
ಬೆಂಗಳೂರು (ನ.18): ಕರ್ನಾಟಕ ಚಲನಚಿತ್ರ ಅಕಾಡೆಮಿಯ (Karnataka Chalanachitra Academy) ಮುಂದಿನ ಅಧ್ಯಕ್ಷ ಸ್ಥಾನಕ್ಕೆ ಮಹಿಳೆಯನ್ನೇ ನೇಮಕ ಮಾಡಬೇಕು ಎಂದು ನಟಿ ಹಾಗೂ ಮಾಜಿ ಸಂಸದೆ ರಮ್ಯಾ ಧ್ವನಿ ಎತ್ತಿದ್ದು, ಖ್ಯಾತ ನಿರ್ದೇಶಕಿ ಕವಿತಾ ಲಂಕೇಶ್ ಅವರಿಗೆ ಬಹಿರಂಗ ಬೆಂಬಲ ವ್ಯಕ್ತಪಡಿಸಿದ್ದಾರೆ. 2009ರಿಂದ ಈವರೆಗೆ ಕೇವಲ ಒಬ್ಬರೇ ಮಹಿಳೆ ಅಕಾಡೆಮಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ ಎಂದು ರಮ್ಯಾ ತಮ್ಮ ಟ್ವೀಟ್‌ನಲ್ಲಿ ತಿಳಿಸಿದ್ದಾರೆ. ಈ ಬಾರಿ ಚಲನಚಿತ್ರ ಅಕಾಡೆಮಿಯ ಅಧ್ಯಕ್ಷ ಗದ್ದುಗೆಗೆ ಕವಿತಾ ಲಂಕೇಶ್ ಮತ್ತು ಹಿರಿಯ ನಿರ್ದೇಶಕ ಎಸ್. ನಾರಾಯಣ್ (S. Narayan) ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ ಎಂಬ ಚರ್ಚೆ ಗಾಂಧಿನಗರ ಹಾಗೂ ರಾಜಕೀಯ ವಲಯದಲ್ಲಿ ಜೋರಾಗಿರುವ ಬೆನ್ನಲ್ಲೇ, ನಟಿ ರಮ್ಯಾ ಮಾಡಿರುವ ಈ ಟ್ವೀಟ್ ಭಾರಿ ಗಮನ ಸೆಳೆದಿದೆ.
ತಮ್ಮ ಎಕ್ಸ್ ಖಾತೆಯಲ್ಲಿ ಮಹಿಳಾ ಪ್ರಾತಿನಿಧ್ಯದ ಬಗ್ಗೆ ಬರೆದುಕೊಂಡಿರುವ ರಮ್ಯಾ, ಕವಿತಾ ಲಂಕೇಶ್ ಅವರ ಸಿನಿಮಾ ಸಾಧನೆಗಳನ್ನು ಉಲ್ಲೇಖಿಸಿ ಅವರ ಅಧ್ಯಕ್ಷಗಿರಿಗೆ ಬೆಂಬಲ ನೀಡಿದ್ದಾರೆ. '2009ರಿಂದ ಈವರೆಗೆ ಕೇವಲ ಒಬ್ಬರೇ ಮಹಿಳೆ ಕರ್ನಾಟಕ ಚಲನಚಿತ್ರ ಅಕಾಡೆಮಿಯನ್ನು ಮುನ್ನಡೆಸಿದ್ದಾರೆ. ಅದು 13 ವರ್ಷಗಳ ಹಿಂದೆ, ತಾರಾ ಅನುರಾಧಾ ಅವರು ಕೇವಲ 15 ತಿಂಗಳ ಕಾಲ ಅಧ್ಯಕ್ಷರಾಗಿದ್ದರು. ಮಹಿಳೆಯರು ಕನ್ನಡ ಸಿನಿಮಾಗಳನ್ನು ನಿರ್ಮಿಸುತ್ತಾರೆ, ನೋಡುತ್ತಾರೆ ಮತ್ತು ಸಿನಿಮಾದಿಂದ ರೂಪುಗೊಂಡಿದ್ದಾರೆ. ಈಗ ಅವರು ಅದನ್ನು ಮುನ್ನಡೆಸುವ ಸಮಯ ಬಂದಿದೆ. ಮುಂದಿನ ಅಧ್ಯಕ್ಷರು ಮಹಿಳೆಯೇ ಆಗಬೇಕು. ಕವಿತಾ ಲಂಕೇಶ್ ಅವರ ಪ್ರಶಸ್ತಿ ವಿಜೇತ 'ದೇವೀರಿ' ಸಿನಿಮಾ, 'ಪ್ರೀತಿ ಪ್ರೇಮ ಪ್ರಣಯ' ಚಿತ್ರಕ್ಕೆ ರಾಷ್ಟ್ರಪ್ರಶಸ್ತಿ, 50ಕ್ಕೂ ಹೆಚ್ಚು ಸಾಕ್ಷ್ಯಚಿತ್ರಗಳು, ಐಎಫ್‌ಎಫ್‌ಐ (IFFI) ಮತ್ತು ಆಸ್ಕರ್ (Oscar) ಆಯ್ಕೆ ಸಮಿತಿಯ ತೀರ್ಪುಗಾರರಾಗಿ ಸೇವೆ ಸಲ್ಲಿಸಿದ್ದಾರೆ. ಅರ್ಹತೆ ಮತ್ತು ಪ್ರಾತಿನಿಧ್ಯ ಎರಡೂ ಒಟ್ಟಿಗಿವೆ. ಈಗ ಸಮಯ ಬಂದಿದೆ' ಎಂದು ರಮ್ಯಾ ಬರೆದಿದ್ದಾರೆ.
