
ನೀನೇ ರಾಮಾ, ನೀನೇ ಅಲ್ಲಾ, ನೀನೇ ಯೇಸು ಎಂದು ಸರಿಗಮಪ 13 ಶೋನಲ್ಲಿ ಹಾಡು ಹಾಡಿ, ದೊಡ್ಡ ವಿವಾದಕ್ಕೆ ಸಿಲುಕಿದ್ದ ಶಿವಮೊಗ್ಗದ ಸಾಗರ ಮೂಲದ ಸುಹಾನಾ ಸೈಯದ್ ಅವರು ಲವ್ ಮಾಡುತ್ತಿರುವುದಾಗಿ ಕೆಲ ದಿನಗಳ ಹಿಂದೆ ಹೇಳಿಕೊಂಡಿದ್ದಾರೆ. ಈಗ ಅವರು ಮದುವೆ ಆಗಲು ರೆಡಿಯಾಗಿದ್ದಾರೆ. ಕುವೆಂಪು ಆಶಯದಂತೆ ಅವರು ಮಂತ್ರ ಮಾಂಗಲ್ಯದ ಮದುವೆ ಆಗಲಿದ್ದಾರಂತೆ.
ಅಂದಹಾಗೆ ಅಕ್ಟೋಬರ್ 17ರಂದು ಮದುವೆ ನಡೆಯಲಿದೆ ಎನ್ನಲಾಗಿದೆ. ಕನಕಪುರದ ಖಾಸಗಿ ರೆಸಾರ್ಟ್‌ನಲ್ಲಿ ಈ ಮದುವೆ ನಡೆಯಲಿದೆ. ಮಂತ್ರ ಮಾಂಗಲ್ಯಕ್ಕೆ ಇಷ್ಟೇ ಜನರು ಭಾಗಿ ಆಗಬೇಕು ಎಂಬ ನಿಯಮಗಳು ಕೂಡ ಇರುತ್ತವೆ. ಸುಹಾನಾ ಸೈಯದ್ ಅವರ ಮದುವೆ ಆಹ್ವಾನ ಪತ್ರಿಕೆಯಲ್ಲಿ, “ಪ್ರೀತಿ ವಿಶ್ವದ ಭಾಷೆ. ಹೃದಯದಿಂದ ಹೊರಹೊಮ್ಮಿದ ಈ ಪ್ರೇಮ ಕಾವ್ಯ ದೇವ ವಿರಚಿತ. ಶ್ರೀ ಕುವೆಂಪುರವರ ಮಂತ್ರ ಮಾಂಗಲ್ಯದ ಆಶಯದಂತೆ ಜೊತೆಯಾಗಲಿರುವ ಸುಹಾನಾ ಹಾಗೂ ನಿತಿನ್. ನಮ್ಮ ನಡೆ ವಿಶ್ವಾ ಮಾನವತ್ವದೆಡೆ. ಸಹೃದಯಿಗಳೇ, ಬನ್ನಿ ಹರಸಿ. ಆಶೀರ್ವದಿಸಿ” ಎಂದು ಇದೆ.
ಸರಿಗಮಪ 13 ಶೋನಲ್ಲಿ ‘ಶ್ರೀಕಾರನೇ’ ಎನ್ನುವ ಹಿಂದು ಧರ್ಮದ ಹಾಡನ್ನು ಹಾಡಿದ್ದರು. ಬುರ್ಖಾ ಧರಿಸಿ, ಓರ್ವ ಮುಸ್ಲಿಂ ಮಹಿಳೆ ಹಿಂದೂ ಧರ್ಮಕ್ಕೆ ಸಂಬಂಧಪಟ್ಟ ಹಾಡನ್ನು ಹೇಳಬಹುದೇ ಎಂಬ ಚರ್ಚೆಗಳು ನಡೆದಿತ್ತು. ಶ್ರೀಕಾರನೇ ಹಾಡನ್ನು ಸುಹಾನಾ ಹಾಡಿದ್ದರ ಬಗ್ಗೆ ದೊಡ್ಡ ಚರ್ಚೆ ಆಗಿತ್ತು. ಸೋಶಿಯಲ್ ಮೀಡಿಯಾದಲ್ಲಿ ದೊಡ್ಡ ವಿಮರ್ಶೆಯೂ ಆಗಿತ್ತು. ಬುರ್ಕಾ ಹಾಕಿ ಅವರು ಈ ಹಾಡು ಹೇಳಿದ್ದು ಸಮಸ್ಯೆಯಾಗಿತ್ತು. ಆಮೇಲೆ ‘ನೀನೇ ರಾಮ, ಅಲ್ಲಾ, ಯೇಸು’ ಎಂಬ ಹಾಡು ಹೇಳಿದ್ದರು. ಪ್ರಶ್ನೆ ಮಾಡಿದವರಿಗೆ ಇದು ಉತ್ತರ ನೀಡಿದಂತಾಗಿತ್ತು. ಈ ವಿವಾದದ ಬಗ್ಗೆ ಮಾತನಾಡಿದ್ದ ಸುಹಾನಾ ಅವರು, “ನನಗೆ ಪ್ರತಿಭೆ ಇದ್ದಿದ್ದಕ್ಕೆ ಈ ಶೋಗೆ ನನ್ನನ್ನು ಆಯ್ಕೆ ಮಾಡಲಾಗಿದೆ. ಹಾಡು ಹಾಡುತ್ತ, ಸಂಗೀತವನ್ನು ಕಲಿಯಲು ಈ ವೇದಿಕೆಗೆ ಬಂದಿದ್ದೇನೆ” ಎಂದು ಹೇಳಿದ್ದರು. ಸುಹಾನಾ ಅವರು ಕುಂಕುಮವನ್ನು ಕೂಡ ಇಡುತ್ತಾರೆ, ಇದು ಕೂಡ ಚರ್ಚೆಯಾಗಿತ್ತು. ಹಿಜಾಬ್ ಧರಿಸುವ ಬಗ್ಗೆ ಕೂಡ ಅವರು ಮಾತನಾಡಿದ್ದರು.
ನಿತಿನ್ ಶಿವಾಂಶ್ ಎನ್ನುವ ರಂಗಭೂಮಿ ಕಲಾವಿದರ ಜೊತೆ ಸುಹಾನಾ ಅವರು ಮದುವೆ ಆಗಲಿದ್ದಾರೆ. ಈ ಬಗ್ಗೆ ಅವರು ಇನ್‌ಸ್ಟಾಗ್ರಾಂನಲ್ಲಿ ಮಾಹಿತಿ ಹಂಚಿಕೊಂಡಿದ್ದರು. ನಿತಿನ್ ಶಿವಾಂಶ್ ಅವರು ನೀನಾಸಂನಿಂದ ತರಬೇತಿ ಪಡೆದಿದ್ದಾರೆ. ಅಂದಹಾಗೆ ಸುಹಾನಾ ಕೂಡ ರಂಗಭೂಮಿಯಲ್ಲಿ ತೊಡಗಿಸಿಕೊಂಡವರು.
“ಪ್ರೇಮವನ್ನು ಪ್ರತಿ ಜೀವಿಯ ನಿರೀಕ್ಷೆ ಮಾಡುವುದು, ಪ್ರೇಮಕ್ಕೆ ಯಾವುದೇ ಕಾರಣ ಇರೋದಿಲ್ಲ. ಈ ಪ್ರೇಮವು ಅನಂತ ದೂರದ ಸುದೀರ್ಘ ಪ್ರಯಾಣವಾಗಿದೆ. ಪ್ರೇಮಕ್ಕೆ ಯಾವ ಮಿತಿಯೂ ಇರೋದಿಲ್ಲ ಎನ್ನೋದಕ್ಕೆ ನಾವೇ ಸಾಕ್ಷಿ. ಹೃದಯಗಳ ಭಾಷೆ ಮಾತ್ರ ಎಲ್ಲವನ್ನೂ ಮೀರಿದ್ದಾಗಿದೆ. ಪ್ರತಿ ಸವಾಲುಗಳು, ಪ್ರತಿ ಸಂಶಯ, ಪ್ರತಿ ಭಯದ ಮೌನದಲ್ಲಿಯೂ ನಮ್ಮನ್ನು ಪ್ರೀತಿ ಹಿಡಿದಿಟ್ಟಿತ್ತು. ನಮ್ಮ ಗುಟ್ಟನ್ನು ನಾವು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇವೆ. ನಿಮ್ಮ ಆಶೀರ್ವಾದವಿರಲಿ” ಎಂದು ಸುಹಾನಾ ಸೈಯದ್ ಅವರು ಹೇಳಿಕೊಂಡಿದ್ದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.