ಪುಟ್ಟಕ್ಕನ ಮಕ್ಕಳು ಸೀರಿಯಲ್ ತಂಡಕ್ಕೆ ಹೇಳದೇ ನಟಿ ಹಂಸಾ ಅವರು ಬಿಗ್‌ಬಾಸ್‌ಗೆ ಹೋಗಿರುವುದಕ್ಕೆ ನಿರ್ದೇಶಕ ಆರೂರು ಜಗದೀಶ್ ಅವರು ಮಾಡಿರುವ ಆರೋಪಕ್ಕೆ ನಟಿಯ ಪ್ರತಿಕ್ರಿಯೆ ಏನು?
ಪುಟ್ಟಕ್ಕನ ಮಕ್ಕಳು ರಾಜಿಗೆ ಇದ್ದ ಖದರ್‍ರೇ ಬೇರೆ. ಪುಟ್ಟಕ್ಕನ ಸವತಿಯಾಗಿ ರಾಜಿ ಪಾತ್ರದಲ್ಲಿ ಮೂರು ವರ್ಷ ಮಿಂಚಿದ್ದರು ನಟಿ ಹಂಸಾ, ನಂತರ ಬಿಗ್ ಬಾಸ್ ಮನೆಯಲ್ಲಿ 4 ವಾರಗಳ ಕಾಲ ಇದ್ದು ಎಲಿಮಿನೇಟ್ ಆಗಿ ಹೊರಬಂದರು. ಬಿಗ್‌ಬಾಸ್ ಮನೆಯಲ್ಲಿ ಇರುವಷ್ಟು ದಿನ ಹವಾ ಕ್ರಿಯೇಟ್ ಮಾಡಿದ್ದರು. ಇವರು ಸಕತ್ ಸದ್ದು ಮಾಡಿದ್ದು, ಲಾಯರ್ ಜಗದೀಶ್ ಅವರೊಂದಿಗಿನ ಒಡನಾಟದಿಂದಾಗಿ. ಕೊನೆಗೆ ಇಬ್ಬರೂ ಹೊರಕ್ಕೆ ಬಂದರು. ಇದು ಬಿಗ್‌ಬಾಸ್ ಹಂಸಾರ ಕಥೆಯಾದ್ರೆ, ಪುಟ್ಟಕ್ಕನ ಮಕ್ಕಳು ರಾಜಿ ಕಥೆ ಬೇರೆಯದ್ದೇ ರೂಪ ಪಡೆದಿದೆ. ದಿಢೀರ್ ಎಂದು ಪುಟ್ಟಕ್ಕನ ಮಕ್ಕಳು ರಾಜಿ ಕಾಣೆಯಾಗಿಬಿಟ್ಟಿದ್ದಾಳೆ. ಸವತಿ ಪಾತ್ರಕ್ಕೆ ಜೀವ ತುಂಬಿದ್ದ ರಾಜಿ ಪಾತ್ರಧಾರಿ ಹಂಸಾ ಅವರನ್ನು ಕಾಣದೇ ಅಭಿಮಾನಿಗಳು ಶಾಕ್ ಆಗಿದ್ದಂತೂ ದಿಟ.
