ನಿನ್ನೆ ಹುಟ್ಟುಹಬ್ಬ ಆಚರಿಸಿಕೊಂಡ ಕಿರುತೆರೆ ನಟ ಸಿದ್ಧರಾಜ್ ಕಲ್ಯಾಣ್ಕರ್‌ ನಿಧನ

By Suvarna News  |  First Published Sep 8, 2020, 10:12 AM IST

ಹಿರಿಯ ಕಲಾವಿದ ಸಿದ್ಧರಾಜ್ ಕಲ್ಯಾಣ್ಕರ್‌ (60) ಹೃಧಯಾಘಾತದಿಂದ ನಿಧನರಾಗಿದ್ದಾರೆ.


ಕನ್ನಡ ಕಿರುತೆರೆ ಹಾಗೂ ಬೆಳ್ಳಿ ತೆರೆಯಲ್ಲಿ ಅಭಿನಯಿಸುತ್ತಿದ್ದ ಹಿರಿಯ ಕಲಾವಿದ ಸಿದ್ದರಾಜ್‌ ಕಲ್ಯಾಣ್ಕರ್‌ ತಡರಾತ್ರಿ ಹೃದಯಾಘಾತದಿಂದ ಕೊನೆ ಉಸಿರೆಳೆದಿದ್ದಾರೆ.

ಎದೆ ನೋವು ಕಾಣಿಸಿಕೊಂಡ ಕೆಲವೇ ನಿಮಿಷಗಳಲ್ಲಿ ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಆಸ್ಪತ್ರೆಯಲ್ಲಿಯೇ ಕೊನೆ ಉಸಿರೆಳೆದರು.

Tap to resize

Latest Videos

ಸುಮಾರು 75ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿರುವ ಕಲ್ಯಾಣ್ಕರ್ ಹೆಚ್ಚಾಗಿ ಪೋಷಕರ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ನಿನ್ನೆ (ಸೆಪ್ಟೆಂಬರ್ 7)ರಂದು ಪ್ರೇಮಲೋಕ ಧಾರಾವಾಹಿ ಶೂಟಿಂಗ್ ಸೆಟ್‌ನಲ್ಲಿ 60ನೇ ಹುಟ್ಟು ಹಬ್ಬ ಆಚರಿಸಿಕೊಂಡಿದ್ದರು. ತಮ್ಮ ಫೇಸ್‌ಬುಕ್‌ ಖಾತೆಯಲ್ಲಿ ಫೋಟೋ ಅಪ್ಲೋಡ್‌ ಸಹ ಮಾಡಿದ್ದರು. ಅಲ್ಲದೇ ತಂಡದ ಎಲ್ಲಾ ಸಹ ಕಲಾವಿದರು ಸ್ಟೇಟಸ್‌ನಲ್ಲಿ ಶುಭ ಕೋರಿದ್ದರು, ಇಂದು ಈ ಹಿರಿಯ ಸ್ನೇಹ ಜೀವ ನಟನ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಎಲ್ಲ ಸಹ ಕಲಾವಿದರೂ ಶಾಕ್ ಆಗಿದ್ದಾರೆ.

ಖ್ಯಾತ ಹಾಸ್ಯ ನಟ ಜಯಪ್ರಕಾಶ್‌ ರೆಡ್ಡಿ ಇನ್ನಿಲ್ಲ 

ಮೂಲತಃ ಹುಬ್ಬಳಿಯವರಾದ ಸಿದ್ಧರಾಜ್‌, ನೀನಾಸಂನಲ್ಲಿ ನಟನ ತರಬೇತಿ ಪಡೆದುಕೊಂಡು, ಸಿನಿಮಾ ಹಾಗೂ ಧಾರಾವಾಹಿಗಳಲ್ಲಿ ಅಭಿನಯಿಸುತ್ತಿದ್ದರು. 

ನಟ ಬೀಸು ಸುರೇಶ್‌ ಗೆಳೆಯ ಸಿದ್ಧರಾಜ್‌ ಬಗ್ಗೆ ಫೇಸ್‌ಬುಕ್‌ನಲ್ಲಿ ಭಾವನಾತ್ಮಕ ಪೋಸ್ಟ್ ಹಾಕಿದ್ದಾರೆ. 'ನಿನ್ನೆ ಹುಟ್ಟುಹಬ್ಬ ಆಚರಿಸಿಕೊಂಡವನು. ನಿನ್ನೆ ನನ್ನ ಜೊತೆಗೆ ಕೆಲಕಾಲ ಮಾತನಾಡಿ ಸಂಭ್ರಮಿಸಿದವನು. ನಿನ್ನಯೂ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದವನು. ನಿನ್ನ ರಾತ್ರಿ ನಮ್ಮೆಲ್ಲರನ್ನೂ ಅಗಲಿದೆ ಎಂದರೆ ನಂಬಲಾಗುತ್ತಿಲ್ಲ. ನನ್ನ ನಿರ್ದೇಶನದ ಮೊದಲ ಧಾರಾವಾಹಿ 'ಹೊಸಹೆಜ್ಜೆ' ಮೂಲಕ ಕಿರುತೆರೆಗೆ ಬಂದವನು ಸಿದ್ದರಾಜ. ಆತನನ್ನು 'ಆಥೆನ್ಸಿನ ಅರ್ಥವಂತ' ನೋಡಿಯೇ  ನನ್ನ ಧಾರಾವಾಹಿಗೆ ಆಹ್ವಾನಿಸಿದ್ದೆ. ಅಲ್ಲಿಂದಾಚೆಗೆ ನನ್ನ ಸಂಸ್ಥೆಯ ಎಲ್ಲಾ ಧಾರಾವಾಹಿಗಳಲ್ಲಿ ಸಿದ್ಧರಾಜ ಅಭಿನಯಿಸಿದ್ದ. ಮೂರು ದಶಗಳ ಗೆಳತನ. ಇಷ್ಟು ಬೇಗ ಮುಗಿಯಿತೆಂದರೆ ಸಂಕಟವಾಗುತ್ತದೆ,' ಎಂದು ಬರೆದುಕೊಂಡಿದ್ದಾರೆ.

 

ಅಗಲಿದ ಈ ಹಿರಿಯ ಚೇತನಕ್ಕೆ ಶಾಂತಿ ಸಿಗಲೆಂದು ಸುವರ್ಣನ್ಯೂಸ್.ಕಾಮ್ ಸಹ ಪ್ರಾರ್ಥಿಸುತ್ತದೆ.

click me!