
ಬೆಂಗಳೂರು (ಅ.08): ನಟ ಕಿಚ್ಚ ಸುದೀಪ್ ಅವರನ್ನು ಗುರಿಯಾಗಿಸಿಕೊಂಡು ಮಾಡಿದ ಜನಾಂಗೀಯ ಟಾರ್ಗೆಟ್ ಮಾಡಿರುವ ರಾಜ್ಯ ಸರ್ಕಾರ, ಜಾಲಿವುಡ್ ಸ್ಟುಡಿಯೋಸ್‌ಗೆ ಬೀಗ ಜಡಿದು 'ಬಿಗ್ ಬಾಸ್ ಕನ್ನಡ ಸೀಸನ್ 12' ಕಾರ್ಯಕ್ರಮವನ್ನು ಸ್ಥಗಿತಗೊಳಿಸಿದೆ ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣ ಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ನಾರಾಯಣ ಸ್ವಾಮಿ ಅವರು, 'ಇದೇನು ಕೈಗಾರಿಕೆಯಾ? ಇಲ್ಲೇನು ಅನಾರೋಗ್ಯ ತರುವಂಥ ಹೊಗೆ ಬರ್ತಿದೆಯಾ? ಮಾಲಿನ್ಯಕಾರಕ ದೊಡ್ಡ ದೊಡ್ಡ ಕೈಗಾರಿಕೆಗಳನ್ನು ಮುಚ್ಚೋಕೆ ಇವರಿಗೆ ಆಗಿಲ್ಲ. ಅಂತಹ ಫ್ಯಾಕ್ಟರಿಗಳನ್ನು ಬಿಟ್ಟು ಇಲ್ಲಿಗೆ ಬಂದು ಬೀಗ ಹಾಕಿಸಿದ್ದಾರೆ' ಎಂದು ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಮತ್ತು ಸರ್ಕಾರದ ಕ್ರಮವನ್ನು ಪ್ರಶ್ನಿಸಿದ್ದಾರೆ.
ಕೇವಲ ಪರಿಸರ ನಿಯಮದ ನೆಪವಿದು ಎಂದು ಆರೋಪಿಸಿದ ಅವರು, ಈ ಕ್ರಮದ ಹಿಂದಿನ ಉದ್ದೇಶ ಬೇರೆಯೇ ಇದೆ ಎಂದು ಅಭಿಪ್ರಾಯಪಟ್ಟಿದ್ದಾರೆ. 'ಇದು ಸರ್ಕಾರ ನೇರವಾಗಿ ನಟ ಸುದೀಪ್ ಅವರನ್ನು ಟಾರ್ಗೆಟ್ ಮಾಡಿರೋದು. ಇದು ಜನಾಂಗೀಯ ಟಾರ್ಗೆಟ್ ಕೂಡ ಹೌದು' ಎಂದು ಗಂಭೀರ ಆರೋಪ ಮಾಡಿದ್ದಾರೆ. ಕಳೆದ ಅವಧಿಯಲ್ಲಿ ಸ್ಯಾಂಡಲ್‌ವುಡ್‌ನ ಇತರೆ ಗಣ್ಯರನ್ನು ಟಾರ್ಗೆಟ್ ಮಾಡಿದ ಪ್ರಸಂಗಗಳನ್ನು ನೆನಪಿಸಿದ ನಾರಾಯಣ ಸ್ವಾಮಿ, 'ರಾಜಣ್ಣ (ಡಾ. ರಾಜ್‌ಕುಮಾರ್ ಕುಟುಂಬ), ನಾಗೇಂದ್ರ ಬಳಿಕ ಈಗ ಸುದೀಪ್ ಟಾರ್ಗೆಟ್. ಇದು ಸ್ಪಷ್ಟವಾಗಿ ಜನಾಂಗೀಯ ಟಾರ್ಗೆಟ್' ಎಂದು ಪುನರುಚ್ಚರಿಸಿದರು.
ಇಂತಹ ರಾಜಕೀಯ ಪ್ರೇರಿತ ಕ್ರಮಗಳಿಗೆ ಜನರೇ ತಕ್ಕ ಉತ್ತರ ನೀಡುತ್ತಾರೆ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದ ಛಲವಾದಿ ನಾರಾಯಣ ಸ್ವಾಮಿ, 'ಸರ್ಕಾರಕ್ಕೆ ನಟ್ಟುಬೋಲ್ಟ್ ಟೈಟ್ ಮಾಡುವ ಕಾಲ ಹತ್ತಿರ ಬಂದಿದೆ. ಇಂತಹ ಕೆಲಸಗಳನ್ನು ಮುಂದುವರೆಸಿದರೆ ಮುಂದಿನ ದಿನಗಳಲ್ಲಿ ಜನ ಸರ್ಕಾರದ ನಟ್ಟುಬೋಲ್ಟ್ ಟೈಟ್ ಮಾಡುತ್ತಾರೆ' ಎಂದು ಗುಡುಗಿದ್ದಾರೆ. ಒಟ್ಟಾರೆಯಾಗಿ, ಬಿಗ್ ಬಾಸ್ ಕಾರ್ಯಕ್ರಮದ ಸ್ಥಗಿತದ ಹಿಂದಿರುವ ಕಾರಣಗಳು ಪರಿಸರ ನಿಯಮಗಳ ಉಲ್ಲಂಘನೆಗಿಂತ ಹೆಚ್ಚಾಗಿ ರಾಜಕೀಯ ಪ್ರೇರಿತವಾಗಿದ್ದು, ನಟ ಸುದೀಪ್ ಅವರನ್ನು ಗುರಿಯಾಗಿಸಿ ಈ ಕ್ರಮ ಕೈಗೊಳ್ಳಲಾಗಿದೆ ಎಂಬುದು ವಿಪಕ್ಷ ನಾಯಕರ ಬಲವಾದ ಆರೋಪವಾಗಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.