ಈ ಬಗ್ಗೆ 'ಪಂಚಮಿ ಟಾಕ್ಸ್' ಎಂಬ ಯೂಟ್ಯೂಬ್ ಚಾನೆಲ್ ಜೊತೆ ಮಾತನಾಡಿದ್ದ ಪುಟ್ಟಕ್ಕನ ಮಕ್ಕಳು ನಿರ್ದೇಶಕ ಆರೂರು ಜಗದೀಶ್ ಅವರು, ಹಂಸಾ ಅವರು ಯಾರಿಗೂ ಹೇಳದೇ, ಯಾರಿಗೂ ಒಂದು ಮಾತನ್ನೂ ಹೇಳದೇ ಹಂಸಾ ಬಿಗ್‌ಬಾಸ್‌ಗೆ ಹೋಗಿ ಸೀರಿಯಲ್ ತಂಡಕ್ಕೆ ಶಾಕ್ ಕೊಟ್ಟುಬಿಟ್ಟರು ಎಂದಿದ್ದರು. ಒಂದು ಮುಖ್ಯ ಪಾತ್ರದಲ್ಲಿ ನಟಿಸುವ ನಟಿ ಹೀಗೆ ಹೇಳದೇ ಕೇಳದೇ ಹೋದರೆ ಸೀರಿಯಲ್ ಗತಿ ಏನಾಗಬೇಕು ಎನ್ನುವುದನ್ನೂ ಅವರು ಗಮನಿಸಿಲ್ಲ ಎಂದಿದ್ದರು. ನಟನೆಯ ವಿಷಯದಲ್ಲಿ ಹಂಸಾ ಅವರು ಟಾಪ್-1. ತುಂಬಾ ಚೆನ್ನಾಗಿ ಆ್ಯಕ್ಟ್ ಮಾಡುತ್ತಾರೆ. ಅದರಲ್ಲಿ ಎರಡು ಮಾತೇ ಇಲ್ಲ. ಆದರೆ ಹೇಳದೇ ಕೇಳದೇ ದಿಢೀರನೆ ಬಿಗ್‌ಬಾಸ್ ಮನೆಗೆ ಎಂಟ್ರಿ ಕೊಟ್ಟರು. ಅವರು ಯಾಕೆ ಶೂಟಿಂಗ್ಗೆ ಬರಲಿಲ್ಲ ಎನ್ನುವುದೂ ಗೊತ್ತಿರಲಿಲ್ಲ. ಬಳಿಕ ಬಿಗ್ಬಾಸ್ನ ಪ್ರೊಮೋ ನೋಡಿದ ಮೇಲಷ್ಟೇ ನಮಗೆ ಗೊತ್ತಾಗಿದ್ದು ಎಂದಿದ್ದರು. ಅವರು ಬಿಗ್‌ಬಾಸ್‌ಗೆ ಹೋಗುವ ವಿಷಯ ಹೇಳಿದ್ದರೆ, ನಾವೇನೂ ಬೇಡ ಅನ್ನುತ್ತಿರಲಿಲ್ಲ. ಬೇರೆ ವ್ಯವಸ್ಥೆ ಮಾಡಿಕೊಳ್ಳುತ್ತಿದ್ವಿ. ಕಲಾವಿದರಿಗೆ ನೈತಿಕತೆ ಮುಖ್ಯ. ಆದರೆ ಅವರು ಹಾಗೆ ಮಾಡಲಿಲ್ಲ. ಇದೇ ಕಾರಣಕ್ಕೆ ಹಂಸಾ ವಿರುದ್ಧ ದೂರು ಕೊಟ್ಟಿದ್ದೇನೆ ಎಂದೂ ಹೇಳಿದ್ದರು.
ಪುಟ್ಟಕ್ಕನ ಮಕ್ಕಳು ತಂಡಕ್ಕೆ ಬಿಗ್‌ಬಾಸ್ ಹಂಸಾ ಮೋಸ! ದೂರು ಕೊಟ್ಟ ನಿರ್ದೇಶಕ ಹೇಳಿದ್ದೇನು?
ಈಗ ಈ ಮಾತಿಗೆ ನಟಿ ಹಂಸಾ ತಿರುಗಿ ಬಿದ್ದಿದ್ದಾರೆ. ಬಾಸ್ ಟಿವಿ ಯೂಟ್ಯೂಬ್ ಚಾನೆಲ್‌ಗೆ ಪತಿಯ ಜೊತೆ ಬಂದಿರುವ ಹಂಸಾ ಅವರು, ಆರೂರು ಜಗದೀಶ್ ವಿರುದ್ಧ ಕಿಡಿ ಕಾರಿದ್ದಾರೆ. ನಾನು ಇಪ್ಪತ್ತು ವರ್ಷಗಳಿಂದ ನಟನಾ ವೃತ್ತಿಯಲ್ಲಿ ಇದ್ದವಳು. ನಾನು ಮೊದಲೇ ಫೇಮಸ್. ನನ್ನಿಂದ್ಲೇ ಇವ್ರು ಕಾಸು ಮಾಡಿಕೊಂಡರೇ ಹೊರತು, ಅವರು ಹೇಳಿದ ಹಾಗೆ ಅವರು ಕೊಟ್ಟ ಪಾತ್ರದಿಂದ ನಾನು ಫೇಮಸ್ ಆದವಳಲ್ಲ. ಇದು ತುಂಬಾ ತಪ್ಪು. ಅಷ್ಟಕ್ಕೂ ರಾಜಿ ಪಾತ್ರಕ್ಕೆ ಹೆಚ್ಚು ಅವಕಾಶವೇ ಇರಲಿಲ್ಲ. ವಾರದಲ್ಲಿ ಐದಾರು ದಿನ ಶೂಟಿಂಗ್ ಇರುತ್ತೆ ಎಂದಿದ್ರು. ಅದರೆ ಅದು 2-3 ದಿನಕ್ಕೆ ಇಳಿಯಿತು. ಮೂರು ವರ್ಷದಿಂದ ಪೇಮೆಂಟ್ ಕೂಡ ಹೆಚ್ಚು ಮಾಡಲಿಲ್ಲ. ನನಗೆ ನೈತಿಕತೆ ಇದ್ದುದರಿಂದಲೇ ಮೂರು ವರ್ಷ ಅಲ್ಲೇ ಇದ್ದೆ. ಇಲ್ಲದಿದ್ದರೆ ಯಾವಾಗಲೋ ಹೊರಕ್ಕೆ ಬರುತ್ತಿದ್ದೆ. ನನ್ನಿಂದ ಕಾಸು ಮಾಡುಕೊಂಡು ನೈತಿಕತೆ ಬಗ್ಗೆ ಹೇಳುವ ಅಧಿಕಾರ ಅವರಿಗೆ ಇಲ್ಲ ಎಂದು ಗರಂ ಆಗಿ ಹೇಳಿದ್ದಾರೆ.
