
ಮಿಸ್ಟರ್ ಬೀಸ್ಟ್, ವಿಶ್ವದ ಪ್ರಸಿದ್ಧ ಯೂಟ್ಯೂಬರ್. ಅವರ ಗಳಿಕೆ ಕೋಟಿಯಲ್ಲಿದೆ. ಅವ್ರನ್ನು ಭೇಟಿಯಾಗ್ಬೇಕು ಎನ್ನುವ ಬಹುತೇಕರಿಗಿದೆ. ಭಾರತದ ಕಂಟೆಂಟ್ ಕ್ರಿಯೇಟರ್ ಮಾಯಾ ಗುಪ್ತಾ ಕೂಡ ಈ ಕನಸು ಕಂಡಿದ್ದರು. ಮಾಯಾ ಗುಪ್ತಾ, ಬಡವರಿಗೆ ಊಟ ನೀಡುವ ಮತ್ತು ಅಗತ್ಯವಿರುವವರಿಗೆ ನೆರವಾಗುವ ಅಭಿಯಾನವೊಂದನ್ನು ಆರಂಭಿಸಿದ್ದರು. ಅದೂ ಒಂದೆರಡು ದಿನಗಳಿಗಲ್ಲ, ಬರೋಬ್ಬರಿ 365 ದಿನಗಳ ಚಾಲೆಂಜ್. ಪ್ರತಿದಿನ ತಮ್ಮ ಅಭಿಯಾನದ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುತ್ತಾ, ಎಷ್ಟನೇ ದಿನದ ಚಾಲೆಂಜ್ ನಡೆಯುತ್ತಿದೆ ಅನ್ನೋದನ್ನೂ ಹಂಚಿಕೊಳ್ಳುತ್ತಿದ್ದರು.
ಇದೀಗ ಮಾಯಾ ಗುಪ್ತಾ ಅವರ ಈ ಪ್ರಯತ್ನ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಚರ್ಚೆಯಾಗುತ್ತಿದೆ. ಅಕ್ಟೋಬರ್ 11, 2026ರಂದು ಪ್ರಕಟವಾದ ವರದಿಯೊಂದರ ಪ್ರಕಾರ, ಮಾಯಾ ಅವರಿಗೆ ಕೊನೆಗೂ ಮಿಸ್ಟರ್ ಬೀಸ್ಟ್ ಅವರನ್ನು ಭೇಟಿಯಾಗುವ ಅವಕಾಶ ಸಿಕ್ಕಿದೆ. ಅಷ್ಟೇ ಅಲ್ಲ, ಅವರ ಚಾರಿಟಿ ಅಭಿಯಾನಕ್ಕೆ 10,000 ಡಾಲರ್ ಅಂದರೆ ಭಾರತೀಯ ರೂಪಾಯಿ ಲೆಕ್ಕದಲ್ಲಿ ಸುಮಾರು 8.3 ಲಕ್ಷ ರೂಪಾಯಿ ಸಹಾಯವೂ ಸಿಕ್ಕಿದೆ. ಈ ಭೇಟಿ ಮತ್ತು ಹಣಕಾಸಿನ ನೆರವಿನ ಬಗ್ಗೆ ಮಾಯಾ ಹೇಳಿಕೊಂಡಿಲ್ಲ.
ಮಾಯಾ ಗುಪ್ತಾ ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಕಂಟೆಂಟ್ ಮತ್ತು ಚಾರಿಟಿ ಕೆಲಸಗಳ ಮೂಲಕ ಗುರುತಿಸಿಕೊಂಡಿರುವ ಕಂಟೆಂಟ್ ಕ್ರಿಯೇಟರ್. ಅಗತ್ಯವಿರುವವರಿಗೆ ನೆರವು ನೀಡಬೇಕು, ಹಸಿದವರಿಗೆ ಊಟ ನೀಡಬೇಕು ಅನ್ನೋ ಉದ್ದೇಶದಿಂದ ಅವರು ಈ ಅಭಿಯಾನ ಆರಂಭಿಸಿದ್ದರು. ಸಾಮಾನ್ಯವಾಗಿ ಅನೇಕರು ಒಳ್ಳೆಯ ಕೆಲಸಗಳನ್ನು ಕೆಲವೇ ದಿನಗಳವರೆಗೆ ಮಾಡಿ ನಿಲ್ಲಿಸಬಹುದು. ಆದರೆ ಮಾಯಾ ಅವರು ಒಂದು ವರ್ಷ ಪೂರ್ತಿ ಈ ಕೆಲಸವನ್ನು ಮುಂದುವರಿಸುವ ಗುರಿ ಇಟ್ಟುಕೊಂಡಿದ್ದರು. ತಮ್ಮ ಪ್ರಯತ್ನಕ್ಕೆ ಹೆಚ್ಚಿನ ಜನರ ಬೆಂಬಲ ಸಿಗಬೇಕು ಅನ್ನೋ ಕಾರಣಕ್ಕೆ ಪ್ರತಿದಿನದ ಅಪ್ಡೇಟ್ಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿದ್ದರು.
