ಗೌತಮ್ ಮತ್ತು ಭೂಮಿಕಾರನ್ನು ಬೇರೆ ಮಾಡಲು ಶಕುಂತಲಾ ಹಲವು ರೀತಿಯಲ್ಲಿ ಪ್ಲ್ಯಾನ್ ರೂಪಿಸುತ್ತಳೇ ಇದ್ದಾಳೆ. ಇದಕ್ಕೆ ನೆಟ್ಟಿಗರು ಹೇಳ್ತಿರೋದೇನು?
ಎಷ್ಟೋ ಮನೆಗಳಲ್ಲಿ ಜಗಳವಾದಾಗ ಗಂಡಸರಿಗೆ ಅಮ್ಮನ ಪರ ಹೋಗಬೇಕೋ, ಪತ್ನಿಯ ಪರ ನಿಲ್ಲಬೇಕೋ ಎನ್ನುವ ಸಂಕಟ ಶುರುವಾಗುವುದು ಸಹಜ. ಇಬ್ಬರಲ್ಲಿ ಯಾರ ತಪ್ಪು ಇರುತ್ತದೆ ಎಂದು ತಿಳಿದುಕೊಳ್ಳುವುದು ಅವರಿಗೆ ಬಲು ಕಷ್ಟವೂ ಆಗಿಬಿಡುತ್ತದೆ. ಅತ್ತ ಅಮ್ಮ- ಇತ್ತ ಪತ್ನಿ ಯಾರ ಪರವನ್ನೂ ವಹಿಸಿಕೊಳ್ಳುವಂತಿಲ್ಲ, ಯಾರ ವಿರೋಧವನ್ನೂ ಕಟ್ಟಿಕೊಳ್ಳುವಂತಿಲ್ಲ ಎನ್ನುವ ಸ್ಥಿತಿ ಅವರದ್ದು. ಅದು ಅವರವರ ಮನೆಗೆ ಬಿಟ್ಟ ವಿಷಯ. ಆದರೆ ಕೆಲವು ಮನೆಗಳಲ್ಲಿ ಅಮೃತಧಾರೆಯಂಥ ಶಕುಂತಲಾ ಕೂಡ ಇರುತ್ತಾರೆ. ಎಲ್ಲರ ಮನೆಯಲ್ಲಿಯೂ ಗೌತಮ್ನಂಥ ಮಗ ಸಿಗುವುದು ಕಷ್ಟವೇ. ಭೂಮಿಕಾಳಂತ ಮೂಗಿನ ಮೇಲೆ ಕೋಪ ಇರುವ ಸೊಸೆಯಂದಿರೂ ಇರಬಹುದು. ಆದರೆ ಶಕುಂತಲಾಳ ಕುತಂತ್ರಕ್ಕೆ ಅಷ್ಟೇ ಸೂಕ್ಷ್ಮವಾಗಿ ತಿರುಗೇಟು ಕೊಡುವ ಭೂಮಿಕಾ ಇಲ್ಲದೇ ಹೋಗಬಹುದು. ಇಂಥ ಸಂದರ್ಭಗಳಲ್ಲಿ ಸೂಕ್ಷ್ಮವನ್ನು ಅರಿತು ಪರಿಸ್ಥಿತಿಯನ್ನು ನಿಭಾಯಿಸಬೇಕು ಎನ್ನುತ್ತಿದ್ದಾರೆ ಅಮೃತಧಾರೆ ಅಭಿಮಾನಿಗಳು!
ಅಷ್ಟಕ್ಕೂ ಇಂಥದ್ದೊಂದು ಬುದ್ಧಿಯನ್ನು ಹೇಳಲು ಕಾರಣ, ಇಲ್ಲಿ ಗೌತಮ್ ಮತ್ತು ಭೂಮಿಕಾಳನ್ನು ಬೇರೆ ಮಾಡಲು, ಅವರಿಬ್ಬರ ನಡುವೆ ಮೂಡುತ್ತಿರುವ ಪ್ರೀತಿಯನ್ನು ದ್ವೇಷಕ್ಕೆ ಬದಲಿಸಲು ಶಕುಂತಲಾ ತಂತ್ರ ರೂಪಿಸುತ್ತಲೇ ಬಂದಿದ್ದಾಳೆ. ಅವರ ಎಲ್ಲಾ ತಂತ್ರಗಳೂ ಸದ್ಯ ಬೇರೆ ಸೀರಿಯಲ್ಗಳ ರೀತಿಯಲ್ಲಿ ಸಫಲವಾಗದೇ ಗೌತಮ್ ಮತ್ತು ಭೂಮಿಕಾ ನಡುವೆ ಇರುವ ಪ್ರೀತಿಯಿಂದ ವಿಫಲವಾಗುತ್ತಲೇ ಬಂದಿವೆ. ಅಲ್ಲದೇ ಶಕುಂತಲಾ ತಂತ್ರ ರೂಪಿಸಿದಷ್ಟೂ ಪತಿ-ಪತ್ನಿ ಹತ್ತಿರವಾಗುತ್ತಿದ್ದಾರೆ. ಆದರೆ ಗೌತಮ್ನಂಥ ಮಗ ಇಲ್ಲದೇ ಹೋದರೆ, ಖಂಡಿತವಾಗಿಯೂ ಇವರಿಬ್ಬರ ನಡುವೆ ಬಿರುಕು ಮೂಡಿ ಎಂದೋ ಇಬ್ಬರೂ ಬೇರ್ಪಡುತ್ತಿದ್ದರು ಎನ್ನುವುದು ಅಭಿಮಾನಿಗಳ ಅಭಿಮತ.
