ಬಿಗ್‌ಬಾಸ್ ಫಿನಾಲೆ ಹತ್ತಿರ ಬರುತ್ತಿರುವ ಹಾಗೆ ಸ್ಪರ್ಧಿಗಳ ಬಣ್ಣ ಕಳಚೋದಕ್ಕೆ ಶುರುವಾಗಿದೆ. ಸಂಬಂಧ ಗಿಬಂಧ ಎಲ್ಲ ಬರೀ ನೀತಿಪಾಠ ಅಷ್ಟೇನಾ ಅಂತಿದ್ದಾರೆ ವೀಕ್ಷಕರು.
ನಮ್ಮ ಲೈಫು ನಾರ್ಮಲ್ಲಾಗಿದ್ದರೆ ಎಲ್ಲವೂ ಶುಗರ್ ಕೋಟೆಡ್ ಆಗಿ ಚೆನ್ನಾಗೇ ಇರುತ್ತೆ. ಆದರೆ ಯಾವಾಗ ಪರಿಸ್ಥಿತಿ ಕೈ ಮೀರಿ ಹೋಗುತ್ತೋ ಆಗ ಎದುರಿರೋ ವ್ಯಕ್ತಿಯ ನಿಜ ರೂಪ ಏನು ಅನ್ನೋದು ರಿವೀಲ್ ಆಗುತ್ತೆ. ಇದನ್ನು ಬಿಗ್‌ಬಾಸ್ ಶೋ ಸಖತ್ತಾಗಿಯೇ ನಮ್ಮೆದುರು ತೋರಿಸಿದೆ. ನಮ್ಮ ಲೈಫನ್ನು ನಮ್ಮ ಕಣ್ಣೆದುರಿಗೇ ತಂದು ನಿಲ್ಲಿಸಿ, ನಮಗೆ ನಾವೇ ಮುಜುಗರ ಪಡೋ ಹಾಗೆ ಮಾಡಿದೆ. ಸಂಬಂಧಗಳು, ಸ್ನೇಹ, ಪ್ರೀತಿ ಎಲ್ಲ ಒಂದು ಹಂತದವರೆಗೆ ಮಾತ್ರ. ಆದರೆ ಗೆಲುವಿನ ವಿಚಾರಕ್ಕೆ ಬಂದರೆ ಯಾವ ಸಂಬಂಧನೂ, ಯಾವ ಮಾನವೀಯತೆನೂ ಮುಖ್ಯ ಆಗಲ್ಲ ಅನ್ನೋದನ್ನು ಬಿಗ್ ಬಾಸ್ ತೋರಿಸಿಕೊಟ್ಟಿದೆ.
'ಬಿಗ್ ಬಾಸ್ ಕನ್ನಡ 10’ ರಿಯಾಲಿಟಿ ಶೋ ದಿನೇ ದಿನೇ ರಂಗೇರ್ತಾನೇ ಇದೆ. ಸದ್ಯ 14ನೇ ವಾರದಲ್ಲಿ ಸ್ಪರ್ಧಿಗಳ ನಡುವೆ ಜಟಾಪಟಿ ಶುರುವಾಗಿದೆ. ಬಿಗ್‌ಬಾಸ್ ಮನೆಗೆ ಬಂದಮೇಲೆ ಗೆಲುವೇ ಎಲ್ಲಾ, ಸಂಬಂಧ ಗಿಬಂಧ ಏನಿಲ್ಲ ಅನ್ನೋದನ್ನು ಇಲ್ಲಿ ಸ್ಪರ್ಧಿಗಳು ಮತ್ತೊಮ್ಮೆ ಪ್ರೂವ್ ಮಾಡಿದ್ದಾರೆ. ಎಲ್ರಿಗೂ ಗೊತ್ತು, ಶುರುವಿಂದಲೂ ಸಂಗೀತಾ ಶೃಂಗೇರಿ ಸ್ಟ್ರಾಂಗ್ ಕಂಟೆಸ್ಟೆಂಟ್. ಇವರೇ ಬಿಗ್‌ಬಾಸ್ ವಿನ್ನರ್ ಆಗಬಹುದು ಎಂಬ ಮಾತು ಕೇಳಿ ಬರುತ್ತಿದೆ. ಸಂಗೀತಾ ಶುರುವಿಂದಲೂ ಸಪೋರ್ಟ್ ಮಾಡಿಕೊಂಡು ಬಂದಿರೋದು ಡ್ರೋನ್ ಪ್ರತಾಪ್‌ಗೆ. ಪ್ರತಾಪ್ ಸಂಕಷ್ಟಕ್ಕೆ ಬಿದ್ದಾಗಲೆಲ್ಲ ಅಕ್ಕನಂತೆ ಬೆಂಬಲಕ್ಕೆ ನಿಂತು ಆತನನ್ನು ಸಪೋರ್ಟ್ ಮಾಡಿದ್ದು ಸಂಗೀತಾ. ಆದರೆ ಈಗ ದೀದಿಗೆ ಚಮಕ್ ಕೊಡೋ ಮೂಲಕ ದೊಡ್ಡ ಮನೆಯಲ್ಲಿ ಆಟನೇ ಮುಖ್ಯ. ಸಂಬಂಧ ಗಿಬಂಧಕ್ಕೆಲ್ಲ ಯಾವ ಬೆಲೆನೂ ಇಲ್ಲ ಅನ್ನೋದನ್ನು ಡ್ರೋನ್ ಪ್ರತಾಪ್ ಪ್ರದರ್ಶಿಸಿದ್ದಾರೆ.
