ರಾಮಾಚಾರಿ ಧಾರಾವಾಹಿಯಲ್ಲಿ ವೈಶಾಖ ವಿಷದ ಇಂಜೆಕ್ಷನ್ ಚುಚ್ಚಿದ ನಂತರ ಬದುಕುವುದಕ್ಕಾಗಿ ಗುಂಡಿಯಲ್ಲಿ ಕುಳಿತುಕೊಳ್ಳುವ ದೃಶ್ಯದ ಮೇಕಿಂಗ್ ವಿಡಿಯೋ ಇಲ್ಲಿದೆ. ವೈಶಾಖ ನಿಜಕ್ಕೂ ಮಣ್ಣಿನಲ್ಲಿ ಮುಚ್ಚಿ ಕುಳಿತಿದ್ದಳಾ? ಈ ದೃಶ್ಯವನ್ನು ಹೇಗೆ ಚಿತ್ರೀಕರಿಸಲಾಗಿದೆ ಎಂಬುದನ್ನು ನೋಡಿ.
ಬೆಂಗಳೂರು (ಮಾ.14): ರಾಮಾಚಾರಿ ಧಾರಾವಾಹಿಯಲ್ಲಿ ವಿಷದ ಇಂಜೆಕ್ಷನ್ ಪಡೆದ ವೈಶಾಖ ಗುಂಡಿ ತೋಡಿ ಅದರಲ್ಲಿ ಕುಳಿತುಕೊಂಡಿವುದನ್ನು ನೀವೆಲ್ಲರೂ ನೋಡಿದ್ದೀರಿ. ಆದರೆ, ನಿಜಕ್ಕೂ ವೈಶಾಖಳನ್ನು ಮಣ್ಣಿನಲ್ಲಿ ಮುಚ್ಚಲಾಗಿತ್ತಾ? ಇಲ್ಲಿದೆ ನೋಡಿ ಅಸಲಿ ಮೇಕಿಂಗ್ ವಿಡಿಯೋ.
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ರಾಮಾಚಾರಿ ಧಾರಾವಾಹಿ ಇತ್ತೀಚಿನ ದಿನಗಳಲ್ಲಿ ರೋಚಕತೆಯನ್ನು ಪಡೆದುಕೊಳ್ಳುತ್ತಿದೆ. ನಾರಾಯಣಾಚಾರ್ ಕುಟುಂಬವನ್ನು ನಾಶ ಮಾಡಬೇಕು ಎಂದೇ ಹಿರಿಮಗನ 2ನೇ ಹೆಂಡತಿಯಾಗಿ ಮನೆ ಸೇರಿಕೊಂಡ ವೈಶಾಖ ಮನೆಯನ್ನು ಒಡೆಯುವ ಹಾಗೂ ಒಬ್ಬಬ್ಬರನ್ನು ಕೊಲೆ ಮಾಡುವುದಕ್ಕೆ ಹಲವು ಪ್ರಯತ್ನಗಳನ್ನೂ ಮಾಡಿ ವಿಫಲಳಾಗಿದ್ದಾಳೆ. ಈಗ ರಾಮಾಚಾರಿಗೆ ವಿಷ ಹಾಕಿದ್ದು ತಿಳಿಯುತ್ತಿದ್ದಂತೆ, ಚಾರು ವೈಶಾಖಗೆ ಇಂಜೆಕ್ಷನ್ ಚುಚ್ಚು 72 ಗಂಟೆಗಳಲ್ಲಿ ಸಾಯುವುದಾಗಿ ತಿಳಿಸಿದ್ದಳು.
