
ಕರ್ನಾಟಕದ ಪ್ರತಿಭೆಗೆ ರಾಷ್ಟ್ರಮಟ್ಟದಲ್ಲಿ ಮತ್ತೊಂದು ದೊಡ್ಡ ವೇದಿಕೆ ಸಿಕ್ಕಿದೆ. ಬೀದರ್‌ನ ಗಾಯಕಿ ಶಿವಾನಿ ಶಿವದಾಸ್ ಸ್ವಾಮಿ ಇದೀಗ Zee TVಯ ಜನಪ್ರಿಯ ಸಂಗೀತ ರಿಯಾಲಿಟಿ ಶೋ ಸ ರಿ ಗ ಮ ಪ 2026 ರಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸೆಪ್ಟೆಂಬರ್ 19ರಿಂದ ಈ ಸಂಗೀತ ಕಾರ್ಯಕ್ರಮ ಆರಂಭವಾಗಲಿದ್ದು, ರಾಷ್ಟ್ರೀಯ ವೇದಿಕೆಯಲ್ಲಿ ಶಿವಾನಿ ತಮ್ಮ ಗಾಯನದ ಮೂಲಕ ಮತ್ತೊಮ್ಮೆ ಗಮನ ಸೆಳೆಯಲು ಸಜ್ಜಾಗಿದ್ದಾರೆ.
ಕರ್ನಾಟಕದ ಬೀದರ್‌ನ ಶಿವಾನಿ ಶಿವದಾಸ್ ಸ್ವಾಮಿ ಅವರು ಕನ್ನಡ ಸರಿಗಮಪ ಸೀಸನ್ 21ರ ವಿಜೇತೆಯಾಗಿ ಹೊರಹೊಮ್ಮಿದ್ದರು. ತಮ್ಮ ಸುಮಧುರ ಕಂಠ ಹಾಗೂ ವಿಭಿನ್ನ ಗಾಯನ ಶೈಲಿಯಿಂದ ಕಾರ್ಯಕ್ರಮದಲ್ಲಿ ಪ್ರೇಕ್ಷಕರು ಮತ್ತು ಸಂಗೀತಾಸಕ್ತರ ಗಮನ ಸೆಳೆದಿದ್ದರು. ಬೀದರ್‌ನಲ್ಲೇ ಶಿಕ್ಷಣ ಪಡೆದಿರುವ ಶಿವಾನಿ, ಕರ್ನಾಟಕ ಆರ್ಟ್ಸ್, ಸೈನ್ಸ್ ಆ್ಯಂಡ್ ಕಾಮರ್ಸ್ ಕಾಲೇಜು, ಬೀದರ್ನಲ್ಲಿ ವಿದ್ಯಾಭ್ಯಾಸ ಮಾಡಿದ್ದಾರೆ. ಚಿಕ್ಕ ವಯಸ್ಸಿನಲ್ಲೇ ಸಂಗೀತ ಕ್ಷೇತ್ರದಲ್ಲಿ ಗುರುತಿಸಿಕೊಂಡಿರುವ ಅವರು ಇದೀಗ ರಾಷ್ಟ್ರೀಯ ಮಟ್ಟದ ವೇದಿಕೆಯಲ್ಲಿ ತಮ್ಮ ಪ್ರತಿಭೆ ಪ್ರದರ್ಶಿಸುವ ಅವಕಾಶ ಪಡೆದಿದ್ದಾರೆ.
ಶಿವಾನಿ ಅವರು Indian Idol Season 14ರ ಆಡಿಷನ್‌ನಲ್ಲೂ ಭಾಗವಹಿಸಿ ಆಯ್ಕೆಯಾಗಿದ್ದರು ಎನ್ನಲಾಗಿದ್ದು, ಆಡಿಷನ್ ಹಂತದಲ್ಲೇ ತಮ್ಮ ಧ್ವನಿಯಿಂದ ಗಮನ ಸೆಳೆದಿದ್ದರು. ಇದೀಗ ಮತ್ತೊಂದು ದೊಡ್ಡ ರಾಷ್ಟ್ರೀಯ ಸಂಗೀತ ವೇದಿಕೆಯಾಗಿರುವ ‘ಸ ರಿ ಗ ಮ ಪ’ ಮೂಲಕ ದೇಶದಾದ್ಯಂತ ಇರುವ ಸಂಗೀತ ಪ್ರೇಮಿಗಳ ಮುಂದೆ ಕಾಣಿಸಿಕೊಳ್ಳಲಿದ್ದಾರೆ.
ಭಾರತದ ದೀರ್ಘಕಾಲದ ಸಂಗೀತ ರಿಯಾಲಿಟಿ ಶೋಗಳಲ್ಲಿ ಒಂದಾದ Sa Re Ga Ma Pa 2026 ಹೊಸ ರೂಪದಲ್ಲಿ ಮರಳುತ್ತಿದೆ. ಸೆಪ್ಟೆಂಬರ್ 19, 2026ರಿಂದ ಕಾರ್ಯಕ್ರಮ ಪ್ರಸಾರವಾಗಲಿದೆ. ಈ ಬಾರಿ ಕಾರ್ಯಕ್ರಮವನ್ನು ಮತ್ತಷ್ಟು ಅದ್ಧೂರಿಯಾಗಿ ರೂಪಿಸಲಾಗಿದ್ದು, ಒಟ್ಟು 36 ಮೂಲ ಸಂಚಿಕೆಗಳು ಇರಲಿವೆ. ಬರೋಬ್ಬರಿ 100 ಲೈವ್ ಸಂಗೀತಗಾರರು ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ರಾಜಮನೆತನದ ವೈಭವವನ್ನು ನೆನಪಿಸುವ ರೀತಿಯಲ್ಲಿ ಭವ್ಯ ಸೆಟ್ ಕೂಡ ನಿರ್ಮಿಸಲಾಗಿದೆ.
