ಇಷ್ಟು ದಿನ ಜಯಂತ್ ಕೈಗೆ ಇನ್ನೇನು ಜಾಹ್ನವಿ ಸಿಕ್ಕೇಬಿಟ್ಲು ಅಂದುಕೊಳ್ಳುವಷ್ಟರಲ್ಲಿ ಕಥೆ ಮತ್ತೇನೋ ತಿರುವು ಪಡೆದುಕೊಳ್ಳುತ್ತಿತ್ತು. ಕೊನೆಗೆ ಜಯಂತ್ ತೊಳಲಾಟ ನೋಡಿ ವೀಕ್ಷಕರೇ ಅವರಿಬ್ಬರನ್ನ ಒಂದು ಮಾಡಿ ಅನ್ನುತ್ತಿದ್ದರು. ಆದರೆ ಕಥೆ ಈಗ ಯಾವ ಲೆವೆಲ್‌ಗೆ ಟ್ವಿಸ್ಟ್ ತೆಗೆದುಕೊಂಡಿದೆ ಅಂದರೆ ಬಹುಶಃ ವೀಕ್ಷಕರೇ ಇದನ್ನ ಊಹೆ ಮಾಡಿರಲಿಲ್ಲವೇನೋ.
ಹೌದು, ಯಾವ ಜಯಂತ್‌ಗೆ ಹೆದರಿ ಚಿನ್ನು ಮರಿ ಅಂದರೆ ಜಾಹ್ನವಿ ತಪ್ಪಿಸಿಕೊಳ್ಳುತ್ತಿದ್ದಳೋ, ಜಯಂತ್ ಮನೆಗೆ ಬಂದರೆ ಸಾಕು ಇವನನ್ನ ಇಲ್ಲಿಂದ ಸಾಗು ಹಾಕುವುದು ಹೇಗೆ ಎಂದು ವಿಶ್ವ ಚಡಪಡಿಸುತ್ತಿದ್ದನೋ ಈಗ ಅವರೇ ಜಯಂತ್ ವಿರುದ್ಧ ತಿರುಗಿಬಿದ್ದಾಗಿದೆ. ಬಹುಶಃ ಸ್ವತಃ ಜಯಂತ್ ಕೂಡ ಇದನ್ನ ಊಹೆ ಮಾಡಿರಲಿಲ್ಲ. ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಸಂತಾಪ ಸಭೆಯ ನೆಪದಲ್ಲಿ ವಿಶ್ವನನ್ನು ಜಯಂತ್ ತನ್ನ ಮನೆಗೆ ಕರೆಸಿಕೊಂಡಿದ್ದನು. ಇದೆಲ್ಲಾ ಪ್ರೀ ಪ್ಲಾನ್ಡ್. ಇದರ ಬಗ್ಗೆ ಅರಿವಿರದ ವಿಶ್ವ ನೇರವಾಗಿ ಜಯಂತ್ ಮನೆಗೆ ಬಂದಾಗಿದೆ.
