
‘ಬಿಗ್‌ಬಾಸ್ ಕನ್ನಡ ಸೀಸನ್ 12’ ಮೂಲಕ ಕನ್ನಡಿಗರಿಗೆ ಮತ್ತಷ್ಟು ಪರಿಚಿತರಾದ ನಟಿ ರಿಷಾ ಗೌಡ, ಇದೀಗ ತಮ್ಮ ಜೀವನದ ಬಹುದೊಡ್ಡ ಕನಸನ್ನು ನನಸಾಗಿಸಿಕೊಂಡಿದ್ದಾರೆ. ಸ್ವಂತ ಮನೆ ಕಟ್ಟಿಸುವ ಕನಸು ಕಂಡಿದ್ದ ರಿಷಾ, ತಮ್ಮ 20ರ ಹರೆಯದಲ್ಲೇ ಆ ಕನಸನ್ನು ನನಸಾಗಿಸಿಕೊಂಡು, ಹೊಸ ಮನೆಯ ಗೃಹಪ್ರವೇಶ ಮಾಡಿದ್ದಾರೆ. ಹೊಸ ಮನೆಯ ಸಂಭ್ರಮದ ಫೋಟೊಗಳನ್ನು ರಿಷಾ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ತಮ್ಮ ಖುಷಿ ಹಾಗೂ ಭಾವುಕತೆಯನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ.
‘ನನ್ನ ಮನೆ... ಒಂದು ಕನಸು ಇಂದು ನನಸಾಗಿದೆ!’
ಹೊಸ ಮನೆಯ ಫೋಟೊಗಳನ್ನು ಹಂಚಿಕೊಂಡಿರುವ ರಿಷಾ, “ನನ್ನ ಮನೆ. ಒಂದು ಕನಸು… ಇಂದು ನನಸಾಗಿದೆ” ಎಂದು ಭಾವುಕವಾಗಿ ಬರೆದುಕೊಂಡಿದ್ದಾರೆ. ತಾನು ಬಹಳ ಹಿಂದಿನಿಂದಲೂ ಕಂಡಿದ್ದ ಕನಸೊಂದು ಇದೀಗ ನನಸಾಗಿದೆ. ಸ್ವಂತ ಮನೆಯೊಳಗೆ ನಿಂತಿರುವ ಈ ಕ್ಷಣದಲ್ಲಿ ಮನಸ್ಸು ಕೃತಜ್ಞತೆ ಮತ್ತು ಹೆಮ್ಮೆಯಿಂದ ತುಂಬಿದೆ ಎಂದು ರಿಷಾ ಹೇಳಿದ್ದಾರೆ. ತಮ್ಮ ಪಾಲಿಗೆ ಇದು ಕೇವಲ ಒಂದು ಮನೆಯಲ್ಲ. ಬದಲಾಗಿ, ತಾವು ಸಾಗಿ ಬಂದ ಹಾದಿ, ಎದುರಿಸಿದ ಹೋರಾಟಗಳು ಹಾಗೂ ಅವುಗಳನ್ನು ದಾಟಿ ಬಂದಿರುವುದರ ಸಂಕೇತ ಎಂದು ರಿಷಾ ತಮ್ಮ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.
ದೇವರಿಗೆ ಧನ್ಯವಾದ ತಿಳಿಸಿದ ರಿಷಾ
ತಮ್ಮ ಜೀವನದ ಈ ವಿಶೇಷ ಕ್ಷಣಕ್ಕಾಗಿ ದೇವರಿಗೆ ಕೃತಜ್ಞತೆ ಸಲ್ಲಿಸಿರುವ ರಿಷಾ, ತಮ್ಮನ್ನು ಆಯ್ಕೆ ಮಾಡಿದ್ದಕ್ಕಾಗಿ, ಸರಿಯಾದ ಮಾರ್ಗದರ್ಶನ ನೀಡಿದ್ದಕ್ಕಾಗಿ ಹಾಗೂ ಜೀವನದಲ್ಲಿ ತಾವು ಗೆದ್ದಿದ್ದೇನೆ ಎಂಬುದನ್ನು ಹೇಳಿಕೊಳ್ಳಲು ಕಾರಣ ನೀಡಿದ್ದಕ್ಕಾಗಿ ದೇವರಿಗೆ ಧನ್ಯವಾದ ತಿಳಿಸಿದ್ದಾರೆ. ಮತ್ತೊಂದು ಪೋಸ್ಟ್‌ನಲ್ಲಿ ಹೊಸ ಮನೆಯ ಮುಂದೆ ನಿಂತಿರುವ ಫೋಟೊವನ್ನು ಹಂಚಿಕೊಂಡಿರುವ ಅವರು, “ನಾನು ಕಂಡಿದ್ದ ಕನಸು, ಈಗ ನನ್ನ ಕಣ್ಣ ಮುಂದೆಯೇ ನಿಂತಿದೆ” ಎಂದು ಭಾವುಕ ಸಾಲು ಬರೆದಿದ್ದಾರೆ. ರಿಷಾ ಅವರ ಈ ಪೋಸ್ಟ್‌ಗಳಿಗೆ ಅಭಿಮಾನಿಗಳು ಹಾಗೂ ಸ್ನೇಹಿತರಿಂದ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ.
