
ಬೆಂಗಳೂರು (ಅ.07) ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ಕನ್ನಡ ಶೋ ಸಂಕಷ್ಟಕ್ಕೆ ಸಿಲುಕಿದೆ. ನಿಯಮ ಉಲ್ಲಂಘನೆಯಿಂದ ಬಿಗ್ ಬಾಸ್ 12ನೇ ಆವೃತ್ತಿ ನಡೆಯುತ್ತಿದ್ದಂತೆ ಅಧಿಕಾರಿಗಳು ಮನೆಗೆ ಬೀಗ ಹಾಕಿದ್ದಾರೆ. ಸ್ಪರ್ಧಿಗಳು ತಕ್ಷಣವೇ ಹೊರಹೋಗಲು ಸೂಚನೆ ನೀಡಲಾಗಿದೆ. ಕಂದಾಯ ಹಾಗೂ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ನಿಯಮ ಉಲ್ಲಂಘಿಸಿರುವ ಕಾರಣದಿಂದ ಬಿಗ್ ಬಾಸ್ 12ನೇ ಶೋಗೆ ಬೀಗ ಬಿದ್ದಿದೆ. ಸತತ ನೋಟಿಸ್ ನೀಡಿದ್ದ ಅಧಿಕಾರಿಗಳು ಇದೀಗ ಜಿಲ್ಲಾಡಳಿತ ಬಿಗ್ ಬಾಸ್ ಮನೆಗೆ ಎಂಟ್ರಿಕೊಟ್ಟು ಗೇಟ್‌ಗೆ ಬೀಗ ಜಡಿದಿದ್ದಾರೆ. ಈ ಮೂಲಕ ಕನ್ನಡದಲ್ಲೇ ಎರಡನೇ ಬಾರಿಗೆ ಬಿಗ್ ಬಾಸ್ ಶೋ ಸ್ಥಗಿತಗೊಳ್ಳುತ್ತಿದೆ.
ಕನ್ನಡ ಬಿಗ್ ಬಾಸ್ ಶೋ ಎರಡನೇ ಬಾರಿಗೆ ಸ್ಥಗಿತಗೊಳ್ಳುತ್ತಿದೆ. ಮನೆಗೆ ಬೀಗ ಜಡಿದಿರುವ ಕಾರಣ ಬಿಗ್ ಬಾಸ್ ಶೋ ಮುನ್ನಡೆಸುವು ಸಂಕಷ್ಟ ಎದುರಾಗಿದೆ. ಇಷ್ಟೇ ಅಲ್ಲ ಇಂದು (ಅ.07) ಗಂಟೆಯೊಳಗೆ ಸ್ಪರ್ಧಿಗಳು ಮನೆಯಿಂದ ಹೊರಹೋಗುವಂತೆ ಸೂಚನೆ ನೀಡಲಾಗಿದೆ. ಹೀಗಾಗಿ ಈ ಬಾರಿಯ ಶೋ ತಾತ್ಕಾಲಿಕವಾಗಿ ಸ್ಥಗಿತಗೊಳ್ಳವು ಎಲ್ಲಾ ಸಾಧ್ಯತೆಗಳು ಕಾಣುತ್ತಿದೆ. ಆದರೆ ಕನ್ನಡದಲ್ಲಿ ಬಿಗ್ ಬಾಸ್ ಶೋ ಅರ್ಧಕ್ಕೆ ಸ್ಥಗಿತಗೊಳ್ಳುತ್ತಿರುವುದು ಇದೇ ಮೊದಲಲ್ಲ.
ಕನ್ನಡ ಬಿಗ್ ಬಾಸ್ 8ನೇ ಆವೃತ್ತಿ ಅರ್ಧಕ್ಕೆ ಸ್ಥಗಿತಗೊಂಡಿತ್ತು. ಅದ್ದೂರಿಯಾಗಿ ಆರಂಭಗೊಂಡಿದ್ದ ಬಿಗ್ ಬಾಸ್ ಕನ್ನಡ 8ನೇ ಆವೃತ್ತಿ ಬರೋಬ್ಬರಿ 71 ದಿನಗಳ ಕಾಲ ಸಾಗಿತ್ತು. ಬಿಗ್ ಬಾಸ್ ಫಿನಾಲೆಗೆ ಕೆಲ ದಿನಗಳು ಮಾತ್ರ ಬಾಕಿ ಉಳಿದಿತ್ತು. ಅಷ್ಟರಲ್ಲೇ ದೇಶಾದ್ಯಂತ ಕೋವಿಡ್ ಮಹಾಮಾರಿ ಹಬ್ಬಿತ್ತು. ಹಲವು ಕಠಿಣ ನಿರ್ಬಂಧಗಳು ಜಾರಿಗೆ ಬಂದಿತ್ತು. ಹೀಗಾಗಿ ಅನಿವಾರ್ಯವಾಗಿ ಬಿಗ್ ಬಾಸ್ ಶೋ ಸ್ಥಗಿತಕೊಂಡಿತ್ತು. ಕೋವಿಡ್ ನಿಯಮ ಉಲ್ಲಂಘಿಸಿದ ಗಂಭೀರ ಆರೋಪವೂ ಬಿಗ್ ಬಾಸ್ ಕನ್ನಡ ಶೋ ಮೇಲೆ ಕೇಳಿಬಂದಿತ್ತು. ಸೂಚನೆ ಹಾಗೂ ಎಚ್ಚರಿಕೆ ಬಳಿಕ ಬಿಗ್ ಬಾಸ್ 8ನೇ ಆವೃತ್ತಿ ಅರ್ಧಕ್ಕೆ ಸ್ಥಗಿತಗೊಂಡಿತ್ತು.
