IPL 2022: ಲಖನೌಗೆ ಶರಣಾದ ಚೆನ್ನೈ ಸೂಪರ್‌ ಕಿಂಗ್ಸ್‌, ರಾಹುಲ್‌ ಪಡೆಗೆ ಮೊದಲ ಗೆಲುವು

Published : Apr 01, 2022, 07:30 AM ISTUpdated : Apr 01, 2022, 09:12 AM IST
IPL 2022: ಲಖನೌಗೆ ಶರಣಾದ ಚೆನ್ನೈ ಸೂಪರ್‌ ಕಿಂಗ್ಸ್‌, ರಾಹುಲ್‌ ಪಡೆಗೆ ಮೊದಲ ಗೆಲುವು

ಸಾರಾಂಶ

* 15ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಮೊದಲ ಗೆಲುವು ದಾಖಲಿಸಿದ ಲಖನೌ ಸೂಪರ್‌ಜೈಂಟ್ಸ್‌ * ಐಪಿಎಲ್‌ ಇತಿಹಾಸದಲ್ಲಿ ಮೊದಲ ಬಾರಿಗೆ ಮೊದಲೆರಡು ಪಂದ್ಯಗಳನ್ನು ಸೋತ ಚೆನ್ನೈ ಸೂಪರ್ ಕಿಂಗ್ಸ್‌ * ಕ್ವಿಂಟನ್ ಡಿ ಕಾಕ್, ಎವಿನ್ ಲೆವಿಸ್ ಸ್ಪೋಟಕ ಆಟಕ್ಕೆ ಬೆಚ್ಚಿಬಿದ್ದ ಸಿಎಸ್‌ಕೆ

ಮುಂಬೈ(ಏ.01): ಟಿ20 ತಜ್ಞರನ್ನೆಲ್ಲಾ ಒಟ್ಟುಗೂಡಿಸಿ ತಂಡ ಕಟ್ಟಿರುವ ಲಖನೌ ಸೂಪರ್‌ಜೈಂಟ್ಸ್‌ (Lucknow Supergiants) ಸ್ವಲ್ಪ ತಡವಾದರೂ ತನ್ನ ಸಾಮರ್ಥ್ಯವನ್ನು ತಾನಾಡಿದ 2ನೇ ಪಂದ್ಯದಲ್ಲಿ ಪ್ರದರ್ಶಿಸಿದೆ. ಹಾಲಿ ಚಾಂಪಿಯನ್‌ ಚೆನ್ನೈ ಸೂಪರ್‌ ಕಿಂಗ್ಸ್‌ (Chennai Super Kings) ನೀಡಿದ 211 ರನ್‌ಗಳ ಬೃಹತ್‌ ಗುರಿಯನ್ನು ಯಶಸ್ವಿಯಾಗಿ ಬೆನ್ನತ್ತಿ 6 ವಿಕೆಟ್‌ಗಳ ಗೆಲುವು ಸಂಪಾದಿಸುವುದರೊಂದಿಗೆ ಐಪಿಎಲ್‌ನಲ್ಲಿ ಮೊದಲ ಬಾರಿಗೆ ಗೆಲುವಿನ ಸಂಭ್ರಮ ಆಚರಿಸಿದೆ. ಚೆನ್ನೈ ಐಪಿಎಲ್‌ ಇತಿಹಾಸದಲ್ಲೇ ಮೊದಲ ಬಾರಿಗೆ ಆವೃತ್ತಿಯೊಂದರಲ್ಲಿ ಮೊದಲೆರಡು ಪಂದ್ಯಗಳನ್ನು ಸೋತು ನಿರಾಸೆ ಅನುಭವಿಸಿದೆ.

