'ಹೆಣ್ಣು ಏನ್​ ಮಾಡ್ಬೇಕು ನೀವೇ ಹೇಳ್ಬಿಡಿ' ಎಂಬ ಭಾಗ್ಯಳ ಪ್ರತಿ ಮಾತಿಗೂ ಭಾವುಕರಾದ ನೆಟ್ಟಿಗರು

By Suvarna News  |  First Published Sep 13, 2023, 10:22 PM IST

ಭಾಗ್ಯಲಕ್ಷ್ಮಿ ಧಾರಾವಾಹಿಯಲ್ಲಿ ನಾಯಕಿ ಭಾಗ್ಯ ಪ್ರತಿ ಹೆಣ್ಣಿನ ದನಿಯಾಗಿ ಮಾತನಾಡಿದ್ದಾಳೆ. ಆಕೆಯ ಜೀವನದ ಮೇಲೆ ಬೇರೆಯವರ ಹಕ್ಕೇ ಜಾಸ್ತಿ ಹೇಗಿದೆ ಎಂದಿರುವ ಭಾಗ್ಯ ಹೇಳಿದ್ದೇನು? 
 


ಹೆಣ್ಣಿನ ಜೀವನದಲ್ಲಿ ಎಷ್ಟೊಂದು ಕಷ್ಟಗಳು, ಎಷ್ಟೊಂದು ನೋವುಗಳು, ಕೂತರೂ ಕಷ್ಟ, ನಿಂತರೂ ಕಷ್ಟ, ನಡೆದರೂ ಕಷ್ಟ... ಹುಟ್ಟಿದಾಗಿನಿಂದಲೂ ಸಾಯುವವರೆಗೆ ಹೆಣ್ಣು ಅನುಭವಿಸುವ ಆ ನೋವಿನ ಪ್ರತಿಯೊಂದು ಬಡಿತವನ್ನು ಭಾಗ್ಯಲಕ್ಷ್ಮಿ ಧಾರಾವಾಹಿಯ ನಾಯಕಿ ಭಾಗ್ಯ ತಿಳಿಹೇಳಿದ್ದು, ಪ್ರತಿ ಹೆಣ್ಣಿಗೆ ದನಿಯಾಗಿದ್ದಾಳೆ. ಗಂಡನ ಮನೆಯನ್ನು ತೊರೆದು ತವರಿಗೆ ಬಂದ ಭಾಗ್ಯಳನ್ನು ಅಲ್ಲಿಯ ಜನ ಚುಚ್ಚಿ ಮಾತನಾಡುವುದನ್ನು ಕೇಳಲು ಆಗದ ಭಾಗ್ಯ ಆಡಿದ ಪ್ರತಿಯೊಂದು ಮಾತಿಗೂ ಜನರು ತಲೆದೂಗಿದ್ದಾರೆ. ಇದು ಭಾಗ್ಯ ಒಬ್ಬಳ ಮಾತಲ್ಲ, ಬಹುತೇಕ ಹೆಣ್ಣಿನ ಅಂತರಾಳದ ಮಾತು ಎಂದು ಕಮೆಂಟಿಗರು ಹೇಳುತ್ತಿದ್ದಾರೆ. ಇದೇ ವೇಳೆ ಕೆ.ಎಸ್​.ನರಸಿಂಹಸ್ವಾಮಿ ಅವರ ನಿಂತರೆ ಕೇಳುವರು ನೀನೇಕೆ ನಿಂತೆ, ಮಲಗಿದರೆ ಗೊಣಗುವರು ಇವಗಿಲ್ಲ ಚಿಂತೆ, ಓಡಿದರೆ ಬೆನ್ನ ಹಿಂದೆಯೇ ಇವರ ಟೀಕೆ, ಇವರು ಮೆಚ್ಚುವ ವಸ್ತು ಇಲ್ಲಿಲ್ಲ ಜೋಕೆ ಎಂಬ ಕವನವನ್ನೂ ಹೇಳಿದ್ದಾಳೆ. 
 
