ಮದುವೆಯನ್ನು ಗುಟ್ಟಾಗಿ ಇಟ್ಟಿದ್ದ ನಟಿ ಅಶ್ವಿನಿ ಹಾಗೂ ಅವರ ಪತಿ ಅಭಿಮಾನಿಗಳು ಕೇಳಿರೋ ಎಲ್ಲಾ ಪ್ರಶ್ನೆಗಳಿಗೂ ಉತ್ತರಿಸಿದ್ದಾರೆ. ಇಲ್ಲಿದೆ ನೋಡಿ ವಿಡಿಯೋ...
ನಮ್ಮ ಮದುವೆಯಾಗಿ ಒಂದು ವರ್ಷವಲ್ಲ, ನಾಲ್ಕು ವರ್ಷವಾಗಿದೆ. ಕೋವಿಡ್ ಸಮಯದಲ್ಲಿ ಅಂದರೆ 2020ರ ನವೆಂಬರ್ 27 ರಂದು ನಮ್ಮ ಮದುವೆಯಾಗಿದ್ದು. ಮೊನ್ನೆಯಷ್ಟೇ ನಾಲ್ಕು ವರ್ಷ ಪೂರ್ಣವಾಗಿದೆ. ಆದರೆ ಈ ವಿಷಯ ಈಗ ಗೊತ್ತಾಗಿದ್ದರಿಂದ ಸಾವಿರಾರು ರೀತಿಯಲ್ಲಿ ಕಮೆಂಟ್ಸ್ ಬರುತ್ತಿವೆ, ಮದುವೆ ವಿಷಯ ತಿಳಿಸದೇ ಇರುವುದಕ್ಕೆ ಅಭಿಮಾನಿಗಳು ತುಂಬಾ ಬೇಸರ ವ್ಯಕ್ತಪಡಿಸುತ್ತಿದ್ದಾರೆ. ದಯವಿಟ್ಟು ಯಾರೂ ಬೇಸರ ಮಾಡಿಕೊಳ್ಳಬೇಡಿ. ನಮ್ಮ ಮದುವೆಯ ಬಗ್ಗೆ ನಿಮ್ಮ ಎಲ್ಲಾ ಪ್ರಶ್ನೆಗಳಿಗೂ ಈಗ ಉತ್ತರಿಸುತ್ತೇನೆ ಎನ್ನುವ ಮೂಲಕ ಕಿರುತೆರೆ ನಟಿ, ಗಟ್ಟಿಮೇಳ ಧಾರಾವಾಹಿಯಲ್ಲಿ ಆರತಿಯಾಗಿ ಕಾಣಿಸಿಕೊಂಡು, ಬಳಿಕ ಬಣ್ಣದ ಲೋಕದಿಂದ ದೂರವೇ ಸರಿದಿದ್ದ ಅಶ್ವಿನಿ ಅವರು, ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಪತಿಯೊಂದಿಗೆ ಕಾಣಿಸಿಕೊಂಡು ಮದುವೆಯ ವಿಷಯವನ್ನು ಬಹಿರಂಗಗೊಳಿಸಿದ್ದಾರೆ.
