
ಗೊಂಬೆ ಎಂದು ಖ್ಯಾತಿ ಪಡೆದ ಲಕ್ಷ್ಮೀ ಬಾರಮ್ಮ ಖ್ಯಾತಿಯ ನಟಿ ನೇಹಾ ಗೌಡ ಅವರು ಇದೀಗ ಮಗಳ ಆರೈಕೆಯಲ್ಲಿ ನಿರತರಾಗಿದ್ದಾರೆ. 2018ರಲ್ಲಿ ಚಂದನ್ ಗೌಡ ಅವರ ಜೊತೆ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದ ನಟಿ, ಮದುವೆಯಾದ 6 ವರ್ಷಗಳ ಬಳಿಕ ಹೆಣ್ಣುಮಗುವಿನ ಅಮ್ಮ ಆಗಿದ್ದಾರೆ. ಕಳೆದ ಅಕ್ಟೋಬರ್ 29ರಂದು ಮಗುವಿಗೆ ಜನ್ಮ ನೀಡಿರುವ ನಟಿ, ನಟನೆಯಿಂದ ದೂರ ಉಳಿದು ತಮ್ಮ ಸಮಯವನ್ನು ಮಗುವಿಗಾಗಿ, ಫ್ಯಾಮಿಲಿಗಾಗಿ ಮೀಸಲಿಟ್ಟಿದ್ದಾರೆ. ಇದೀಗ ನಟಿ ತಮ್ಮ ಜೀವನದ ಹಲವಾರು ವಿಷಯಗಳ ಬಗ್ಗೆ ರಾಜೇಶ್ ಗೌಡ ಅವರ ಯೂಟ್ಯೂಬ್ ಚಾನೆಲ್‌ನಲ್ಲಿ ಮಾತನಾಡಿದ್ದಾರೆ.
ಹಲವು ಹೆಣ್ಣುಮಕ್ಕಳು ಬಾಲ್ಯದಲ್ಲಿ ಎದುರಿಸುವ ಲೈಂಗಿಕ ದೌರ್ಜನ್ಯಗಳ ಬಗ್ಗೆ ಮಾತನಾಡುತ್ತಲೇ ನಟಿ ನೇಹಾ ತಮ್ಮ ಬದುಕಿನ ಆ ಕರಾಳ ಘಟನೆಯನ್ನು ನೆನಪಿಸಿಕೊಂಡಿದ್ದಾರೆ. ಇಂದಿಗೂ ಕೂಡ ಕಾಮುಕ ರಾಕ್ಷಸರಿಂದ ಎಷ್ಟೋ ಪುಟಾಣಿಗಳಿಗೆ ಇದೇ ರೀತಿ ಆಗಿದ್ದರೂ, ಹಲವು ಬಾರಿ ಆ ಕಂದಮ್ಮಗಳಿಗೆ ತಮ್ಮ ಮೇಲೆ ಏನು ಆಗಿದೆ ಎನ್ನುವುದೇ ತಿಳಿಯುತ್ತಿಲ್ಲ. ಮತ್ತೆ ಕೆಲವು ಮಕ್ಕಳು ಹೆದರಿ ಮನೆಯಲ್ಲಿ ಬಾಯಿ ಬಿಡುವುದೇ ಇಲ್ಲ, ಇನ್ನು ಕೆಲವೊಮ್ಮೆ ತಿಳಿದರೂ ಆಕೆಯ ಭವಿಷ್ಯದ ದೃಷ್ಟಿಯಿಂದ ಅದನ್ನು ಗುಟ್ಟು ಮಾಡಲಾಗುತ್ತದೆ, ಅಪ್ಪ-ಅಮ್ಮಂದಿರೇ ಅದನ್ನು ಹೊರಕ್ಕೆ ಹೇಳದೇ ಅಲ್ಲಿಗೇ ವಿಷಯ ಮುಚ್ಚಿಹಾಕಲು ನೋಡುತ್ತಾರೆ. ಇದೇ ಕಾರಣಕ್ಕೆ ಇಂಥ ರಾಕ್ಷಸರು ನಿರಾತಂಕವಾಗಿ ಮತ್ತಷ್ಟು ಮಕ್ಕಳ ಜೀವಕ್ಕೆ ಅಪಾಯ ತಂದೊಡ್ಡುತ್ತಿದ್ದಾರೆ. ನಮ್ಮ ಕಾನೂನು ವ್ಯವಸ್ಥೆಯಲ್ಲಿಯೂ ಕೂಡ ಇಂಥ ದುರುಳರಿಗೆ ಸರಿಯಾದ ಶಿಕ್ಷೆ ಆಗದೇ ಇರುವುದು ಕೂಡ ವಿಷಾದದ ಸಂಗತಿ.
