ಸಾಮಾಜಿಕ ಜಾಲತಾಣಗಳಲ್ಲಿ ಧೂಳೆಬ್ಬಿಸಿದ ಕಾಫಿನಾಡು ಚಂದು ಯಾರು?, ಇವರ ಆಸೆ ಏನು?

By Suvarna NewsFirst Published Aug 2, 2022, 9:03 PM IST
Highlights

ಕಾಫಿನಾಡು ಅಂದಾಕ್ಷಣ ನಮಗೆ ಚಿಕ್ಕಮಗಳೂರು ಬಾಯಿಗೆ ಬರುತ್ತಿತ್ತು. ಆದ್ರೆ, ಇದೀಗ ಕಾಫಿನಾಡು ಅಂದ್ರೆ ಸಾಕು ಚಂದು ಬಾಯಿಗೆ ಬರುತ್ತೆ. ರಾತ್ರೋ ರಾತ್ರಿ ಸಾಮಾಜಿಕ ಜಾಲತಾಣಗಳಲ್ಲಿ ಫೇಮಸ್ ಆಗಿರುವ ಈ ಕಾಫಿನಾಡು ಚಂದು ಬಗ್ಗೆ ಒಂದಿಷ್ಟು ಮಾಹಿತಿ ಇಲ್ಲಿದೆ.

ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್ ಚಿಕ್ಕಮಗಳೂರು 

ಚಿಕ್ಕಮಗಳೂರು, (ಆಗಸ್ಟ್.02):
 ಕಾಫಿನಾಡು ಅಂದಾಕ್ಷಣ ಇದೀಗ ನಮಗೆ ತಟ್ ಅಂತ ನೆನಪಿಗೆ ಬರೋದೇ ಚಂದು ಹೆಸರು. ಹೌದು....ಕಾಫಿನಾಡು ಚಂದು  ಸೋಷಿಯಲ್ ಮೀಡಿಯಾದಲ್ಲಿ ಭಾರೀ ಸದ್ದು ಮಾಡುತ್ತಿದ್ದಾರೆ.  ತನ್ನದೇ ಆದ ಫ್ಯಾನ್ಸ್ ಹೊಂದಿರುವ ಕಾಫಿನಾಡು ಚಂದು ಇದೀಗ ಸೋಷಿಯಲ್ ಮೀಡಿಯಾ ಸ್ಟಾರ್ ಐಕಾನ್ ಆಗಿದ್ದಾರೆ.

ಹ್ಯಾಪಿ ಬರ್ತಡೇ ಸಾಂಗ್ ಗಳನ್ನು ಹಾಡುವ ಮೂಲಕ ಪ್ರವರ್ಧಮಾನಕ್ಕೆ ಬಂದ ಕಾಫಿನಾಡು ಚಂದು ಸೋಷಿಯಲ್ ಮೀಡಿಯಾದಲ್ಲಿ ಇದೀಗ ಮಿಂಚುತ್ತಿರುವ ಯುವಕ. ಸಾಂಗ್ ಮಾತ್ರವಲ್ಲ, ಡ್ಯಾನ್ಸ್ , ಡೈಲಾಗ್ ಗಳನ್ನು ಹೇಳುವ  ಮೂಲಕ ಸ್ಟಾರ್ ಆಗಿರುವ ಕಾಫಿನಾಡು ಚಂದ್ರುವಿಗೆ ಶಿವಣ್ಣನನ್ನು ಮೀಟ್ ಮಾಡುವ ಬಯಕೆ. ಅಪ್ಪಟ ಶಿವಣ್ಣ,ಅಪ್ಪುವಿನ ಅಭಿಮಾನಿಯಾಗಿರುವ ಕಾಫಿನಾಡು ಚಂದು ಸಾಮಾಜಿಕ ಜಾಲ ತಾಣದಲ್ಲಿ ಸಖತ್ ಫೇಮಸ್ ಆಗಿದ್ದಾರೆ.. 

