ಪಾಪ ಪಾಂಡುವಿನಲ್ಲಿ ಪಾಚು ಅಲಿಯಾಸ್ ಶ್ರೀಮತಿಯಾಗಿ ರಂಜಿಸಿದ್ದ ಶಾಲಿನಿ ಅವರು, ಸೀರಿಯಲ್ನಲ್ಲಿ ಆಫರ್ ಏಕೆ ಸಿಗಲಿಲ್ಲ ಎನ್ನುವ ಬಗ್ಗೆ ನೋವಿನ ಮಾತನಾಡಿದ್ದಾರೆ.
ಸುಮಾರು ಐದು ವರ್ಷಗಳ ಕಾಲ ಪ್ರತಿಯೊಬ್ಬರನ್ನೂ ರಂಜಿಸಿದ್ದ ಧಾರಾವಾಹಿ ಎಂದರೆ ಪಾಪ ಪಾಂಡು. ಚಿಕ್ಕವರಿಂದ ಹಿಡಿದು ವಯೋವೃದ್ಧರವರೆಗೆ ಎಲ್ಲರನ್ನೂ ಬಿದ್ದೂ ಬಿದ್ದೂ ನಗುವಂತೆ ಮಾಡಿತ್ತು ಈ ಧಾರಾವಾಹಿ. ಅದರಲ್ಲಿನ ಪಾಚು ಅಲಿಯಾಸ್ ಶ್ರೀಮತಿ ಪಾತ್ರವಂತೂ ಎಲ್ಲರಿಗೂ ಅಚ್ಚುಮೆಚ್ಚು. ಪಾಚು ಎಂದೇ ಫೇಮಸ್ ಆಗಿರೋ ನಟಿ ಎಂದರೆ ಶಾಲಿನಿ ಸತ್ಯನಾರಾಯಣ. ಶಾಲಿನಿ ಎಂದರೆ ಬಹುತೇಕ ಮಂದಿಗೆ ಗೊತ್ತಾಗಲಿಕ್ಕಿಲ್ಲ. ಆದರೆ ಪಾಪಪಾಂಡು ಪಾಚು ಎಂದರೆ ಎಲ್ಲರಿಗೂ ಶಾಲಿನಿಯವರ ಮುಖ ಕಣ್ಣಮುಂದೆ ಬರುತ್ತದೆ. ಸೀರಿಯಲ್ ಮಾತ್ರವಲ್ಲದೇ, 'ಮದುವೆಯ ಮಮತೆಯ ಕರೆಯೋಲೆ', 'ದಯವಿಟ್ಟು ಗಮನಿಸಿ' ಸಿನಿಮಾದಲ್ಲೂ ಶಾಲಿನಿ ನಟಿಸಿದ್ದಾರೆ. ನಿರೂಪಕಿಯಾಗಿಯೂ ಸೈ ಎನಿಸಿಕೊಂಡಿದ್ದಾರೆ 'ಚಿಣ್ಣರ ಚಿಲಿಪಿಲಿ' ಷೋ ನಡೆಸಿಕೊಟ್ಟಿದ್ದರು. ಸೋಷಿಯಲ್ ಮೀಡಿಯಾದಲ್ಲಿಯೂ ಆ್ಯಕ್ಟೀವ್ ಆಗಿದ್ದಾರೆ.
ರ‍್ಯಾಪಿಡ್ ರಶ್ಮಿ ಅವರ ಯೂಟ್ಯೂಬ್ ಚಾನೆಲ್ನಲ್ಲಿ ಶಾಲಿನಿ ಅವರು ತಮ್ಮ ಮನದಾಳದ ಮಾತುಗಳನ್ನು ತೆರೆದಿಟ್ಟಿದ್ದಾರೆ. ಪಾಪ ಪಾಂಡುವಿನಲ್ಲಿ ಐದು ವರ್ಷ ಕೆಲಸ ಮಾಡಿದ ಬಳಿಕ ತಮಗೆ ಹೇಗೆ ಬೇರೆ ಕಡೆಯಿಂದ ಆಫರ್ ಸಿಗಲಿಲ್ಲ, ಹೇಗೆ ಆಫರ್ಗಳನ್ನು ನಿರಾಕರಿಸಿದರು ಎಂಬ ಬಗ್ಗೆ ಶಾಲಿನಿ ಮಾತನಾಡಿದ್ದಾರೆ. ಕಿರುತೆರೆ ಹೇಗಿದೆ ಎಂದರೆ, ಒಂದೇ ಕ್ಯಾರೆಕ್ಟರ್ ಅನ್ನು ಕೆಲ ವರ್ಷ ಮಾಡಿಬಿಟ್ಟರೆ, ಅದೇ ಕ್ಯಾರೆಕ್ಟರ್ನಲ್ಲಿಯೇ ನಮ್ಮನ್ನು ಗುರುತಿಸಿಬಿಡುತ್ತಾರೆ. ವೀಕ್ಷಕರು ಕೂಡ ಅಂಥದ್ದೇ ಬೇಕು ಎನ್ನುತ್ತಾರೆ. ಐದು ವರ್ಷ ಪಾಪ ಪಾಂಡುವಿನಲ್ಲಿ ಕಾಮಿಡಿ ಸೀನ್ ಮಾಡಿದ ಬಳಿಕ, ಇವಳೇನು ಸೀರಿಯಸ್ ಸೀನ್ ಮಾಡಿಯಾಳು ಎನ್ನುವ ಒಂದೇ ಕಾರಣಕ್ಕೆ ನನಗೆ ಛಾನ್ಸ್ ಸಿಗಲಿಲ್ಲ. ಏಕೆಂದರೆ ಕಾಮಿಡಿ ಸೀನ್ ಮಾಡಿದ ಬಳಿಕ ಸೀರಿಯಲ್ ದೃಶ್ಯಗಳಿಗೆ ನಾನು ಹೊಂದಿಕೊಳ್ಳುವುದಿಲ್ಲ ಎನ್ನಿಸಿತೋ ಏನೋ ಗೊತ್ತಿಲ್ಲ, ಆದರೆ ಆಫರ್ಗಳನ್ನು ರಿಜೆಕ್ಟ್ ಮಾಡಲಾಯಿತು ಎಂದು ಶಾಲಿನಿ ಅವರು ನೋವಿನಿಂದ ನುಡಿದಿದ್ದಾರೆ.
ಹುಟ್ಟುತ್ತ ಎಲ್ಲರೂ ಶೂದ್ರರೇ, ಬ್ರಾಹ್ಮಣರೂ ಮಾಂಸಾಹಾರ ತಿಂತಿದ್ರು... ಆದ್ರೆ... ವಿದ್ವಾನ್ ರಾಜೇಂದ್ರ ಭಟ್
ಆದರೆ ಇದೇ ತಮ್ಮ ಜೀವನದ ಪ್ಲಸ್ ಪಾಯಿಂಟ್ ಕೂಡ ಆಯಿತು ಎಂದಿರುವ ಶಾಲಿನಿ, ಸೀರಿಯಲ್ಗಳಲ್ಲಿ ಅವಕಾಶ ಸಿಗದ ಕಾರಣ ಆ್ಯಂಕರಿಂಗ್ ಆಯ್ಕೆ ಮಾಡಿಕೊಂಡೆ. ನಿರೂಪಣೆಯಿಂದ ನಾನು ಸಾಕಷ್ಟು ಕಲಿತೆ. ಅದರಲ್ಲಿಯೂ ಹೆಸರು ಗಳಿಸಲು ಸಾಧ್ಯವಾಯಿತು. ಒಂದು ವೇಳೆ ನಟನೆಯಲ್ಲಿ ನನಗೆ ಅವಕಾಶ ಸಿಗುತ್ತಲೇ ಹೋಗಿದ್ದರೆ, ಬಹುಶಃ ಆ್ಯಂಕರಿಂಗ್ ಕ್ಷೇತ್ರದಲ್ಲಿ ಹೆಸರು ಮಾಡಲು ಆಗುತ್ತಿರಲಿಲ್ಲವೇನೋ ಎನ್ನುತ್ತಲೇ ಆಗಿದ್ದೆಲ್ಲಾ ಒಳ್ಳೆಯದ್ದಕ್ಕೆ ಎನ್ನುವ ಮಾತು ತಮ್ಮ ಜೀವನದಲ್ಲಿಯೂ ನಡೆದಿದೆ ಎಂಬರ್ಥದಲ್ಲಿ ನಟಿ ಮಾತನಾಡಿದ್ದಾರೆ.
