ವಂಶಿಕಾ ಮಾಸ್ಟರ್ ಆನಂದ್ ವಿಡಿಯೋ ವೈರಲ್. ಅಮ್ಮ-ಅಪ್ಪನ ಬಗ್ಗೆ ಹೇಳಿರುವ ಕಂಪ್ಲೇಂಟ್ ಒಂದಾ, ಎರಡಾ?
ಕಲರ್ಸ್ ಕನ್ನಡದಲ್ಲಿ ಹೊಸ ರಿಯಾಲಿಟಿ ಶೋ ಆರಂಭವಾಗುತ್ತಿದೆ, ಅದುವೇ 'ನನ್ನಮ್ಮ ಸೂಪರ್ ಸ್ಟಾರ್.' ಕಿರುತೆರೆ ಹಾಗೂ ಬೆಳ್ಳಿ ತೆರೆ ಜನಪ್ರಿಯ ನಟ, ನಟಿಯರು ಪುಟ್ಟ ಮಕ್ಕಳು ಮತ್ತು ಅವರ ತಾಯಂದಿರು ಕಾರ್ಯಕ್ರಮದಲ್ಲಿ ಭಾಗಿಯಾಗಿ, ಟಾಸ್ಕ್ ಪೂರೈಸಲಿದ್ದಾರೆ. ಇದುವರೆಗೂ ಟಾಸ್ಕ್ ಬಗ್ಗೆ ತಂಡ ಯಾವುದೇ ಮಾಹಿತಿ ಬಿಟ್ಟು ಕೊಟ್ಟಿಲ್ಲ ಆದರೆ ನವೆಂಬರ್ 28 ಮತ್ತು 29ರಂದು ಅಮ್ಮ-ಮಕ್ಕಳ ಜೋಡಿಯನ್ನು ಪರಿಚಯಿಸಿಕೊಡಲಿದ್ದಾರೆ. ಈ ವೇಳೆ ನಟ ಮಾಸ್ಟರ್ ಆನಂದ್ ಪುತ್ರ ವಂಶಿಕಾ ಎಲ್ಲರ ಗಮನ ಸೆಳೆದಿದ್ದಾಳೆ.
ವೇದಿಕೆ ಮೇಲೆ ಬರುತ್ತಿದ್ದಂತೆ, ವಂಶಿಕಾ ತಮ್ಮ ಪರಿಚಯ ಮಾಡಿಕೊಂಡು ಪೋಷಕ ಮೇಲೆ ಮುದ್ದು, ಮುದ್ದಾಗಿ ದೂರು ನೀಡಿದ್ದಾರೆ. ವಂಶಿಕಾ ಪಟಪಟ ಅಂತ ಮಾತನಾಡಿರುವ ಶೈಲಿ ನೆಟ್ಟಿಗರ ಗಮನ ಸೆಳೆದಿದೆ. 'ನನ್ನ ಹೆಸರು ವಂಶಿಕಾ ಅಂಜನಿ ಕಶ್ಯಪಾ. ಎಲ್ಲರೂ ನನ್ನನ್ನ ವಂಶಿ ಎಂದು ಬರೆಯುತ್ತಾರೆ. ನನಗೆ ಇಷ್ಟು ದೊಡ್ಡ ಹೆಸರು ಬೇಕಾ? ಹೆಸರು ಮಾತ್ರ ಇಷ್ಟುದ್ದ ಇಟ್ಟಿದ್ದಾರೆ. ಆದರೆ ಕೂದಲು ಮಾತ್ರ ಶಾರ್ಟ್ ಆಗಿ ಕಟ್ ಮಾಡಿಸಿದ್ದಾರೆ,' ಎಂದು ವಂಶಿ ಹೇಳಿದ್ದಾರೆ. ಬಹುಶಃ ಅಮ್ಮ ತಲೆ ಬಾಚುವುದಕ್ಕೆ ಕಷ್ಟವೆಂದು ಕಟ್ ಮಾಡ್ಸಿದ್ದಾರೆ ಅನ್ಸುತ್ತೆ ಎಂದು ಸೃಜನ್ ಲೋಕೇಶ್ ಪ್ರತಿಕ್ರಿಯೆ ನೀಡಿದ್ದಾರೆ. ಅದಕ್ಕೂ ಉತ್ತರಿಸಿದ ವಂಶಿ, 'ಇಲ್ಲ ಬೆಳೆಯುತ್ತೆ ಅಂತ ಕಟ್ ಮಾಡ್ತಿದ್ದಾರೆ. ಆದರೆ ಯಾವಾಗ ಬೆಳೆಯುತ್ತೋ ಗೊತ್ತಿಲ್ಲ,' ಎಂದಿದ್ದಾಳೆ.
'ನನ್ನ ಮತ್ತು ನನ್ನ ಅಣ್ಣಯ್ಯನ ಪಕ್ಕದ ರೂಮಿನಲ್ಲಿ ಅಪ್ಪ, ಅಮ್ಮ ಮಲಗಿಸಿ ಅವರು ಕೆಳಗಡೆ ವಟವಟ ಅಂತ ಮಾತನಾಡುತ್ತಿರುತ್ತಾರೆ. ನಮಗೆ ನಿದ್ರೆಯೇ ಬರೋಲ್ಲ. ಏನೆಂದರೆ ನಾನು ಟಿವಿ ನೋಡ್ಬೇಕಾದ್ರೆ ಅಪ್ಪ ಶ್...ಶ್.. ಅಂತ ಹೇಳ್ತಾರೆ. ಟಿವಿನಲ್ಲೂ ಅವ್ರೇ ಮಾತನಾಡುತ್ತಾರೆ. ಮನೆಯಲ್ಲೂ ಅವರೇ ಮಾತನಾಡುತ್ತಾರೆ, ಆಚೆಯೂ ಅವರೇ ಮಾತನಾಡುತ್ತಾರೆ. ಎಲ್ಲ ಕಡೆಯೂ ಅವರೇ ಮಾತನಾಡುತ್ತಾರೆಂದೆರ, ನಾವು ಯಾವಾಗ ಮಾತನಾಡುವುದು ಅಂತ? ಎಂದು ತೀರ್ಪುಗಾರಗಿಗೇ ವಂಶಿಕಾ ಪ್ರಶ್ನೆ ಕೇಳಿದ್ದಾಳೆ.
