ಬಿಗ್ ಬಾಸ್ ಮನೆಯಲ್ಲಿ ನ್ಯಾಯಯುತವಾಗಿ ಆಡುತ್ತಿರುವ ಹನುಮಂತ ಲಮಾಣಿಗೆ ಕಿಚ್ಚ ಸುದೀಪ್ ಅವರಿಂದ ಅನ್ಯಾಯವಾಗಿದೆಯೇ? ಚೈತ್ರಾ ಕುಂದಾಪುರ ಮೋಸದ ಆಟಕ್ಕೆ ಬೆಂಬಲ ನೀಡಿದ ಬಿಗ್ ಬಾಸ್ ತಂಡದ ವಿರುದ್ಧ ಅಭಿಮಾನಿಗಳ ಆಕ್ರೋಶ.
ಬೆಂಗಳೂರು (ಡಿ.30): ಬಿಗ್ ಬಾಸ್ ಮನೆಯಲ್ಲಿ ಇದೀಗ ನ್ಯಾಯಪರವಾಗಿ ಆಟವಾಡುತ್ತಿರುವ ಒಬ್ಬನೇ ಒಬ್ಬ ವ್ಯಕ್ತಿ ಎಂದರೆ ಅದು ಹಳ್ಳಿ ಹೈದ, ಕುರಿಗಾಹಿ, ಗಾಯಕ ಹನುಮಂತ ಲಮಾಣಿ. ಆದರೆ, ಇದೇ ಹನುಮಂತನಿಗೆ ಕಿಚ್ಚ ಸುದೀಪ್ ನ್ಯಾಯ ಪರಿಶೀಲನೆ ಮಾಡದೆಯೇ ತರಾಟೆಗೆ ತೆಗೆದುಕೊಂಡಿದ್ದರಿಂದ 13ನೇ ವಾರದಲ್ಲಿ ಕಳಪೆ ಪಟ್ಟ ಪಡೆದು ಜೈಲಿಗೆ ಹೋಗಬೇಕಾಯಿತು. ಇದಕ್ಕೆ ಹನುಮಂತನ ಅಭಿಮಾನಿಗಳು ಸ್ವತಃ ಬಿಗ್ ಬಾಸ್ ತಂಡ ಹಾಗೂ ಕಿಚ್ಚ ಸುದೀಪ್ ಅವರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಬಿಗ್ ಬಾಸ್ ಸೀಸನ್ 11ರಲ್ಲಿ ವೈಲ್ಡ್ ಕಾರ್ಡ ಎಂಟ್ರಿ ಮೂಲಕ ಆಗಮಿಸಿದ ಗಾಯಕ ಹನುಮಂತನ ಮುಗ್ಧತೆಯಿಂದ ರಾಜ್ಯದ ಜನತೆ ಆತನ ಅಭಿಮಾನಿ ಆಗಿದ್ದಾರೆ. ಯಾವುದೇ ಚವಿಚಾರದಲ್ಲಿಯೂ ಮೂಗು ತೂರಿಸಿಕೊಂಡು ಹೋಗುವುದಿಲ್ಲ. ಯಾರು ಏನೇ ಹೇಳಿದರೂ ಅದನ್ನು ನಗುತ್ತಲೇ ಸ್ವೀಕರಿಸುತ್ತಾನೆ. ತನಗೆ ಸರಿ ಅಲ್ಲ ಎನಿಸಿದ್ದನ್ನು ನೇರವಾಗಿ ಹೇಳುತ್ತಾನೆ. ಬೇರೆಯವರು ತನ್ನ ಬಗ್ಗೆ ಕಾಳಜಿ ಮಾಡಬೇಕು, ಅವರಿವರಿಗೆ ಮುಲಾಜು ನೋಡಬೇಕು ಎಂಬ ಭಾವನೆಯೇ ಆತನ ಮನಸ್ಸಿನಲ್ಲಿ ಇಲ್ಲ. ಹೀಗಾಗಿ, ಹನುಮಂತನ ಆಟವನ್ನು ಮೆಚ್ಚಿದ ರಾಜ್ಯದ ಜನತೆ ಹನುಮಂತ ನಾಮಿನೇಟ್ ಆಗಿದ್ದರೂ ಆತನಿಗೆ ಓಟ್ ಹಾಕುವ ಮೂಲಕ ಎಲಿಮಿನೇಟ್ ಆಗುವುದರಿಂದ ಪಾರು ಮಾಡುತ್ತಲೇ ಬರುತ್ತಿದ್ದಾರೆ.
