ಬಿಗ್ಬಾಸ್ನಿಂದ ಸುದೀಪ್ ಅವರು ಹೊರಕ್ಕೆ ಬರುತ್ತಿರುವ ಕಾರಣ ಏನು ಎಂಬ ಬಗ್ಗೆ ತಲೆ ಕೆಡಿಸಿಕೊಂಡವರಿಗೆ ಕೊನೆಗೂ ಕಾರಣ ಸಿಕ್ಕಿದೆ. ಈ ಬಗ್ಗೆ ಖುದ್ದು ಸುದೀಪ್ ಅವರೇ ಹೇಳಿದ್ದೇನು?
ಕಳೆದ ಅಕ್ಟೋಬರ್ 13ರಂದು ಏಕಾಏಕಿಯಾಗಿ ಬಿಗ್ಬಾಸ್ಗೆ ಸುದೀಪ್ ಅವರು ಗುಡ್ಬೈ ಹೇಳುವ ಮೂಲಕ ಅಸಂಖ್ಯ ಅಭಿಮಾನಿಗಳಿಗೆ ಶಾಕ್ ನೀಡಿದ್ದಾರೆ. 10 ಸೀಸನ್ ಪೂರೈಸಿ 11ನೇ ಸೀಸನ್ ಶುರುವಾಗಿ ಕೆಲವೇ ದಿನಗಳಲ್ಲಿ ಸುದೀಪ್ ಅವರು ಈ ದಿಢೀರ್ ನಿರ್ಧಾರ ತೆಗೆದುಕೊಂಡಿದ್ದು ಏಕೆ ಎನ್ನುವ ಬಗ್ಗೆ ಅಭಿಮಾನಿಗಳು ತಲೆ ಕೆಡಿಸಿಕೊಳ್ಳುತ್ತಿದ್ದಾರೆ. ಬಿಗ್ಬಾಸ್ನ ಸೀಸನ್ 11 ಇನ್ನೂ ಹಲವು ದಿನಗಳು ಇರುವ ಮೊದಲೇ ಈ ರೀತಿ ಘೋಷಿಸಿದ್ದಕ್ಕೆ ಇದು ಪಬ್ಲಿಸಿಟಿಯ ಸ್ಟಂಟ್ ಎಂದೂ ಸೋಷಿಯಲ್ ಮೀಡಿಯಾದಲ್ಲಿ ಕೆಲವು ನೆಟ್ಟಿಗರು ಕಮೆಂಟ್ ಮಾಡಿದ್ದರು. ಮತ್ತೆ ಕೆಲವರು ಇದು ತಮಾಷೆಯ ಸುದ್ದಿ ಎಂದಿದ್ದರು. ಆದರೆ ಇಂಥ ವಿಷಯದಲ್ಲಿ ಸುದೀಪ್ ಅವರು ತಮಾಷೆ ಮಾಡುವುದಿಲ್ಲ, ಇದು ನಿಜವಾದ ಸುದ್ದಿಯೇ ಎನ್ನುವುದು ಕೊನೆಗೂ ತಿಳಿದಿದೆ. ಆದರೆ ದಿಢೀರನೆ ಸುದೀಪ್ ಅವರು ಈ ನಿರ್ಧಾರಕ್ಕೆ ಬಂದಿದ್ದು ಯಾಕೆ ಎಂಬ ಬಗ್ಗೆ ಇದಾಗಲೇ ಹಲವಾರು ಮಂದಿ ತಮ್ಮದೇ ಆದ ರೀತಿಯಲ್ಲಿ ವಿಶ್ಲೇಷಣೆ ನೀಡಿದ್ದಾರೆ.
