
ಹಾಸನ (ಡಿ.01): ಕನ್ನಡದ ಕಿರುತೆರೆ ನಟಿ ಶೋಭಿತಾ ಶಿವಣ್ಣ ಅವರು ಹೈದರಾಬಾದ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡ ವಿಚಾರ ತಿಳಿಯುತ್ತಿದ್ದಂತೆ ಅವರ ತಾಯಿ ದೇವಕಿ ಅಲಿಯಾಸ್ ದೇವಮ್ಮ ಅವರು ಎದ್ದೆನೋ, ಬಿದ್ದೆನೋ ಎಂದು ಹೈದರಾಬಾದ್‌ಗೆ ತೆರಳಿದ್ದಾರೆ. ಆದರೆ, ನಟಿ ಶೋಭಿತಾ ಜೀವನದ ಕೆಲವು ಅಂಶಗಳನ್ನು ಅವರ ಕುಟುಂಬ ಸದಸ್ಯರು ಮಾಧ್ಯಮದ ಮುಂದೆ ಬುಚ್ಚಿಟ್ಟಿದ್ದಾರೆ.
ನಟಿ ಶೋಭಿತಾ ಅವರು ಹಾಸನ ಜಿಲ್ಲೆ, ಸಕಲೇಶಪುರ ತಾಲ್ಲೂಕಿನ, ಹೆರೂರು ಗ್ರಾಮದವರಾಗಿದ್ದಾರೆ. ಶಿವಣ್ಣ-ದೇವಕಿ (ದೇವಮ್ಮ) ದಂಪತಿಯ ನಾಲ್ಕನೇ ಪುತ್ರಿ ಆಗಿದ್ದಾರೆ. ಇವರಿಗಿಂತ ಇನ್ನೂ ಮೂವರು ದೊಡ್ಡವರು ಇದ್ದು, ಇವರು ಕಿರಿಯ ಪುತ್ರಿ ಆಗಿದ್ದರು. ಇವರದ್ದು ಮಧ್ಯಮ ವರ್ಗದ ಕುಟುಂಬವಾಗಿದ್ದು, ದೊಡ್ಡ ಮಟ್ಟಕ್ಕೆ ಬೆಳೆಯಬೇಕು ಎಂಬ ಅಭಿಲಾಷೆಯನ್ನು ಹೊಂದಿದ್ದರು. ಅದಕ್ಕೆ ತಕ್ಕಂತೆ ತನ್ನ ಮಾತಿನ ಶೈಲಿಯನ್ನೂ ಮೈಗೂಡಿಸಿಕೊಂಡಿದ್ದರು. ಎಲ್ಲಿಯೇ ವೇದಿಕೆ ಸಿಕ್ಕಿದರೂ ಧೈರ್ಯವಾಗಿ ಮಾತನಾಡುವ ಅಭ್ಯಾಸವನ್ನು ಶೋಭಿತಾ ಹೊಂದಿದ್ದರು.
ಇನ್ನು ನಟಿ ಶೋಭಿತಾ ಅವರ ತಂದೆ ಶಿವಣ್ಣ ಮೂಲತಃ ಕೃಷಿಕರಾಗಿದ್ದಾರೆ. ಹೀಗಾಗಿ, ಶೋಭಿತಾಳಿಗೆ ಸ್ಥಳೀಯವಾಗಿಯೇ ಶಿಕ್ಷಣ ಕೊಡಿಸಿದ್ದಾರೆ. ಸಕಲೇಶಪುರ ಪದವಿ ಪೂರ್ವ ಕಾಲೇಜಿನಲ್ಲಿ 8, 9, 10 ನೇ ತರಗತಿ ಮುಗಿಸಿದ್ದಾರೆ. ಪಿಯುಸಿ ಓದಲು ಬೆಂಗಳೂರಿಗೆ ಕಳುಹಿಸಿದ್ದರು. ಇದಾದ ನಂತರ ನೃತ್ಯ ಹಾಗೂ ಇತರೆ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಮುಂದಿದ್ದ ಶೋಭಿತಾ ಹಲವು ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರು. ನೋಡಲು ಸುಂದರವಾಗಿದ್ದು, ಉತ್ತಮ ಮೈಕಟ್ಟನ್ನು ಹೊಂದಿದ್ದರಿಂದ ನಟನಾ ಕ್ಷೇತ್ರಗಳಿಗೂ ಆಫರ್‌ಗಳು ಬಂದಿವೆ. ಆಗ ಮನೆಯಲ್ಲಿ ವಿಚಾರಿಸಿದಾಗ ಬೇಡವೆಂದೇ ಹೇಳಿದ್ದರು. ಆದರೂ, ಹಲವರಿಂದ ಮನೆಯಲ್ಲಿ ಪೋಷಕರಿಗೆ ಹೇಳಿಸಿ ನಟನಾ ಕ್ಷೇತ್ರಕ್ಕೆ ಬಂದಿದ್ದರು.