  
ಭಾಗ್ಯ ಅವಳ ಮಾತಿನಲ್ಲಿಯೇ ಹೇಳುವುದಾದರೆ, ಹೆಣ್ಣು  ಜೀವನದಲ್ಲಿ ಒಬ್ಬರು ಕೂತರೂ ಕಷ್ಟ, ನಿಂತರೂ ಕಷ್ಟ. ಒಟ್ಟಿನಲ್ಲಿ ಇನ್ನೊಬ್ಬರ ಜೀವನದ ಬಗ್ಗೆ ಅಭಿಪ್ರಾಯ ಹೇಳದೇ ಇರುವುದಕ್ಕೆ ಆಗುವುದೇ ಇಲ್ಲ ನಮಗೆ. ಅದರಲ್ಲಿಯೂ ಹೆಣ್ಣುಮಕ್ಕಳಂತೂ ಹುಟ್ಟಿದಾಗಿನಿಂದಲೂ ಸಾಯುವವರೆಗೆ ನಾಲ್ಕು ಜನ ಏನಂತಾರೋ ಎಂದು ಯೋಚನೆಯಲ್ಲಿಯೇ ಬದುಕುವ ಸ್ಥಿತಿ ಇದೆ. ತನಗೆ ಏನು ಬೇಕು, ಏನು ಇಷ್ಟ, ಏನು ಮಾಡಬೇಕು ಎನ್ನುವಷ್ಟು ಯೋಚನೆ ಮಾಡುವುದಕ್ಕೂ ಆಕೆಗೆ ಬಿಡಲ್ಲ. ಅಂಥ ಉಸಿರುಕಟ್ಟುವ ಸ್ಥಿತಿ ನಿರ್ಮಾಣ ಮಾಡಿಬಿಡ್ತೀರಾ. ಅವಳನ್ನು ಅವಳ ಪಾಲಿಗೆ ಇಡಲು ಬಿಟ್ಟುಬಿಡಿಯಲ್ಲ. ಅವಳಿಗೆ ಮಗಳಾಗಿ, ತಾಯಿಯಾಗಿ, ಹೆಂಡ್ತಿಯಾಗಿ, ಸೊಸೆಯಾಗಿ, ಅತ್ತೆಯಾಗಿ ಹೇಗೆ ಬದುಕಬೇಕು ಎಂದು ಪ್ರತಿ ಹೆಣ್ಣಿಗೂ ಚೆನ್ನಾಗಿ ಗೊತ್ತಿದೆ. ನೀವು ಅವಳಿಗೆ ಹೇಗೆ ಬದುಕಬೇಕು ಎಂದು ಹೇಳಿಕೊಡುವ ಅವಶ್ಯಕತೆ ಇಲ್ಲ ಎಂದು   ಅಲ್ಲಿದ್ದವರಿಗೆ ಪಾಠ ಮಾಡುತ್ತಾಳೆ.

ಹಳ್ಳಿ ಮೇಷ್ಟ್ರೇ ಹಾಡಿಗೆ ಸೀರೆಯಲ್ಲಿ ಸೊಂಟ ಬಳುಕಿಸಿ ಫ್ಯಾನ್ಸ್​ ನಶೆಯೇರಿಸಿದ ಭೂಮಿಕಾ!

Tap to resize

Latest Videos

ಪ್ರತಿ ಹೆಣ್ಣು ಹುಟ್ಟಿದಾಗಲೇ ಎಲ್ಲವನ್ನೂ ಕಲಿತು ಬಂದಿರುತ್ತಾಳೆ. ನಿಮ್ಮಗಳ ಅಭಿಪ್ರಾಯ ಕಟ್ಟಿಕೊಂಡು ಆಕೆ ಬದುಕು ರೂಪಿಸಿಕೊಳ್ಳುವ ಅವಶ್ಯಕತೆ ಇಲ್ಲ. ಅವಳು ಬದುಕಿನಲ್ಲಿ ಏನಾಗ್ತಿದೆ ಎನ್ನುವ ಕಷ್ಟ ಅವಳಿಗಷ್ಟೇ ಗೊತ್ತು. ಅದನ್ನು ಹೇಗೋ ತೂಗಿಸಿಕೊಂಡು ಹೋಗುತ್ತಿರುವಾಗ ನಿಮ್ಮಂಥ ಮೇಧಾವಿಗಳು ಬಂದು ಬೋಧನೆ ಮಾಡುತ್ತೀರಲ್ಲ, ಅಲ್ಲಿಯೇ ಎಲ್ಲವೂ ಹಳಿ ತಪ್ಪುವುದು ಎಂದು ಭಾಗ್ಯ ಹೆಣ್ಣಿನ ಬಗ್ಗೆ ಮಾರ್ಮಿಕವಾಗಿ ನುಡಿದಿದ್ದಾಳೆ.

