ಕನ್ನಡದ ಜನಪ್ರಿಯ ರಿಯಾಲಿಟಿ ಶೋ 'ಬಿಗ್ ಬಾಸ್ ಸೀಸನ್ 11'ರ ಮೂಲಕ ಮನೆಮಾತಾಗಿದ್ದ ಕ್ಯೂಟ್ ಜೋಡಿ ಶಿಶಿರ್ ಶಾಸ್ತ್ರಿ ಹಾಗೂ ಐಶ್ವರ್ಯ ಸಿಂಧೋಗಿ ಈಗ ತಮ್ಮ ಜೀವನದ ಹೊಸ ಅಧ್ಯಾಯಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ಶೀಘ್ರದಲ್ಲೇ ಇವರಿಬ್ಬರ ನಿಶ್ಚಿತಾರ್ಥ ನೆರವೇರಲಿದ್ದು, ಮದುವೆ ಸಂಭ್ರಮದ ಸಿದ್ಧತೆಗಳು ಭರದಿಂದ ಸಾಗುತ್ತಿವೆ.
ಸದ್ಯ ಎಂಗೇಜ್‌ಮೆಂಟ್ ಸಂಭ್ರಮದಲ್ಲಿರುವ ಶಿಶಿರ್ ಮತ್ತು ಐಶ್ವರ್ಯ ಜೋಡಿ, ಚಿತ್ರರಂಗದ ಗಣ್ಯರು ಹಾಗೂ ರಾಜಕೀಯ ನಾಯಕರಿಗೆ ಖುದ್ದು ಭೇಟಿಯಾಗಿ ಆಹ್ವಾನ ಪತ್ರಿಕೆ ನೀಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಇತ್ತೀಚೆಗೆ ವಿಧಾನ ಪರಿಷತ್ ಸದಸ್ಯ ಹಾಗೂ ಉದ್ಯಮಿ ಡಾ. ಟಿ.ಎ. ಶರವಣ ಅವರನ್ನು ಭೇಟಿಯಾಗಿ ತಮ್ಮ ನಿಶ್ಚಿತಾರ್ಥಕ್ಕೆ ಆಹ್ವಾನಿಸಿದ್ದಾರೆ. ಈ ವೇಳೆ ನೂತನ ಜೋಡಿಗೆ ಪ್ರೀತಿಯಿಂದ ಆಶೀರ್ವಾದ ಮಾಡಿದ ಡಾ. ಶರವಣ ಅವರು, ಪವಿತ್ರವಾದ ಶಿರಡಿ ಸಾಯಿಬಾಬಾ ಮೂರ್ತಿಯನ್ನು ಉಡುಗೊರೆಯಾಗಿ ನೀಡಿ ಶುಭ ಹಾರೈಸಿದ್ದಾರೆ. ಈ ಸುಂದರ ಕ್ಷಣದ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಅಭಿಮಾನಿಗಳು ಜೋಡಿಗೆ ಶುಭಕೋರುತ್ತಿದ್ದಾರೆ.
ತಮ್ಮ ನಿಶ್ಚಿತಾರ್ಥಕ್ಕೆ ಆಹ್ವಾನಿಸಲು ಬಂದ ಶಿಶಿರ್ ಮತ್ತು ಐಶ್ವರ್ಯ ಸಿಂಧೋಗಿ ಅವರನ್ನು ಡಾ. ಟಿ.ಎ. ಶರವಣ ಅವರು ಅತ್ಯಂತ ಪ್ರೀತಿಯಿಂದ ಬರಮಾಡಿಕೊಂಡರು. ಕೇವಲ ಆಹ್ವಾನ ಪತ್ರಿಕೆ ಸ್ವೀಕರಿಸಿ ಶುಭ ಹಾರೈಸುವುದಷ್ಟೇ ಅಲ್ಲದೆ, ಈ ಯುವ ಜೋಡಿಯ ಹೊಸ ಜೀವನಕ್ಕೆ ದೈವಿಕ ಸ್ಪರ್ಶ ನೀಡಿದರು.
