"ಅಂದು ಕೊಡಿಸಿದ ಒಂದೇ ಕಾರಿನಿಂದ ಇಂದು 5 ಮಹಡಿ ಮನೆ ಕಟ್ಟಿದ್ದೇನೆ”: ರಾಮ್‌ಜಿ ಸಹಾಯ ನೆನೆದ ‘ಪುಟ್ಟ ಗೌರಿ ಮದುವೆ’ ಧಾರಾವಾಹಿ ನಟಿ

Published : Nov 17, 2026, 12:52 PM IST
Puttagowri Maduve Actress

ಸಾರಾಂಶ

Puttagowri Maduve Actress: ಡ್ರೈವಿಂಗ್ ಗೊತ್ತಿರಲಿಲ್ಲ, ಕೈಯಲ್ಲಿ ಲೈಸೆನ್ಸ್ ಕೂಡ ಇರಲಿಲ್ಲ... ಆದರೂ ರಾಮ್‌ಜಿ ಕೊಡಿಸಿದ ಆ ಒಂದೇ ಒಂದು ಕಾರು ಇಂದು ಕನ್ನಡದ ಖ್ಯಾತ ನಟಿಯೊಬ್ಬರನ್ನು 5 ಮಹಡಿ ಮನೆಯ ಒಡತಿಯನ್ನಾಗಿಸಿದೆ! ಹೊಸ ಧಾರಾವಾಹಿ ‘ಗೌರಿಪುತ್ರ’ ಆರಂಭವಾಗುತ್ತಿರುವ ಸಂದರ್ಭದಲ್ಲಿ ರಾಮ್‌ಜಿ ಅವರ ನೆರವು ಹಾಗೂ ರಾಕಿಂಗ್ ಸ್ಟಾರ್ ಯಶ್ ಕುರಿತು ‘ಪುಟ್ಟಗೌರಿ’ ಖ್ಯಾತಿಯ ನಟಿ ಮನದಾಳದ ಭಾವುಕ ಮಾತುಗಳನ್ನು ಹಂಚಿಕೊಂಡಿದ್ದಾರೆ.

ಕನ್ನಡ ಚಿತ್ರರಂಗದಲ್ಲಿ 400ಕ್ಕೂ ಅಧಿಕ ಸಿನಿಮಾಗಳಲ್ಲಿ ಬಣ್ಣ ಹಚ್ಚಿ, ‘ಪುಟ್ಟಗೌರಿ ಮದುವೆ’ ಧಾರಾವಾಹಿಯ ಹಿಮಾ ತಾಯಿಯ ಪಾತ್ರದ ಮೂಲಕ ನಾಡಿನ ಮನೆಮಾತಾಗಿರುವ ಹಿರಿಯ ನಟಿ ಮೀನಾಕ್ಷಿ ಇದೀಗ ಹೊಸದೊಂದು ಪಾತ್ರದ ಮೂಲಕ ವೀಕ್ಷಕರ ಎದುರು ಬರಲು ಸಜ್ಜಾಗಿದ್ದಾರೆ. ನವೆಂಬರ್ 16ರಿಂದ ಜೀ ಕನ್ನಡ ವಾಹಿನಿಯಲ್ಲಿ ಪ್ರತಿದಿನ ಸಂಜೆ 7 ಗಂಟೆಗೆ ಶುರುವಾಗಲಿರುವ ‘ಗೌರಿಪುತ್ರ’ ಧಾರಾವಾಹಿಯಲ್ಲಿ ಅವರು ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ. ಈ ನೂತನ ಧಾರಾವಾಹಿ ಲಾಂಚ್ ವೇಳೆ ನೀಡಿದ ವಿಶೇಷ ಸಂದರ್ಶನದಲ್ಲಿ ಮೀನಾಕ್ಷಿ ಅವರು ತಮ್ಮ ಪಯಣ, ನಿರ್ದೇಶಕ ರಾಮ್‌ಜಿ ಅವರ ಸಹಾಯಹಸ್ತ ಹಾಗೂ ನಟ ಯಶ್ ಕುರಿತು ಹಲವು ಆಸಕ್ತಿದಾಯಕ ಸಂಗತಿಗಳನ್ನು ಬಿಚ್ಚಿಟ್ಟಿದ್ದಾರೆ.

