
ಮೇಘನಾ ರಾಜ್ ಸರ್ಜಾ ಬಹುಭಾಷೆಯಲ್ಲಿ ನಟಿಸಿ ಹೆಸರು ಮಾಡಿರುವ ನಟಿ. ಬೆಂಗಳೂರಿನ ಕ್ರೈಸ್ಟ್ ಯೂನಿವರ್ಸಿಟಿಯಿಂದ ಸೈಕಾಲಜಿ ಪದವಿ ಪಡೆದವರು. ಚಿರಂಜೀವ ಸರ್ಜಾ ಅವರ ಜೊತೆಗೆ ಮೇಘನಾ ಅವರದು ಪ್ರೇಮ ವಿವಾಹ. ಅವರು ಮದುವೆಯಾಗಿ ಕೇವಲ ನಾಲ್ಕು ವರ್ಷಗಳಾಗಿತ್ತು ಅಷ್ಟೇ. ಚಿರಂಜೀವಿ ಮತ್ತು ಮೇಘನಾ ಬಹಳ ಕಾಲ ಅಂದರೆ ಸುಮಾರು ಎಂಟು ವರ್ಷಗಳ ಕಾಲ ಪರಸ್ಪರ ಪ್ರೇಮಿಸಿ ಮನೆಮಂದಿಯನ್ನೆಲ್ಲ ಒಪ್ಪಿಸಿ ಮದುವೆ ಆದವರು. ಮದುವೆಯಾದ ಎರಡು ವರ್ಷಗಳಲ್ಲೇ ಮೇಘನಾ ಪತಿ ಚಿರಂಜೀವಿ ಸರ್ಜಾ ಹೃದಯಾಘಾತದಿಂದ ಮೃತಪಟ್ಟರು. ರಾಜ್ಯಕ್ಕೆ ರಾಜ್ಯವೇ ಚಿರು ಅವರ ನಿಧನಕ್ಕೆ ಕಣ್ಣೀರುಗರೆಯಿತು. ಆಗ ಮೇಘನಾ ಐದು ತಿಂಗಳ ಗರ್ಭಿಣಿ. ಚಿರುವಿನ ನೆನಪನ್ನೇ ಜೀವಂತವಾಗಿಟ್ಟು ಅವರು ರಾಯನ್ ರಾಜ್ ಸರ್ಜಾ ಅವರಿಗೆ ಜನ್ಮ ನೀಡಿದರು. ಮಗ ರಾಯನ್‌ಗಾಗಿ ಒಂದಿಷ್ಟು ಸಮಯ ಮುಡಿಪಾಗಿಟ್ಟು ಬಳಿಕ ಮನರಂಜನಾ ಮಾಧ್ಯಮಕ್ಕೆ ಮರಳಿದ್ದಾರೆ. 'ಸೆಲ್ಫಿ ಮಮ್ಮಿ ಗೂಗಲ್ ಡ್ಯಾಡಿ' ಅವರ ಇತ್ತೀಚಿನ ಚಿತ್ರ. ಇದೀಗ ಕಲರ್ಸ್ ಕನ್ನಡದ ಡ್ಯಾನ್ಸಿಂಗ್ ಚಾಂಪಿಯನ್ ಕಾರ್ಯಕ್ರಮಕ್ಕೆ ಜಡ್ಜ್ ಆಗಿದ್ದಾರೆ. ಚಿತ್ರದಲ್ಲೂ ನಟನೆ ಮುಂದುವರಿಸಿದ್ದಾರೆ. ಇಷ್ಟೆಲ್ಲ ಆಗುವ ಹೊತ್ತಿಗೆ ಅವರ ಮರು ಮದುವೆಯ ವಿಚಾರ ಸುದ್ದಿಯಲ್ಲಿದೆ. ಈ ಬಗ್ಗೆ ಮೇಘನಾ ರಾಜ್ ಅವರೇ 'ಬಾಲಿವುಡ್ ಬಬಲ್' ವೆಬ್‌ಸೈಟ್‌ಗೆ ನೀಡಿದ ಸಂದರ್ಶನದಲ್ಲಿ ಮನಬಿಚ್ಚಿ ಮಾತಾಡಿದ್ದಾರೆ.
