
ಕನ್ನಡಿಗರ ಮನದಲ್ಲಿ ‘ಚೈತ್ರದ ಪ್ರೇಮಾಂಜಲಿ’, ‘ಕರ್ಪೂರದ ಗೊಂಬೆ’ ಸೇರಿದಂತೆ ಹಲವು ಸಿನಿಮಾಗಳ ಮೂಲಕ ಅಚ್ಚಳಿಯದೆ ಉಳಿದಿರುವ ನಟಿ ವಿನೋದಿನಿ ಶ್ವೇತಾ ಇದೀಗ ಬೇಸರದ ವಿಚಾರವೊಂದನ್ನು ಹಂಚಿಕೊಂಡಿದ್ದಾರೆ. ಇತ್ತೀಚೆಗೆ ಸ್ಪಾಗೆ ತೆರಳಿದ್ದ ವೇಳೆ ತಮ್ಮ ಚಿನ್ನದ ತಾಳಿ ಕಳೆದುಕೊಂಡಿದ್ದು, ಈ ಘಟನೆ ಬಗ್ಗೆ ನಟಿ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಮೂಲಕ ನೋವು ತೋಡಿಕೊಂಡಿದ್ದಾರೆ.
ತಮಿಳುನಾಡಿನ ಚೆನ್ನೈನಲ್ಲಿ ನೆಲೆಸಿರುವ ವಿನೋದಿನಿ ಶ್ವೇತಾ, ಕನ್ನಡ ಮಾತ್ರವಲ್ಲದೆ ತಮಿಳು ಮತ್ತು ಮಲಯಾಳಂ ಚಿತ್ರರಂಗದಲ್ಲೂ ಗುರುತಿಸಿಕೊಂಡಿದ್ದಾರೆ. ಬಾಲನಟಿಯಾಗಿ ಚಿತ್ರರಂಗಕ್ಕೆ ಕಾಲಿಟ್ಟ ಅವರು ಬಳಿಕ ನಾಯಕಿಯಾಗಿ, ಪೋಷಕ ನಟಿಯಾಗಿ ಹಾಗೂ ಕಿರುತೆರೆ ಕಲಾವಿದೆಯಾಗಿ ತಮ್ಮದೇ ಛಾಪು ಮೂಡಿಸಿದ್ದಾರೆ.
‘ಲಕ್ಷ್ಮೀ ನಿವಾಸ’ದ ಲಕ್ಷ್ಮೀ ಪಾತ್ರಕ್ಕೆ ವಿದಾಯ
ಇತ್ತೀಚೆಗೆ ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ‘ಲಕ್ಷ್ಮೀ ನಿವಾಸ’ ಧಾರಾವಾಹಿಯಲ್ಲಿ ಹಿರಿಯ ಶ್ರೀನಿವಾಸ್ ಅವರ ಪತ್ನಿ ಲಕ್ಷ್ಮೀ ಪಾತ್ರದಲ್ಲಿ ವಿನೋದಿನಿ ಶ್ವೇತಾ ಕಾಣಿಸಿಕೊಂಡಿದ್ದರು. ಈ ಪಾತ್ರದ ಮೂಲಕ ಕಿರುತೆರೆ ವೀಕ್ಷಕರಿಗೂ ಮತ್ತಷ್ಟು ಹತ್ತಿರವಾಗಿದ್ದರು. ಆದರೆ ಅತ್ತೆಯ ಆರೋಗ್ಯದ ಆರೈಕೆ ಮಾಡಬೇಕಾದ ಕಾರಣ ಅವರು ಧಾರಾವಾಹಿಯಿಂದ ಹೊರಬಂದರು. ಚೆನ್ನೈನಿಂದ ಪದೇಪದೇ ಓಡಾಡುವುದು ಕಷ್ಟವಾಗುತ್ತಿದ್ದ ಹಿನ್ನೆಲೆಯಲ್ಲಿ ಲಕ್ಷ್ಮೀ ಪಾತ್ರಕ್ಕೆ ವಿದಾಯ ಹೇಳಬೇಕಾಯಿತು. ಸದ್ಯ ಅವರು ತಮಿಳು ಕಿರುತೆರೆಯಲ್ಲಿ ಸಕ್ರಿಯರಾಗಿದ್ದಾರೆ.
ಒತ್ತಡದಲ್ಲಿದ್ದ ನಟಿ ಸ್ಪಾಗೆ ಹೋಗಿದ್ದೇ ತಪ್ಪಾಯ್ತಾ?
