
ಸೋಶಿಯಲ್ ಮೀಡಿಯಾ ಸ್ಟಾರ್ ರೇಣು ಸುಧಿ (ರೇಷ್ಮಾ) ಅವರ ಆರೋಗ್ಯ ತೀವ್ರ ಹದಗೆಟ್ಟಿದ್ದು, ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ವರದಿಯಾಗಿದೆ.
ಸುಧಿ ಅವರು ಕಳೆದ ಕೆಲ ತಿಂಗಳುಗಳಿಂದ ಸ್ತನ ಕ್ಯಾನ್ಸರ್ (Breast Cancer) ವಿರುದ್ಧ ಹೋರಾಡುತ್ತಿದ್ದಾರೆ. ಐದನೇ ಸುತ್ತಿನ ಕಿಮೋಥೆರಪಿಯ ನಂತರ ಗಂಭೀರ ಅಸ್ವಸ್ಥಗೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಅವರನ್ನು ಕೇರಳದ ಕೊಟ್ಟಾಯಂ ಮೆಡಿಕಲ್ ಕಾಲೇಜು ಆಸ್ಪತ್ರೆಯ ತೀವ್ರ ನಿಗಾ ಘಟಕಕ್ಕೆ (ICU) ದಾಖಲಿಸಿ ಚಿಕಿತ್ಸೆ ನೀಡಲಾಗ್ತಿದೆ.
ರೇಣು ಸುಧಿ ಆರೋಗ್ಯ ಹದಗೆಟ್ಟಿರುವ ಬಗ್ಗೆ ಆಪ್ತ ಗೆಳತಿ ಹಾಗೂ ಬಿಗ್ ಬಾಸ್ ಸಹ-ಸ್ಪರ್ಧಿ ಸಾರಿಕಾ ಕೆ.ಬಿ ಸೋಶಿಯಲ್ ಮೀಡಿಯಾದಲ್ಲಿ ತಿಳಿಸಿದ್ದಾರೆ. ರೇಣು ಸಹೋದರಿಯಿಂದ ಮಾಹಿತಿ ಪಡೆದು ಸಾರಿಕಾ ವಿಡಿಯೋ ಬಿಡುಗಡೆ ಮಾಡಿದ್ದಾರೆ. ಹಿಂದಿನ ನಾಲ್ಕು ಕಿಮೋಥೆರಪಿಗಳ ಬಳಿಕ ರೇಣು ಚೇತರಿಸಿಕೊಂಡಿದ್ದರು. 5ನೇ ಕಿಮೋ ಪಡೆದು 10 ದಿನ ಕಳೆದಿದೆ. ಆದರೆ ಅವರು ಇನ್ನೂ ಚೇತರಿಸಿಕೊಂಡಿಲ್ಲ. ಅವರಿಗೆ ಬೆಡ್‌ನಿಂದ ಕುಳಿತುಕೊಳ್ಳಲು ಆಗುತ್ತಿಲ್ಲ, ಆಹಾರ ಕೂಡ ಪಡೆಯಲು ಆಗುತ್ತಿಲ್ಲ ಎಂದು ಕಣ್ಣೀರು ಇಟ್ಟಿದ್ದಾರೆ.
ಮುಂದುವರಿದು.. ಆಹಾರ ಮತ್ತು ಔಷಧಿ ನೀಡಲು ಅವರ ದೇಹಕ್ಕೆ PICC ಲೈನ್ ಹಾಕಲಾಗಿದೆ. ಪ್ರಸ್ತುತ ಅವರ ದೇಹವು ಮುಂದಿನ ಕಿಮೋ ತಡೆದುಕೊಳ್ಳುವಷ್ಟು ಸದೃಢವಾಗಿಲ್ಲ ಎಂದು ವೈದ್ಯರು ಸ್ಪಷ್ಟಪಡಿಸಿದ್ದಾರೆ. ರೇಣು ಸಂಕಷ್ಟದಿಂದ ಪಾರಾಗಿ ಎಲ್ಲರೂ ಪ್ರಾರ್ಥಿಸಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ.
ರೇಣು ತಮ್ಮ ಕ್ಯಾನ್ಸರ್ ಜರ್ನಿಯನ್ನು ಕಳೆದ ಜೂನ್‌ನಲ್ಲಿ ಸಾರ್ವಜನಿಕವಾಗಿ ಹಂಚಿಕೊಂಡಿದ್ದರು. ಅವರ ಪ್ರಕಾರ.. ಈ ಮಾರಕ ಕಾಯಿಲೆ ಲಕ್ಷಣಗಳು ಹದಿಹರೆಯದಲ್ಲೇ ಶುರುವಾಗಿದ್ದವು. 15 ವರ್ಷ ವಯಸ್ಸಿದ್ದಾಗಲೇ ಎದೆಯಲ್ಲಿ ಸಣ್ಣ ಗಡ್ಡೆ ಕಾಣಿಸಿಕೊಂಡಿತ್ತು. ಯಾವುದೇ ನೋವಿಲ್ಲದ ಕಾರಣ ಅವರು ಅದನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ. ನಂತರ ಕುಟುಂಬಸ್ಥರಿಗೆ ತಿಳಿದು ಆಸ್ಪತ್ರೆಗೆ ತೋರಿಸಿದಾಗ.. ಅದು ಭವಿಷ್ಯದಲ್ಲಿ ಕ್ಯಾನ್ಸರ್ ಆಗಿ ರೂಪಾಂತರಗೊಳ್ಳಬಹುದು ಎಂದು ವೈದ್ಯರು ಎಚ್ಚರಿಸಿದ್ದರು. ಆದರೆ ಅದನ್ನು ಅವರು ಕಾಲಕ್ರಮೇಣ ಮರೆತಿದ್ದರು ಎನ್ನಲಾಗಿದೆ.