ಚಿರಂಜೀವಿ ಸರ್ಜಾ ಸಿನಿಮಾವನ್ನು ಗೆಲ್ಲಿಸದಿದ್ದರೂ ಅವರ ಪರ್ಸನಲ್ ಲೈಫ್ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಬೇಕಾಬಿಟ್ಟಿ ಕಮೆಂಟ್ ಮಾಡೋದನ್ನು ಜನ ಬಿಟ್ಟಿಲ್ಲ. ಮೇಘನಾ ಅವರ ಮಾನ ಹಾನಿಯಾಗುವಂಥಾ, ಮನಸ್ಸಿಗೆ ಘಾಸಿ ನೀಡುವಂಥಾ ಕಮೆಂಟ್‌ಗಳನ್ನೂ ಹಾಕುತ್ತಿದ್ದಾರೆ. ಒರಿಜಿನಲ್ ಹೆಸರು ಮರೆ ಮಾಚಿ ಹೀಗೆಲ್ಲ ಕಮೆಂಟ್ ಮಾಡುವವರ ವಿರುದ್ಧ ಮೇಘನಾ ನಿರ್ಲಕ್ಷ್ಯ ಮಾಡಿದ್ದಾರೆ. ಕೆಸರಿಗೆ ಕೈ ಹಾಕುವುದಕ್ಕಿಂತ ಅದನ್ನು ಆವಾಯ್ಡ್ ಮಾಡಿ ಮುಂದೆ ಹೋಗೋದು ಬೆಟರ್ ಅನ್ನೋ ಅವರ ನಿರ್ಧಾರವನ್ನು ಅವರ ಹಿತೈಷಿಗಳು ಸ್ವಾಗತಿಸಿದ್ದಾರೆ.
ಚಿರು ನೆನಪಲ್ಲೇ ಮತ್ತೆ ಬಣ್ಣ ಹಚ್ಚಿದ ನಟಿ
ಇದೀಗ ಮೇಘನಾ ತಮ್ಮ ಮರು ಮದುವೆಯ ಬಗ್ಗೆ ಇಂಗ್ಲೀಷ್ ವೆಬ್‌ಸೈಟ್ ಒಂದರ ಸಂದರ್ಶನದಲ್ಲಿ ಮಾತನಾಡಿದ್ದಾರೆ. 'ನಾನು ನಮ್ಮ ಸಮಾಜದ ಮೈಂಡ್‌ಸೆಟ್ ಬಗ್ಗೆ ಯೋಚಿಸುತ್ತಿರುತ್ತೇನೆ, ಇಲ್ಲಿ ಕೆಲವರು ನನಗೆ ಮರು ವಿವಾಹವಾಗುವಂತೆ ಸಲಹೆ ನೀಡ್ತಾರೆ. ಇನ್ನೂ ಕೆಲವರು ನಿಮ್ಮ ಮಗನ ಜೊತೆಗೆ ಸಂತೋಷದಿಂದಿರಿ. ಮರು ಮದುವೆ ಯೋಚನೆ ಬೇಡ ಅಂತಿದ್ದಾರೆ. ಸೋ ನಾನು ಯಾರು ಮಾತು ಕೇಳಲಿ?' ಎಂದು ಮೇಘನಾ ಹೇಳಿದ್ದಾರೆ.