ಅನುಭವಿ ಬೌಲರ್‌ಗಳ ಕೊರತೆ ಎದುರಿಸುತ್ತಿರುವ ಚೆನ್ನೈ, ಲಖನೌ ಇನ್ನಿಂಗ್ಸ್‌ನ 18ನೇ ಓವರ್‌ ಮುಕ್ತಾಯದ ವರೆಗೂ ಗೆಲ್ಲುವ ನೆಚ್ಚಿನ ತಂಡ ಎನಿಸಿತ್ತು. ಆದರೆ 19ನೇ ಓವರಲ್ಲಿ ಶಿವಂ ದುಬೆಗೆ (Shivam Dube) ಬೌಲಿಂಗ್‌ ನೀಡಿ ಅಚ್ಚರಿ ಮೂಡಿಸಿದ ಚೆನ್ನೈ, ತನ್ನ ನಿರ್ಧಾರಕ್ಕೆ ತಕ್ಕ ಬೆಲೆ ತೆರಬೇಕಾಯಿತು. ಆಯುಷ್‌ ಬದೋನಿ (Ayush Badoni) ಹಾಗೂ ಎವಿನ್‌ ಲೆವಿಸ್‌ರ ಅಬ್ಬರಕ್ಕೆ ಮಣಿದ ದುಬೆ ಬರೋಬ್ಬರಿ 25 ರನ್‌ ಚಚ್ಚಿಸಿಕೊಂಡರು. ಐಪಿಎಲ್‌ಗೆ ಪಾದಾರ್ಪಣೆ ಮಾಡಿದ ಪಂದ್ಯದಲ್ಲೇ ಇನ್ನಿಂಗ್ಸ್‌ನ ಕೊನೆ ಓವರ್‌ ಬೌಲ್‌ ಮಾಡಿ ತಂಡವನ್ನು ಸೋಲಿನಿಂದ ಪಾರು ಮಾಡಬೇಕಾದ ಒತ್ತಡಕ್ಕೆ ಸಿಲುಕಿದ ಮುಖೇಶ್‌ ಚೌಧರಿ, ಯಶಸ್ಸು ಕಾಣಲಿಲ್ಲ. ಇನ್ನೂ 3 ಎಸೆತ ಬಾಕಿ ಇದ್ದಂತೆಯೇ ಲಖನೌ ಗೆಲುವು ಪಡೆಯಿತು.

ತಂಡ ದೊಡ್ಡ ಮೊತ್ತ ಬೆನ್ನತ್ತುವ ಸಾಹಸಕ್ಕೆ ಕೈಹಾಕಲು ಆರಂಭಿಕ ವಿಕೆಟ್‌ಗೆ ಕೆ.ಎಲ್‌.ರಾಹುಲ್‌ (KL Rahul) ಹಾಗೂ ಕ್ವಿಂಟನ್‌ ಡಿ ಕಾಕ್‌ 10.2 ಓವರಲ್ಲಿ 99 ರನ್‌ ಜೊತೆಯಾಟವಾಡಿದ್ದು ಕಾರಣ. ರಾಹುಲ್‌ 40, ಡಿ ಕಾಕ್‌ 61 ರನ್‌ ಸಿಡಿಸಿದ ಬಳಿಕ, ಪಂದ್ಯವನ್ನು ಫಿನಿಶ್‌ ಮಾಡುವ ಹೊಣೆ ಎವಿನ್‌ ಲೆವಿಸ್‌ ಹೆಗಲಿಗೆ ಬಿತ್ತು. 23 ಎಸೆತಗಳಲ್ಲಿ 6 ಬೌಂಡರಿ, 3 ಸಿಕ್ಸರ್‌ನೊಂದಿಗೆ ಔಟಾಗದೆ 55 ರನ್‌ ಸಿಡಿಸಿದ ಲೆವಿಸ್‌ ತಮ್ಮ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿಭಾಯಿಸಿದರೆ, ಆಕಾರ ಸಣ್ಣದಾದರೂ ದೊಡ್ಡ ಸಿಕ್ಸರ್‌ಗಳನ್ನು ಸಿಡಿಸಿ ಎಲ್ಲರು ಹುಬ್ಬೇರಿಸುವಂತೆ ಮಾಡುತ್ತಿರುವ 22 ವರ್ಷದ ಬದೋನಿ 9 ಎಸೆತದಲ್ಲಿ 2 ಸಿಕ್ಸರ್‌ನೊಂದಿಗೆ 19 ರನ್‌ ಚಚ್ಚಿದರು.

