ಬಿಗ್ಬಾಸ್ ಖ್ಯಾತಿಯ ಡ್ರೋನ್ ಪ್ರತಾಪ್, ಸ್ಯಾಂಡಲ್ವುಡ್ ಡಿಂಪಲ್ ಕ್ವೀನ್ ಕೆನ್ನೆ ಸವರಿ ಹವಾ ಸೃಷ್ಟಿಸಿದ್ದಾರೆ. ಇದರ ವಿಡಿಯೋ ವೈರಲ್ ಆಗಿದೆ ಏನಿದು?
ಎರಡು ವರ್ಷಗಳ ಹಿಂದೆ ಡ್ರೋನ್ ಪ್ರತಾಪ್ ಸಕತ್ ಹವಾ ಸೃಷ್ಟಿ ಮಾಡಿದ್ದ ಯುವಕ. ಇದ್ದರೆ ಇಂಥ ಮಗ ಇರಬೇಕು, ನೀನೂ ಒಬ್ಬ ಇದ್ಯಾ... ದಂಡ-ಪಿಂಡ ಎಂದೆಲ್ಲಾ ಅದೆಷ್ಟೋ ಅಪ್ಪ-ಅಮ್ಮಂದಿರು ಡ್ರೋನ್ ಪ್ರತಾಪ್ನ ಭಾಷಣ ಕೇಳಿ ಮಕ್ಕಳಿಗೆ ಬೈದದ್ದೇ ಬೈದದ್ದು, ಪ್ರತಾಪ್ನ ಪ್ರತಾಪವನ್ನು ಹಾಡಿ ಹೊಗಳಿದ್ದೇ ಹೊಗಳಿದ್ದು. ವಿಶ್ವವಿದ್ಯಾಲಯಗಳಲ್ಲಿ, ಘಟಾನುಘಟಿಗಳ ಎದುರಿನಲ್ಲಿ, ಸೆಲೆಬ್ರಿಟಿಗಳ ಜೊತೆಯಲ್ಲಿ, ರಾಜಕಾರಣಿಗಳು, ಸಿನಿಮಾ ನಟರು... ಹೀಗೆ ಎಲ್ಲರ ಎದುರೂ ಭಾಷಣ ಮಾಡುತ್ತಾ, ತಾನು ಪಟ್ಟಿರುವ ಕಷ್ಟಗಳನ್ನೆಲ್ಲಾ ಕಣ್ಣಿಗೆ ಕಟ್ಟುವಂತೆ ಹೇಳುತ್ತಲೇ ಎಲ್ಲರ ಪ್ರೀತಿ, ವಿಶ್ವಾಸ ಗಳಿಸಿ ಭಲೆ ಭಲೆ ಎನ್ನಿಸಿಕೊಂಡವರು ಡ್ರೋನ್ ಪ್ರತಾಪ್. ಆದರೆ, ಅದೊಂದು ದಿನ ಪ್ರತಾಪ್ಗೆ ಗ್ರಹಗತಿಗಳೇ ಬದಲಾಗೋಯ್ತು. ಡ್ರೋನ್ ಮಾಡುವುದಾಗಿ ಹೇಳಿ ನಂಬಿಸಿದ್ದರಿಂದ ಹಿಡಿದು, ತಮ್ಮ ನೋವಿನ ಜೀವನದ ಬಗ್ಗೆ ಎಲ್ಲರ ಕಣ್ಣು ತೇವ ಮಾಡುವಂತೆ ಆಡಿದ ಮಾತುಗಳು ಎಲ್ಲವೂ ಹಸಿಹಸಿ ಸುಳ್ಳು ಎಂದು ಸುದ್ದಿಯಾಯಿತು. ಅಲ್ಲಿಂದ ಡ್ರೋನ್ ಪ್ರತಾಪ್ ವಿರುದ್ಧ ಗಂಭೀರ ಆರೋಪಗಳೇ ಹರಿದು ಬಂದವು. ಎಷ್ಟೋ ಮಂದಿ ಸುಳ್ಳು ಹೇಳಿ ತಮ್ಮಿಂದ ಹಣ ವಸೂಲಿ ಮಾಡಿದ್ದಾನೆ ಎನ್ನುವ ಆರೋಪಗಳೆಲ್ಲವೂ ಮಾಡಲು ಶುರು ಮಾಡಿದರು. ಕೊನೆಗೆ ದೂರು ದಾಖಲಾಗಿ, ಜೈಲು ಶಿಕ್ಷೆಯೂ ಆಯಿತು. ಕೊನೆಗೂ ಸ್ವತಂತ್ರವಾಗಿ ಡ್ರೋನ್ ಮಾತ್ರ ಮಾಡಿ ತೋರಿಸಲೇ ಇಲ್ಲ. ಆದರೂ ಹೆಸರು ಮಾತ್ರ ಡ್ರೋನ್ ಪ್ರತಾಪ್ ಎಂದೇ ಶಾಶ್ವತವಾಗಿ ಬಿಟ್ಟಿತು!