ಅಷ್ಟಕ್ಕೂ ಇದೀಗ ಮತ್ತೆ ಶಕುಂತಲಾ ತಂತ್ರ ರೂಪಿಸಿದ್ದಾಳೆ. ಕೆಲಸ ಕಳೆದುಕೊಂಡಿರೋ ತಮ್ಮನಿಗೆ ಹಣದ ಸಹಾಯ ಮಾಡಲು ಸ್ವಾಭಿಮಾನಿ ಭೂಮಿಕಾ, ತನ್ನ ಚಿನ್ನವನ್ನು ಅಡುವು ಇಟ್ಟು ಐದು ಲಕ್ಷ ರೂಪಾಯಿ ಕೊಟ್ಟಿದ್ದಾಳೆ. ಇದು ಯಾರಿಗೂ ಗೊತ್ತಿಲ್ಲದ ವಿಷಯ. ಗಂಡ ಗೌತಮ್ಗೆ ಹೇಳಿದರೆ ಚಿಟಿಕೆ ಹೊಡೆಯುವಷ್ಟರಲ್ಲಿ ಕೋಟಿ ಕೋಟಿ ಹಣವನ್ನೇ ಕೊಡುತ್ತಿದ್ದ. ಆದರೆ ಭೂಮಿಕಾ ಸ್ವಾಭಿಮಾನಿಯಾಗಿರೋ ಕಾರಣ, ಐದು ಲಕ್ಷ ರೂಪಾಯಿ ಸಾಲವನ್ನು ತಾನೇ ತೀರಿಸಲು ಕೆಲಸಕ್ಕೆ ಹೋಗುತ್ತಿದ್ದಾಳೆ. ಈ ವಿಷಯ ಅತ್ತೆ ಶಕುಂತಲಾಗೆ ತಿಳಿದಿದೆ. ಐದು ಲಕ್ಷ ರೂಪಾಯಿ ಹಣದ ಚೀಟಿ ಅವಳಿಗೆ ಸಿಕ್ಕಿದೆ. ಇದರೊಂದಿದಲೇ ಇಬ್ಬರನ್ನೂ ಬೇರೆ ಬೇರೆ ಮಾಡಬಹುದು ಎನ್ನುವ ಪ್ಲ್ಯಾನ್ ಮಾಡಿದ್ದಾಳೆ ಅವಳು.
ಅದನ್ನು ಗೌತಮ್ಗೆ ಹೇಳಿದ್ದಾಳೆ. ಗೌತಮ್ ಕೊಡಿಸಿದ ಒಡವೆಗಳನ್ನೇ ಭೂಮಿಕಾ ಒತ್ತೆ ಇಟ್ಟಿರುವ ಕಾರಣ ಗೌತಮ್ ಕೆಂಡಾಮಂಡಲನಾಗಿ ಇಬ್ಬರ ನಡುವೆ ದೊಡ್ಡ ಗಲಾಟೆ ಮಾಡಿಸುವ ಪ್ಲ್ಯಾನ್ ಶಕುಂತಲಾದ್ದು. ಆದರೆ ಭೂಮಿಕಾ ಪರವಾಗಿಯೇ ನಿಂತಿರುವಂತೆ ಗೌತಮ್ಗೆ ವಿಷಯ ತಿಳಿಸಿದ್ದಾಳೆ. ತಮ್ಮ ಚಿಕ್ಕಮ್ಮ ಶಕುಂತಲಾ ದೇವಿ ತುಂಬಾ ಒಳ್ಳೆಯವಳು ಎಂದು ನಂಬಿರುವ ಗೌತಮ್ಗೆ ಅವಳು ಕುತಂತ್ರ ಮಾಡುತ್ತಿದ್ದಾಳೆ ಎಂದು ತಿಳಿಯುತ್ತಲೇ ಇಲ್ಲ. ಭೂಮಿಕಾ ಮೇಲೆ ಬೇಸರ ಮೂಡಿದೆ. ಆದರೆ ಭೂಮಿಕಾ ಸ್ವಭಾವ ಗೊತ್ತಿರುವ ಕಾರಣ, ಗಂಡ-ಹೆಂಡತಿ ಒಂದಾಗುತ್ತಾರೆ ಎನ್ನುವುದು ಸೀರಿಯಲ್ ಪ್ರೇಮಿಗಳಿಗೆ ಗೊತ್ತು. ಆದರೆ ಸೊಸೆಯ ಪರವಾಗಿ ಇರುವಂತೆ ಮಾಡಿ, ಹೀಗೆ ಕಡ್ಡಿ ಹಾಕುವವರು ನಿಮ್ಮ ಮನೆಯಲ್ಲಿಯೂ ಇರಬಹುದು ಹುಷಾರ್ ಎನ್ನುತ್ತಿದ್ದಾರೆ ನೆಟ್ಟಿಗರು.