ಬಿಗ್‌ಬಾಸ್ ಕನ್ನಡ 10ನೇ ಸೀಸನ್ ಎರಡನೇ ರನ್ನರ್ ಅಪ್ ಆಗಿ ಸಂಗೀತಾ ಶೃಂಗೇರಿ ಅವರು ಹೊರಹೊಮ್ಮಿದ್ದಾರೆ. ಬಿಗ್‌ಬಾಸ್ ಸೀಸನ್‌ನ ‘ಸಿಂಹಿಣಿ’ ಎಂದೇ ಪ್ರಸಿದ್ಧರಾಗಿದ್ದ ಸಂಗೀತಾ, ತಮ್ಮ ನೇರ ಮಾತು, ದಿಟ್ಟ ನಿಲುವಿನಿಂದ ಜನರ ಮೆಚ್ಚುಗೆ ಗಳಿಸಿದ್ದರು.
ಬಿಗ್‌ಬಾಸ್ ಕನ್ನಡ 10ನೇ ಸೀಸನ್ ಎರಡನೇ ರನ್ನರ್ ಅಪ್ ಆಗಿ ಸಂಗೀತಾ ಶೃಂಗೇರಿ ಅವರು ಹೊರಹೊಮ್ಮಿದ್ದಾರೆ. ಬಿಗ್‌ಬಾಸ್ ಸೀಸನ್‌ನ ‘ಸಿಂಹಿಣಿ’ ಎಂದೇ ಪ್ರಸಿದ್ಧರಾಗಿದ್ದ ಸಂಗೀತಾ, ತಮ್ಮ ನೇರ ಮಾತು, ದಿಟ್ಟ ನಿಲುವಿನಿಂದ ಜನರ ಮೆಚ್ಚುಗೆ ಗಳಿಸಿದ್ದರು. ವರ್ತೂರು ಸಂತೋಷ್ ಮತ್ತು ವಿನಯ್ ಗೌಡ ಅವರು ಕ್ರಮವಾಗಿ ಮನೆಯಿಂದ ಹೊರಹೋಗುತ್ತಿದ್ದಂತೆಯೇ ಮನೆಯಲ್ಲಿ ಉಳಿದಿದ್ದವರು ಕಾರ್ತಿಕ್, ಸಂಗೀತಾ ಮತ್ತು ಪ್ರತಾಪ್. ಸ್ವತಃ ಕಿಚ್ಚ ಸುದೀಪ್ ಮನೆಯೊಳಗೆ ಹೋಗಿ, ಕಾಫಿ ಕುಡಿದು ಹರಟಿ ನಂತರ ಬಿಗ್‌ಬಾಸ್ ಮನೆಯಿಂದ ಬೀಳ್ಕೊಟ್ಟು ಮೂವರೂ ಸ್ಪರ್ಧಿಗಳನ್ನು ಮುಖ್ಯವೇದಿಕೆಗೆ ಕರೆತಂದರು.
ಮುಖ್ಯವೇದಿಕೆಯಲ್ಲಿ ನಿಂತಿದ್ದ ಮೂವರು ಸ್ಪರ್ಧಿಗಳ ಮುಖದಲ್ಲಿ ಆತಂಕ ಎದ್ದು ಕಾಣಿಸುತ್ತಿತ್ತು. ಸ್ಪರ್ಧಿಗಳ ಮುಖದಲ್ಲಿಯಷ್ಟೇ ಅಲ್ಲ, ವೇದಿಕೆಯ ಪಕ್ಕ ಕೂತ ಹಿಂದಿನ ಸ್ಪರ್ಧಿಗಳು, ಎದುರಿನಲ್ಲಿನ ಪ್ರೇಕ್ಷರು ಎಲ್ಲರ ಮುಖದಲ್ಲಿಯೂ ಆತಂಕ ಎದ್ದು ಕಾಣಿಸುತ್ತಿತ್ತು. ಎಲ್ಲರ ಊಹೆಯನ್ನು ಬ್ರೇಕ್ ಮಾಡಿ ಹೊರಗೆ ಬಿದ್ದಿದ್ದು ಸಂಗೀತಾ ಶೃಂಗೇರಿ! ಫಿನಾಲೆ ವೀಕ್‌ನಲ್ಲಿ ಇದ್ದ ಒಬ್ಬರೇ ಒಬ್ಬರು ಮಹಿಳಾ ಸ್ಪರ್ಧಿ ಸಂಗೀತಾ ಗಟ್ಟಿ ವ್ಯಕ್ತಿತ್ವದಿಂದಲೇ ತನ್ನ ದಾರಿ ನಿರ್ಮಿನಿಸಿಕೊಂಡವರು. ಅವರ ಜರ್ನಿಯ ಏಳುಬೀಳುಗಳನ್ನು ಕಟ್ಟಿಕೊಡುವ ಪ್ರಯತ್ನ ಜಿಯೊಸಿನಿಮಾ ಮಾಡುತ್ತಿದೆ.