ಕಾಫಿನಾಡು ಚಿಕ್ಕಮಗಳೂರು ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಯಾರು ಈ ಕಾಫಿನಾಡು ಚಂದು? 
ಸಾಮಾಜಿಕ ಜಾಲತಾಣ ಒಂದು ಮ್ಯಾಜಿಕ್ ಇದ್ದಂತೆ. ಇಲ್ಲಿ ಯಾವಾಗ ಏನೂ ಬೇಕಾದರು ಆಗಬಹುದು. ಯಾರೂ ಬೇಕಾದರು ಫೇಮಸ್ ಆಗಬಹುದು. ಕೆಲವರು ಈ ಕಾರಣದಿಂದ ಹೆಸರುಗಳಿಸಿದರೆ, ಮತ್ತೊಬ್ಬರ ಹೆಸರನ್ನು ಹಾಳು ಮಾಡುವ ಶಕ್ತಿ ಈಗ ಇದಕ್ಕಿದೆ.  ಇಲ್ಲಿ ಯಾವುದೇ ವಿಚಾರ ವೈರಲ್ ಆಗಲು ಹೆಚ್ಚಿನ ಸಮಯ ಬೇಕಿಲ್ಲ. ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಸುದ್ದು ಮಾಡುತ್ತಿರುವ ವ್ಯಕ್ತಿ ಎಂದರೆ ಕಾಫಿನಾಡು ಚಂದು ಅಲಿಯಾಸ್ ಚಂದ್ರಶೇಖರ್ .

 ಮೂಲತಃ ಚಿಕ್ಕಮಗಳೂರು ಜಿಲ್ಲೆಯ ಮಲ್ಲಂದೂರಿನ ಭಾಗಮನೆ ಗ್ರಾಮದ ವಾಸಿ. ಓದಿರುವುದು ಒಂಬತ್ತನೇ ತರಗತಿ, ಆದ್ರೆ ಸಾಮಾಜಿಕ ಕಳಕಳಿ , ಮುಗ್ಧಮನಸ್ಸಿನ ಯುವಕ ಸೋಶಿಯಲ್ ಮೀಡಿಯಾದಲ್ಲಿ ತನ್ನದೇ ಆದಂತಹ ಹವಾ ಸೃಷ್ಟಿ ಮಾಡುವ ಮೂಲಕ ಪ್ರಖ್ಯಾತಿ ಪಡೆದಿದ್ದಾರೆ.ಹೆತ್ತವರು ಚಂದ್ರಶೇಖರ್ ನಿಂದ ಅಗಲಿದ್ದರೂ ಅವರ ನೆನಪಿನಲ್ಲೇ ಈಗಾಲೂ ಇದ್ದಾರೆ. ತಾಯಿ ಅನ್ಯಾರೋಗಕ್ಕೆ ಒಳಾಗದ ಸಮಯದವನ್ನು ನೆನೆದು ಕಣ್ಣೀರು ಹಾಕುತ್ತಾರೆ. ಕಾಫಿನಾಡು ಚಂದುವಿಗೆ ಮದುವೆಯಾಗಿ ಇಬ್ಬರು ಮಕ್ಕಳು ಕೂಡ ಇದ್ದಾರೆ. ವೃತ್ತಿಯಲ್ಲಿ ಆಟೋ ಡ್ರೈವರ್ ಆಗಿ ಕೆಲಸ ಮಾಡುತ್ತಾರೆ. ಇವರು ಫೇಮಸ್ ಆಗಿದ್ದು, ಅವರ ಹಾಡುಗಳಿಂದ. ಇವರ ಹ್ಯಾಪಿ ಬರ್ತ್ ಡೇ ಹಾಡುಗಳು ಎಲ್ಲೆಡೆ ವೈರಲ್  ಆಗಿದೆ, ತನ್ನದೇ ಆದ ಶೈಲಿಯಲ್ಲಿ ಯಾವುದೇ ರಾಗ ತಾಳಗಳಿಲ್ಲದೇ ಹಾಡುತ್ತಾರೆ. ಇವರ ಹಾಡು ಕೇಳಲು ಚೆನ್ನಾಗಿಲ್ಲ ಎಂದರೂ, ಅವರ ವಿಭಿನ್ನ ಶೈಲಿಗೆ ಜನ ಮನಸೋತಿದ್ದು, ಅವರ ವಿಡಿಯೋಗಳು ಲಕ್ಚಗಟ್ಟಲೆ ವೀವ್ಸ್  ಪಡೆಯುತ್ತಿದೆ. 