ಅಂದಹಾಗೆ, ಶಾಲಿ ಅವರು, ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ "ಸುವರ್ಣ ಸೂಪರ್ ಸ್ಟಾರ್ಸ್" ನ ನಿರೂಪಕಿಯಾಗಿ ವೀಕ್ಷಕರನ್ನು ರಂಜಿಸುತ್ತಿದ್ದಾರೆ. ಇನ್ನು ಇವರ ಕಿರುತೆರೆ, ಹಿರಿತೆರೆ ಪಯಣದ ಕುರಿತು ಹೇಳುವುದಾರೆ, 'ಜನನಿ' ಧಾರಾವಾಹಿಯಲ್ಲಿ ಗಿರಿಜಾ ಲೋಕೇಶ್ ಮಗಳಾಗಿ ಅಭಿನಯಿಸುವ ಮೂಲಕ ಕಿರುತೆರೆಗೆ ಪದಾರ್ಪಣೆ ಮಾಡಿದ್ದರು ಶಾಲಿನಿ. ಅಲ್ಲಿಂದ 'ಅರ್ಧಸತ್ಯ', 'ಚದುರಂಗ', 'ಪಾಪಾ ಪಾಂಡು', 'ಪಾಪಾ ಪಾಂಡು'- 2, 'ಯಡಿಯೂರು ಶ್ರೀ ಸಿದ್ಧಲಿಂಗೇಶ್ವರ' ಸೇರಿದಂತೆ ಕೆಲವು ಧಾರಾವಾಹಿಗಳಲ್ಲಿ ನಟಿಸಿದ್ದರೂ ಅವರಿಗೆ ಪಾಪ ಪಾಂಡು ತುಂಬಾ ಹೆಸರು ತಂದುಕೊಟ್ಟಿತು. ಇಷ್ಟೇ ಅಲ್ಲದೇ, ರೆಡ್ ಎಫ್ ಎಂ ಪ್ರೋಗ್ರಾಮಿಂಗ್ ಹೆಡ್ ಆಗಿ ಶಾಲಿನಿ ನಾಲ್ಕು ವರ್ಷ ಕಾರ್ಯ ನಿರ್ವಹಿಸಿದ್ದಾರೆ. ಬಿಗ್ ಬಾಸ್ ಸ್ಪರ್ಧಿಯಾಗಿ ಕಾಣಿಸಿಕೊಂಡಿದ್ದಾರೆ. ಶಾಲಿವುಡ್ ಎಂಬ ಯೂಟ್ಯೂಬ್ ಕೂಡ ನಡೆಸುತ್ತಿದ್ದಾರೆ.
15 ದಿನದಿಂದ ಮಕ್ಕಳನ್ನೂ ಮಾತನಾಡಿಸ್ಲಿಲ್ಲ! 'ತಾಲೀಬಾನ್'ನಲ್ಲಿ ಕಾಣಿಸಿಕೊಂಡ ಆರ್ಯವರ್ಧನ್ ಗುರೂಜಿ ಪತ್ನಿ ಕಣ್ಣೀರು