ತಮ್ಮ ಜೀವನದಲ್ಲಿ ಆದ ಇಂಥ ಘಟನೆಯ ಬಗ್ಗೆ ನಟಿ ನೇಹಾ ಅವರು ಮಾತನಾಡಿದ್ದಾರೆ. ಈ ಬಗ್ಗೆ ಹಿಂದೆ ಎಂದಿಗೂ ಮಾತನಾಡಿಲ್ಲ ಎಂದಿರುವ ನೇಹಾ ಗೌಡ, ಹೆಣ್ಣು ಮಕ್ಕಳ ಮೇಲೆ ನಡೆಯುವ ಈ ಭಯಾನಕ ಘಟನೆಗಳ ಬಗ್ಗೆ ನೊಂದು ನುಡಿದಿದ್ದಾರೆ. ನಾನಾಗ ನಾಲ್ಕನೆಯ ಕ್ಲಾಸ್ನಲ್ಲಿದೆ. ಅಂದು ನನ್ನ ಅಮ್ಮ ಮನೆಯಲ್ಲಿ ಇರಲಿಲ್ಲ. ನನ್ನನ್ನು ಮಲಗಿಸಿ ಹೋಗಿದ್ದರು. ಅಜ್ಜಿ ಇದ್ದರು. ನನಗೆ ಎಚ್ಚರವಾದಾಗ ಅಮ್ಮ ಇರಲಿಲ್ಲ. ಅವಳನ್ನು ಹುಡುಕುತ್ತಾ ಹೊರಗೆ ಹೋಗಿಬಿಟ್ಟೆ. ಪಕ್ಕದ ಬೀದಿಯಲ್ಲಿ ಒಬ್ಬ ನಿನ್ನಪ್ಪ ನನಗೆ ಗೊತ್ತು, ವಾಚ್ ಕೊಡುತ್ತೇನೆ ಎಂದ. ನಾನು ಮೊದಲಿಗೆ ನಂಬಲಿಲ್ಲ, ನನ್ನ ಅಪ್ಪನ ಹೆಸರೇನು ಕೇಳಿದೆ. ಆತ ಏನೋ ತಡಬಡಿಸಿದ, ಆದರೆ ಆ ಸಮಯದಲ್ಲಿ ರಾಮಕೃಷ್ಣ ಗೊತ್ತಾ ಎಂದುಬಿಟ್ಟೆ. ಆತ ಹೌದೌದು ಅಂದ. ಹಾಗಿದ್ರೆ ಆತನಿಗೆ ನನ್ನ ಅಪ್ಪ ಗೊತ್ತು ಎಂದುಕೊಂಡುಬಿಟ್ಟು ಅವನ ಹಿಂದೆ ಹೋದೆ.