ಅಪ್ಪು , ಶಿವಣ್ಣ , ಶಂಕರ್ ನಾಗ್ ಅಭಿಮಾನಿ 
ನಾನು ಅಪ್ಪು  , ಶಿವಣ್ಣ ಅಭಿಮಾನಿ ಕಾಫಿನಾಡು ಚಂದು, ಹ್ಯಾಪಿ ಬರ್ತಡೇ ನಿಮಗೆ ದೇವರು ಆಯುರಾರೋಗ್ಯ ಐಶ್ವರ್ಯ ಕೊಟ್ಟು ಕಾಪಾಡಲಿ , ಮೇಲಿರುವ ಅಪ್ಪು ನಿಮಗೆ ಆಶೀರ್ವದಿಸಲಿ ಎಂದು ಸೋಷಿಯಲ್ ಮೀಡಿಯಾದಲ್ಲಿ ಹವಾ ಕ್ರಿಯೇಟ್ ಮಾಡಿರುವ  ಕಾಫಿನಾಡು ಚಂದು. ಚಿಕ್ಕಮಗಳೂರು ಮಾತ್ರವಲ್ಲ ಇಡೀ ರಾಜ್ಯದಲ್ಲಿ ಕಾಫಿನಾಡು ಚಂದು ಇದೀಗ ಪ್ರಖ್ಯಾತಿ. ಸೋಷಿಯಲ್ ಮೀಡಿಯಾದಲ್ಲಿ ಬರ್ತಡೇ ಸಾಂಗ್ ಗಳ ಮೂಲಕ ಫೇಮಸ್ ಆದವರು ಕಾಫಿನಾಡು ಚಂದು. ಕಾಫಿನಾಡು ಚಂದು ಮಾತೆತ್ತಿದರೆ ಅಪ್ಪು ಅಣ್ಣ ಮತ್ತು ಶಿವರಾಜ್ ಕುಮಾರ್ ಅಣ್ಣನ ಅಭಿಮಾನಿ ಎನ್ನುತ್ತಾರೆ. ಇವರು ಮೊದಲು ಫೇಮಸ್ ಆಗಿದ್ದು, ರೋಸ್ಟಿಂಗ್ ವಿಡಿಯೋಗಳಿಂದ. 

ಚಂದು ರಸ್ತೆಗೆ ಇಳಿದ್ರೆ ಜನವೋ ಜನ 
ಕಾಫಿನಾಡು ಚಂದು ರಸ್ತೆಯಲ್ಲಿ ಸಾಗಿದರೆ ಜನರು ಮುತ್ತಿ ಹಾಕಿಕೊಳ್ಳುತ್ತಾರೆ , ಅವರಿಂದ ಸ್ನೇಹಿತರಿಗೆ ಬರ್ತಡೇ ಸಾಂಗ್ಸ್ ಹೇಳಿಸಿ ಖುಷಿಪಡುತ್ತಾರೆ, ಬರ್ತಡೇ ಸಾಂಗ್ ಮಾತ್ರವಲ್ಲ ಇದೀಗ ಡ್ಯಾನ್ಸ್ , ಡೈಲಾಗ್ ಗಳನ್ನು ಹೇಳುವ  ಮೂಲಕವೂ ಪ್ರಸಿದ್ದಿ ಪಡೆಯುತ್ತಿದ್ದಾರೆ. ರಾಜಕೀಯ,ಪ್ರಸ್ತುತ ವಿಷಯಗಳ ಮೇಲೆ ಸಾಮಾಜಿಕ ಜಾಲ ತಾಣದಲ್ಲಿ ತಮ್ಮ ಅಭಿಪ್ರಾಯವನ್ನು ಹೊರಹಾಕುತ್ತಿದ್ದಾರೆ. ಕರಾವಳಿಯಲ್ಲಿ ನಡೆದ ಸರಣಿ ಹತ್ಯೆಯ ಬಗ್ಗೆಯೂ ಸಾಮಾಜಿಕ ಜಾಲ ತಾಣದಲ್ಲಿ ವಿಡಿಯೋ ಸಂದೇಶವನ್ನು ಹಾಕಿದ್ದರು.  ಇನ್ನು ಕಾಫಿನಾಡು ಚಂದು ವೃತ್ತಿಯಲ್ಲಿ ಆಟೋ ಚಾಲಕರಾಗಿದ್ದು , ಆಟೋದಲ್ಲಿ ಅಪ್ಪುವಿನ ಪೋಟೋ, ಶಂಕರ್ ನಾಗ್ , ಶಿವಣ್ಣನ  ಹೆಸರು ಹಾಕಿದ್ದಾರೆ. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿಯಾನಿ ಆಗಿರುವ ಚಂದು ತಾವು ಓಡಿಸುವ ಆಟೋದ ಮುಂದೆ ಅಪ್ಪುವಿನ ಫೋಟೋ ಹಾಕಿದ್ದಾರೆ. ಅದಕ್ಕೆ ಪ್ರತಿನಿತ್ಯವೂ 200 ರೂಪಾಯಿ ಖರ್ಚು ಮಾಡಿ ಹೂವಿನ ಹಾರ ಹಾಕಿ ಆಟೋವನ್ನು ಅಲಂಕಾರ ಮಾಡಿ ಬಾಡಿಗೆ ಓಡಿಸುತ್ತಾರೆ. ಆಟೋ ಚಾಲಕರಾಗಿರುವ ಚಂದು ವೃತ್ತಿಯಲ್ಲಿ ಸಾಮಾಜಿಕ ಕಳಕಳಿಯನ್ನು ಹೊಂದಿದ್ದಾರೆ. ಗರ್ಭಿಣಿಯರು, ವೃದ್ಧರಿಗೆ ಉಚಿತ ಸೇವೆಯನ್ನು ನೀಡುವ ಮೂಲಕವೂ ಫೇಮಸ್ ಆಗಿದ್ದಾರೆ.