ಕಳೆದ ಎರಡು-ಮೂರು ತಿಂಗಳಿಂದ ಮಾನಸಿಕವಾಗಿ ಸಾಕಷ್ಟು ಒತ್ತಡದಲ್ಲಿದ್ದ ಕಾರಣ ಸಾಮಾಜಿಕ ಜಾಲತಾಣದಲ್ಲೂ ಹೆಚ್ಚು ಸಕ್ರಿಯವಾಗಿರಲಿಲ್ಲ ಎಂದು ವಿನೋದಿನಿ ಶ್ವೇತಾ ಹೇಳಿದ್ದಾರೆ. ಇತ್ತೀಚೆಗೆ ಸ್ವಲ್ಪ ರಿಲ್ಯಾಕ್ಸ್ ಆಗಬೇಕು ಎಂದು ಚೆನ್ನೈನ ಸಿಇಟಿ ಕಾಲೋನಿಯಲ್ಲಿರುವ ‘ಇನ್ಫ್ಲುಯೆನ್ಸ್’ ಸ್ಪಾಗೆ ತೆರಳಿದ್ದರಂತೆ. ಆದರೆ ಅಲ್ಲಿಗೆ ಹೋದ ಬಳಿಕ ನಡೆದ ಘಟನೆಯೊಂದು ಇದೀಗ ಅವರಿಗೆ ಮತ್ತಷ್ಟು ಬೇಸರ ತಂದಿದೆ.
‘ತಾಳಿ ಚೈನ್ ಬಿಚ್ಚಿಕೊಡಿ’ ಎಂದ ಸ್ಪಾ ಸಿಬ್ಬಂದಿ!
ಸ್ಪಾದಲ್ಲಿ ಮಸಾಜ್ ಮಾಡುತ್ತಿದ್ದ ವೇಳೆ ಅಲ್ಲಿನ ಮಹಿಳೆಯೊಬ್ಬರು ಕುತ್ತಿಗೆಯ ಭಾಗದಲ್ಲಿ ಮಸಾಜ್ ಮಾಡಲು ತಾಳಿ ಚೈನ್ ಬಿಚ್ಚಿಕೊಡುವಂತೆ ಕೇಳಿದ್ದರಂತೆ. ವಿನೋದಿನಿ ಕೂಡ ಚೈನ್ ಬಿಚ್ಚಿಕೊಟ್ಟಿದ್ದು, ಅದನ್ನು ಅಲ್ಲೇ ಇದ್ದ ಡಬ್ಬಿಯೊಂದರಲ್ಲಿ ಇಡಲಾಗಿತ್ತು ಎಂದು ಹೇಳಿದ್ದಾರೆ. ಅಷ್ಟರಲ್ಲೇ ಪತಿಯ ಮನೆಯಲ್ಲಿ ಯಾರೋ ನಿಧನರಾದ ಸುದ್ದಿ ವಿನೋದಿನಿಗೆ ಬಂದಿದೆ. ಆ ವಿಚಾರದಿಂದಾಗಿ ಮಾನಸಿಕವಾಗಿ ವಿಚಲಿತರಾಗಿದ್ದ ಅವರು ಸ್ಪಾದಿಂದ ಹೊರಡುವಾಗ ಚಿನ್ನದ ಚೈನ್ ಅನ್ನು ಡಬ್ಬಿಯಲ್ಲಿ ಇಟ್ಟಿರುವುದನ್ನೇ ಮರೆತುಬಿಟ್ಟಿದ್ದರಂತೆ. ಸ್ಪಾ ಸಿಬ್ಬಂದಿ ಚಪ್ಪಲಿಯನ್ನು ತಟ್ಟೆಯಲ್ಲಿ ತಂದುಕೊಟ್ಟಾಗಲೂ ಚೈನ್ ತೆಗೆದುಕೊಳ್ಳುವುದು ನಟಿಗೆ ನೆನಪಾಗಲಿಲ್ಲ. ಅಲ್ಲಿಂದ ಆಟೋ ಹತ್ತಿ ಮನೆಗೆ ತೆರಳಿದ್ದಾರೆ.
ಮರುದಿನ ನೆನಪಾದಾಗ ಆಗಿತ್ತು ತಡ!
