
ಬೆಂಗಳೂರು (ನ.19): ಕಾಮಿಡಿ ಕಿಲಾಡಿಗಳು ರಿಯಾಲಿಟಿ ಶೋ ಮೂಲಕ ಮನೆಮಾತಾಗಿದ್ದ ನಟಿ ನಯನಾ ಬಂಧನ ಭೀತಿ ಎದುರಿಸುತ್ತಿದ್ದಾರೆ. ಜಾತಿ ನಿಂದನೆ ಮಾಡಿದ ಆರೋಪದ ಮೇಲೆ ಅವರ ವಿರುದ್ಧ ಅಟ್ರಾಸಿಟಿ ಕೇಸ್ ದಾಖಲಾಗಿದೆ. ಸವರ್ಣೀಯರಾಗಿರುವ ನಯನಾ ಅವರು ದಲಿತ ನಿಂದನೆ ಮಾಡಿದ್ದಾರೆ ಎಂದು ಆರೋಪಿಸಿ ದಲಿತ ಸಂಘಟನೆಯೊಂದು ಇವರು ವಿರುದ್ಧ ಕೇಸ್ ದಾಖಲಾಗಿದೆ. ಇದೇ ಕೇಸ್ ವಿಚಾರದಲ್ಲಿ ಅವರ ಬಂಧನವಾಗುವ ಸಾಧ್ಯತೆಯೂ ಇದೆ.
ಕಳೆದ ತಿಂಗಳು ಚಿಟ್ ಫಂಡ್ ವಂಚನೆ ಕುರಿತು ಮಾತನಾಡುತ್ತಿದ್ದ ವೇಳೆ ದಲಿತ ವಿರೋಧಿ ಮತ್ತು ಜಾತಿ ನಿಂದನಾತ್ಮಕ ಪದಗಳನ್ನು ಬಳಸಿದ್ದಾರೆ ಎಂಬ ಆರೋಪದ ಮೇಲೆ ನಟಿ ನಯನಾ ವಿರುದ್ಧ ಕಲಬುರ್ಗಿಯಲ್ಲಿ ದೂರು ದಾಖಲಾಗಿದೆ. ಕಳೆದ ತಿಂಗಳು (ಅಕ್ಟೋಬರ್) 29 ರಂದು ಮೈಸೂರಿನ ಸರಸ್ವತಿಪುರದಲ್ಲಿ ನಡೆದ ಚಿಟ್ ಫಂಡ್ ಹಗರಣದ ಬಗ್ಗೆ ಮಾತನಾಡುತ್ತಿದ್ದ ನಯನಾ, ಆ ಸಂದರ್ಭದಲ್ಲಿ ಜಾತಿ ಸೂಚಕ ಪದ ಮತ್ತು ಹೊಲಸು ಪದವನ್ನು ಸೇರಿಸಿ ಮಾತನಾಡಿದ್ದರು.
ಇದೇ ವಿಚಾರವಾಗಿ ಕಲಬುರ್ಗಿಯ ದಲಿತ ಸೇನೆ ಸಂಘಟನೆಯ ಅಧ್ಯಕ್ಷರಾದ ಮಂಜುನಾಥ ಎಂಬುವವರು ಪೊಲೀಸರಿಗೆ ದೂರು ನೀಡಿದ್ದಾರೆ. ನಯನಾ ಅವರು ಸವರ್ಣೀಯರಾಗಿದ್ದು, ಅವರ ದಲಿತ ವಿರೋಧಿ ಮನಸ್ಥಿತಿಯಿಂದಾಗಿ ಈ ರೀತಿ ಮಾತನಾಡಿದ್ದಾರೆ. ಈ ಹೇಳಿಕೆಗಳಿಂದ ಸಮುದಾಯದ ಜನರ ಭಾವನೆಗಳಿಗೆ ಧಕ್ಕೆ ಉಂಟಾಗಿದೆ.
ಮಂಜುನಾಥ ಅವರ ದೂರಿನ ಅನ್ವಯ, ನಟಿ ನಯನಾ ಅವರ ವಿರುದ್ಧ ಅಟ್ರಾಸಿಟಿ ತಡೆ ಕಾಯ್ದೆ (SC/ST (Prevention of Atrocities) Act) ಅಡಿಯಲ್ಲಿ ದೂರು ದಾಖಲಿಸಲಾಗಿದೆ.
ನಟಿ ನಯನಾ ಅವರ ವಿರುದ್ಧ ಇದೀಗ ಜಾತಿ ನಿಂದನೆಯ ಆರೋಪದ ಮೇಲೆ ದೂರು ದಾಖಲಾಗಿರುವಂತೆಯೇ, ಇದೇ ರೀತಿಯ ವಿವಾದಕ್ಕೆ ಈ ಹಿಂದೆ ನಟ ಉಪೇಂದ್ರ ಅವರೂ ಸಿಲುಕಿದ್ದರು. ಕಳೆದ ಬಾರಿ ನಟ ಉಪೇಂದ್ರ ಅವರು ತಮ್ಮ ಒಂದು ವಿಡಿಯೋದಲ್ಲಿ ಇದೇ ಜಾತಿ ಸೂಚಕ ಪದವನ್ನು ಗಾದೆಯ ರೂಪದಲ್ಲಿ ಬಳಸಿ ವಿವಾದ ಸೃಷ್ಟಿಸಿದ್ದರು. ಆಗ ಹಲವು ದಲಿತಪರ ಸಂಘಟನೆಗಳು ಉಪೇಂದ್ರ ವಿರುದ್ಧ ದೂರು ದಾಖಲಿಸಿ, ರಾಜ್ಯದಾದ್ಯಂತ ತೀವ್ರ ಪ್ರತಿಭಟನೆಗಳನ್ನು ನಡೆಸಿದ್ದವು. ಈಗ ನಟಿ ನಯನಾ ಅವರೂ ಅದೇ ಪದವನ್ನು ಬಳಸಿದ್ದರಿಂದ, ಅವರ ವಿರುದ್ಧವೂ ದೂರು ದಾಖಲಾಗಿದ್ದು, ಇದು ಮತ್ತೊಂದು "ಅಟ್ರಾಸಿಟಿ ಕಾಯ್ದೆ" ಪ್ರಕರಣವಾಗಿ ಮುಂದುವರಿದಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.