‘ಗೌರಿಪುತ್ರ’ದಲ್ಲಿ ಅನು ಪ್ರಭಾಕರ್ ತಾಯಿಯಾಗಿ ಹೊಸ ಅವತಾರ

‘ಗೌರಿಪುತ್ರ’ ಧಾರಾವಾಹಿಯಲ್ಲಿ ಮೀನಾಕ್ಷಿ ಅವರು ನಟಿ ಅನು ಪ್ರಭಾಕರ್ (ಗೌರಿ) ಅವರ ಅಮ್ಮನ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಹಿರಿಯ ಕಲಾವಿದ ಜಗದೀಶ್ ಮಲ್ನಾಡ್ ಅವರಿಗೆ ಪತ್ನಿಯಾಗಿ ಕಾಣಿಸಿಕೊಂಡಿರುವ ಇವರು, ಪಾತ್ರಕ್ಕೆ ತಕ್ಕಂತೆ ಬಿಳಿ ಕೂದಲು (ಗ್ರೇ ಹೇರ್) ಹಾಗೂ ಕನ್ನಡಕ ತೊಟ್ಟು ವಯಸ್ಸಾದ ಮಹಿಳೆಯ ಗೆಟಪ್‌ನಲ್ಲಿ ಮಿಂಚಿದ್ದಾರೆ. ಬರೋಬ್ಬರಿ 28 ವರ್ಷಗಳ ಕಾಲ ತವರು ಮನೆಯಿಂದ ದೂರ ಉಳಿದಿದ್ದ ಮಗಳನ್ನು, ಆಕೆಯ ಮಗ ಅಜ್ಜಿ ಮನೆಗೆ ಕರೆತಂದು ತಾಯಿಗೆ ಹುಟ್ಟುಹಬ್ಬದ ಉಡುಗೊರೆಯಾಗಿ ತವರನ್ನು ಮರಳಿಸುವ ಭಾವುಕ ತಾಯಿ-ಮಗಳ ಕಥೆ ಇದಾಗಿದೆ. ಎರಡನೇ ಎಪಿಸೋಡ್‌ನಿಂದ ತಮ್ಮ ಪಾತ್ರ ಪರದೆಯ ಮೇಲೆ ಬರಲಿದೆ ಎಂದು ಮೀನಾಕ್ಷಿ ಮಾಹಿತಿ ನೀಡಿದ್ದಾರೆ.

10 ವರ್ಷಗಳ ಹಿಂದಿನ ನೆನಪು: ರಾಮ್‌ಜಿ ಕೊಟ್ಟ ನೆರವಿನಿಂದಲೇ ಇಂದಿನ ಐಶ್ವರ್ಯ!

ತಮ್ಮ ಇಂದಿನ ಬೆಳವಣಿಗೆಗೆ ‘ಪುಟ್ಟಗೌರಿ ಮದುವೆ’ ಮತ್ತು ‘ಗೌರಿಪುತ್ರ’ ಸಾರಥಿ ರಾಮ್‌ಜಿ ಅವರೇ ಮೂಲ ಕಾರಣ ಎಂದು ಮೀನಾಕ್ಷಿ ಭಾವುಕರಾಗಿ ನೆನೆದಿದ್ದಾರೆ. "ಹತ್ತು ವರ್ಷಗಳ ಹಿಂದೆ ಮಾರತ್ತಹಳ್ಳಿಯಿಂದ ಆರ್‌.ಆರ್. ನಗರದ ಶೂಟಿಂಗ್ ಸೆಟ್‌ಗೆ ಪಿಕ್-ಅಪ್, ಡ್ರಾಪ್‌ನಲ್ಲಿ ಬಂದು ಹೋಗುವುದು ಬಹಳ ಕಷ್ಟವಾಗುತ್ತಿತ್ತು. ಸ್ವಂತ ಗಾಡಿ ತೆಗೆದುಕೊಳ್ಳಲು ಆರ್ಥಿಕ ಶಕ್ತಿ ಇಲ್ಲವೆಂದಾಗ, ರಾಮ್‌ಜಿ ಅವರೇ ಕೈಗೆ ಹಣ ಕೊಟ್ಟು ಆಟೋಮ್ಯಾಟಿಕ್ ಕಾರು ಖರೀದಿಸಲು ಹೇಳಿದರು. ಆ ಸಮಯದಲ್ಲಿ ನನಗೆ ಡ್ರೈವಿಂಗ್ ಗೊತ್ತಿರಲಿಲ್ಲ, ಲೈಸೆನ್ಸ್ ಸಹ ಇರಲಿಲ್ಲ. ಆದರೂ ನೇರವಾಗಿ ಶೋರೂಂಗೆ ತೆರಳಿ ಬಿಳಿ ಬಣ್ಣದ ಕೆ10 (K10) ಕಾರು ತೆಗೆದುಕೊಂಡೆ. ಅಂದು ಅವರು ಹಾಕಿಕೊಟ್ಟ ಅಡಿಪಾಯದಿಂದಲೇ ಇಂದು ನಾಗರಬಾವಿಯಲ್ಲಿ 5 ಮಹಡಿಯ ಮನೆ ಕಟ್ಟಿಸಿದ್ದು, ₹25 ಲಕ್ಷ ಬೆಲೆಯ ಸ್ಕೋಡಾ ಕಾರಿನಲ್ಲಿ ಓಡಾಡುವ ಹಂತಕ್ಕೆ ತಲುಪಿದ್ದೇನೆ" ಎಂದು ಕೃತಜ್ಞತೆಯಿಂದ ಹೇಳಿದ್ದಾರೆ.