ಸಂಗೀತಾಗೆ ಪ್ರತಾಪ್ ಬಿಗ್ ಶಾಕ್! ಅಕ್ಕ-ತಮ್ಮನ ಸಂಬಂಧ ಮುಗಿದೇ ಹೋಯ್ತಾ? ಯಾರಿಗೆ ಎಷ್ಟು ಅಂಕ?
ಸದ್ಯ ಬಿಗ್ಬಾಸ್‌ನಲ್ಲಿ ಟಿಕೆಟ್ ಟು ಫಿನಾಲೆ ಟಾಸ್ಕ್ ನಡೆಯುತ್ತಿದೆ. ಇದರಲ್ಲಿ ಅತೀ ಹೆಚ್ಚು ಪಾಯಿಂಟ್ ಪಡೆದು ಗೆಲ್ಲುವವರು ಸೀದಾ ಫಿನಾಲೆ ವಾರಕ್ಕೆ ಲಗ್ಗೆ ಇಡುತ್ತಾರೆ. ಪಾಯಿಂಟ್ ಪಟ್ಟಿಯಲ್ಲಿ 280 ಪಾಯಿಂಟ್‌ಗಳ ಮುಖಾಂತರ ಡ್ರೋನ್ ಪ್ರತಾಪ್ ಲೀಡಿಂಗ್‌ನಲ್ಲಿದ್ದಾರೆ. 260 ಪಾಯಿಂಟ್‌ಗಳೊಂದಿಗೆ ಸಂಗೀತಾ ಎರಡನೇ ಸ್ಥಾನದಲ್ಲಿದ್ದಾರೆ. ನಿರ್ಣಾಯಕ ಹಂತದ ಟಾಸ್ಕ್‌ನಲ್ಲಿ ಪಾಯಿಂಟ್ ಲೆಕ್ಕಾಚಾರ ಮಾಡಿಕೊಂಡು ತಮ್ಮ ನೆಚ್ಚಿನ ದೀದಿ ಸಂಗೀತಾ ಅವರನ್ನ ಡ್ರೋನ್ ಪ್ರತಾಪ್ ಹೊರಗಿಟ್ಟಿದ್ದಾರೆ. ಆಟ ಶುರುವಾಗುವ ಮುನ್ನವೇ 'ಪ್ರತಾಪ್ ಗೆಲ್ಲದಿದ್ದರೆ ನಾನು ಲೀಡ್‌ಗೆ ಬರ್ತೀನಿ' ಎಂದು ಸಂಗೀತಾ ಹೇಳಿದ್ದಾರೆ. ತಮಗೆ ಅಧಿಕಾರ ಲಭಿಸಿದಾಗ, ಪಾಯಿಂಟ್ ಪಟ್ಟಿಯಲ್ಲಿ ಲೀಡಿಂಗ್ ಕಾಯ್ದುಕೊಳ್ಳಲು ‘ಸಂಗೀತಾ ಅವರನ್ನ ಹೊರಗೆ ಇಡುತ್ತೇನೆ. ಸಮಯೋಚಿತ ನಿರ್ಧಾರ ತಗೊಂಡು ಹೊರಗೆ ಇಡಲಿಲ್ಲ ಅಂದ್ರೆ ಇನ್ಯಾವಾಗಲೂ ಸಾಧ್ಯವಿಲ್ಲ' ಎಂದಿದ್ದಾರೆ ಡ್ರೋನ್ ಪ್ರತಾಪ್.