ಸಂಗೀತಾ ಶೃಂಗೇರಿ!: ಬಿಗ್‌ಬಾಸ್ ಸೀಸನ್ 10 ಪ್ರಾರಂಭವಾಗುವುದಕ್ಕೂ ಹಿಂದೆ ಈ ಹೆಸರು ಕೇಳಿದಾಗ ಮನಸಲ್ಲಿ ಎರಡು ಬಗೆಯ ಚಿತ್ರಗಳು ಮೂಡುತ್ತಿತ್ತು. ಒಂದು, ಪೌರಾಣಿಕ ಧಾರಾವಾಹಿಯೊಂದರ ದೇವಿ ಪಾತ್ರದ ಸೌಮ್ಯಮುಖ. ಇನ್ನೊಂದು ‘ಚಾರ್ಲಿ 777’ ಸಿನಿಮಾದ ನಾಯಕಿಯ ಮುಗ್ಧ ಮುಖ. ಮೆಲುವಾಗಿ ಮಾತಾಡುವ, ಮಿತವಾಗಿ ನಗುವ ಈ ಹುಡುಗಿ ಬಿಗ್‌ಬಾಸ್ ಮನೆಗೆ ಬಂದಾಗ ಪ್ರೇಕ್ಷಕರ ಹುಬ್ಬುಗಳು ಮೇಲೇರಿದ್ದವು. ಆದರೆ ಬಿಗ್‌ಬಾಸ್ ಸೀಸನ್ 10 ಮುಗಿದ ಈ ಕ್ಷಣದಲ್ಲಿ ಅದೇ ‘ಸಂಗೀತಾ ಶೃಂಗೇರಿ’ ಎಂಬ ಹೆಸರು ಕೇಳಿದರೆ ಮನಸಲ್ಲಿ ಮೂಡುವ ಚಿತ್ರಗಳು ಒಂದೆರಡಲ್ಲ; ನೂರಾರು! ಅದರಲ್ಲಿಯೂ ಮೇಲೆ ಹೇಳಿದ ಎರಡು ಬಗೆಯ ಚಿತ್ರಗಳಂತೂ ಕಾಣಿಸುವುದೇ ಇಲ್ಲ.
ಅಸಮರ್ಥೆಯಾಗಿ ಚಿಂತಿತ ಮುಖದಲ್ಲಿ ಕೂತಿದ್ದ ಹುಡುಗಿ, ಆತ್ಮವಿಶ್ವಾಸದ ಗಟ್ಟಿ ವ್ಯಕ್ತಿತ್ವದ ಹುಡುಗಿ, ಕೋಪದಲ್ಲಿ ಕಿಡಿಕಾರುತ್ತ ನಿಂತಿರುವ ಹುಡುಗಿ, ದುಃಖದಲ್ಲಿ ಒಬ್ಬಂಟಿಯಾಗಿ ಕೂತು ಬಿಕ್ಕಿ ಬಿಕ್ಕಿ ಅಳುತ್ತಿರುವ ಹುಡುಗಿ, ಆಟದಲ್ಲಿ ಜೀವಕೊಟ್ಟು ಆಡುವ ಜಿದ್ದಿನ ಹುಡುಗಿ, ಮುಖದ ಎದುರೇ ಮಾತಾಡಿ ಜಗಳಕ್ಕೆ ನಿಲ್ಲುವ ಜಗಳಗಂಟಿ ಹುಡುಗಿ, ಸ್ನೇಹದ ಹೆಗಲಿಗೆ ಒರಗುವ ಮುಗುಳುನಗೆಯ ಹುಡುಗಿ, ತಂತ್ರಗಾರಿಕೆಯ ಜಾಣ ಹುಡುಗಿ, ತನ್ನ ಸ್ನೇಹಿತರಿಂದಾದ ಸಣ್ಣ ನೋವನ್ನೂ ಸಹಿಸಿಕೊಳ್ಳದ ಹಟಮಾರಿ ಹುಡುಗಿ… ಟಿಕೆಟ್ ಟು ಫಿನಾಲೆ ವಾರದಲ್ಲಿ ಗೆದ್ದು ಮೊದಲು ಫಿನಾಲೆ ವಾರಕ್ಕೆ ಕಾಲಿಟ್ಟ ಮೊದಲ ಸ್ಪರ್ಧಿ ಅಬ್ಬಾ! ನೂರು ದಿನಗಳನ್ನು ದಾಟಿದ ಈ ಬಿಗ್‌ಬಾಸ್ ಮನೆಯಲ್ಲಿ ನೂರಾರು ನೆನಪುಗಳ ಚಿತ್ರವನ್ನು ಮೂಡಿಸಿದ ಹುಡುಗಿ ಈ ಸಂಗೀತಾ ಶೃಂಗೇರಿ. ಸಂಗೀತಾ ಅವರ ಬಿಗ್‌ಬಾಸ್ ಜರ್ನಿಯನ್ನು ಕೆಲವೇ ಸಾಲುಗಳಲ್ಲಿ ಹಿಡಿದಿಡಲು ಸಾಧ್ಯವೇ ಇಲ್ಲ.
