ಡ್ರೋನ್ ಪ್ರತಾಪ್ ಪಾಲಕರು ಬಿಗ್‌ಬಾಸ್ ಮನೆಗೆ ಭೇಟಿ ಕೊಟ್ಟಿದ್ದು, ಪ್ರತಾಪ್ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ಅಲ್ಲಿ ಆಗಿದ್ದೇನು?
ಬಿಗ್‌ಬಾಸ್‌ನ ಅಂತಿಮ ದಿನಗಳು ಹತ್ತಿರ ಬರುತ್ತಿದ್ದಂತೆಯೇ ಬಿಗ್‌ಬಾಸ್ ಮನೆಯಲ್ಲಿ ಸ್ಪರ್ಧಿಗಳ ನಡುವೆ ಗೆಲುವಿಗಾಗಿ ಹೋರಾಟದ ಛಲ ಹೆಚ್ಚಾಗುತ್ತಿದೆ. ಅದರ ನಡುವೆಯೇ ಬಿಗ್‌ಬಾಸ್ ಸ್ಪರ್ಧಿಗಳಿಗೆ ಆಗಾಗ್ಗೆ ಖುಷಿಯ ಸುದ್ದಿಯ ಜೊತೆ ಸರ್‌ಪ್ರೈಸ್ ನೀಡುವುದೂ ಇದೆ. ಅದೇ ರೀತಿ ಇದಾಗಲೇ ನಮ್ರತಾ ಮತ್ತು ವರ್ತೂರು ಸಂತೋಷ್ ಅವರ ಪಾಲಕರು ಬಿಗ್‌ಬಾಸ್‌ಗೆ ಭೇಟಿ ಕೊಟ್ಟಿದ್ದು ಆಗಿದೆ. ಇದೀಗ ಡ್ರೋನ್ ಪ್ರತಾಪ್ ಸರದಿ. ಅಷ್ಟಕ್ಕೂ ಡ್ರೋನ್ ಪ್ರತಾಪ್ ತಮ್ಮ ಪಾಲಕರ ಜೊತೆ ಕಳೆದ ಮೂರ್ನಾಲ್ಕು ವರ್ಷಗಳಿಂದ ಮಾತನಾಡಿರಲಿಲ್ಲ. ತಾವು ಡ್ರೋನ್ ಮಾಡುತ್ತಿರುವುದಾಗಿ ಹಲವಾರು ವರ್ಷಗಳಿಂದ ಸುಳ್ಳು ಹೇಳುತ್ತಾ ಬಂದು, ತಾವು ಡ್ರೋನ್ ತಯಾರಿಸಲು ಪಟ್ಟಿರುವ ಕಷ್ಟಗಳನ್ನು, ಬೀದಿ ಬದಿಯಲ್ಲಿ ಮಲಗಿ ತುತ್ತು ಅನ್ನಕ್ಕಾಗಿ ಪರದಾಡಿದ ದಿನಗಳನ್ನು ಕಣ್ಣಿಗೆ ಕಟ್ಟುವಂತೆ ಹೇಳುತ್ತಾ ಕೇಳುಗರ ಕಣ್ಣಲ್ಲಿ ನೀರು ತರಿಸಿದ್ದ ಪ್ರತಾಪ್ ನಿಜ ಬಣ್ಣ ಬದಲಾಗಲು ಹಲವಾರು ವರ್ಷಗಳೇ ಬೇಕಾಗಿದ್ದವು. ಕೊನೆಗೂ ಇಷ್ಟು ವರ್ಷ ಹೇಳಿದ್ದು, ಮಾತನಾಡಿದ್ದು, ತಮ್ಮ ಬಗ್ಗೆ ಹೇಳಿಕೊಂಡಿದ್ದು, ಡ್ರೋನ್ ತಯಾರಿಕೆ ಕುರಿತು ವಿವರಣೆ ನೀಡಿದ್ದು ಎಲ್ಲವೂ ಹಸಿಹಸಿ ಸುಳ್ಳು ಎಂದು ತಿಳಿದು ಹಲವು ಕೇಸ್ಗಳು ದಾಖಲಾಗಿದ್ದವು. ಇದರ ಬೆನ್ನಲ್ಲೇ ಡ್ರೋನ್ ಪ್ರತಾಪ್ ಮತ್ತು ಪಾಲಕರ ನಡುವೆ ಸಂಪರ್ಕವೂ ಕಟ್ಟಾಗಿತ್ತು.