ಆದರೆ, ಕಳೆದ ವಾರ ಬಿಗ್ ಬಾಸ್ ಟಾಸ್ಕ್‌ನಲ್ಲಿ ಸ್ವತಃ ಚೈತ್ರಾ ಕುಂದಾಪುರ ಆಟದ ನಿಯಮಗಳಲ್ಲಿ ಇಲ್ಲದ ಹೊಸ ನಿಯಮ ತಾನೇ ಮಾಡಿಕೊಂಡು ಎದುರಾಳಿ ತಂಡದವರಿಗೆ ಮೋಸ ಮಾಡುತ್ತಿದ್ದರೂ ಅದರಲ್ಲಿ ಬಿಗ್ ಬಾಸ್ ಯಾವುದೇ ಧ್ವನಿ ಎತ್ತಲಿಲ್ಲ. ಬಿಗ್ ಬಾಸ್ ಮನೆಗೆ ಬಂದಾಗಿನಿಂದಲೂ ನ್ಯಾಯದ ಮುಖದಂತೆಯೇ ನಡೆದುಕೊಂಡು ಬಂದಿರುವ ಹಳ್ಳಿ ಹೈದ ಹನುಮಂತು ಅವರು ಯಾವುದೇ ಕಾರಣಕ್ಕೂ ಚೈತ್ರಾಳ ಮೋಸದ ಆಟವನ್ನು ಒಪ್ಪದೇ ಆಟ ರದ್ದಾದರೂ ಸರಿ, ನ್ಯಾಯದ ಪರ ನಿಲ್ಲುತ್ತೇನೆ ಎಂದು ಪಟ್ಟು ಹಿಡಿದರು. ಇದಕ್ಕೆ ಮನೆಯ ಎರಡೂ ತಂಡಗಳ ಸದಸ್ಯರು ಬೆಂಬಲವಾಗಿ ನಿಂತಿದ್ದರು. ಆದರೆ, ವಾರದ ಪಂಚಾಯಿತಿ ವೇಳೆ ನ್ಯಾಯದ ಪರವಾಗಿ ನಿಂತಿದ್ದ ಗಾಯಕ ಹನುಮಂತ ಲಮಾಣಿ ಅವರನ್ನೇ ಬೈದು ಹನುಮಂತನ ಧೈರ್ಯವನ್ನು ಹುಟ್ಟಡಗಿಸುವ ಕಾರ್ಯವನ್ನು ಸ್ವತಃ ಸುದೀಪ ಅವರೇ ಮಾಡಿದರು. ಇದರಿಂದ ಹನುಮಂತ ಸಪ್ಪೆಯಾಗಿ ಮನೆಯವರನ್ನು ನೆನಪಿಸಿಕೊಂಡು ಕಳಪೆ ಪಡೆಯುವಂತಾಯಿತು. ಹಳ್ಳಕ್ಕೆ ಬಿದ್ದ ವ್ಯಕ್ತಿಗೆ ಆಳಿಗೊಂದು ಕಲ್ಲೇಟು ಎನ್ನುವಂತೆ ಆತನಿಗೆ ಬಹುತೇಕರು ಕಳಪೆ ಕೊಟ್ಟು ಜೈಲಿಗೆ ಕಳಿಸಿದರು.
ಇದನ್ನೂ ಓದಿ:ಬಿಗ್ ಬಾಸ್ ಕನ್ನಡ 11: ಗೆಲ್ಲೋದು ಹನುಮಂತನೋ? ತ್ರಿವಿಕ್ರಮನೋ?: ಸಮೀಕ್ಷೆಯಲ್ಲೇನಿದೆ?