ಬಿಗ್ ಬಾಸ್ 8ನೇ ಆವೃತ್ತಿ ಅತೀ ಜನಪ್ರಿಯ ರಿಯಾಲಿಟಿ ಶೋ ಆಗಿತ್ತು. ಕಾರಣ ಈ ಆವೃತ್ತಿಯಲ್ಲಿ ಘಾಟನುಘಟಿ ಸ್ಪರ್ಧಿಗಳು ಮನೆಯೊಳಗೆ ಸೇರಿದ್ದರು. ಕಾಮಿಡಿ ನಟ ಮಂಜು ಪಾವಗಡ, ಬೈಕ್ ರೇಸರ್ ಅರವಿಂದ್, ಸ್ಯಾಂಡಲ್‌ವುಡ್ ನಟಿ ಶುಭಾ ಪೂಂಜಾ, ನಟಿ ದಿವ್ಯಾ ಉರುಡುಗ, ಶಮಂತ ಗೌಡ, ಹಿರಿಯ ನಟ ಶಂಕರ್ ಅಶ್ವಥ್, ನಟಿ ನಿಧಿ ಸುಬ್ಬಯ್ಯ ಸೇರಿದಂತೆ ಪ್ರಮುಖರು ಈ ಆವೃತ್ತಿಯಲ್ಲಿ ಸ್ಪರ್ಧಿಗಳಾಗಿದ್ದರು. ಕೋವಿಡ್ ಮುಗಿದು ಮತ್ತೆ ಸಹಜ ಸ್ಥಿತಿಗೆ ಮರಳಿದ ಬಳಿಕ ಕನ್ನಡ ಬಿಗ್ ಬಾಸ್ 8ನೇ ಆವತ್ತಿ ಮತ್ತೆ ಆರಂಭಗೊಂಡಿತ್ತು. 12ನೇ ಆವೃತ್ತಿಯಲ್ಲಿ ಮಂಜು ಪಾವಗಡ ಟ್ರೋಫಿ ಗೆದ್ದಿದ್ದರು.
ಬಿಗ್ ಬಾಸ್ 12ನೇ ಆವೃತ್ತಿ ಆರಂಭಗೊಂಡು 9 ದಿನಗಳು ಉರುಳಿದೆ. ಇದರ ಬೆನ್ನಲ್ಲೇ ಬಿಗ್ ಬಾಸ್ ಮನೆ ಗೇಟ್‌ಗೆ ಬೀಗ ಬಿದ್ದಿದೆ. ಇದೀಗ ಬಿಗ್ ಬಾಸ್ ಮನೆಯ ಪ್ರಮುಖ ಬಾಗಿಲು ತೆರೆಯುವಂತೆ ಅಧಿಕಾರಿಗಳು ಆಯೋಜಕರಿಗೆ ಸೂಚಿಸಿದ್ದಾರೆ. ಆದರೆ ಆಯೋಜಕರು ಮನೆ ಬಾಗಿಲು ತೆರೆಯಲು ನಿರಾಕರಿಸಿದ್ದಾರೆ. ಹೀಗಾಗಿ ವಾಗ್ವಾದಗಳು ನಡೆಯುತ್ತಿದೆ. ಇತ್ತ ಪೊಲೀಸರು, ಮನೆಯ ಬಾಗಿಲು ತೆರೆಯದಿದ್ದರೆ, ಪರಿಣಾಮ ನೆಟ್ಟಗಿರುವುದಿಲ್ಲ ಎಂದು ಸೂಚಿಸಿದ್ದಾರೆ. ಮನೆಯೊಳಗೆ ಪ್ರವೇಶಿಸಿ ಎಲ್ಲರನ್ನೂ ಹೊರಕ್ಕೆ ಕಳುಹಿಸಲು ಪೊಲೀಸರು ಹಾಗೂ ಅಧಿಕಾರಿಗಳು ಮುಂದಾಗಿದ್ದಾರೆ.
ರಾಮನಗರ ಜಿಲ್ಲಾಧಿಕಾರಿ ತೇಜಸ್ವಿನಿ ನೇತೃತ್ವದಲ್ಲಿ ಅಧಿಕಾರಿಗಳು ಎಂಟ್ರಿಕೊಟ್ಟಿದ್ದಾರೆ. ಅಧಿಕಾರಿಗಳು ಈಗಾಗಲೇ ಮುಖ್ಯಗೇಟಿಗೆ ಬೀಗ ಜಡಿದಿದ್ದಾರೆ. ಇಡೀ ಬಿಗ್ ಬಾಸ್ ಮನೆಗೆ ಬೀಗ ಜಡಿಯಲು ಅಧಿಕಾರಿಗಳು ಮುಂದಾಗಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.