತಾರೆ ನೀತು. 'ಅಂದೊಮ್ಮೆ ನಾನು ಬ್ಯೂಟಿ ಪೇಟೆಂಟ್ ವಿನ್ ಆಗಿದ್ದೆ. ಹೆಣ್ಣಿನ ಉಡುಗೆಯಲ್ಲಿ ಕಿರೀಟದ ಜೊತೆ ಅಮ್ಮನ ಮುಂದೆ ನಿಂತಿದ್ದೆ. ಅಮ್ಮ ನನ್ನನ್ನು ನೋಡಿ ಬಹಳ ಚೆನ್ನಾಗಿ ಕಾಣಿಸ್ತಿದ್ದೀಯ ಅಂದ್ರು. ಆ ಕ್ಷಣ ನಾನು ಈಗಷ್ಟೇ ಹುಟ್ಟಿದ್ದೆನೇನೋ ಅನಿಸುತ್ತಿತ್ತು. ಅಮ್ಮನ ಬಳಿ ಇದೇ ನಿಜವಾದ ನಾನು ಅನ್ನೋ ಸಂಗತಿ ಬಹಿರಂಗ ಪಡಿಸಿದೆ. ಶುರುವಲ್ಲಿ ನೋವಾದರೂ ಅವರು ಆಮೇಲೆ ಒಪ್ಪಿಕೊಂಡರು' ಅಂತ ತನ್ನ ಬದುಕಿನ ವಿವರ ತೆರೆದಿಡ್ತಾರೆ ನೀತು.
ನೀತು ಅವರ ಅಮ್ಮ ಹಳ್ಳಿಯ ಹೆಣ್ಣುಮಗಳು, ಮುಗ್ಧೆ. ಮಂಗಳ ಮುಖಿ ಅಂದರೆ ಕೈತಟ್ಟಿ ಭಿಕ್ಷೆ ಬೇಡುವವರು ಅಂತ ಅವರ ಭಾವನೆ. ಆ ಭಾವವೇ ಅವರಿಗೆ ನೋವು ಕೊಡುತ್ತಿತ್ತು. ಆದರೆ ಅಷ್ಟೊತ್ತಿಗಾಗಲೇ ಮಂಜುನಾಥ್ ಹೋಗಿ ನೀತುವಾಗಿದ್ದ ಈ ಗಟ್ಟಿಗಿತ್ತಿ ಅಮ್ಮನ ಈ ಮಿಥ್ ಅನ್ನು ಬಹಳ ಬೇಗ ಸುಳ್ಳಾಗಿಸಿದರು. ಸಾಧಕಿಯಾಗಿ ಅಮ್ಮನ ಮುಂದೆ ಬಂದು ನಿಂತರು. ತನ್ನ ಕುಡಿಯ ಸಾಧನೆಗೆ ತಾಯಿ ಹೃದಯ ಮಿಡಿಯಿತು. ಸೂಪರ್‌ಕ್ವೀನ್ ವೇದಿಕೆಯಲ್ಲೂ ಅವರು ಹೇಳಿದ್ದು, ಆತ ಮಗನಾಗಿದ್ದಕ್ಕಿಂತಲೂ ಮಗಳಾಗಿದ್ದಕ್ಕೆ ತನಗೆ ಹೆಮ್ಮೆ ಇದೆ ಅಂತ.
Super Queen ಬೇಕರಿ- ಪ್ರಿಂಟಿಂಗ್ ಪ್ರೆಸಲ್ಲಿ ಕೆಲ್ಸ ಮಾಡಿದ ನಿರೂಪಕಿ ಹೇಮಲತಾ; ಭಾವುಕ ಮಾತು!
ಟ್ಯಾಟೂ ಕಲಾವಿದೆ
'ನಾನು ಹಾಕಿದ ಟ್ಯಾಟೂ(Tatoo) ಮೂಲಕ ಜನ ನನ್ನ ಕೊನೆಯವರೆಗೂ ನೆನಪಿಟ್ಟುಕೊಳ್ತಾರೆ. ಈ ಐಡೆಂಟಿಟಿ ಸಿಕ್ಕ ಮೇಲೆ ಜನ ಜೆಂಡರ್(Gender) ನೋಡಲ್ಲ, ಟ್ಯಾಲೆಂಟ್ ನೋಡ್ತಾರೆ' ಅನ್ನೋ ನೀತುಗೆ ತಾನೊಬ್ಬ ಟ್ಯಾಟೂ ಕಲಾವಿದೆ ಅನ್ನೋ ಬಗ್ಗೆ ಹೆಮ್ಮೆ ಹೆಮ್ಮೆ. ವಿಷ್ಯುವಲ್ ಆರ್ಟ್ಸ್(Visual arts) ನಲ್ಲಿ ಪದವಿ ಪಡೆದಿರುವ ನೀತು ಮಾಡೆಲಿಂಗ್, ಹೊಟೇಲ್ ಉದ್ಯಮದಲ್ಲೂ ಸೈ ಅನಿಸಿಕೊಂಡಿದ್ದಾರೆ.
ಸದ್ಯಕ್ಕೆ ಇವರು ಸೂಪರ್ ಕ್ವೀನ್ ಕಿರೀಟಿ ಮುಡಿಗೇರಿಸಿಕೊಳ್ಳಲು ತುದಿಗಾಲಲ್ಲಿ ನಿಂತಿದ್ದಾರೆ. 'ನಾನೇನೂ ತಪ್ಪು ಮಾಡಿಲ್ಲ, ಪ್ರಕೃತಿಯಿಂದಲೇ ನಾನು ಈ ಥರ ಹುಟ್ಟಿರೋದು. ಹೀಗಿರುವಾಗ ನಾನ್ಯಾಕೆ ಗಿಲ್ಟ್(Guilt) ಪಡಲಿ, ಎಲ್ಲರಂತೆ ಬದುಕೋದಕ್ಕೆ ಯಾಕೆ ಅಂಜಿಕೆ ಪಡಲಿ' ಅಂತ ಧೈರ್ಯದಿಂದ ಪ್ರಶ್ನಿಸೋ ನೀತು ಮುಂದೆ ದೊಡ್ಡ ಸಾಧನೆ(Achievement) ಮಾಡೋ ಹಾದಿಯಲ್ಲಿದ್ದಾರೆ.