ಈ ಬಾರಿ ಕಾರ್ಯಕ್ರಮದ ತೀರ್ಪುಗಾರರಾಗಿ ಖ್ಯಾತ ಸಂಗೀತ ನಿರ್ದೇಶಕ ಹಾಗೂ ಗಾಯಕ ಶಂಕರ್ ಮಹಾದೇವನ್, ಜನಪ್ರಿಯ ಗಾಯಕ ಕುಮಾರ್ ಸಾನು, ಗಾಯಕ ಜಾವೇದ್ ಅಲಿ ಮತ್ತು ಗಾಯಕಿ ನೀತಿ ಮೋಹನ್ ಕಾಣಿಸಿಕೊಳ್ಳಲಿದ್ದಾರೆ. ಇಂತಹ ದಿಗ್ಗಜರ ಮುಂದೆ ಶಿವಾನಿ ತಮ್ಮ ಗಾಯನ ಪ್ರತಿಭೆಯನ್ನು ಪ್ರದರ್ಶಿಸಲಿರುವುದು ಕರ್ನಾಟಕದ ಸಂಗೀತಾಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ.
ಶಿವಾನಿಯ ರಾಷ್ಟ್ರೀಯ ವೇದಿಕೆಯ ಎಂಟ್ರಿಯನ್ನು ವಿಶೇಷವಾಗಿ ಬಿಂಬಿಸಲಾಗಿದ್ದು, “ಹಿಂದೂಸ್ತಾನ್ ಕೆ ಸಂಗೀತಸ್ಥಾನ್ ಮೇಂ ಆ ರಹೀ ಹೈ ಬೀದರ್, ಕರ್ನಾಟಕ ಕಿ ಶಿವಾನಿ ಸ್ವಾಮಿ” ಎಂಬ ರೀತಿಯಲ್ಲಿ ಪರಿಚಯಿಸಲಾಗಿದೆ. ಕನ್ನಡದ ಶಿವಾನಿಯ ಕಂಠದಲ್ಲಿ ಮರಾಠಿ ಸೊಗಡಿನ ಸ್ಪರ್ಶವೂ ಕೇಳಿಬರಲಿದೆ ಎಂಬ ನಿರೀಕ್ಷೆ ಇದೆ. ಕರ್ನಾಟಕದ ಗಡಿ ಭಾಗವಾದ ಬೀದರ್‌ನಿಂದ ಬಂದಿರುವ ಶಿವಾನಿ ಹಲವು ಭಾಷೆಗಳ ಸಂಗೀತದ ಸೊಗಡನ್ನು ತಮ್ಮ ಗಾಯನದಲ್ಲಿ ಮೂಡಿಸುವ ಸಾಮರ್ಥ್ಯ ಹೊಂದಿದ್ದಾರೆ.
ಈ ಬಾರಿಯ Zee TV UK Sa Re Ga Ma Pa 2026 ಕಾರ್ಯಕ್ರಮಕ್ಕೆ Air India ಟೈಟಲ್ ಸ್ಪಾನ್ಸರ್ ಆಗಿದೆ. ಭಾರತೀಯ ಸಂಗೀತ, ಸಂಸ್ಕೃತಿ ಮತ್ತು ವಿದೇಶದಲ್ಲಿರುವ ಭಾರತೀಯ ಸಮುದಾಯದೊಂದಿಗೆ ಸಂಪರ್ಕ ಬೆಳೆಸುವ ಉದ್ದೇಶದೊಂದಿಗೆ ಈ ಸಹಭಾಗಿತ್ವ ನಡೆದಿದೆ.
ಕಾರ್ಯಕ್ರಮವು Zee TV UK ಮಾತ್ರವಲ್ಲದೆ ZEE5 ಹಾಗೂ ಇತರ ಡಿಜಿಟಲ್ ವೇದಿಕೆಗಳಲ್ಲೂ ಲಭ್ಯವಾಗಲಿದೆ. UK ಮತ್ತು ಯುರೋಪ್‌ನಲ್ಲಿರುವ ಭಾರತೀಯ ಮೂಲದ ಪ್ರೇಕ್ಷಕರನ್ನು ಗಮನದಲ್ಲಿಟ್ಟುಕೊಂಡು ಈ ಬಾರಿ ಕಾರ್ಯಕ್ರಮವನ್ನು ದೊಡ್ಡ ಮಟ್ಟದಲ್ಲಿ ರೂಪಿಸಲಾಗಿದೆ.
ಹಬ್ಬಗಳ ಸೀಸನ್‌ನಲ್ಲಿ ಸಂಗೀತದ ರಸದೌತಣ
ಸೆಪ್ಟೆಂಬರ್ 19ರಿಂದ ಆರಂಭವಾಗುವ ಈ ಸೀಸನ್ ನವರಾತ್ರಿ, ದಸರಾ, ಕರ್ವಾ ಚೌತ್, ದೀಪಾವಳಿ ಸೇರಿದಂತೆ ಹಬ್ಬಗಳ ಅವಧಿಯೊಂದಿಗೆ ಸಾಗಲಿದೆ. ಕ್ರಿಸ್‌ಮಸ್ ಮತ್ತು ಹೊಸ ವರ್ಷದ ಸಂಭ್ರಮದವರೆಗೂ ಕಾರ್ಯಕ್ರಮ ಪ್ರಸಾರವಾಗಲಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.