ಇದರ ಜೊತೆಗೆ ಮಾಯಾ ಅವರಿಗೊಂದು ದೊಡ್ಡ ಕನಸೂ ಇತ್ತು. ಅದೇ ವಿಶ್ವದ ಜನಪ್ರಿಯ ಯೂಟ್ಯೂಬರ್ ಮಿಸ್ಟರ್ ಬೀಸ್ಟ್ ಅವರನ್ನು ಭೇಟಿಯಾಗಬೇಕು ಅನ್ನೋದು.
ಮಾಯಾ ತಮ್ಮ ಚಾರಿಟಿ ಅಭಿಯಾನದ ಪ್ರತಿ ಹಂತವನ್ನೂ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿದ್ದರು. ಚಾಲೆಂಜ್ನ ಎಷ್ಟನೇ ದಿನ ನಡೆಯುತ್ತಿದೆ ಅನ್ನೋದನ್ನು ತಿಳಿಸುತ್ತಾ, ತಮ್ಮ ಗುರಿಯತ್ತ ಸಾಗುತ್ತಿರುವುದನ್ನು ಫಾಲೋವರ್ಸ್ಗೆ ತೋರಿಸುತ್ತಿದ್ದರು. 2026ರ ಆಗಸ್ಟ್ 25ರಂದು ಹಂಚಿಕೊಂಡ ಪೋಸ್ಟ್ನಲ್ಲಿ ತಮ್ಮ ಚಾಲೆಂಜ್ನ 357ನೇ ದಿನ ಎಂದು ಹೇಳಿದ್ದರು. ಅಂದರೆ 365 ದಿನಗಳ ಗುರಿ ಪೂರ್ಣಗೊಳ್ಳಲು ಇನ್ನೂ ಕೇವಲ ಎಂಟು ದಿನಗಳು ಬಾಕಿ ಇದ್ದವು. ನಂತರ ಆಗಸ್ಟ್ 29ರಂದು 361ನೇ ದಿನದ ಬಗ್ಗೆ ಪೋಸ್ಟ್ ಮಾಡಿದ್ದರು.
ಮಿಸ್ಟರ್ ಬೀಸ್ಟ್ನಿಂದಲೇ ಬಂತಾ ಇಮೇಲ್?
ಮಾಯಾ ಅವರ ಈ ಪ್ರಯತ್ನದಲ್ಲಿ ಮಹತ್ವದ ತಿರುವು ಬಂದಿದ್ದು ಸೆಪ್ಟೆಂಬರ್ 9, 2026ರಂದು. ಅಂದು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಂಚಿಕೊಂಡಿದ್ದ ಅವರು, ಮಿಸ್ಟರ್ ಬೀಸ್ಟ್ ಕಡೆಯಿಂದ ತಮ್ಮನ್ನು ಸಂಪರ್ಕಿಸಲಾಗಿದ್ದು, ಇಮೇಲ್ ಮತ್ತು ವಾಟ್ಸಾಪ್ ವಿವರಗಳನ್ನು ಕೇಳಿದ್ದಾರೆ ಎಂದು ಹೇಳಿಕೊಂಡಿದ್ದರು.