'ನಮ್ಮ ಅಪ್ಪ, ಅಮ್ಮನ ಫ್ರೆಂಡ್ಸ್ ಮನೆಗೆ ಬಂದ್ರೆ ವಂಶಿ ABCD ಹೇಳು, ವಂಶಿ ಡ್ಯಾನ್ಸ್ ಮಾಡು ಅಂತ ಹೇಳ್ತಾರೆ. ನನ್ನ ಫ್ರೆಂಡ್ಸ್ ಬಂದ್ರೆ ನನ್ನ ಅಮ್ಮ ABCD ಹೇಳ್ತಾರಾ? ಅಪ್ಪ ಡೈಲಾಗ್ ಹೇಳ್ತಾರಾ? ಅವ್ರು ಹೇಳಲ್ಲ ಅಂದ್ರೆ ನಾನೂ ಹೇಳೋಲ್ಲ. ಯಾಕೆ ಹೇಳಬೇಕು? ಅದೇ ಮತ್ತೆ,' ಎನ್ನುವುದು ವಂಶಿಯ ಆರೋಪ.
Reality Show: ನನ್ನಮ್ಮ ಸೂಪರ್‌ಸ್ಟಾರ್‌ಗೆ ಅನು ಪ್ರಭಾಕರ್ ಜಡ್ಜ್'ನಮ್ಮ ಅಪ್ಪ ಕಾಸು ಕೊಡ್ತಾ ಇರ್ತಾರೆ. ನನ್ನ ಅಮ್ಮ ಜೋಡ್ಸಿ ಜೋಡ್ಸಿ ಇಡ್ತಾರೆ, ಪಕ್ಕದ ಮನೆ ಆಂಟಿ ಬಂದು ದುಡ್ಡು ಕೊಡಿ ಅಂದ್ರೆ, ನನ್ನ ಅಮ್ಮ ಹೇಳ್ತಾರೆ ಅಯ್ಯೋ ನಮ್ಮ ಹತ್ರ ಡುದ್ದೇ ಇಲ್ಲ ಅಂತ. ಅವ್ರು ಮಾತ್ರ ಸುಳ್ಳು ಹೇಳ್ಬೋದಾ? ನಾವು ಸುಳ್ಳು ಹೇಳಬಾರದಾ? ಎಂದು ಪ್ರಶ್ನೆ ಮಾಡಿದ್ದಾಳೆ. ನೀವು ಸುಳ್ಳು ಹೇಳಲ್ವಾವೆಂದು ಎಂದು ತಾರಾ ಅವರು ಕೇಳಿದ್ದಕ್ಕೆ, ಇಲ್ಲ ನಾನು ಒಂದೊಂದು ಸಲ ಮಾತ್ರ ಹೇಳ್ತೀನಿ, ಅಂತ ಉತ್ತರಿಸಿದ್ದಾಳೆ.
'ಎಲ್ಲರೂ ನನ್ನನ್ನ ಮಾಸ್ಟರ್ ಅನಂದ್ ಮಗಳು, ಮಾಸ್ಟರ್ ಆನಂದ್ ಮಗಳು ಅಂತ ಹೇಳುತ್ತಾರೆ. ಇನ್ಮೇಲೆ ನನ್ನ ಹೆಸರನ್ನೇ ಮಾತ್ರ ಕರೆಯಬೇಕು. ವಂಶಿಕಾ ಆನಂದ್ ಕಶ್ಯಪಾ ಅಂತ,' ಎಂದು ಹೇಳಿ ನೆಟ್ಟಿಗರ ಗಮನ ಸೆಳೆದಿದ್ದಾಳೆ.
ಈ ರಿಯಾಲಿಟಿ ಶೋನಾ ವಂಶಿಕಾ ಪ್ರೋಮೋ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಎಲ್ಲಿ ನೋಡಿದರೂ ಇವಳದ್ದೇ ಮಾತು. ಅಬ್ಬಾ, ಅದೆಂಥ ಮಾತನಾಡುತ್ತಾಳೆ, ಈ ಬಾಲೆ. ಅಪ್ಪ ಮಾಸ್ಟರ್ ಆನಂದ್ ಅವರನ್ನೇ ಮೀರಿಸುತ್ತಾಳೆ ಎನ್ನುತ್ತಿದ್ದಾರೆ ನೆಟ್ಟಿಗರು. ಗೌರಿ-ಗಣೇಶ ಚಿತ್ರದಲ್ಲಿ ಆನಂದ್ ತಮ್ಮ ಮಾತಿನ ಪ್ರತಿಭೆಯಿಂದಲೇ ಕನ್ನಡಿಗರ ಹೃದಯದಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದರು. ಇದೀಗ ಮಗಳು ಅಪ್ಪನ ಹಾದಿಯಲ್ಲಿಯೇ ಮಗಳೂ ನಡೆಯುತ್ತಿದ್ದಾಳೆ.