ಶಿಶಿರ್ ಹಾಗೂ ಐಶ್ವರ್ಯ ಅವರ ಕೈಗೆ ಪವಿತ್ರವಾದ ಶಿರಡಿ ಸಾಯಿಬಾಬಾ ಅವರ ಮೂರ್ತಿಯನ್ನು ಉಡುಗೊರೆಯಾಗಿ ನೀಡಿದ ಡಾ. ಶರವಣ ಅವರು, "ಇಬ್ಬರೂ ನೂರು ವರ್ಷಗಳ ಕಾಲ ಅನ್ಯೋನ್ಯವಾಗಿ, ಸದಾ ನಗುನಗುತ್ತಾ ಚೆನ್ನಾಗಿ ಬಾಳಿ" ಎಂದು ತುಂಬು ಹೃದಯದಿಂದ ಆಶೀರ್ವದಿಸಿದರು.
ಹಿರಿಯರ ಬಾಯಿಂದ ಬಂದ ಈ ಪ್ರೀತಿಯ ಹಾರೈಕೆ ಹಾಗೂ ಕೈಸೇರಿದ ಸಾಯಿಬಾಬಾರ ದಿವ್ಯ ಮೂರ್ತಿಯನ್ನು ಕಂಡು ಈ ಜೋಡಿ ಅತ್ಯಂತ ಭಾವುಕರಾದರು. ಜೀವನದ ಹೊಸ ಅಧ್ಯಾಯಕ್ಕೆ ಹೆಜ್ಜೆಯಿಡುತ್ತಿರುವ ಈ ಶುಭ ಗಳಿಗೆಯಲ್ಲಿ, ಬಾಬಾರ ಮೂರ್ತಿಯನ್ನು ಹಿಡಿದುಕೊಂಡು "ನಮ್ಮ ಹೊಸ ಪಯಣಕ್ಕೆ ಸಾಕ್ಷಾತ್ ಸಾಯಿಬಾಬಾರೇ ಮನೆಗೆ ಬಂದಂತಾಗಿದೆ. ಹಿರಿಯರ ಈ ಪ್ರೀತಿ ಮತ್ತು ಬಾಬಾರ ಕೃಪೆ ಸಿಕ್ಕ ಮೇಲೆ ನಮಗೆ ಇದಕ್ಕಿಂತ ದೊಡ್ಡ ಆಶೀರ್ವಾದ ಇನ್ನೇನು ಬೇಕು?" ಎಂದು ಹೇಳುತ್ತಾ ಜೋಡಿ ಕೈಮುಗಿದು ಧನ್ಯವಾದ ಅರ್ಪಿಸಿತು.
ಈ ಅಪರೂಪದ ಹಾಗೂ ಪವಿತ್ರ ಕ್ಷಣದ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ನೆಟ್ಟಿಗರು ಕೂಡ "ನಿಮ್ಮಿಬ್ಬರ ಜೋಡಿ ನೂರು ಕಾಲ ಹೀಗೆಯೇ ನಗುನಗುತ್ತಾ ಇರಲಿ" ಎಂದು ಕಾಮೆಂಟ್ ಬಾಕ್ಸ್‌ನಲ್ಲಿ ಹಾರೈಸುತ್ತಿದ್ದಾರೆ.