ತಾವು ಅಪ್ಪ-ಅಮ್ಮನ ಜೊತೆ ಮಾತನಾಡದ ಬಗ್ಗೆ ಬಿಗ್‌ಬಾಸ್ ಮನೆಯಲ್ಲಿಯೂ ಡ್ರೋನ್ ಪ್ರತಾಪ್ ಹಲವು ಸಂದರ್ಭಗಳಲ್ಲಿ ಕಣ್ಣೀರು ಹಾಕಿದ್ದಿದೆ. ಅವರ ಆಸೆಯನ್ನು ಬಿಗ್‌ಬಾಸ್ ಇದೀಗ ಈಡೇರಿಸಿದೆ. ಬಿಗ್ ಬಾಸ್ನಲ್ಲಿ ಈ ವಾರ ಫ್ಯಾಮಿಲಿ ವೀಕ್ ಇತ್ತು. ಈ ವೇಳೆ ಸ್ಪರ್ಧಿಗಳ ಕುಟುಂಬದವರು ಬಂದಿದ್ದು, ಪ್ರತಾಪ್ ಅವರ ಪಾಲಕರನ್ನೂ ಕರೆಸಲಾಗಿತ್ತು. ಆದರೆ ಪ್ರತಾಪ್ ಅವರಿಗೆ ಅಪ್ಪ-ಅಮ್ಮನನ್ನು ನೋಡಲು ಅಷ್ಟು ಸುಲಭವಾಗಿ ಬಿಡಲಾಗಿಲ್ಲ. ಡೋರ್ ಲಾಕ್ ಮಾಡಲಾಗಿತ್ತು. ಪಾಲಕರ ದನಿ ಕೇಳಿ ಪ್ರತಾಪ್ ಬಿಕ್ಕಿಬಿಕ್ಕಿ ಅತ್ತರು, ಪ್ಲೀಸ್ ಬಾಗಿಲು ತೆಗೆಯಿರಿ. ಅವ್ವ- ಅಪ್ಪನನ್ನು ಭೇಟಿಯಾಗಬೇಕು ಎಂದು ಹೇಳಿದರು. ಇದರ ಪ್ರೊಮೋ ರಿಲೀಸ್ ಆಗಿದೆ.
ಅಷ್ಟಕ್ಕೂ ಸದ್ಯ ಕೆಲವೇ ಕೆಲವು ಸ್ಪರ್ಧಿಗಳನ್ನು ಗೆಲುವಿನ ಅಭ್ಯರ್ಥಿಯಾಗಿ ಗುರುತಿಸಲಾಗಿದ್ದು, ಅದರಲ್ಲಿ ಪ್ರತಾಪ್ ಕೂಡ ಒಬ್ಬರು. ಗೆಲುವಿಗಾಗಿ ಅತಿ ಜಾಗರೂಕರಾಗಿ ಆಡುತ್ತಿದ್ದಾರೆ ಪ್ರತಾಪ್. ಇದರ ಮಧ್ಯೆಯೇ ತಮ್ಮ ಅಪ್ಪ-ಅಮ್ಮಂದಿರನ್ನು ನೆನೆದುಕೊಂಡು ತಮ್ಮ ಅಭಿಮಾನಿಗಳ ಕಣ್ಣಲ್ಲೂ ನೀರು ತರಿಸುತ್ತಾರೆ. ಇನ್ನು ಕೆಲವರು ಟ್ರೋಲ್ ಮಾಡಿ, ಇಷ್ಟೆಲ್ಲಾ ಡ್ರಾಮಾ ಮಾಡಬೇಡ ಎನ್ನುವುದೂ ಇದೆ. ಒಟ್ಟಿನಲ್ಲಿ ಸದಾ ಪಾಲಕರ ಬಗ್ಗೆ ಚಿಂತಿಸುತ್ತಿದ್ದ ಡ್ರೋನ್ ಅವರಿಗೆ ಅಪ್ಪ-ಅಮ್ಮನನ್ನು ನೋಡುವ ಭಾಗ್ಯವನ್ನು ಬಿಗ್‌ಬಾಸ್ ನೀಡಿದೆ. ಪ್ರತಾಪ್ ಮೇಲೆ ಮುನಿಸಿಕೊಂಡಿದ್ದ ಅಪ್ಪ ಬರುತ್ತಾರೋ ಇಲ್ಲವೋ ಎಂಬ ಬಗ್ಗೆ ಕುತೂಹಲಕ್ಕೆ ಕೊನೆಗೂ ಬಿಗ್‌ಬಾಸ್ ತೆರೆ ಎಳೆದಿದೆ.
ಈಗ ರಿಲೀಸ್ ಆಗಿರುವ ಪ್ರೊಮೋದಲ್ಲಿ ಪ್ರತಾಪ್ ಮನೆಯವರಿಗಾಗಿ ಕಾಯುತ್ತಿರುತ್ತಾರೆ, ಸಂಗೀತಾ ಹಾಗೂ ನಮ್ರತಾ ಆತನನ್ನು ಸಮಾಧಾನ ಮಾಡುತ್ತಾರೆ. ಈ ವೇಳೆ ಪ್ರತಾಪ್ ಅವರ ತಾಯಿ ಧ್ವನಿ ಕೇಳುತ್ತದೆ. ಪ್ರತಾಪ್ ಅವ್ವಾ ಎಂದು ಮನೆಯಲ್ಲಾ ಹುಡುಕಾಡುತ್ತಾರೆ. ನಂತರ ಮೇನ್ ಡೋನ್ ಕ್ಲೋಸ್ ಮಾಡಲಾಗಿದೆ. ಅತ್ತ ಕಡೆ ಪ್ರತಾಪ್ ಅಪ್ಪ-ಅಮ್ಮ ಇರುವುದನ್ನು ನೋಡಬಹುದು.