ಜಯಂತ್ ಮನೆಗೆ ವಿಶ್ವ ಬಂದಾಗ ಅಲ್ಲಿ ಯಾರೂ ಕಾಣಿಸುವುದಿಲ್ಲ. ಆಗ ವಿಶ್ವ ವಿಚಾರಿಸಿದಾಗ ಅವರೆಲ್ಲಾ ತಡವಾಗಿ ಬರುತ್ತಾರೆ. ನೀನು ನಾನು ಮಾತನಾಡುವ ಎಂದು ಮಾತಿಗೆ ಶುರು ಹಚ್ಚಿಕೊಂಡಿದ್ದಾನೆ. ಆಗ ಮಾತನಾಡುತ್ತಾ ವಿಶ್ವನಿಗೆ ತನ್ನ ಇನ್ನೊಂದು ಅವತಾರವನ್ನ ತೋರಿಸುತ್ತಾ ಹೋಗುತ್ತಾನೆ ಜಯಂತ್. ಇದನ್ನೆಲ್ಲಾ ನೋಡಿದವರಿಗೆ "ಅಯ್ಯೋ ಪಾಪ ವಿಶ್ವ ಸಿಕ್ಕಿಹಕಿಕೊಂಡ" "ಜಯಂತ್ ಮುಂದೇನು ಮಾಡುತ್ತಾನೋ" ಅಂತ ಅಂದುಕೊಂಡವರೇ ಹೆಚ್ಚು. ಆದರೆ ಇಲ್ಲಾಗಿದ್ದೇ ಬೇರೆ. ಈ ಮೊದಲೇ ಹೇಳಿದ ಹಾಗೆ ಬಹುಶಃ ವಿಶ್ವನ ಫ್ಯಾನ್ಸ್ ಕೂಡ ಇದನ್ನ ಊಹಿಸಿರಲ್ಲ. ಯಾವಾಗ ವಿಶ್ವನ ಹಣೆಗೆ ಜಯಂತ್ ರಿವಾಲ್ವಾರ್ ಹಿಡಿದನೋ ಆಗ ವಿಶ್ವ ತಿರುಗಿ ಬಿದ್ದಿದ್ದಾನೆ. ಜಾಹ್ನವಿ ಬದುಕಿದ್ದಾಳೆ. ನೀನೇನು ಮಾಡ್ತಿ ಮೊಡ್ಕೊ ಅನ್ನೋ ರೀತಿ ಸವಾಲು ಹಾಕಿದ್ದಾನೆ. ಈಗ ಕಥೆಗೆ ಮಜಾ ಬಂದಿದೆ. ಆದರೂ ವಿಶ್ವನ ವಿರುದ್ಧ ಕೆಲವು ವೀಕ್ಷಕರು ತಿರುಗಿಬಿದ್ದಿದ್ದಾರೆ.
ಕೆಲವರಂತೂ ಇದನ್ನ ತುಂಬಾ ಪರ್ಸನಲ್ ಆಗಿ ತೆಗೆದುಕೊಂಡಿರುವುದನ್ನ ನೋಡಿರಬಹುದು. ಅಲ್ಲಿಗೆ ಮತ್ತೊಮ್ಮೆ ಧಾರಾವಾಹಿ ಲೋಕದಲ್ಲಿ ಇಬ್ಬರೂ ನಟರ ವಿರುದ್ಧ ಪರ-ವಿರೋಧ ಚರ್ಚೆಗಳು ಮುನ್ನೆಲೆಗೆ ಬಂದಿವೆ.
ಸದ್ಯ ವಿಶ್ವನ ಬಗ್ಗೆ ವೀಕ್ಷಕರಿಗಿರುವ ಅಭಿಪ್ರಾಯ ನೋಡುವುದಾದರೆ "ಗೋಳು ಹುಯ್ಯಿಕೊಳ್ಳೋ ಜನಕ್ಕೆ ಟಕ್ಕರ್ ಕೊಟ್ರೆ ಸೀರಿಯಲ್ ನೋಡಕ್ಕೆ ಇಷ್ಟ", "ವಿಶ್ವನನ್ನು ಗೂಬೆ ಅಂತ ಕರೆದು ಕರೆದು ಕೊನೆಗೆ ಜಯಂತ್ ಗೂಬೆ ಆಗ್ಬಿಟ್ಟ", "ಮತ್ತೆ ಅವಳನ್ನ ಮನೆಗೆ ಕರೆ ತಂದು ಟಾರ್ಚರ್ ಕೊಡೋದು ಅಷ್ಟೇ", "ಈಗ ನಿಜಕ್ಕೂ ಜಯಂತ ಗೂಬೆ ತರಹ ಕಾಣುತ್ತಾ ಇದ್ದಾನೆ. ಪಾಪ... ಪೆಚ್ಚಾದ, ಮಂಕಾದ, ಕಂಗಾಲಾದ, ದಿಕ್ಕು ತೋಚದೇ ಕೈ ಚೆಲ್ಲಿ ನಿಂತು ಬಿಟ್ಟ. ಇಬ್ಬರ ಅಭಿನಯವೂ ಚಂದ...", "ಹೊಡಿರಿ ಚಪ್ಪಾಳೆ ವಿಶ್ವ ರಾಕ್, ಡಬ್ಬಾ ಜಯಂತ್ ಶಾಕ್", "ವಿಶ್ವ ರಾಕ್. ಜಯಂತ್ ಮೋಯೋ ಮೋಯೋ", "ವಿಶ್ವ ಆಕ್ಟಿಂಗ್ ಅಂತೂ ಬೆಂಕಿ" "ಸೂಪರ್ ವಿಶ್ವ", ಅಂತೆಲ್ಲಾ ವಿಶ್ವನ ಪರವಾಗಿ ಕಾಮೆಂಟ್ ಮಾಡಿದ್ದಾರೆ.