ಈ ಪೋಸ್ಟ್ನಿಂದ ಅವರ ಫಾಲೋವರ್ಸ್ಗಳಲ್ಲಿ ಕುತೂಹಲ ಹೆಚ್ಚಾಗಿತ್ತು. ಮಾಯಾ ಅವರ ಪ್ರಯತ್ನ ಮಿಸ್ಟರ್ ಬೀಸ್ಟ್ವರೆಗೆ ತಲುಪಿದೆಯಾ? ಅವರಿಗೆ ನಿಜವಾಗಿಯೂ ಭೇಟಿಯಾಗುವ ಅವಕಾಶ ಸಿಗುತ್ತಾ? ಅನ್ನೋ ಪ್ರಶ್ನೆಗಳು ಎದುರಾಗಿದ್ದವು. ನಂತರ ಮಾಯಾ ಹಲವು ರೀಲ್ಸ್ಗಳನ್ನು ಹಂಚಿಕೊಂಡು, ಮಿಸ್ಟರ್ ಬೀಸ್ಟ್ ತಮ್ಮನ್ನು ಭೇಟಿಯಾಗಲು ಆಹ್ವಾನಿಸಿದ್ದಾರೆ ಎಂದು ತಿಳಿಸಿದ್ದರು. ಮತ್ತೊಂದು ರೀಲ್ಸ್ನಲ್ಲಿ ಅವರಿಬ್ಬರ ಭೇಟಿಯನ್ನೂ ತೋರಿಸಿದ್ದಾರೆ ಎನ್ನಲಾಗಿದೆ. ಮಿಸ್ಟರ್ ಬೀಸ್ಟ್ ತಮ್ಮ ಚಾನೆಲ್ನಲ್ಲೂ ಮಾಯಾ ಅವರನ್ನು ಭೇಟಿಯಾದ ವಿಡಿಯೋ ಹಂಚಿಕೊಂಡಿದ್ದಾರೆ ಎಂದು ವರದಿಯಲ್ಲಿ ಹೇಳಲಾಗಿದೆ.
ಈ ಭೇಟಿಯ ವೇಳೆ ಮಾಯಾ ಅವರ ಚಾರಿಟಿ ಅಭಿಯಾನಕ್ಕೆ 10,000 ಡಾಲರ್ ನೆರವು ನೀಡಲಾಗಿದೆ ಎನ್ನುವುದು ವರದಿಯ ಮತ್ತೊಂದು ಪ್ರಮುಖ ಅಂಶ. ಭಾರತೀಯ ರೂಪಾಯಿ ಲೆಕ್ಕದಲ್ಲಿ ಈ ಮೊತ್ತ ಸುಮಾರು 8.3 ಲಕ್ಷ ರೂಪಾಯಿಯಾಗುತ್ತದೆ.
ಯಾರು ಈ ಮಿಸ್ಟರ್ ಬೀಸ್ಟ್?
ಮಿಸ್ಟರ್ ಬೀಸ್ಟ್ ಅವರ ನಿಜವಾದ ಹೆಸರು ಜಿಮ್ಮಿ ಡೊನಾಲ್ಡ್ಸನ್. ಇವರು ವಿಶ್ವದ ಅತ್ಯಂತ ಜನಪ್ರಿಯ ಯೂಟ್ಯೂಬರ್ಗಳಲ್ಲಿ ಒಬ್ಬರು. ಇವರ ವಿಡಿಯೋಗಳಲ್ಲಿ ವಿಭಿನ್ನ ಚಾಲೆಂಜ್ಗಳು, ಸ್ಪರ್ಧಿಗಳಿಗೆ ಹಣ ಮತ್ತು ದುಬಾರಿ ಬಹುಮಾನಗಳನ್ನು ನೀಡುವುದು, ದೊಡ್ಡ ಮಟ್ಟದ ಸಾಮಾಜಿಕ ಸೇವಾ ಕಾರ್ಯಗಳನ್ನು ನಡೆಸುವುದು ಸಾಮಾನ್ಯ. ಇವರ ವಿಡಿಯೋಗಳು ಕೋಟ್ಯಂತರ ವೀಕ್ಷಣೆಗಳನ್ನು ಪಡೆಯುತ್ತವೆ.
ಇದಲ್ಲದೆ, ಇವರಿಗೆ ಸಂಬಂಧಿಸಿದ ಬೀಸ್ಟ್ ಫಿಲಾಂಥ್ರಪಿ (Beast Philanthropy) ಸಂಸ್ಥೆಯೂ ಅಗತ್ಯವಿರುವವರಿಗೆ ಸಹಾಯ ಮಾಡುವ ಕೆಲಸಗಳಲ್ಲಿ ತೊಡಗಿಸಿಕೊಂಡಿದೆ. ಹೀಗಾಗಿ ಮಿಸ್ಟರ್ ಬೀಸ್ಟ್ ಕೇವಲ ಮನರಂಜನಾ ವಿಡಿಯೋಗಳಿಗೆ ಮಾತ್ರವಲ್ಲ, ಚಾರಿಟಿ ಕೆಲಸಗಳಿಗೂ ಹೆಸರುವಾಸಿಯಾಗಿದ್ದಾರೆ. ಮಾಯಾ, ಮಿಸ್ಟರ್ ಬೀಸ್ಟ್ ಅವರ ಪ್ರತಿ ವಿಡಿಯೋಕ್ಕೆ ಕಮೆಂಟ್ ಹಾಕಿ ಸಹಾಯ ಕೇಳುತ್ತಿದ್ದರು ಎನ್ನಲಾಗಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.