ಕೆಲವು ದಿನಗಳ ಹಿಂದೆಯಷ್ಟೇ ಶಿಶಿರ್ ಮತ್ತು ಐಶ್ವರ್ಯ ಸೋಶಿಯಲ್ ಮೀಡಿಯಾದಲ್ಲಿ ಕ್ರಿಯೇಟಿವ್ ಆದ ವಿಡಿಯೋ ಒಂದನ್ನು ಹಂಚಿಕೊಳ್ಳುವ ಮೂಲಕ ತಮ್ಮ ಎಂಗೇಜ್‌ಮೆಂಟ್ ವಿಚಾರವನ್ನು ಅಧಿಕೃತಗೊಳಿಸಿದ್ದರು. ಸೋಶಿಯಲ್ ಮೀಡಿಯಾದಲ್ಲಿ ತಮ್ಮಿಬ್ಬರ ಬಗ್ಗೆ ಕಾಮೆಂಟ್ ಹಾಕುತ್ತಿದ್ದ ಟ್ರೋಲರ್ಸ್‌ಗಳಿಗೆ ತಮ್ಮದೇ ಶೈಲಿಯಲ್ಲಿ ಟಾಂಗ್ ನೀಡುತ್ತಲೇ, "ನಾವು ಒಂದಾಗುತ್ತಿದ್ದೇವೆ" ಎಂಬ ಸಿಹಿ ಸುದ್ದಿಯನ್ನು ಜಗತ್ತಿಗೆ ಸಾರಿದ್ದರು.
ಎಂಗೇಜ್‌ಮೆಂಟ್ ವಿಡಿಯೋ ವೈರಲ್ ಆದ ಬೆನ್ನಲ್ಲೇ ಈ ಜೋಡಿ ಕನ್ನಡದ 'ಭಾವಾಂತರ' ಚಿತ್ರದ ಪ್ರೀಮಿಯರ್ ಶೋಗೆ ಒಟ್ಟಾಗಿ ಆಗಮಿಸಿತ್ತು. ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ್ದ ನಟಿ ಐಶ್ವರ್ಯ ಸಿಂಧೋಗಿ, "ಸದ್ಯಕ್ಕೆ ನಮ್ಮ ಮದುವೆ ದಿನಾಂಕ ಇನ್ನೂ ನಿಗದಿಯಾಗಿಲ್ಲ. ಆದರೆ ಇದೇ ನವೆಂಬರ್ ತಿಂಗಳಲ್ಲಿ ನಮ್ಮಿಬ್ಬರ ನಿಶ್ಚಿತಾರ್ಥ ನಡೆಯಲಿದೆ. ಆ ನಂತರ ಮದುವೆಯ ಬಗ್ಗೆ ತಿಳಿಸುತ್ತೇವೆ" ಎಂದು ಸ್ಪಷ್ಟಪಡಿಸಿದ್ದರು.
'ಬಿಗ್ ಬಾಸ್ ಕನ್ನಡ ಸೀಸನ್ 11'ರ ಮನೆಯಲ್ಲಿ ಸ್ಪರ್ಧಿಗಳಾಗಿ ಎಂಟ್ರಿ ಕೊಟ್ಟಿದ್ದ ಶಿಶಿರ್ ಮತ್ತು ಐಶ್ವರ್ಯ, ಆರಂಭದಲ್ಲೇ ಉತ್ತಮ ಸ್ನೇಹಿತರಾಗಿದ್ದರು. ಶೋ ಮುಗಿದ ನಂತರವೂ ಇವರ ಬಾಂಧವ್ಯ ಮತ್ತಷ್ಟು ಗಟ್ಟಿಯಾಗಿತ್ತು. ಸದಾ ಜೊತೆಯಾಗಿಯೇ ಎಲ್ಲೆಡೆ ಕಾಣಿಸಿಕೊಳ್ಳುತ್ತಿದ್ದ ಈ ಜೋಡಿಯನ್ನು ನೋಡಿ, ಇವರಿಬ್ಬರ ಮಧ್ಯೆ ಪ್ರೀತಿ ಚಿಗುರಿದೆ ಎಂಬ ಮಾತುಗಳು ಹರಿದಾಡುತ್ತಿದ್ದವು. ಈಗ ಆ ಗುಸುಗುಸುಗಳಿಗೆ ತೆರೆ ಎಳೆದಿರುವ ಈ ಜೋಡಿ, ಹಸೆಮಣೆ ಏರಲು ಅಧಿಕೃತವಾಗಿ ಮುನ್ನುಡಿ ಬರೆದಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.