ಪೊಲೀಸ್ ಕನಸು  
ಚಿಕ್ಕವಯಸ್ಸಿನಿಂದ ಪೊಲೀಸ್ ಆಗುವ ಆಸೆ ಇತ್ತು, ಆದರೆ ವಿಧಿಯಾಟವೇ ಬೇರೆ ಆಯಿತು. ಓದುವ ಸಮಯದಲ್ಲಿ ಸರಿಯಾಗಿ ಓದಲು ಆಗಲಿಲ್ಲ, ಬಡತನ ವಿದ್ಯಾಭ್ಯಾಸಕ್ಕೆ ಗುಡ್ ಬೈ ಹೇಳಿತು.ಆದರೆ ನನ್ನ ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ಕೊಡಿಸಿ ಪೊಲೀಸ್ ಮಾಡುವ ಆಸೆ ಇದೆ ಎನ್ನುವ ಹಂಬಲವನ್ನು ಕಾಫಿನಾಡು ಚಂದು ಹೊರಹಾಕುತ್ತಾರೆ. 

ನಟ ಶಿವರಾಜ್ ಕುಮಾರ್ ನೋಡುವ ಆಸೆ 
ಚಂದುವಿಗೆ ಕನ್ನಡ ಸಿನಿಮಾದ ದೊಡ್ಡಮನೆ ಕುಟುಂಬದ ಮೇಲೆ ಅಭಿಮಾನ ಜಾಸ್ತಿ, ನಟ ಶಿವರಾಜ್ ಕುಮಾರ್ ಅವರನ್ನು ನೋಡಲೇಬೇಕೆಂಬ ಆಸೆ ಇದೆ. ಮತ್ತೊಂದು ವಿಶೇಷ ವಿಚಾರ ಎಂದರೆ ಕೆಲವೇ ದಿನಗಳಲ್ಲಿ  3 ಲಕ್ಷ ಫಾಲೋವರ್ಸ್ ಗಳನ್ನೂ ಸೋಷಿಯಲ್ ಮೀಡಿಯಾದಲ್ಲಿಗಳಿಸಿದ್ದಾರೆ.ಇನ್ನು ಸೋಶಿಯಲ್ ಮೀಡಿಯಾದಲ್ಲಿ ಕಾಲ್ ಎಳೆಯುವರೆಗೂ ಕೂಡ ಕಾಫಿನಾಡು ಚಂದು ಟಕ್ಕರ್ ಕೊಟ್ಟಿದ್ದಾರೆ. ಕಾಲ್ ಎಳೆಯುವರು ಎಲ್ಲಿವರೆಗೂ ಇರುತ್ತಾರೆ ಅಲ್ಲಿವರೆಗೂ ನಾನು ಮುಂದೆ ಹೋಗ್ತಾನೆ ಇರ್ತೀನಿ ಎನ್ನುವುದು ಕಾಫಿನಾಡು ಚಂದುವಿನ ವಾದ.ಅದೇನೇ ಇರಲಿ ದಿನದಿಂದ ದಿನಕ್ಕೆ ಕಾಫಿನಾಡು ಚಂದುವಿನ ಹವಾ ಸೋಷಿಯಲ್ ಮೀಡಿಯಾದಲ್ಲಿ ಜಾಸ್ತಿ ಆಗ್ತಾ ಇದೆ.

click me!