2023ರ ಜೂನ್ ತಿಂಗಳಲ್ಲಿ ರೇಣು ಪತಿ, ಖ್ಯಾತ ಹಾಸ್ಯ ಕಲಾವಿದ ಕೊಲ್ಲಂ ಸುಧಿ ರಸ್ತೆ ಅಪಘಾತದಲ್ಲಿ ಪ್ರಾಣ ಕಳೆದುಕೊಳ್ತಾರೆ. ಪತಿಯ ಅಗಲಿಕೆಯ ಆಘಾತದಲ್ಲಿದ್ದ ರೇಣು, ತೀವ್ರ ದೈಹಿಕ ಸಮಸ್ಯೆಗೆ ಒಳಗಾದರು. ಆಸ್ಪತ್ರೆಗೆ ಹೋದಾಗ ಅವರಿಗೆ ಸ್ತನ ಕ್ಯಾನ್ಸರ್ ಇರುವುದು ಗೊತ್ತಾಯಿತು. ಈ ಆಘಾತಕಾರಿ ಸತ್ಯವನ್ನು ಸುಧಿ ಆರಂಭದಲ್ಲಿ ಮುಚ್ಚಿಟ್ಟಿದ್ದರು. ನಂತರ ಅವರ ನಡವಳಿಕೆಯಲ್ಲಿನ ಬದಲಾವಣೆ ಗಮನಿಸಿದ ಮ್ಯಾನೇಜರ್ ಕರಿಷ್ಮಾ, ಕುಟುಂಬಕ್ಕೆ ವಿಷಯ ತಿಳಿಸಿದ್ದರು. ಆ ಬಳಿಕ ಅವರು ತುರ್ತು ಚಿಕಿತ್ಸೆಗೆ ಒಳಗಾಗಿ ಕಿಮೋಥೆರಪಿ ಆರಂಭಿಸಿದರು.
ಪತಿ ಕಳೆದುಕೊಂಡು ಒಂಟಿಯಾಗಿದ್ದ ರೇಣುಗೆ ಕ್ಯಾನ್ಸರ್ ಚಿಕಿತ್ಸೆಯ ದುಬಾರಿ ವೆಚ್ಚ ಭರಿಸುವುದು ಕಷ್ಟಕರವಾಗಿತ್ತು. ಹೀಗಾಗಿ ಅವರು ಸೋಶಿಯಲ್ ಮೀಡಿಯಾದಲ್ಲಿ ಆರ್ಥಿಕ ನೆರವಿಗಾಗಿ ಮನವಿ ಮಾಡಿದ್ದರು. ಹೆಣ್ಣುಮಕ್ಕಳಿಗೆ ಮಹತ್ವದ ಸಂದೇಶ ನೀಡಿದ್ದ ರೇಣು, ದೇಹದಲ್ಲಿ ಯಾವುದೇ ಭಾಗದಲ್ಲಿ ಗಡ್ಡೆ ಕಾಣಿಸಿಕೊಂಡರೆ.. ಅದು ನೋವಿಲ್ಲದಿದ್ದರೂ ಸಹ ದಯವಿಟ್ಟು ನಿರ್ಲಕ್ಷ್ಯ ಮಾಡಬೇಡಿ. ತಕ್ಷಣವೇ ವೈದ್ಯರ ಬಳಿ ಹೋಗಿ ಪರೀಕ್ಷೆ ಮಾಡಿಸಿಕೊಳ್ಳಿ ಎಂದು ಕೈಮುಗಿದು ಕೇಳಿಕೊಂಡಿದ್ದರು.
ರೇಣು ಸುಧಿ ಮೂಲ ಹೆಸರು ರೇಷ್ಮಾ ಪಿ. ಥಂಕಚ್ಚನ್. ಇವರು ಜನಪ್ರಿಯ ಡಿಜಿಟಲ್ ಕಂಟೆಂಟ್ ಕ್ರಿಯೇಟರ್. ಮಲಯಾಳಂ ಚಿತ್ರರಂಗ ಹಾಗೂ ಟಿವಿ ಲೋಕದ ಪ್ರಸಿದ್ಧ ಕಾಮಿಡಿಯನ್ ಮತ್ತು ಮಿಮಿಕ್ರಿ ಆರ್ಟಿಸ್ಟ್ ಆಗಿದ್ದ ದಿವಂಗತ ಕೊಲ್ಲಂ ಸುಧಿ ಅವರನ್ನು ಮದುವೆ ಆಗಿದ್ದರು. ಪತಿಯ ನಿಧನದ ನಂತರ ಬಿಗ್ ಬಾಸ್ ಮಲಯಾಳಂ ಸೀಸನ್ 7 ರಲ್ಲಿ ಸ್ಪರ್ಧಿಯಾಗಿ ಭಾಗವಹಿಸಿದ್ದ ರೇಣು, ಶೋನಿಂದ ಬೇಗನೆ ಹೊರಬಂದರು. ಆದರೂ ಅವರು ಅಪಾರ ಅಭಿಮಾನಿಗಳನ್ನ ಸಂಪಾದಿಸುವಲ್ಲಿ ಯಶಸ್ವಿಯಾಗಿದ್ದರು. ಸದ್ಯ ಕ್ಯಾನ್ಸರ್ ವಿರುದ್ಧ ಜೀವನ್ಮರಣ ಹೋರಾಟ ನಡೆಸುತ್ತಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.