ಮದುವೆಯಾಗಿ ನಾಲ್ಕು ವರ್ಷವಾಯ್ತು. ಮದುವೆ ಡೇಟ್ ಫಿಕ್ಸ್ ಆದಾಗ ಕೋವಿಡ್ ಇತ್ತು. ಆಗ ಹೆಚ್ಚು ಜನ ಸೇರುವಂತಿಲ್ಲ ಎಂದು ಸರ್ಕಾರದಿಂದ ರೂಲ್ಸ್ ಇದ್ದದು ನಿಮಗೆಲ್ಲಾ ಗೊತ್ತೇ ಇದೆ. ಆದ್ದರಿಂದ ಗ್ರ್ಯಾಂಡ್ ಆಗಿ ಮಾಡಲು ಆಗಲಿಲ್ಲ. ನನಗೂ ಎಲ್ಲರಂತೆ ಗ್ರ್ಯಾಂಡ್ ಆಗಿ ಮದುವೆಯಾಗುವ ಆಸೆ ಇತ್ತು. ಮೆಹಂದಿ, ಹಳದಿ, ಆ ಫಂಕ್ಷನ್ ಈ ಫಂಕ್ಷನ್ ಅಂತೆಲ್ಲಾ ನಡೆಯಬೇಕು ಎನ್ನುವ ಆಸೆ ಇತ್ತು. ಇದರ ಲೆಕ್ಕಾಚಾರ ಹಾಕಿದ್ರೆ 15-20 ಲಕ್ಷ ಖರ್ಚಾಗುತ್ತಿತ್ತು. ನಮ್ಮ ದುಡಿಮೆಯಲ್ಲಿಯೇ ಮದುವೆಯಾಗುವ ನಿರ್ಧಾರ ಮಾಡಿದ್ವಿ. ಆದರೆ ದುಡಿದದ್ದನ್ನೆಲ್ಲಾ ಮದುವೆಗೆ ಖರ್ಚು ಮಾಡಿಬಿಟ್ರೆ ಮುಂದಿನ ಗತಿಯೇನು ಎಂದುಕೊಂಡು ಅತ್ಯಂತ ಕಡಿಮೆ ಖರ್ಚಿನಲ್ಲಿ, ನಮ್ಮಿಬ್ಬರ ಕುಟುಂಬದವರ ಸಮ್ಮುಖದಲ್ಲಿ ಮನೆಯಲ್ಲಿಯೇ ಮದುವೆಯಾದೆವು ಎಂದಿದ್ದಾರೆ.
ಮದ್ವೆಯಾದ ವಿಷಯ ತಿಳಿಸಿ ಶಾಕ್ ನೀಡಿದ್ದ ನಟಿ ಅಶ್ವಿನಿ ಕಾಶ್ಮೀರದಲ್ಲಿ ಜಾಲಿ ಮೂಡ್: ವಿಡಿಯೋ ವೈರಲ್
ಇದೇ ವೇಳೆ ತಾವು ತಾಳಿಯನ್ನು ಹಾಕದೇ ಇರುವುದಕ್ಕೆ ತುಂಬಾ ಮಂದಿ ಆಕ್ಷೇಪ ವ್ಯಕ್ತಪಡಿಸುತ್ತಿದ್ದೀರಿ. ಇದು ನಿಜನೇ. ನಟಿಯರು ಬೇರೆ ಬೇರೆ ಪಾತ್ರಗಳನ್ನು ಮಾಡಬೇಕಿರುವ ಕಾರಣ, ತಾಳಿ, ಕಾಲುಂಗುರ ಹಾಕಿಕೊಂಡೇಇರಲು ಆಗುವುದಿಲ್ಲ. ಅದೇ ಅಲ್ಲದೇ ಶೂಟಿಂಗ್‌ಗೆಂದು ಬೇರೆ ಕಡೆ ಹೋಗಬೇಕಿರುತ್ತದೆ. ನಮ್ಮ ಪಾತ್ರಗಳಿಗೆ ತಾಳಿ, ಕಾಲುಂಗರ ಬೇಕಿರುವುದಿಲ್ಲ. ಅಂಥ ಸಂದರ್ಭಗಳಲ್ಲಿ ಚಿನ್ನ, ಬೆಳ್ಳಿಯ ಒಡವೆಗಳನ್ನು ಬೇರೊಬ್ಬರ ಕೈಯಲ್ಲಿ ಇಟ್ಟುಕೊಳ್ಳಲು ಕೊಡಬೇಕಾಗುತ್ತದೆ. ಇದು ತುಂಬಾ ಡೇಂಜರ್. ಇದೇ ಕಾರಣಕ್ಕೆ ಶೂಟಿಂಗ್ ಇದ್ದಾಗ ತಾಳಿ, ಕಾಲುಂಗರ ಹಾಕುವುದಿಲ್ಲವಷ್ಟೇ. ಯಾವುದೇ ಡೇಟ್ಸ್ ಇಲ್ಲದಿದ್ದರೆ, ಮನೆಯಲ್ಲಿ ಹಾಕಿಕೊಂಡಿರುತ್ತೇನೆ. ಅದು ನಿಮಗೆ ಕಾಣಿಸುವುದಿಲ್ಲ ಎನ್ನುತ್ತಲೇ ಒಳಗಡೆ ಇದ್ದ ಮಂಗಳಸೂತ್ರವನ್ನು ತೋರಿಸಿದ್ದಾರೆ ನಟಿ. ಇದೇ ವೇಳೆ ಅವರ ಪತಿ ಕೂಡ ತಮ್ಮ ಬಗ್ಗೆ ಪರಿಚಯ ಮಾಡಿಕೊಂಡಿದ್ದಾರೆ.