ಎಲ್ಲೆಲ್ಲಿಯೋ ಕರೆದುಕೊಂಡು ಹೋದ ಆತ ವಾಚ್ ಅಂಗಡಿಯೊಂದಕ್ಕೆ ಹೋಗಿ ಅಲ್ಲಿ ಬಾಗಿಲು ಹಾಕಿದ. ತೀರಾ ಕೆಟ್ಟದಾಗಿ ನಡೆದುಕೊಳ್ಳಲು ಶುರು ಮಾಡಿದ. ಆ ಸಮಯದಲ್ಲಿ ನನಗೆ ಏನಾಗುತ್ತಿದೆ ಎನ್ನುವುದೇ ತಿಳಿಯದೇ ಜೋರಾಗಿ ಅಳಲು ಶುರು ಮಾಡಿದೆ. ಚಾಕು ತೋರಿಸಿ ಅಳದಂತೆ ಹೇಳಿದ. ಚೆನ್ನಾಗಿ ಹೊಡೆದ. ಆಮೇಲೆ ಆತನಿಂದ ಹೇಗೋ ತಪ್ಪಿಸಿಕೊಂಡು ಬಂದೆ. ಎಲ್ಲಿಗೆ ಓಡಿ ಬಂದೆನೋ ಗೊತ್ತಿಲ್ಲ. ಅಷ್ಟರಲ್ಲಿಯೇ ನಮ್ಮ ಮನೆಯಲ್ಲಿ ಎಲ್ಲರೂ ನನ್ನನ್ನು ಹುಡುಕುತ್ತಿದ್ದರು. ನಾನು ಅಳುವುದನ್ನು ನೋಡಿ ಅಲ್ಲಿದ್ದವರು ಅಪ್ಪನ ಹೆಸರು ಕೇಳಿದರು. ಆದರೆ ಶಾಕ್ನಲ್ಲಿದ್ದ ನನಗೆ ಯಾರ ಹೆಸರೂ ನೆನಪಿಗೆ ಬರುತ್ತಿರಲಿಲ್ಲ. ಅಂತೂ ಕೊನೆಗೆ ನನ್ನ ಸಂಬಂಧಿಕರೊಬ್ಬರು ನನ್ನನ್ನು ನೋಡಿ ಮನೆಗೆ ಕರೆದುಕೊಂಡು ಹೋದರು ಎಂದು ಆ ಘಟನೆ ಹೇಳಿದ್ದಾರೆ ನೇಹಾ.
ಮನೆಯಲ್ಲಿ ಆತ ಹೊಡೆದದ್ದು ಹೇಳಿದೆ ಬಿಟ್ಟರೆ ಬೇರೇನೂ ಹೇಳಿರಲಿಲ್ಲ. ಏಕೆಂದರೆ ನನಗೆ ಏನಾಗಿದೆ ಎಂದೇ ಗೊತ್ತಿರಲಿಲ್ಲ. ಕೆಲವು ವರ್ಷ ಬಳಿಕ ಟೀಚರ್ ಒಬ್ಬರು ಗುಡ್ಟಚ್, ಬ್ಯಾಡ್ಟಚ್ ಬಗ್ಗೆ ಹೇಳುವಾಗಲೇ ನನಗೆ ಗೊತ್ತಾಗಿದ್ದು, ನನಗೂ ಇದೇ ರೀತಿ ಆಗಿತ್ತು ಎಂದು. ಅಲ್ಲಿಯೇ ಜೋರಾಗಿ ಅತ್ತುಬಿಟ್ಟೆ. ಆಗ ಆ ಟೀಚರ್ಗೆ ಅನುಮಾನ ಬಂದು ನನ್ನನ್ನು ಸಮಾಧಾನಪಡಿಸಿ, ಏನೂ ನಡೆದಿಲ್ಲ ಎಂದು, ನನ್ನ ತಲೆಯಲ್ಲಿದ್ದ ಭಯವನ್ನು ಹೊರಕ್ಕೆ ಹಾಕಿದರು. ಆ ಬಳಿಕ ನನ್ನ ಅಪ್ಪ-ಅಮ್ಮನಿಗೂ ವಿಷಯ ಗೊತ್ತಾಯಿತು. ನನ್ನಪ್ಪ ತುಂಬಾ ಚೆನ್ನಾಗಿ ಸಿಚುವೇಷನ್ ಹ್ಯಾಂಡಲ್ ಮಾಡಿ ನನಗೆ ಧೈರ್ಯ ತುಂಬಿದರು. ಆ ಕರಾಳ ದಿನ ನೆನಪಿಸಿಕೊಂಡರೆ ಇಂದಿಗೂ ಭಯವಾಗುತ್ತದೆ ಎಂದಿದ್ದಾರೆ ನೇಹಾ.
ಹಿಂದೂ ಹೆಣ್ಣುಮಕ್ಕಳೇ ಈತನ ಟಾರ್ಗೆಟ್! ನಾಪತ್ತೆಯಾದ 11 ಬಾಲಕಿಯರು ಸಿಕ್ಕಿದ್ದು... ಮೈ ನಡುಗಿಸುವ ಕಥೆ ಕೇಳಿ..
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.