ರಾಮ್‌ಜಿ ಅವರನ್ನು ಕಿರುತೆರೆಯ ‘ಎರಡನೇ ರವಿಚಂದ್ರನ್’ ಎಂದು ಪ್ರಶಂಸಿಸಿದ ಮೀನಾಕ್ಷಿ, "ರಾಮ್‌ಜಿ ಅವರ ಮನೆ ನನಗೆ ತವರು ಮನೆಗೆ ಸಮಾನ. ಪ್ರತಿ ತಿಂಗಳ 16ನೇ ತಾರೀಕಿನಂದು ತಪ್ಪದೆ ಸಂಬಳ ಕೈಸೇರುತ್ತದೆ. ಗೌರಿ ಹಬ್ಬ ಬಂತೆಂದರೆ ತಪ್ಪದೆ ರೇಷ್ಮೆ ಸೀರೆ, ಭೋಜನ ನೀಡಿ ಕಳುಹಿಸುತ್ತಾರೆ. ಕಲಾವಿದರ ನೋವು-ನಲಿವುಗಳನ್ನು ಅರಿಯುವ ಗುಣ ಅವರದು" ಎಂದರು. ಇದೇ ಸಂದರ್ಭದಲ್ಲಿ ‘ಪುಟ್ಟಗೌರಿ’ಯಲ್ಲಿ ತಮ್ಮ ಮಗಳಾಗಿ ನಟಿಸಿದ್ದ ನಮ್ರತಾ ಗೌಡ ಅವರೊಂದಿಗಿನ ಆತ್ಮೀಯತೆಯನ್ನು ಸ್ಮರಿಸಿದ ಅವರು, "ನಮ್ರತಾ ಇವತ್ತಿಗೂ ನನ್ನ ಮೊಬೈಲ್ ನಂಬರ್ ಅನ್ನು ‘ಅಮ್ಮ’ ಎಂದೇ ಸೇವ್ ಮಾಡಿಕೊಂಡಿದ್ದಾಳೆ" ಎಂದು ಸಂತಸ ಹಂಚಿಕೊಂಡರು.

“ಎಲ್ಲರೂ ರಾಮನನ್ನು ನೋಡಲು ಹೋದರೆ, ನಾನು ರಾವಣನನ್ನು ನೋಡಲು ಹೋಗ್ತೀನಿ!”

ಇನ್ನು ರಾಕಿಂಗ್ ಸ್ಟಾರ್ ಯಶ್ ಮತ್ತು ಅವರ ‘ರಾಮಾಯಣ’ ಚಿತ್ರದ ಕುರಿತು ಮಾತನಾಡಿದ ಮೀನಾಕ್ಷಿ, ಯಶ್ ಅವರ ಹೃದಯವಂತಿಕೆಯನ್ನು ಕೊಂಡಾಡಿದ್ದಾರೆ. "ಕೊರೊನಾ ಲಾಕ್‌ಡೌನ್ ಸಂದರ್ಭದಲ್ಲಿ ಕಲಾವಿದರ ಸಂಘದ ಸದಸ್ಯರಿಗೆಲ್ಲಾ ಯಶ್ ಅವರು ತಲಾ ₹5,000ದಂತೆ ಸುಮಾರು ₹2.80 ರಿಂದ ₹2.85 ಕೋಟಿ ಮೊತ್ತವನ್ನು ನೇರವಾಗಿ ಬ್ಯಾಂಕ್ ಖಾತೆಗೆ ಜಮೆ ಮಾಡಿದ್ದರು. ಕಷ್ಟದ ಕಾಲದಲ್ಲಿ ಯಾವುದೇ ಆಡಂಬರವಿಲ್ಲದೆ ಅವರು ಮಾಡಿದ ಈ ಉಪಕಾರವನ್ನು ಜೀವಮಾನವಿಡೀ ಮರೆಯಲು ಸಾಧ್ಯವಿಲ್ಲ. ಯಶ್-ರಾಧಿಕಾ ಜೋಡಿ ನನಗೆ ಅಚ್ಚುಮೆಚ್ಚು" ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