ಅಷ್ಟಕ್ಕೂ ನಟಿ ಮೊನ್ನೆ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಮದುವೆಯಾಗಿರುವ ಬಗ್ಗೆ ವಿಷಯ ತಿಳಿಸಿದಾಗಲೇ ಅದು ಬಹಿರಂಗಗೊಂಡಿತ್ತು. ಇದೇ 27ರಂದು ನಟಿ ಮದುವೆಯಾಗಿ ನಾಲ್ಕು ವರ್ಷ ಎನ್ನುತ್ತಲೇ ತಮ್ಮ ಇನ್ಸ್ಟಾಗ್ರಾಂ ನಲ್ಲಿ ಮಾಹಿತಿಯನ್ನು ನಿನ್ನೆಯಷ್ಟೆ ಶೇರ್ ಮಾಡಿಕೊಂಡಿದ್ದರು. ಫೋಟೋಗಳನ್ನು ಶೇರ್ ಮಾಡಿಕೊಂಡ ನಟಿ ಎಲ್ಲರಿಗೂ ನಮಸ್ಕಾರ. ನನ್ನ ಜೀವನದ ಬಹು ಮುಖ್ಯವಾದ ವಿಷಯವನ್ನು ನಿಮ್ಮ ಜೊತೆ ಹಂಚಿಕೊಳ್ಳುತ್ತಿದ್ದೇನೆ. ನಾನು ಮತ್ತು ಅಜಯ್ ಅವರು ಪ್ರೀತಿಸಿ 15 ವರ್ಷಗಳಾಗಿವೆ. 27/11/2024 ಇಂದು ನಾವು ಮದುವೆಯಾದ ದಿನ ಅಂದರೆ ಮದುವೆಯ ವಾರ್ಷಿಕೋತ್ಸವ. ನಮ್ಮದು love come Arrange Marriage. ನಾನು ಮದುವೆಯಾಗಿರುವ ವಿಷಯ ನನ್ನ ಆತ್ಮೀಯರಿಗೆ ತಿಳಿದಿದೆ. ಆದರೆ ಈ ವಿಷಯವನ್ನು ನಾನು ಪಬ್ಲಿಕ್ ಮಾಡಿರಲಿಲ್ಲ ಅಷ್ಟೇ.ಇಂದು ಆ ಸಮಯ ಬಂದಿದೆ ಹಾಗಾಗಿ ತಿಳಿಸುತ್ತಿದ್ದೇನೆ. ಇಲ್ಲಿ ನಾನು ಎಲ್ಲವನ್ನು ವಿವರಿಸಲು ಸಾಧ್ಯವಿಲ್ಲ. ಹಾಗಾಗಿ ಇದರ ಸಂಪೂರ್ಣ ಮಾಹಿತಿ Nimma Ashwini YouTube channelನಲ್ಲಿ ಇದೆ. ನಿಮ್ಮ ಪ್ರೀತಿ ಮತ್ತು ಆಶೀರ್ವಾದ ಸದಾ ನಮ್ಮ ಮೇಲೆ ಇರಲಿ ಎಂದು ಕೇಳಿಕೊಳ್ಳುವ ಅಜಯ್ ಮತ್ತು ಅಶ್ವಿನಿ ಅಂತ ಬರೆದುಕೊಂಡಿದ್ದರು.
ಆರ್ಯವರ್ಧನ್ ಗುರೂಜಿ ಮುಂದಿನ ಜನ್ಮದಲ್ಲಿ ಏನಾಗಿ ಹುಟ್ತಾರೆ? ಅವರ ಬಾಯಲ್ಲೇ ಕೇಳಿ...