ನಂತರ, ಬುಡುಬುಡುಕೆ ವೇಷದಲ್ಲಿ ಬಂದ ಚಾರು, ನೀನು ಬದುಕಬೇಕೆಂದರೆ ವೈಶಾಖಗೆ ಪರಿಹಾರ ಹೇಳಿದ್ದಾಳೆ. ಗುಂಡಿ ತೋಡಿ ಅದ್ರಲ್ಲಿ ಕುಳಿತುಕೊಳ್ಳುವ ಪರಿಹಾರ ಹೇಳಿದ್ದಾಳೆ. ನಂತರ ಗುಂಡಿ ತೋಡಿ ಅದರಲ್ಲಿ ಕುಳಿತುಕೊಳ್ಳುವ ವೈಶಾಖ 'ವಿಶ್ವಾಸ ದ್ರೋಹಂ, ಘೋರ ಫಾಪಂ' ಎಂಬ ಮಂತ್ರ ಜಪಿಸಿದರೆ ದೇಹದಲ್ಲಿರುವ ವಿಷವನ್ನು ಭೂಮಿ ಹೀರಿಕೊಳ್ಳುತ್ತದೆ ಎಂದು ಬುಡುಬುಡಿಕೆ ಸ್ವಾಮೀಜಿ ಹೇಳಿರುತ್ತಾರೆ. ಅದೇ ರೀತಿ ಗುಂಡಿ ತೋಡಿ ವೈಶಾಖ ಕತ್ತಿನವರೆಗೂ ಮಣ್ಣು ಮುಚ್ಚಿಕೊಂಡು ಕುಳಿತು ಬೆಳಗ್ಗೆಯಿಂದ ಸಂಜೆವರೆಗೂ ಮಂತ್ರ ಜಪಿಸಿ ಬದುಕಿ ಬಂದಿದ್ದಾಳೆ. ಆದರೆ, ಈ ದೃಶ್ಯವನ್ನು ಹೇಗೆ ಮೇಕಿಂಗ್ ಮಾಡಲಾಗಿದೆ ಎಂಬ ರಹಸ್ಯ ಇದೀಗ ರಿವೀಲ್ ಆಗಿದೆ.
ಇದನ್ನೂ ಓದಿ: ಚಂದನ್ ಶೆಟ್ಟಿ & ನಿವೇದಿತಾ ಗೌಡ ಸಿನಿಮಾಗಿಂತ ಹೆಚ್ಚು ಪರ್ಸನಲ್ ಟಾರ್ಗೆಟ್ ಆಗ್ತಿರೋದು ಯಾಕೆ? ಇಲ್ಲಿದೆ....
ಸ್ವತಃ ವೈಶಾಖ ಪಾತ್ರಧಾರಿ ಐಶ್ವರ್ಯ ಹಂಚಿಕೊಂಡಿರುವ ವಿಡಿಯೋದಲ್ಲಿ ಒಂದು ಗುಂಡಿಯನ್ನು ತೋಡಿ ಅದರಲ್ಲಿ ಸ್ಟೂಲ್ ಹಾಕಿ ವೈಶಾಖಳನ್ನು ಕೂರಿಸುತ್ತಾರೆ. ನಂತರ ದಪ್ಪನೆಯ ಹಲಗೆಗಳನ್ನು ಮಧ್ಯದಲ್ಲಿ ವೈಶಾಖ ದೇಹದ ಆಕೃತಿಗೆ ಕತ್ತರಿಸಿ ಮುಚ್ಚುತ್ತಾರೆ. ಸುಮಾರು ಏಳೆಂಟು ಹಲಗೆಗಳನ್ನು ಮುಚ್ಚಿ ಆಕೆಯ ದೇಹದ ಮೇಲೆ ಮಣ್ಣು ಬೀಳದಂತೆ ಮುಚ್ಚುತ್ತಾರೆ. ನಂತರ ಅದರ ಮೇಲೆ ತೆಳ್ಳಗೆ ಮಣ್ಣನ್ನು ಮುಚ್ಚಿ ಕೂರಿಸುತ್ತಾರೆ. ಸುಮಾರು ಒಂದೆರಡು ಗಂಟೆಗಳ ಕಾಲ ಹೀಗೆ ಮಣ್ಣಿನಲ್ಲಿ ಮುಚ್ಚಿ ಕೂರಿಸಿ ಈ ದೃಶ್ಯವನ್ನು ಮಾಡಲಾಗಿದೆ.