ಇತ್ತೀಚೆಗಷ್ಟೇ ಹೊಸ ಕಾರು ಕೂಡ ಖರೀದಿಸಿದ್ದರು
ರಿಷಾ ಗೌಡ ಅವರಿಗೆ ಇತ್ತೀಚಿನ ದಿನಗಳಲ್ಲಿ ಒಂದರ ಹಿಂದೆ ಒಂದರಂತೆ ಸಂಭ್ರಮದ ಕ್ಷಣಗಳು ಎದುರಾಗುತ್ತಿವೆ. ಕೆಲವೇ ದಿನಗಳ ಹಿಂದೆ ಅವರು ಹೊಸ ಮಹೀಂದ್ರಾ ಎಕ್ಸ್‌ಯುವಿ ಕಾರು ಖರೀದಿಸಿದ್ದರು. ಕಾರು ಖರೀದಿಸಿದ ಸಂಭ್ರಮದ ವಿಡಿಯೋವನ್ನೂ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಇದೀಗ ಸ್ವಂತ ಮನೆಯ ಕನಸನ್ನೂ ನನಸಾಗಿಸಿಕೊಂಡಿರುವುದು ಅವರ ಅಭಿಮಾನಿಗಳ ಖುಷಿಯನ್ನು ಮತ್ತಷ್ಟು ಹೆಚ್ಚಿಸಿದೆ.
ಬಿಗ್‌ಬಾಸ್ ಮನೆಯಲ್ಲಿ ಖಡಕ್ ಮಾತಿನಿಂದ ಗಮನ ಸೆಳೆದಿದ್ದ ರಿಷಾ
ರಿಷಾ ಗೌಡ ‘ಬಿಗ್‌ಬಾಸ್ ಕನ್ನಡ ಸೀಸನ್ 12’ರಲ್ಲಿ ವೈಲ್ಡ್‌ಕಾರ್ಡ್ ಸ್ಪರ್ಧಿಯಾಗಿ ಮನೆ ಪ್ರವೇಶಿಸಿದ್ದರು. ಬಿಗ್‌ಬಾಸ್ ಮನೆಯಲ್ಲಿ ಇದ್ದದ್ದು ಕೆಲವೇ ದಿನಗಳಾದರೂ, ತಮ್ಮ ನೇರ ಮಾತು ಮತ್ತು ಖಡಕ್ ವ್ಯಕ್ತಿತ್ವದ ಮೂಲಕ ಗಮನ ಸೆಳೆದಿದ್ದರು. ಬಿಗ್‌ಬಾಸ್ ಮನೆಯ ಮೂಲಕ ಕನ್ನಡಿಗರ ನಡುವೆ ಹೆಚ್ಚು ಪರಿಚಿತರಾದ ರಿಷಾ, ಇದೀಗ ತಮ್ಮ ವೈಯಕ್ತಿಕ ಜೀವನದ ಈ ಹೊಸ ಅಧ್ಯಾಯದ ಮೂಲಕವೂ ಸುದ್ದಿಯಾಗಿದ್ದಾರೆ.
ಕೊಡಗಿನ ಮೂಲದ ರಿಷಾ ಗೌಡ, ಮೈಸೂರಿನ ಮೈಮ್ ರಮೇಶ್ ಅವರ ಗರಡಿಯಲ್ಲಿ ತರಬೇತಿ ಪಡೆದಿದ್ದು, ರಂಗಭೂಮಿಯಲ್ಲೂ ಸಕ್ರಿಯರಾಗಿದ್ದರು. ಬಳಿಕ ‘ಕ್ರೇಜಿ ಕೀರ್ತಿ’ ಚಿತ್ರದ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟರು. ನಟನೆ ಎಂದರೆ ಕೇವಲ ನಾಯಕಿಯಾಗಿ ತೆರೆ ಮೇಲೆ ಚೆನ್ನಾಗಿ ಕಾಣಿಸಿಕೊಳ್ಳುವುದಲ್ಲ; ವಿಭಿನ್ನ ಹಾಗೂ ಸವಾಲಿನ ಪಾತ್ರಗಳನ್ನು ನಿರ್ವಹಿಸುವುದೂ ಮುಖ್ಯ ಎಂಬ ಅಭಿಪ್ರಾಯವನ್ನು ರಿಷಾ ಈ ಹಿಂದೆ ಸಂದರ್ಶನವೊಂದರಲ್ಲಿ ಹಂಚಿಕೊಂಡಿದ್ದರು. ಇದೀಗ 20ರ ಹರೆಯದಲ್ಲೇ ಸ್ವಂತ ಮನೆ ಕಟ್ಟಿಸಿಕೊಂಡಿರುವ ರಿಷಾ ಗೌಡ, ತಮ್ಮ ಕನಸಿನ ಮನೆಯ ಗೃಹಪ್ರವೇಶದ ಸಂಭ್ರಮದಲ್ಲಿದ್ದಾರೆ. ಅವರ ಈ ಹೊಸ ಆರಂಭಕ್ಕೆ ಅಭಿಮಾನಿಗಳು ಶುಭ ಹಾರೈಸುತ್ತಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.