ಕರ್ನಾಟಕ ಚಲನಚಿತ್ರ ಅಕಾಡೆಮಿಯ ಮುಂದಿನ ಅಧ್ಯಕ್ಷ ಸ್ಥಾನದ ರೇಸ್‌ನಲ್ಲಿ ನಿರ್ದೇಶಕಿ ಕವಿತಾ ಲಂಕೇಶ್ ಮತ್ತು ಹಿರಿಯ ನಿರ್ದೇಶಕ ಎಸ್. ನಾರಾಯಣ್ ಹೆಸರುಗಳು ಮುಂಚೂಣಿಯಲ್ಲಿ ಕೇಳಿಬರುತ್ತಿವೆ. ಇಬ್ಬರೂ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರೊಂದಿಗೆ ಕಾಣಿಸಿಕೊಂಡಿರುವ ಫೋಟೋಗಳು ಸಹ ಸುದ್ದಿಯಲ್ಲಿದ್ದು, ಅಕಾಡೆಮಿಯ ಮುಂದಿನ ಸಾರಥಿ ಯಾರಾಗಲಿದ್ದಾರೆ ಎಂಬ ಕುತೂಹಲ ಮೂಡಿದೆ. ಈ ನಡುವೆ ರಮ್ಯಾ ಅವರು ಕವಿತಾ ಲಂಕೇಶ್ ಪರ ಬ್ಯಾಟ್ ಬೀಸಿರುವುದು ಮಹತ್ವ ಪಡೆದುಕೊಂಡಿದೆ.
2009ರಲ್ಲಿ ಅಕಾಡೆಮಿ ಸ್ಥಾಪನೆಯಾದಾಗಿನಿಂದ ಈವರೆಗೆ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ಪ್ರಮುಖರ ಪಟ್ಟಿ ಹೀಗಿದೆ. ಟಿಎಸ್ ನಾಗಾಭರಣ ಅವರು ಕರ್ನಾಟಕ ಚಲನಚಿತ್ರ ಅಕಾಡೆಮಿಯ ಮೊದಲ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಅದಾದ ಬಳಿಕ ಮಾರ್ಚ್ 2012ರಲ್ಲಿ ತಾರಾ ಅವರು ಅಧ್ಯಕ್ಷರಾಗಿದ್ದರು. ಇಲ್ಲಿಯವರೆಗೂ ಅಕಾಡೆಮಿಗೆ ಅಧ್ಯಕ್ಷರಾಗಿ ಏಕೈಕ ಮಹಿಳೆ ಇವರಾಗಿದ್ದಾರೆ. ನಂತರದ ಅವಧಿಗಳಲ್ಲಿ ಎಸ್‌ವಿ ರಾಜೇಂದ್ರ ಸಿಂಗ್ ಬಾಬು, ನಾಗತಿಹಳ್ಳಿ ಚಂದ್ರಶೇಖರ್, ಸುನೀಲ್ ಪುರಾಣಿಕ್, ಅಶೋಕ್ ಕಶ್ಯಪ್ ಅಧ್ಯಕ್ಷರಾಗಿದ್ದರು. 2024ರ ಫೆಬ್ರವರಿಯಿಂದ ಸಾಧು ಕೋಕಿಲ ಅವರು ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.