ಇದನ್ನೂ ಓದಿ: ಕನ್ನಡ ಖ್ಯಾತ ಕಿರುತೆರೆ ನಟಿ ಶೋಭಿತಾ ಶಿವಣ್ಣ ಆತ್ಮಹತ್ಯೆ
ಹಂತ ಹಂತವಾಗಿ ಮೊದಲು ಕನ್ನಡ ಕಿರುತೆರೆಯಲ್ಲಿ ಧಾರಾವಾಹಿಯಲ್ಲಿ ನಟಿಸಿದ ಶೋಭಿತಾಗೆ ನಟನೆಯೂ ಸಿದ್ಧಿಸಿದಂತಿತ್ತು. ಹೀಗಾಗಿ 12ಕ್ಕೂ ಅಧಿಕ ಧಾರಾವಾಹಿಗಳಲ್ಲಿ ನಟಿಸಿದರು. ಜೊತೆಗೆ, ನಾಲ್ಕೈದು ಸಿನಿಮಾಗಳಲ್ಲಿಯೂ ನಟಿಸಿದ್ದರು. ಕಳೆದೆ ವರ್ಷವಷ್ಟೇ ಹೈದರಾಬಾದ್ ಮೂಲದ ವ್ಯಕ್ತಿಯೊಬ್ಬರನ್ನು ಪ್ರೀತಿಸಿ, ಕೇವಲ ಕುಟುಂಬ ಸದಸ್ಯರು ಹಾಗೂ ಸ್ನೇಹಿತರ ಸಮ್ಮುಖದಲ್ಲಿ ಮದುವೆ ಮಾಡಿಕೊಂಡಿದ್ದರು. ಈ ಬಗ್ಗೆ ಅವರು ಮಾಹಿತಿ ಹಂಚಿಕೊಂಡಿರಲಿಲ್ಲ. ಆದರೆ, ಅವರ ಸ್ನೇಹಿತರು ಶೋಭಿತಾಳ ಮದುವೆ ಫೋಟೋಗಳನ್ನು ಹಂಚಿಕೊಂಡಿದ್ದರು. ಇನ್ನು ಆಗಾಗ ಒಂದೊಂದು ಫೋಟೋ ಹಂಚಿಕೊಳ್ಳುವುದು ಬಿಟ್ಟರೆ ಶೋಭಿತಾಗೆ ಹೆಚ್ಚು ಎಲ್ಲರೊಟ್ಟಿಗೆ ಬೆರೆಯುವ ಆಸಕ್ತಿ ಕಡಿಮೆಯಿತ್ತು.
ಇದೀಗ ಅವರ ತಾಯಿ ದೇವಕಿ ಅವರು ಮಗಳ ಸಾವಿನ ಸುದ್ದಿಯನ್ನು ಕೇಳಿ ಹೈದರಾಬಾದ್‌ಗೆ ತೆರಳಿದ್ದಾರೆ. ಇನ್ನು ನಿನ್ನೆಯೇ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದು, ಪೊಲೀಸರು ಶವವನ್ನು ಆಸ್ಪತ್ರೆಗೆ ರವಾನಿಸಿದ್ದಾರೆ. ಶೋಭಿತಾ ಅವರ ತಾಯಿ ಮಗಳನ್ನು ಗುರುತಿಸಿದ ನಂತರ ಮರಣೋತ್ತರ ಪರೀಕ್ಷೆಯನ್ನು ನಡೆಸಿ, ನಂತರ ಮೃತದೇಹವನ್ನು ಹಸ್ತಾಂತರ ಮಾಡಲಿದ್ದಾರೆ. ಹೀಗಾಗಿ, ನಾಳೆ ಶೋಭಿತಾಳ ಮೃತದೇಹವನ್ನು ನಾಳೆ ಬೆಂಗಳೂರು ಅಥವಾ ಹಾಸನಕ್ಕೆ ತರುವ ಸಾಧ್ಯತೆಯಿದೆ. ಒಂದು ವೇಳೆ ಮೃತದೇಹ ರವಾನಿಸುವ ಸ್ಥಿತಿಯಲ್ಲಿ ಇರದಿದ್ದರೆ, ಕೆಲವು ಸಂಬಂಧಿಕರು ಅಲ್ಲಿಗೆ ತೆರಳಿ ಅಂತ್ಯಕ್ರಿಯೆ ನಡೆಸಲಿದ್ದಾರೆ ಎಂದೂ ಹೇಳಲಾಗುತ್ತಿದೆ. ಈ ಬಗ್ಗೆ ಮತ್ತಷ್ಟು ಮಾಹಿತಿ ಸಂಗ್ರಹಿಸಲಾಗುತ್ತಿದೆ...
ಇದನ್ನೂ ಓದಿ: ಕೊನೆಯ ಇನ್‌ಸ್ಟಾ ಪೋಸ್ಟ್‌ನಲ್ಲೇ ಸಾವಿನ ಮುನ್ಸೂಚನೆ ನೀಡಿದ್ರಾ ಶೋಭಿತಾ ಶಿವಣ್ಣ?
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.