ಮನೆಯಲ್ಲಿನ ಸಾವಿನ ಕಾರ್ಯಗಳಲ್ಲಿ ಬ್ಯುಸಿಯಾಗಿದ್ದ ಕಾರಣ ಮರುದಿನವೂ ವಿನೋದಿನಿಗೆ ಚೈನ್ ವಿಚಾರ ನೆನಪಾಗಲಿಲ್ಲ. ಭಾನುವಾರ ನೆನಪಾದ ಕೂಡಲೇ ಸ್ಪಾಗೆ ತೆರಳಿ ವಿಚಾರಿಸಿದಾಗ ಅಲ್ಲಿಂದ ಸಿಕ್ಕ ಉತ್ತರ ನಟಿಗೆ ಮತ್ತಷ್ಟು ಆಘಾತ ನೀಡಿದೆ. ಸ್ಪಾ ಸಿಬ್ಬಂದಿ, ಡಬ್ಬಿಯಲ್ಲಿ ಸಿಬ್ಬಂದಿಯೇ ಚೈನ್ ಇಟ್ಟಿದ್ದರು. ಆದರೆ ಇದೀಗ ಅದು ಕಾಣಿಸುತ್ತಿಲ್ಲ ಎಂದು ಹೇಳಿದ್ದಾರೆ ಎನ್ನಲಾಗಿದೆ. ಇದರಿಂದ ಬೇಸರಗೊಂಡಿರುವ ವಿನೋದಿನಿ, ಇದೀಗ ಪೊಲೀಸರಿಗೆ ದೂರು ನೀಡಿದ್ದಾರೆ. ತಮ್ಮ ತಾಳಿ ಚೈನ್ ಸುರಕ್ಷಿತವಾಗಿ ವಾಪಸ್ ಸಿಗುತ್ತದೆ ಎಂಬ ವಿಶ್ವಾಸವನ್ನೂ ವ್ಯಕ್ತಪಡಿಸಿದ್ದಾರೆ.
ತಮ್ಮ ಅನುಭವವನ್ನು ಹಂಚಿಕೊಂಡಿರುವ ವಿನೋದಿನಿ ಶ್ವೇತಾ, ಸ್ಪಾಗೆ ತೆರಳುವವರು ಯಾವುದೇ ಬೆಲೆಬಾಳುವ ವಸ್ತುಗಳನ್ನು ತಮ್ಮೊಂದಿಗೆ ತೆಗೆದುಕೊಂಡು ಹೋಗುವಾಗ ಎಚ್ಚರಿಕೆಯಿಂದ ಇರಬೇಕು ಎಂದು ಮನವಿ ಮಾಡಿದ್ದಾರೆ. “ಸ್ಪಾಗೆ ಹೋಗುವವರು ಅಲ್ಲಿರುವವರನ್ನು ನಂಬಿ ಯಾವುದೇ ಬೆಲೆಬಾಳುವ ವಸ್ತುಗಳನ್ನು ತೆಗೆದುಕೊಂಡು ಹೋಗಬೇಡಿ” ಎಂಬ ಸಂದೇಶವನ್ನು ಅವರು ನೀಡಿದ್ದಾರೆ.
ತಾಳಿ ಚೈನ್ ತಮ್ಮ ಪಾಲಿಗೆ ಕೇವಲ ಆಭರಣವಲ್ಲ, ಭಾವನಾತ್ಮಕವಾಗಿ ತುಂಬಾ ವಿಶೇಷವಾದದ್ದು ಎಂದು ಹೇಳಿರುವ ನಟಿ, ಅದು ಸುರಕ್ಷಿತವಾಗಿ ಮರಳಿ ಸಿಗಲಿ ಎಂದು ಅಭಿಮಾನಿಗಳು ಪ್ರಾರ್ಥಿಸುವಂತೆ ಮನವಿ ಮಾಡಿದ್ದಾರೆ. ಸದ್ಯ ವಿನೋದಿನಿ ಶ್ವೇತಾ ಅವರ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಗಮನ ಸೆಳೆದಿದ್ದು, ನಟಿಯ ಅನುಭವ ಕೇಳಿದ ಹಲವರು ಸ್ಪಾ ಅಥವಾ ಸಲೂನ್‌ಗೆ ತೆರಳುವಾಗ ಬೆಲೆಬಾಳುವ ವಸ್ತುಗಳ ಬಗ್ಗೆ ಎಚ್ಚರಿಕೆ ವಹಿಸುವಂತೆ ಸಲಹೆ ನೀಡುತ್ತಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.