‘ರಾಮಾಯಣ’ದಲ್ಲಿ ಯಶ್ ನಿರ್ವಹಿಸುತ್ತಿರುವ ರಾವಣನ ಲುಕ್ ಬಗ್ಗೆ ಮಾತನಾಡಿದ ಅವರು, "ಎಲ್ಲರೂ ಥಿಯೇಟರ್‌ಗೆ ರಾಮನನ್ನು ನೋಡಲು ಹೋದರೆ, ನಾನು ಮಾತ್ರ ರಾವಣನನ್ನು ನೋಡಲು ಹೋಗುತ್ತೇನೆ! ಸಾಮಾಜಿಕ ಜಾಲತಾಣಗಳಲ್ಲಿ ಯಶ್ ಅವರ ರಾವಣನ ಗೆಟಪ್ ಕಂಡಾಗ ನನಗೆ ಬಹಳ ಕ್ಯೂಟ್ ಅನಿಸಿತು. ರಾವಣ ಎಂದಾಕ್ಷಣ ಖಳನಾಯಕ ಎನಿಸಲೇ ಇಲ್ಲ, ಬದಲಾಗಿ ನಮ್ಮ ಮನೆ ಹುಡುಗ, ನಮ್ಮವನು ಎಂಬ ಆತ್ಮೀಯ ಭಾವನೆ ಮೂಡಿತು" ಎಂದು ಅಭಿಮಾನ ವ್ಯಕ್ತಪಡಿಸಿದರು.

‘ಆನ್ ಡ್ಯೂಟಿ’ ಚಿತ್ರದಲ್ಲಿ ಖಳನಾಯಕಿ ಅವತಾರ!

ಕಿರುತೆರೆ ಜೊತೆಗೆ ಹಿರಿತೆರೆಯಲ್ಲೂ ಸಕ್ರಿಯವಾಗಿರುವ ಮೀನಾಕ್ಷಿ, ಪ್ರಸ್ತುತ ವಿಜಯ ರಾಘವೇಂದ್ರ ನಟನೆಯ ‘ಆನ್ ಡ್ಯೂಟಿ’ ಸಿನಿಮಾದಲ್ಲಿ ವಿಲನ್ ಪಾತ್ರಕ್ಕೆ ಬಣ್ಣ ಹಚ್ಚಿದ್ದು, ಫೈಟಿಂಗ್ ದೃಶ್ಯಗಳಲ್ಲೂ ಅಭಿನಯಿಸಿರುವುದಾಗಿ ತಿಳಿಸಿದ್ದಾರೆ. ಸಿನಿಮಾ ತಮಗೆ ‘ಹಬ್ಬದ ಭೋಜನ’ವಾದರೆ, ಧಾರಾವಾಹಿ ‘ಪ್ರತಿದಿನದ ಮನೆ ಊಟ’ ಇದ್ದಂತೆ ಎಂದು ಹೋಲಿಸಿರುವ ಅವರು, ನವೆಂಬರ್ 16ರಿಂದ ಸಂಜೆ 7ಕ್ಕೆ ಪ್ರಸಾರವಾಗಲಿರುವ ‘ಗೌರಿಪುತ್ರ’ ಧಾರಾವಾಹಿಯನ್ನು ಕುಟುಂಬ ಸಮೇತ ವೀಕ್ಷಿಸಿ ಆಶೀರ್ವದಿಸುವಂತೆ ಪ್ರೇಕ್ಷಕರಲ್ಲಿ ಕೋರಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಹೊಸ ದಾಖಲೆ ಬರೆದ ಕನ್ನಡದ ಹಾರರ್​, ಥ್ರಿಲ್ಲರ್​ ವೆಬ್​ ಸಿರೀಸ್​ 'ಅಯ್ಯನ ಮನೆ-2': 220 ಮಿಲಿಯನ್​ ನಿಮಿಷ ವೀಕ್ಷಣೆ
Bigg Boss: ಗಾನವಿ ವಿರುದ್ಧ ಜಗದೀಶ್ ಗುಡುಗು; ಗಂಡಸ್ತನದ ಪಾಠ ಮಾಡಿದ ಪ್ರೇಮಕವಿ ಮಂಜ