ಆದರೆ ಮೇಘನಾ ಅವರೇ ಹೇಳಿದಂತೆ ಅವರಿನ್ನೂ ಮರು ವಿವಾಹದ ಬಗ್ಗೆ ಯೋಚನೆ ಮಾಡಿಲ್ಲ. 'ಚಿರು ನನ್ನ ಜೊತೆಗೆ ಅವರ ಯೋಚನಾ ಕ್ರಮವನ್ನು ಬಿಟ್ಟು ಹೋಗಿದ್ದಾರೆ. ಅವರೇ ಹೇಳಿದಂತೆ ನಾಳೆ ಏನಾಗುತ್ತೆ ಅನ್ನೋದರ ಬಗ್ಗೆ ಆಗಲೀ, ಇನ್ನೊಂದಿಷ್ಟು ದಿನಗಳಾದ ಮೇಲೆ ನನ್ನ ಬದುಕು ಏನಾಗಬಹುದು ಅನ್ನೋದರ ಬಗೆಗಾಗಲಿ ತಲೆ ಕೆಡಿಸಿಕೊಳಲ್ಲ. ನಾನು ಈ ಕ್ಷಣದಲ್ಲಿ ಜೀವಿಸುವವಳು. ಕೆಲವರೆಲ್ಲ ನೀವು ಇತ್ತೀಚೆಗೆ ಚಿರು ಅವರ ಫೋಟೋ ಪೋಸ್ಟ್ ಮಾಡ್ತಿಲ್ಲ, ಅವರನ್ನ ಮರೀತಿದ್ದೀರಿ ಅನ್ನೋ ಮಾತುಗಳನ್ನೆಲ್ಲ ಹೇಳುತ್ತಿದ್ದಾರೆ. ನನಗೆ ಚಿರುವಿನ ಮೇಲಿರುವ ಪ್ರೀತಿಯನ್ನು ನಾನು ಫೋಟೋ ಹಾಕುವ ಮೂಲಕ ಪ್ರೂವ್ ಮಾಡಬೇಕಿಲ್ಲ. ನಾನು ಆತನ ಬಗ್ಗೆ ಯಾವಾಗ ಯೋಚಿಸುತ್ತೇನೆ ಅನ್ನೋದನ್ನೂ ಹೇಳಬೇಕಿಲ್ಲ. ಇದು ಸಂಪೂರ್ಣವಾಗಿ ನನ್ನೊಬ್ಬಳಿಗೇ ಸಂಬಂಧಿಸಿದ್ದು. ನನ್ನ ಬದುಕಿನ ಎಲ್ಲ ನಿರ್ಧಾರಗಳನ್ನು ತೆಗೆದುಕೊಳ್ಳುವಷ್ಟು ಸ್ಟ್ರೆಂಥ್ ನನ್ನಲ್ಲಿದೆ. ಆದರೆ ನಾನು ನನ್ನ ಬದುಕಿನ ಬಗ್ಗೆ ಏನೇ ನಿರ್ಧಾರ ತೆಗೆದುಕೊಂಡರೂ ಅದರ ಹಿಂದೆ ಚಿರು ಇರ್ತಾರೆ. ನಿನ್ನ ಮನಸ್ಸಿನ ಮಾತನ್ನಷ್ಟೇ ಕೇಳಬೇಕು ಅನ್ನೋದನ್ನೇ ನಾನು ಬದುಕಿನ ಕೊನೆಯವರೆಗೂ ಪಾಲಿಸಿಕೊಂಡು ಬರುತ್ತೇನೆ' ಎಂಬ ಮಾತುಗಳನ್ನೂ ಮೇಘನಾ ಹೇಳಿದ್ದಾರೆ.
ನಟಿ ಮೇಘನಾ ರಾಜ್‍ಗೆ ಪ್ರತಿಷ್ಠಿತ FOG HERO ಅವಾರ್ಡ್
ಮೇಘನಾ ಮಗನನ್ನು ಬಹಳ ಅಕ್ಕರೆಯಿಂದ ಪೋಷಿಸುತ್ತಿದ್ದಾರೆ. ಇತ್ತೀಚೆಗೆ ರಾಯನ್ ಸರ್ಜಾ ಅಮ್ಮ ಅನ್ನುವ ಬದಲು ಅಪ್ಪಾ ಅಂತ ಕರೆದಿದ್ದ ವೀಡಿಯೋ ವೈರಲ್ ಆಗಿತ್ತು. ಜೊತೆಗೆ ರಾಷ್ಟ್ರ ಧ್ವಜದ ಜೊತೆಗೆ ರಾಯನ್ ಇರುವ ಫೋಟೋಗೂ ಸೋಷಿಯಲ್ ಮೀಡಿಯಾದಲ್ಲಿ ಮೆಚ್ಚುಗೆ ವ್ಯಕ್ತವಾಗಿತ್ತು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.