ಸರ್ಕಾರಿ ಶಾಲಾ ಮಕ್ಕಳಂತೆ ಯೂನಿಫಾರ್ಮ್ ಹಾಕಿಕೊಂಡ ಸರಿಗಮಪ ಜಡ್ಜ್‌ಗಳು

By Web DeskFirst Published Apr 13, 2019, 2:27 PM IST
Highlights

ಸರ್ಕಾರಿ ಶಾಲೆ ಮಕ್ಕಳಿಗೆ ಸರಿಗಮಪ ವೇದಿಕೆ ಸಮರ್ಪಿಸಿದ ಜೀ ಕನ್ನಡ | ಶಾಲಾ ಮಕ್ಕಳಂತೆ ಯೂನಿಫಾರ್ಮ್ ಧರಿಸಿದ ಸರಿಗಮಪ ಜಡ್ಜ್‌ಗಳು | 

ಬೆಂಗಳೂರು (ಏ. 13): ಝೀ ಕನ್ನಡ ವಾಹಿನಿಯ ಸರಿಗಮಪ ಲಿಟಲ್‌ಚಾಂಪ್ಸ್ ಸೀಸನ್‌ 16 ನಲ್ಲಿ ವಿಭಿನ್ನ ರೂಪದ ಎಪಿಸೋಡ್‌ ಒಂದು ಸಿದ್ಧವಾಗಿದೆ. 

ಸಂಗೀತದ ಹೊಸ ಅಲೆಗಳೊಂದಿಗೆ ಮತ್ತೊಮ್ಮೆ ಇಡೀ ಕರ್ನಾಟಕದ ಪ್ರೇಕ್ಷಕರನ್ನು ತಮ್ಮ ಬಾಲ್ಯಕ್ಕೆ, ಸರ್ಕಾರಿ ಶಾಲೆಗೆ ಕರೆದುಕೊಂಡು ಹೋಗುವುದೇ ಈ ಸಂಚಿಕೆಯ ಮುಖ್ಯ ಉದ್ದೇಶ. 

ಹೌದು, ಈ ಹಿಂದಿನ ಸಂಚಿಕೆಗಳಲ್ಲಿ ಸ್ಪರ್ಧಿ ರುಬಿನಾ ಹಾಡಿದ ಸರ್ಕಾರಿ ಶಾಲೆಯ ಹಾಡು ಎಲ್ಲಾ ಕಡೆ ಪ್ರಚಲಿತವಾಗಿತ್ತು. ನಟ ಪುನೀತ್‌ ರಾಜಕುಮಾರ್‌ ಕೂಡ ರುಬಿನಾಳನ್ನು ಮನೆಗೆ ಕರೆದು, ಅವಳ ಜೊತೆಯಲ್ಲಿ ವೀಡಿಯೋ ನೋಡಿ ಖುಷಿ ಪಟ್ಟಿದ್ದರು. ಆಗ ಸರಿಗಮಪ ತೀರ್ಪುಗಾರರು ಆಸೆಪಟ್ಟಂತೆ ಈ ವಾರ ಸರಿಗಮಪ ವೇದಿಕೆಯಲ್ಲಿ ಸರ್ಕಾರಿ ಪ್ರಾಥಮಿಕ ಶಾಲಾ ದಿನಾಚರಣೆ ಆಚರಿಸಲಿದ್ದಾರೆ. 

ಈ ಶಾಲಾ ದಿನಾಚರಣೆಯ ಬಹುದೊಡ್ಡ ವಿಶೇಷತೆ ಎಂದರೆ ಮಕ್ಕಳ ಜೊತೆಗೆ ನಿರೂಪಕಿ ಅನುಶ್ರೀ ಹಾಗೂ ತೀರ್ಪುಗಾರರಾದ ವಿಜಯ ಪ್ರಕಾಶ್‌, ರಾಜೇಶ್‌ ಕೃಷ್ಣನ್‌ ಹಾಗೂ ಅರ್ಜುನ್‌ ಜನ್ಯ ಮತ್ತೆ ತಮ್ಮ ಸ್ಕೂಲ್‌ ಯುನಿಫಾಮ್‌ರ್‍ ಧರಿಸಿ ಮಕ್ಕಳಾಗಿ ವೇದಿಕೆಯನ್ನು ಅಲಂಕರಿಸಲಿದ್ದಾರೆ. ಇವರ ಪ್ರಾಂಶುಪಾಲರಾಗಿ ನಾದಬ್ರಹ್ಮ ಹಂಸಲೇಖ ಅವರು ಗೆಟಪ್‌ ಹಾಕಲಿದ್ದಾರೆ.

 

ಈ ವಿಶೇಷ ಸಂಚಿಕೆಯಲ್ಲಿ ಸರಿಗಮಪ ತಂಡ ರಾಜ್ಯದ ವಿವಿಧ ಭಾಗಗಳಿಂದ ಏಳು ಮಾದರಿ ಶಾಲೆಯ ಶಿಕ್ಷಕರನ್ನು ಹಾಗೂ ವಿದ್ಯಾರ್ಥಿಗಳನ್ನು ಸರಿಗಮಪ ವೇದಿಕೆಗೆ ಕರೆತರುತ್ತಿದ್ದಾರೆ. ತುಮಕೂರು ಜಿಲ್ಲೆಯ ಕಾಡಶೆಟ್ಟಿಹಳ್ಳಿ, ಶಿವಮೊಗ್ಗ ಜಿಲ್ಲೆಯ ನಾಲೂರು, ದಾವಣಗೆರೆ ಜಿಲ್ಲೆಯ ಆನಗೋಡು, ಚಾಮರಾಜನಗರ ಜಿಲ್ಲೆಯ ಹೊಂಗಹಳ್ಳಿ, ಬೆಳಗಾವಿ ಜಿಲ್ಲೆಯ ಭೂತರಾಮನಹಟ್ಟಿಅಲ್ಲದೆ ರುಬೀನಾಳ ಶಾಲೆಯಾದ ಹಾವೇರಿ ಜಿಲ್ಲೆ ಮೇವುಂಡಿಯಿಂದ ಸರ್ಕಾರಿ ಪ್ರಾಥಮಿಕ ಶಾಲೆ ಹಾಗೂ ಮೋನಮ್ಮ ಓದಿದ ರಾಯಚೂರು ಜಿಲ್ಲೆ ಸೋಮನಮರಡಿಯ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಸರಿಗಮಪ ವೇದಿಕೆಗೆ ಆಗಮಿಸುತ್ತಿದ್ದಾರೆ. ಅಂದಹಾಗೆ ಈ ಮಕ್ಕಳ ಸಂಗೀತ ಸಂಚಿಕೆ ಇಂದು ಮತ್ತು ನಾಳೆ 8 ಕ್ಕೆ ಪ್ರಸಾರವಾಗಲಿದೆ.

click me!