ವಿಶ್ವ ಹೀಗೆ ನಡೆದುಕೊಂಡ ಮೇಲೆ ಕೆಲವರಿಗೆ ಜಯಂತ್ ಮೇಲೆ ಅನುಕಂಪ ಹೆಚ್ಚಾಗಿದೆ. ಎಲ್ಲಕ್ಕಿಂತ ಹೆಚ್ಚಾಗಿ ಜಾಹ್ನವಿ ಜಯಂತ್‌ನ ಹೆಂಡತಿ. ಹಾಗಾಗಿ ಆಕೆ ಜಯಂತ್ ಸ್ವತ್ತು. ಈ ರೀತಿ ಕಂಡವರ ಹೆಂಡತಿಯನ್ನ ವಿಶ್ವ ಮನೆಯಲ್ಲಿ ಇಟ್ಟುಕೊಳ್ಳುವುದು ತಪ್ಪು ಅಂತೆಲ್ಲಾ ಬುದ್ಧಿವಾದ ಹೇಳಿದ್ದು, ಜಯಂತ್ ಬಗ್ಗೆ ಏನೆಲ್ಲಾ ಕಾಮೆಂಟ್ ಮಾಡಿದ್ದಾರೆ ನೋಡೋಣ.."ಜಯಂತ್ ಮನಸು ಮಾಡಿದ್ರೆ ವಿಶ್ವನ ಸಾಯಿಸಿಬೋದಾಗಿತ್ತು. ಅವನು ಆ ತರ ಮಾಡಿಲ್ಲ", "ಅಷ್ಟೇ ಹೋಗು ನಿನ್ ಕಥೆ..... ಜಯಂತ್ ಗೇ ಸವಾಲ್ ಅ?" "ಜಯಂತ್ ಆಕ್ಟಿಂಗ್ ಸೂಪರ್", "ವಿಶ್ವ ವಿಲನ್", "ಅಯ್ಯೋ ವಿಶ್ವ ಜಾನು ಎಲ್ಲಿ ಇದ್ದಾಳೆ ಅಂತ ಜಯಂತ್‌ಗೆ ಗೊತ್ತು ಅಂದಮೇಲೆ ಇನ್ನು ಎನು ಕಂಡುಹಿಂಡಿಯೋದು ಮಣ್ಣು" "ಜಯಂತ್ ಕಂಡು ಹಿಡಿತಾರೆ. ಆಗ ನಿಂಗೆ ಕಷ್ಟ ವಿಶ್ವ", "ಜಾಹ್ನವಿ ನಾ ಒಪ್ಸು ಬೆರೆಯವ್ರ ಹೆಂಡತಿ ನಾ ಜೊತೆಲಿ ಇಟ್ಕೊಂಡಿದ್ಯಾ ನೀನು" ಅಂತೆಲ್ಲಾ ಜಯಂತ್ ಪರವಾಗಿ ಕಾಮೆಂಟ್ ಮಾಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.