ರಾಮಾಚಾರಿಗೆ ವೈಶಾಖ ವಿಷ ಹಾಕಿದ್ದಾಳೆ ಎಂದು ಗೊತ್ತಾದ ಮೇಲೆ ಆಕೆಗೆ ಸಾವಿನ ಭಯ ಹುಟ್ಟಿಸಿದ ಚಾರುಲತಾ ವೈಶಾಖಗೆ ಸಖತ್ ಟಾರ್ಚರ್ ಮಾಡಿದ್ದಾಳೆ. ದೇವಸ್ಥಾನದಲ್ಲಿ ಭಿಕ್ಷೆ ಬೇಡಿ, ಅದರಿಂದ ಬಂದ ಹಣವನ್ನ ವೈಶಾಖ ಅನಾಥಶ್ರಮಕ್ಕೆ ದಾನ ಕೊಡುವುದು. ಜಾನಕಿಯ ಕಾಲಿಗೆ ಬಿದ್ದು ಕ್ಷಮೆ ಕೇಳುವುದು. ದೇವಸ್ಥಾನದಲ್ಲಿ ಉರುಳು ಸೇವೆ, ದೀಪದಾರತಿ ಮಾಡಿದ್ದಾಳೆ. ಇದೀಗ ವೈಶಾಖ ತನ್ನ ಕೂದಲು ಮುಡಿ ಕೊಡಬೇಕು ಎಂಬ ಸವಾಲು ಬಂದಾಗ ಒಲ್ಲದ ಮನಸ್ಸಿನಿಂದ ಮುಡಿ ತೆಗೆಸಿಕೊಳ್ಳಲು ಹೋದಾಗ ಅದನ್ನು ತಡೆದು ಚಾರು ಬುದ್ಧಿ ಹೇಳಿದ್ದಾಳೆ.
ಇದನ್ನೂ ಓದಿ: ಹೆಂಗ್ ಕಾಣಿಸ್ತಾಳೆ ನಮ್ ಹುಬ್ಳಿ ಬೆಡಗಿ ಮಯೂರಿ ಕ್ಯಾತರಿ
ಇದಾದ ನಂತರ ವೈಶಾಖ ತನ್ನ ತಪ್ಪುಗಳನ್ನು ಒಪ್ಪಿಕೊಂಡು ಕ್ಷಮೆ ಕೇಳಿದಾಗ ಜಾನಕಿ, ರಾಮಾಚಾರಿ ಹಾಗೂ ಮುರಾರಿ ಕ್ಷಮಿಸುತ್ತಾರೆ. ಚಾರು ಮಾಡಿದ್ದ ಗಿಣ್ಣಿಗೆ ವಿಷ ಹಾಕಿದ್ದು, ಜೈಲಿನಿಂದ ವಾಪಸ್ ಬಡಲು ಸುಳ್ಳು ಹೇಳಿದ್ದು, ಕಾಲು ಸ್ವಾಧೀನವಿಲ್ಲವೆಂದು ಚಾರುಗೆ ಮುಡಿ ಕೊಡುವಂತೆ ಮಾಡಿದ್ದು ಜೊತೆಗೆ ಮುರಾರಿಗೂ ವಿಷ ಹಾಕಿದ್ದನ್ನು ಒಪ್ಪಿಕೊಂಡಿದ್ದಾಳೆ. ಇದೀಗ ವೈಶಾಖ ಬದಲಾಗಿದ್ದಾಳೆ ಎಂದು ತೋರಿಸಲಾಗುತ್ತಿದೆ. ಅಂದರೆ, ಇದು ಧಾರಾವಾಹಿ ಮುಗಿಯುವ ಮುನ್ಸೂಚನೆಯೋ ಅಥವಾ ವೈಶಾಖ ಮತ್ತೆ ನಾಟಕ ಮಾಡುತ್ತಿದ್ದಾಳೋ ಎಂಬ ಅನುಮಾನ ವೀಕ್ಷಕರಲ್ಲಿ ಮನೆ ಮಾಡಿದೆ.