ಇದಾದ ನಂತರ ನಡೆಸಲಾದ ಜೈಲಿನಿಂದ ಹೊರಗೆ ಬಂದ ಬೆನ್ನಲ್ಲಿಯೇ ಕಿಚ್ಚನ ಪಂಚಾಯಿತಿಯ ವೇಳೆ ಬಿಗ್ ಬಾಸ್ ಮನೆಯಲ್ಲಿ ಸದರಿಯಾಗಿ ಉಳಿದುಕೊಂಡಿರುವ 9 ಸ್ಪರ್ಧಿಗಳ ನಡುವೆ ಚಿನ್ನದ ಸ್ಟಾರ್ ಹಾಗೂ ಕಪ್ಪು ಸ್ಟಾರ್ ಹಂಚಿಕೆಯಲ್ಲಿ ಹನುಮಂತನಿಗೆ ಸ್ವತಃ ಬಿಗ್ ಬಾಸ್ ಮನೆಯ 4 ಗೋಲ್ಡ್ ಸ್ಟಾರ್‌ಗಳು ಲಭಿಸಿದವು. ಈ ಮೂಲಕ ಹನುಮಂತ ಬಿಗ್ ಬಾಸ್ ಮನೆಯಲ್ಲಿ ಎಷ್ಟು ನಿಯತ್ತಾಗಿ ಆಟವಾಡುತ್ತಿದ್ದಾನೆ ಎಂಬ ಅಂಶ ಪುನಃ ರಾಜ್ಯದ ಜನತೆಗೆ ಮನದಟ್ಟು ಆಗುವಂತಾಯಿತು. ಈ ವೇಳೆ ಕಿಚ್ಚ ಸುದೀಪ್ ಅವರು ಹನುಮಂತನಿಗೆ ಹೀಗೇಕೆ ಕಳಪೆಯಾಗಿ ಜೈಲಿಗೆ ಹೋಗಿದ್ದೀರಿ ಎಂದು ಪ್ರಶ್ನೆ ಮಾಡಿದ್ದಕ್ಕೆ ನಾನು ಬಂದು ಬಹಳ ದಿನವಾಯ್ತು. ಮನೆಯ ಕಡೆಗೆ ನೆನಪಾಗಿ ಸ್ವಲ್ಪ ಮಂಕು ಕವಿದಂತಾಗಿದೆ ಅಷ್ಟೇ.. ಮನೆಯಿಂದ ಅಪ್ಪ-ಅಮ್ಮ ಯಾರಾದರೂ ಒಬ್ಬರ ಧ್ವನಿ ಕೇಳಿದರೂ ನಾನು ಪುನಃ ಮೊದಲಿನಂತೆ ಆಟವನ್ನು ಶುರು ಮಾಡುವುದಾಗಿ ಹೇಳಿದ್ದಾನೆ.
ಇದೀಗ ಬಿಗ್ ಬಾಸ್ ಮನೆಯಲ್ಲಿ 14ನೇ ವಾರದ ಆಟ ಶುರುವಾಗಿದ್ದು, ಅಲ್ಲಿರುವ ಸ್ಪರ್ಧಿಗಳ ಮನೆಯವರನ್ನು ಕರೆಸಲಾಗುತ್ತಿದೆ. ಇದರಲ್ಲಿ ಹನುಮಂತನ ಮನೆಯವರೂ ಕೂಡ ಬಿಗ್ ಬಾಸ್ ಮನೆಯೊಳಗೆ ಬಂದು ಹೋದರೆ ಆತನ ಆಟದ ವರಸೆ ಮತ್ತೆ ಮೊದಲಿನಂತಾಗುವುದರಲ್ಲಿ ಯಾವುದೇ ಅನುಮಾನವಿಲ್ಲ.
ಇದನ್ನೂ ಓದಿ: bigg boss kannada 11 ಹನುಮಂತು ಉತ್ತರಕ್ಕೆ ಸೈಲೆಂಟ್ ಆದ ಸುದೀಪ್! ಎಂಡ್‌ನಲ್ಲಿ ಕಿಚ್ಚನ ಕ್ಲಾಸ್