ಹೆಣ್ಣು  ಮೆತ್ತಗಿದ್ದರೆ, ಏನಪ್ಪಾ ಇವಳು ಯಾರಾದ್ರೂ ಕೊಂದು ತಿಂದು ಬಿಡ್ತಾರೆ ಅಂತೀರಾ, ಅದೇ  ಏನಾದ್ರೂ ಸ್ವಲ್ಪ ಜೋರಾಗಿ ಮಾತನಾಡಿದರೆ, ಏನಪ್ಪಾ ಇವಳು ಬಜಾರಿ ಥರ ಇದ್ದಾಳೆ, ಹುಲಿ ಥರ ಇದ್ದಾಳೆ, ತಿಂದು ಬಿಡ್ತಾಳೆ ಅಂತೀರಾ. ಗಂಡನ ಮನೆಯಲ್ಲಿ ಸಾವಿರ ಕಷ್ಟ ಇದ್ರೂ ಹೇಗೋ ನುಂಗಿ ಬದುಕುತ್ತಾ ಇದ್ದರೆ, ಅಯ್ಯೋ ಇವಳ ಪಾಲಿಗೆ ತವರು ಮನೆ ಸತ್ತು ಹೋಗಿದ್ಯಾ ಬಂದು ಇರಕ್ಕೆ ಆಗಲ್ವಾ ಅಂತೀರಾ. ಅವಳು ಗಟ್ಟಿ ಮನಸ್ಸು ಮಾಡಿಕೊಂಡು ಗಂಡನ ಮನೆ ಬಿಟ್ಟು ತವರು ಮನೆಗೆಬಂದು ಇದ್ದರೆ ಛೀ ಛೀ ಗಂಡನ ಮನೆ ಬಿಟ್ಟು ಬಂದಿದ್ದಾಳೆ. ಕಷ್ಟನೋ, ಸುಖನೋ ಗಂಡನ ಮನೆಯಲ್ಲಿಯೇ ಇರೋಕೆ ಆಗಲ್ವಾ ಅಂತ ಹೀಯಾಳಿಸ್ತೀರಾ . ಹೇಳಿ ನಾವು ಏನು ಮಾಡಬೇಕು ಎಂದು ನೀವೇ ಹೇಳಿ. ಒಂದು ಹೆಣ್ಣಿನ ಜೀವನ ಅಷ್ಟು ಸುಲಭ ಅಲ್ಲ ಅಣ್ಣಾ, ಹುಟ್ಟಿದಾಗಿನಿಂದಲೂ ಸಾಯುವವರೆಗೂ ನಮ್ಮ ಸುತ್ತಲೂ ಸಾವಿರ ಬೇಲಿ, ಸಾವಿರ ಕಟ್ಟಲೆ, ಸಾವಿರ ಮಾತು. ಅದನ್ನು ದಾಟಿ ಮುಂದಕ್ಕೆ ಹೋದರೂ ಕಷ್ಟ. ದಾಟದೇ ಅಲ್ಲಿಯೇ ಇದ್ದರೂ ಕಷ್ಟ. ಒಟ್ಟಿನಲ್ಲಿ ನಮ್ಮ ಬದುಕಿನ ಮೇಲೆ ನಮಗಿಂತಲೂ ಬೇರೆಯವರ ಹಕ್ಕೇ ಜಾಸ್ತಿ ನಡೆಯೋದು  ಎಂದು ಭಾಗ್ಯ ಹೇಳಿದ್ದಾಳೆ. 

ರೋಚಕ ವಿಧಾನದಿಂದ ಕನ್ನಡ ಕಲಿತ ಸಾನ್ಯಾ ಅಯ್ಯರ್! ಅಜ್ಜಿಯ ಪಾಠ ವಿಧಾನ ತಿಳಿಸಿದ ನಟಿ

click me!