ಪ್ರತಾಪ್ ಅವರ ಈ ನಡೆ ಸಂಗೀತಾಗೆ ದೊಡ್ಡ ಶಾಕ್ (shock) ನೀಡಿದೆ. ಬಹಳ ಬೇಸರಗೊಂಡಿರುವ ಸಂಗೀತಾ ' ನಾನು ಅವನನ್ನ ಸಪೋರ್ಟ್ (support) ಮಾಡ್ತೀನಿ. ಯಾಕಂದ್ರೆ ನಾನು ದಡ್ಡಿ. ಇಲ್ಲಿಗೆ ಅವನಿಗೆ ನನ್ನ ಸಪೋರ್ಟ್ ಮುಗಿಯುತ್ತೆ' ಅಂತ ಹೇಳಿದ್ದಾರೆ. ಹಾಗಾದರೆ, ಸಂಗೀತಾ - ಡ್ರೋನ್ ಪ್ರತಾಪ್ ನಡುವಿನ ಅಕ್ಕ-ತಮ್ಮನ ಅನುಬಂಧ ಮುರಿದುಬಿತ್ತಾ ಅನ್ನೋದು ಸದ್ಯದ ಕುತೂಹಲ. ಬಿಗ್‌ಬಾಸ್ (Bigboss kannada 10) ದಿನೇ ದಿನೇ ಇಂಟರೆಸ್ಟಿಂಗ್ ಆಗ್ತನೇ ಹೋಗ್ತಿದೆ. ಗ್ರಾಂಡ್ ಫಿನಾಲೆ ಸಮೀಪಿಸುತ್ತಿದ್ದಂತೆಯೇ ಬಿಗ್‌ಬಾಸ್ ಮನೆಯೊಳಗಿನ ಸಂಬಂಧಗಳ (relationship) ಬಣ್ಣಗಳೆಲ್ಲ ಮಾಸುತ್ತಿವೆ. ಗೆಲುವಿನ ಗುರಿಯೊಂದೇ ಎಲ್ಲರ ಕಣ್ಣಮುಂದೆ ಹೊಳೆಯುತ್ತಿದೆ. ಹಿಂದಿನ ಎಪಿಸೋಡ್‌ನಲ್ಲಿ ನಮ್ರತಾ ಅವರು ವಿನಯ್ ಅವರನ್ನು ಆಟದಿಂದ ಕೈಬಿಟ್ಟಾಗಲೇ ಇಂಥದೊಂದು ಸೂಚನೆ ಕಾಣಿಸಿಕೊಂಡಿತ್ತು. ಈ ಬಾರಿ ಅದು ಮತ್ತೊಂದು ರೂಪದಲ್ಲಿ ಪುನರಾವರ್ತನೆಯಾಗಿದೆ. ದೊಡ್ಮನೆಯೊಳಗೆ ತುಂಬಾ ಕ್ಲೋಸ್ ಅಂದುಕೊಂಡವರೆಲ್ಲ ದೂರ ಆಗುವ ಸಂದರ್ಭ ಎದುರಾಗುತ್ತಿದೆ.
ಕುರುಕ್ಷೇತ್ರ ಆಗ್ಹೋಗಿದೆ ಬಿಗ್‌ಬಾಸ್ ಮನೆ: ವಿನಯ್ ಉಗ್ರ ಅವತಾರಕ್ಕೆ ಡ್ರೋಣ್ ಪ್ರತಾಪ್ ಟಾರ್ಗೆಟ್!
ಬಿಗ್‌ಬಾಸ್‌ನಲ್ಲಿ ಏನ್ ಬೇಕಾದ್ರೂ ಆಗಬಹುದು ಅನ್ನೋದಕ್ಕೆ ಇದು ಉದಾಹರಣೆಯಾಗಿ ಕಾಣುತ್ತದೆ. ಇದಕ್ಕೆ ಥರಾವರಿ ಕಾಮೆಂಟ್ಸ್ ಬರ್ತಿವೆ. ಹೆಚ್ಚಿನವರು ಸಂಗೀತಾ ಪರ ನಿಂತಿದ್ದಾರೆ. 'ಪ್ರತಾಪ್ ಮೇಲಿರುವ ಭರವಸೆ ದಿನೇ ದಿನೇ ಕಡಿಮೆ ಆಗ್ತಾ ಇದೆ' ಅಂತಿದ್ದಾರೆ. ಇನ್ನೊಂದು ಕಡೆ, 'ಮೂರು ವರ್ಷ ಕಾಗೆ ಹಾರಿಸಿದವನಿಗೆ ಬಿಗ್‌ಬಾಸ್ ಮನೆಯಲ್ಲಿ ನೂರು ದಿನ ಕಾಗೆ ಹಾರಿಸೋದು ದೊಡ್ಡ ವಿಷ್ಯ ಏನಲ್ಲ' ಅನ್ನೋ ವ್ಯಂಗ್ಯದ ಚಟಾಕಿಗಳೂ ವೀಕ್ಷಕರ ಕಡೆಯಿಂದ, ಸಂಗೀತಾ ಫ್ಯಾನ್ಸ್ ಕಡೆಯಿಂದ ಹೊರಬೀಳ್ತಾ ಇದೆ.
ಒಟ್ಟಾರೆ ಫೈನಲ್ಸ್‌ನಲ್ಲಿ ಏನಾಗಬಹುದು ಅನ್ನೋ ವಿಚಾರ ಬಿಗ್‌ಬಾಸ್ ಫ್ಯಾನ್ಸ್‌ಗೆ ಸಖತ್ ಕುತೂಹಲ ಮೂಡಿಸಿರೋದಂತೂ ಸುಳ್ಳಲ್ಲ.