ಬಿಗ್‌ಬಾಸ್‌ನಂಥ ದೊಡ್ಡ ವೇದಿಕೆಗೆ ಅವಕಾಶ ಸಿಕ್ಕಾಗ ಇವರನ್ನೇ ನಂಬಿಕೊಂಡು ಕುಳಿತುಕೊಳ್ಳೋಕೆ ಆಗತ್ತಾ? ನನಗೂ ಫ್ಯಾಮಿಲಿ ಇದೆ, ಕಮಿಟ್‌ಮೆಂಟ್ ಇದೆ. ಇವರು ಸಂಬಳವನ್ನೂ ಜಾಸ್ತಿ ಮಾಡದೇ, ಅದೇ ಹಣವನ್ನು ನಂಬಿ ಕುಳಿತುಕೊಳ್ಳಲು ಆಗುವುದಿಲ್ಲ. ಇಂಥವರು ನೈತಿಕತೆ ಬಗ್ಗೆ ನನಗೆ ಪಾಠ ಮಾಡುವುದು ಸರಿಯಲ್ಲ ಎಂದು ಕಿಡಿಯಾಗಿದ್ದಾರೆ ನಟಿ ಹಂಸಾ. ಅಷ್ಟಕ್ಕೂ ಆರೂರು ಜಗದೀಶ್ ಅವರು ಕಲಾವಿದರಿಗೆ ಎಥಿಕ್ಸ್ ಇಲ್ಲದಿದ್ದರೆ ಕಷ್ಟ ಎಂಬ ಮಾತು ಹಂಸಾ ಅವರಿಗೆ ನೋವು ಉಂಟು ಮಾಡಿದೆ. ಬಿಗ್ಬಾಸ್ನಿಂದ ಹೊರಕ್ಕೆ ಬಂದ ಮೇಲೆ ನಟಿಸುವಂತೆ ಕೇಳಿಕೊಂಡ್ವಿ. ಲಾಯರ್ ಜಗದೀಶ್ ರಿಯಾಲಿಟಿ ಷೋಗೆಲ್ಲಾ ಹೋಗ್ತಾ ಇದ್ದಾರಲ್ಲ, ಇವರೂ ಬರಬಹುದಿತ್ತು. ಅವರನ್ನು ಸಂಪರ್ಕಿಸಿದೆವು ಕೂಡ. ಆದರೆ ಅವರು ಒಪ್ಪಲಿಲ್ಲ ಎಂದು ಆರೂರು ಜಗದೀಶ್ ಹೇಳಿರುವ ಮಾತಿಗೆ ಪ್ರತಿಕ್ರಿಯೆ ನೀಡಿರುವ ಹಂಸಾ, ನೀವು ಚೆನ್ನಾಗಿ ನೋಡಿಕೊಂಡಿದ್ದರೆ ಬರುತ್ತಿದ್ದೆ. ಅದನ್ನು ಬಿಟ್ಟು ನನ್ನ ಮೇಲೆ ಇಲ್ಲಸಲ್ಲದ್ದನ್ನು ಹೇಳಿದರೆ ಬರುವುದು ಹೇಗೆ ಎಂದು ಪ್ರಶ್ನಿಸಿದ್ದಾರೆ.