ಆದರೆ, ಗ್ರಹಗತಿ ಒಂದೇ ರೀತ ಇರಲ್ವಲ್ಲಾ, ಇಂಥ ಕಾಂಟ್ರವರ್ಸಿ ಮಾಡಿಕೊಂಡವರಿಗಾಗಿಯೇ ಯಾವುದಾದರೂ ಒಂದು ಅವಕಾಶಗಳ ಬಾಗಿಲು ತೆರೆದೇ ಇರುತ್ತದೆ ಎನ್ನುವ ಹಾಗೆ ಬಿಗ್ಬಾಸ್ ಡ್ರೋನ್ ಪ್ರತಾಪ್ರನ್ನು ಸ್ವಾಗತಿಸಿತು. ಅಲ್ಲಿಂದ ಮತ್ತೆ ಪ್ರತಾಪ್ ಅವರ ಶುಕ್ರದೆಸೆ ಶುರುವಾಯಿತು. ಬಿಗ್ಬಾಸ್ ಮನೆಯಲ್ಲಿ ಲಕ್ಷಾಂತರ ಅಭಿಮಾನಿಗಳನ್ನು ಪಡೆದು, ನೀವೇ ನಮ್ಮ ವಿನ್ನರ್ ಎನ್ನುವಷ್ಟರ ಮಟ್ಟಿಗೆ ಕ್ರೇಜ್ ಹುಟ್ಟುಹಾಕಿದರು ಪ್ರತಾಪ್. ಕೊನೆಗೆ ರನ್ನರ್ ಅಪ್ ಆಗಿ ಹೊರಬಂದು, ಹಲವು ರೀತಿಯ ಒಳ್ಳೆಯ ಕಾರ್ಯಗಳನ್ನು ಮಾಡುತ್ತಿದ್ದಾರೆ. ಮಗನ ನಡವಳಿಕೆಯಿಂದ ಬೇಸತ್ತಿದ್ದ ಅಪ್ಪ-ಅಮ್ಮಂದಿರೂ ಈಗ ಒಂದಾಗಿದ್ದಾರೆ. ಆದರೆ ಮುಗ್ಧತನದ ಸೋಗು ಹಾಕಿ ಮರಳು ಮಾಡುವ ಬುದ್ಧಿ ಮಾತ್ರ ಬಿಟ್ಟಿಲ್ಲ ಎಂದು ಹಲವರು ಟ್ರೋಲ್ ಮಾಡುವುದು ನಡೆದೇ ಇದೆ.
ನೀನೇ ವಿನ್ನರು, ಸಂಗೀತಾನೇ ರನ್ನರು ಕಣ್ಲಾ... ಹೋಮ್ ಟೂರ್ ಮಾಡಿಸಿದ ಡ್ರೋನ್ ಪ್ರತಾಪ್! ಹಬ್ಬ ಬಲು ಜೋರು
ಅದೇನೆ ಇದ್ದರೂ, ಬಿಗ್ಬಾಸ್ನಿಂದ ಹೊರಕ್ಕೆ ಬಂದ ಮೇಲೆ ಅವರ ಲೆವೆಲ್ಲೇ ಬೇರೆಯಾಗಿ ಹೋಗುತ್ತದಲ್ಲ. ಇದೀಗ ಎಲ್ಲಾ ರಿಯಾಲಿಟಿ ಷೋಗಳಲ್ಲಿ ಡ್ರೋನ್ ಪ್ರತಾಪ್ಗೆ ಭಾರಿ ಬೇಡಿಕೆ ಇದೆ. ಇದೀಗ ಬ್ಯಾಚುಲರ್ ಪಾರ್ಟಿ ಷೋನಲ್ಲಿಯೂ ಕಾಣಿಸಿಕೊಂಡಿದ್ದಾರೆ. ಇದರಲ್ಲಿ ರವಿಚಂದ್ರನ್ ಅವರ ರಾಮಾಚಾರಿ ಸಿನಿಮಾದ ರೀಕ್ರಿಯೇಟ್ ಮಾಡಲಾಗಿತ್ತು. ಆಗ ರವಿಚಂದ್ರನ್ ಅವರ ಗೆಟಪ್‌ನಲ್ಲಿ ಪ್ರತಾಪ್ ಮದುಮಗನಾಗಿ, ಮಾಲಾಶ್ರೀ ಅವರ ಗೆಟಪ್‌ನಲ್ಲಿ ಗಗನಾ ವಧುವಿನಂತೆ ಬಂದಿದ್ದರು. ಸಿನಿಮಾದಲ್ಲಿ ರವಿಚಂದ್ರನ್ ಪೆದ್ದನಂತೆ ಮಾಲಾಶ್ರೀ ಕೊರಳಿಗೆ ತಾಳಿ ಕಟ್ಟಿದಂತೆಯೇ, ಪ್ರತಾಪ್ ಕೂಡ ಪೆದ್ದನಂತೆಯೇ ನಟಿಸಿ ಗಗನಾ ಕೊರಳಿಗೆ ತಾಳಿ ಕಟ್ಟಿದರು. ಆ್ಯಕ್ಟಿಂಗ್ನಲ್ಲಿ ಡ್ರೋನ್ ಪ್ರತಾಪ್ ಪಳಗಿರುವ ಕಾರಣ, ಅದೇ ಪೆದ್ದನಂತೆಯೇ ಚೆನ್ನಾಗಿ ನಟಿಸುತ್ತಲೇ ತಾಳಿ ಕಟ್ಟಿದರು.
ಇದಾದ ಬಳಿಕ, ರಚಿತಾ ರಾಮ್ ಅವರ ಕೆನ್ನೆಯನ್ನೂ ಸವರಿದರು. ಹಾಗೆಂದು ಡ್ರೋನ್ ಪ್ರತಾಪ್ ಸುಖಾಸುಮ್ಮನೇ ಹೋಗಿ ಕೆನ್ನೆ ಸವರಿದ್ದಲ್ಲ. ಬದಲಿಗೆ, ಅಲ್ಲಿ ಇದ್ದ ರಚಿತಾ ರಾಮ್ ಜೊತೆ ಹಾಡೊಂದಕ್ಕೆ ಸ್ಟೆಪ್ ಹಾಕುವ ಮೂಲಕ ಡ್ರೋನ್ ಪ್ರತಾಪ್ ಕೆನ್ನೆ ಸವರಿ ಪ್ರೀತಿಸಿದ್ದಾರೆ. ರಚಿತಾ ರಾಮ್ ನಾಚಿಕೊಂಡಿದ್ದಾರೆ. ಇದರ ವಿಡಿಯೋ ವೈರಲ್ ಆಗುತ್ತಿದೆ. ರಚಿತಾ ರಾಮ್ ಬಳಿ ಹೋಗುವಷ್ಟು, ಅವರ ಕೆನ್ನೆ ಸವರುವಷ್ಟು ಅವಕಾಶ ಡ್ರೋನ್ಗೆ ಸಿಕ್ಕಿತಲ್ಲಾ ಎಂದು ರಚಿತಾ ರಾಮ್ ಫ್ಯಾನ್ಸ್ ಹೊಟ್ಟೆ ಉರಿದುಕೊಂಡರೆ, ಮತ್ತೆ ಕೆಲವರು ಕಣ್ ಕಣ್ ಬಿಟ್ಟಿದ್ದಾರೆ. ಎಲ್ಲಿಯೋ ಇರಬೇಕಿದ್ದ ಡ್ರೋನ್ ಪ್ರತಾಪ್, ಇನ್ನೆಲ್ಲೋ ಹೋದ ಬಿಡಪ್ಪಾ... ಅದಕ್ಕೇ ಹೇಳೋದು... ಎಂದೆಲ್ಲಾ ಒಂದಿಷ್ಟು ಗಾದೆ ಮಾತುಗಳನ್ನೂ ಕಮೆಂಟ್ಗಳಲ್ಲಿ ಹಾಕ್ತಿದ್ದಾರೆ ನೆಟ್ಟಿಗರು.
ಬಡವರ ಮಕ್ಕಳು ಬೆಳೀಬೇಕು, ಫೋನ್ ಕುಟ್ಟಿ ಪುಡಿಪುಡಿ ಮಾಡಿ ಎಂದ ಡ್ರೋನ್ ಪ್ರತಾಪ್! ವಿಡಿಯೋ ವೈರಲ್