ಆದರೆ ಇದೀಗ ಖುದ್ದು ಸುದೀಪ್ ಅವರೇ ಎಲ್ಲರ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ. ಯೂಟ್ಯೂಬ್ ಒಂದಕ್ಕೆ ನೀಡಿರುವ ಸಂದರ್ಶನದಲ್ಲಿ ಸುದೀಪ್ ಅವರು ಇದರ ಬಗ್ಗೆ ವಿಸ್ತಾರವಾಗಿ ಮಾತನಾಡಿದ್ದಾರೆ. ಅವರ ಮಾತಿನಲ್ಲಿಯೇ ಹೇಳುವುದಾದರೆ, 'ಎಲ್ಲರನ್ನೂ ರಿಪೇರಿ ಮಾಡ್ತಾ ಕುಳಿತುಕೊಳ್ಳಲು ನಾನು ಬಂದಿಲ್ಲ, ಎಷ್ಟು ಅಂತ ಮಾಡೋದು, ಸಾಕಾಗಿದೆ ಇಷ್ಟು ವರ್ಷ ಮಾಡಿದ್ದು ಸಾಕು. ಬಿಗ್‌ಬಾಸ್ ಎಂದರೆ ಸುಮ್ಮನೇ ಅಲ್ಲ, ಸಿಕ್ಕಾಪಟ್ಟೆ ಎಫರ್ಟ್ ಹಾಕಬೇಕು. ಈ ಎಫರ್ಟ್ ಯಾರಿಗೂ ಅರ್ಥ ಆಗಲ್ಲ ಎಂದು ತುಂಬಾ ಬೇಸರ ವ್ಯಕ್ತಪಡಿಸಿದ್ದಾರೆ. ಕಳೆದ ಸಲದ ಉದಾಹರಣೆಯನ್ನೇ ಕೊಡುತ್ತೇನೆ ನೋಡಿ. ಚೆನ್ನೈನಿಂದ ಒಂದೂವರೆ ಗಂಟೆ ದೂರ ಇರುವ ಮಹಾಬಲಿಪುರಂನಲ್ಲಿ ಶೂಟಿಂಗ್ ನಡೆಯುತ್ತಿತ್ತು. ಬೆಂಗಳೂರಿನಿಂದ ನಾನು ಹೋಗುವ ವಿಷಯ ಹೇಳುವುದಾದರೆ, ಮನೆಯಿಂದ ಏರ್ಪೋರ್ಟ್ಗೆ ಒಂದೂವರೆ ಗಂಟೆ. ಬಳಿಕ ಒಂದು ಗಂಟೆ ವಿಮಾನಕ್ಕಾಗಿ ವೇಟಿಂಗ್. ಅಲ್ಲಿಂದ ಚೆನ್ನೈಗೆ ಹೋಗಲು ನಲವತ್ತು ನಿಮಿಷ. ಅಲ್ಲಿಂದ ಒಂದೂವರೆ ಗಂಟೆ ಮತ್ತೆ ಪ್ರಯಾಣ. ಅಲ್ಲಿ ಶೂಟಿಂಗ್ ನಡೆಯುತ್ತಿತ್ತು. ಇಷ್ಟು ಕಷ್ಟ ಪಡಬೇಕಾಗಿತ್ತು' ಎಂದಿದ್ದಾರೆ.
ಅಮೆರಿಕಕ್ಕೆ ತೆರಳುವ ಮುನ್ನ ಶಿವಣ್ಣ ಫ್ಯಾಮಿಲಿ ಹೋಟೆಲ್ನಲ್ಲಿ ಕಾಣಿಸಿಕೊಂಡದ್ದು ಹೀಗೆ... ವಿಡಿಯೋ ವೈರಲ್
'ಅಲ್ಲಿಂದ ವಾಪಸ್ ಬರುವ ಕುರಿತೂ ಮಾತನಾಡಿದ ಸುದೀಪ್ ಅವರು, ನೈಟ್ ಮೂರು, ಮೂರುವರೆ ಗಂಟೆಗೆ ಶೂಟಿಂಗ್ ಪ್ಯಾಕ್ಅಪ್ ಆಗುತ್ತಿತ್ತು. ಅಲ್ಲಿಂದ ಓಡೋಡಿ ವಿಮಾನ ನಿಲ್ದಾಣಕ್ಕೆ ಬರಬೇಕು. ಐದೂವರೆ ಗಂಟೆಗೆ ವಿಮಾನ ಟೇಕ್ ಆಫ್. ಪರ್ಸನಲ್ ಫ್ಲೈಟ್ ಇತ್ತು. ಎಚ್ಎಎಲ್ನಲ್ಲಿ ಅದು ಲ್ಯಾಂಡ್ ಆಗುತ್ತಿತ್ತು. ಅಲ್ಲಿಂದ ಅಪ್ಪ-ಅಮ್ಮನನ್ನು ಮಾತನಾಡಿಸಿಕೊಂಡು ಮನೆಗೆ ಹೋಗಿ ಎಲ್ಲಾ ಎಪಿಸೋಡ್ಗಳನ್ನು ನೋಡಬೇಕು, ಎಲ್ಲಾ ನೋಡಿ ಡಿಸ್ಕಸ್ ಆಗುವುದರಲ್ಲಿ ನೈಟ್ ಆಗುತ್ತಿತ್ತು. ಬೆಳಿಗ್ಗೆ ಎರಡು ಎಪಿಸೋಡ್ ಮುಗಿಸಿ ಮತ್ತೆ ಓಡಿ ಹೋಗಿ ಫ್ಲೈಟ್ ಹತ್ತಬೇಕು. ಇಡೀ ಸೀಸನ್ ಮಾಡಿ ಸ್ಟ್ರೆಸ್ಔಟ್ ಆಗಿಬಿಟ್ಟಿದ್ದೆ' ಎಂದು ನೋವು ತೋಡಿಕೊಂಡಿದ್ದಾರೆ. ಬೆಂಗಳೂರಿನಲ್ಲಿ ಇದ್ದರೆ ಹೇಗೋ ಮ್ಯಾನೇಜ್ ಮಾಡಬಹುದು. ಆದರೆ ಬೇರೆ ಕಡೆ ತುಂಬಾ ಕಷ್ಟ. ಗುರುವಾರ ಮುಗಿಸಿ ಬರಲೇಬೇಕಾಗತ್ತೆ. ಸಿನಿಮಾ ಇಲ್ಲದಾಗ ಓಕೆ, ಆದರೆ ಸಿನಿಮಾ ಒಪ್ಪಿಕೊಂಡಾಗ ಅದಕ್ಕೆ ಡಿಲೇ ಆಗುತ್ತಿರುತ್ತದೆ. ಖುಷಿಯಿಂದ ಎಲ್ಲಾ ಮಾಡಿದ್ದೇನೆ, ಈಗ ಬೇರೆ ಯಾರಾದ್ರೂ ಮಾಡಲಿ ಬಿಡಿ' ಎಂದಿದ್ದಾರೆ. ಹೊಸದಾಗಿ ಬೇಕಾದ್ರೆ ಏನಾದ್ರೂ ಮಾಡ್ತೇನೆ. ಸಿನಿಮಾಗಳು ಈಗ ಮುಂಚಿನಂತೆ ಇಲ್ಲ. ತುಂಬಾ ಚಾಲೆಂಜ್ ಇವೆ. ಬೇಗ ಬೇಗ ಶೂಟಿಂಗ್ ಆಗಬೇಕು. ಅದಕ್ಕೆ ಹೆಚ್ಚು ಟೈಮ್ ಕೊಡಬೇಕು. ಇದೆಲ್ಲಾ ಕಾರಣಕ್ಕೆ ಷೋನಿಂದ ಹೊರಗೆ ಬರುವ ನಿರ್ಧಾರ ಮಾಡಿದ್ದು ಎಂದಿದ್ದಾರೆ.
undefined
ಅದೇ ಇನ್ನೊಂದು ಸಂದರ್ಶನದಲ್ಲಿ ಸುದೀಪ್ ಅವರು, ದಿಢೀರ್ ಟ್ವೀಟ್ ಮಾಡಿ ನಿರ್ಧಾರ ತೆಗೆದುಕೊಂಡಿರುವುದಕ್ಕೆ ಕಾರಣವನ್ನು ನೀಡಿದ್ದಾರೆ. ಅಂದು ತುಂಬಾ ದಣಿದಿದ್ದೆ. ಅದಕ್ಕಾಗಿ ಬೇಗ ಟ್ವೀಟ್ ಮಾಡಿದೆ, ಇಲ್ಲದೇ ಹೋದರೆ ನಾನು ನಿರ್ಧಾರ ಬದಲಿಸುವ ಸಾಧ್ಯತೆ ಇತ್ತು. ಆದ ಕಾರಣ ನಾನು ಹಾಕಿಕೊಂಡಿರುವ ಬದ್ಧತೆಯಂತೆ, ಏನು ಆಲೋಚನೆ ಬರುತ್ತದೋ ಅದನ್ನು ಅದೇ ಕ್ಷಣದಲ್ಲಿ ಮಾಡಿ ಮುಗಿಸುತ್ತೇನೆ. ಬಿಗ್‌ಬಾಸ್ ತುಂಬಾ ಗೌರವ, ಪ್ರೀತಿ ತಂದುಕೊಟ್ಟಿದೆ. ಆದರೆ ಹನ್ನೊಂದು ಸೀಸನ್ ಮುಗಿದಿದ್ದು, ಈಗ ಬೇರೆಯವರಿಗೆ ಅವಕಾಶ ಸಿಗಲಿ ಎಂದಿದ್ದಾರೆ.