ಉತ್ತಪ್ಪ ಸ್ಫೋಟಕ ಆಟ: ಇದಕ್ಕೂ ಮುನ್ನ ರಾಬಿನ್‌ ಉತ್ತಪ್ಪ ತಮ್ಮ ಹಳೆಯ ಆಟವನ್ನು ನೆನಪಿಸಿದರು. 27 ಎಸೆತಗಳಲ್ಲಿ 50 ರನ್‌ ಬಾರಿಸಿ ತಂಡಕ್ಕೆ ಭರ್ಜರಿ ಆರಂಭ ಒದಗಿಸಿದರು. ಮೋಯಿನ್‌ ಅಲಿ 35, ಶಿವಂ ದುಬೆ 49, ಅಂಬಟಿ ರಾಯುಡು 27 ರನ್‌ ಕೊಡುಗೆ ನೀಡಿದರು. ರವೀಂದ್ರ ಜಡೇಜಾ (Ravindra Jadeja), ಎಂ ಎಸ್ ಧೋನಿ (MS Dhoni) ಬಿರುಸಿನ ಆಟದ ನೆರವಿನಿಂದ ತಂಡ 200 ರನ್‌ ಗಡಿ ದಾಟಿತು.

ಐಪಿಎಲ್‌ನಲ್ಲಿ ಗರಿಷ್ಠ ವಿಕೆಟ್‌ ಸರದಾರನಾದ ಡ್ವೇನ್‌ ಬ್ರಾವೋ

ಐಪಿಎಲ್‌ನಲ್ಲಿ ಅತಿಹೆಚ್ಚು ವಿಕೆಟ್‌ ಕಬಳಿಸಿದ ಬೌಲರ್‌ ಎನ್ನುವ ದಾಖಲೆಯನ್ನು ಡ್ವೇನ್‌ ಬ್ರಾವೋ (Dwayne Bravo) ಬರೆದಿದ್ದಾರೆ. ಲಸಿತ್‌ ಮಾಲಿಂಗ (Lasith Malinga) ಅವರ 170 ವಿಕೆಟ್‌ ದಾಖಲೆಯನ್ನು ಬ್ರಾವೋ ಗುರುವಾರ ಲಖನೌ ವಿರುದ್ಧದ ಪಂದ್ಯದಲ್ಲಿ ಮುರಿದರು. ಬ್ರಾವೋ ಸದ್ಯ 153 ಪಂದ್ಯಗಳಲ್ಲಿ 171 ವಿಕೆಟ್‌ ಪಡೆದು ಮೊದಲ ಸ್ಥಾನದಲ್ಲಿದ್ದಾರೆ. ಮಾಲಿಂಗ 122 ಪಂದ್ಯಗಳಲ್ಲಿ 170 ವಿಕೆಟ್‌ ಪಡೆದಿದ್ದಾರೆ. ಅಮಿತ್‌ ಮಿಶ್ರಾ (Amith Mishra) 166 ವಿಕೆಟ್‌ಗಳೊಂದಿಗೆ 3ನೇ ಸ್ಥಾನದಲ್ಲಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Amruthadhaare Serial: ಗೌತಮ್-ಭೂಮಿಕಾ ಜೀವನ ಸರಿಮಾಡೋಕೆ ಯಾರು ಬರಬೇಕೋ ಅವ್ರು ಬಂದ್ರು; ಕೇಡಿಗಳಿಗೆ ಮಾರಿಹಬ್ಬ
Namratha Gowda ಪ್ರೀತಿಯಲ್ಲಿದ್ದಾರಾ? ಆ ಕಪ್ಪು ಬ್ಯಾಂಡ್‌ ಕೊಟ್ಟ ಸುಳಿವಿನ ಬಗ್ಗೆ Karthik Mahesh ಏನಂದ್ರು?