ಅಷ್ಟೊಂದು ಏರಿಳಿತಗಳು, ಅಷ್ಟೊಂದು ತಿರುವುಗಳು, ಅಷ್ಟೊಂದು ಅಚ್ಚರಿಗಳು ಅವರ ಈ ಪ್ರಯಾಣದಲ್ಲಿ ತುಂಬಿಕೊಂಡಿವೆ. ಹಲವು ಸಲ ಅವರು ಈ ಪ್ರಯಾಣವನ್ನು ಮೊಟಕುಗೊಳಿಸಿ ಮನೆಯಿಂದ ಹೊರಗೆ ಹೋಗುತ್ತೇನೆ ಎಂದು ಹೇಳಿದ್ದರು. ಒಮ್ಮೆಯಂತೂ ಅವರಿಗಾದ ಗಾಯದಿಂದಾಗಿ ಅನಿವಾರ್ಯವಾಗಿ ಬಿಗ್‌ಬಾಸ್ ಮನೆಯಿಂದ ಹೊರಗೆ ಹೋಗಿ ಆಸ್ಪತ್ರೆಗೆ ದಾಖಲಾಗಬೇಕಾಯ್ತು. ಆದರೆ ಇಂದು ಅವನ್ನೆಲ್ಲ ನೆನಪಿಸಿಕೊಂಡರೆ ಸಂಗೀತಾ, ‘ನಾನೆಂಥ ಅನುಭವವನ್ನು ಮಿಸ್ ಮಾಡಿಕೊಳ್ಳುತ್ತಿದ್ದೆ’ ಎಂದು ಉದ್ಘರಿಸಿದ್ದಾರೆ. ‘ಕೋಟಿ ಕೊಟ್ಟರೂ ನಾನು ಬಿಗ್‌ಬಾಸ್‌ಗೆ ಹೋಗಲ್ಲ’ ಎಂದು ಹಿಂದೊಮ್ಮೆ ಹೇಳಿದ್ದ ಸಂಗೀತಾ, ಈಗ ಕೋಟಿ ಕೊಟ್ಟರೂ ಸಿಗದ ಅನುಭವದ ಮೂಟೆಯನ್ನು ಹೊತ್ತುಕೊಂಡು ಬಿಗ್‌ಬಾಸ್ ಮನೆಯಿಂದ ಹೊರಬಂದಿದ್ದಾರೆ. ಅವರ ಜರ್ನಿಯ ಕೆಲವು ಮುಖ್ಯ ಸಂಗತಿಗಳನ್ನು ಕಟ್ಟಿಕೊಡುವ ಪ್ರಯತ್ನ ಜಿಯೊಸಿನಿಮಾ ಇಲ್ಲಿ ಮಾಡುತ್ತಿದೆ.
ಸಗಣಿ ನೀರಿನ ಸ್ನಾನ!: ಅಸಮರ್ಥಳಾಗಿ ಬಿಗ್‌ಬಾಸ್ ಮನೆಯೊಳಗೆ ಕಾಲಿಟ್ಟ ಸಂಗೀತಾ ಮೊದಲ ವಾರದಲ್ಲಿಯೇ ಸಾಕಷ್ಟು ವಿರೋಧ ಎದುಸಿರಬೇಕಾಯ್ತು. ಮನೆಯ ನಿಯಮವನ್ನು ಉಲ್ಲಂಘನೆ ಮಾಡಿ ಸೋಪಾದ ಮೇಲೆ ಕೂತಿದ್ದು ವಿನಯ್ ಅವರ ಜೊತೆಗೆ ಘರ್ಷಣೆಗೆ ಮೂಲವಾಯ್ತು. ಇದೇ ವಿಷಯ ವಾರದ ಕೊನೆಯ ಎಲಿಮಿನೇಷನ್‌ನಲ್ಲಿಯೂ ಪ್ರತಿಧ್ವನಿಸಿತು. ಅದೇ ವಾರದಲ್ಲಿ ಸಂಗೀತಾ ಅವರಿಗೆ ಸಗಣಿನೀರಿಸ ಸ್ನಾನವೂ ಆಯಿತು. ಆ ಘಟನೆ ಅವರನ್ನು ಕುಗ್ಗಿಸಲಿಲ್ಲ. ಬದಲಿಗೆ ಸಿಡಿದು ಪುಟಿದೇಳುವಂತೆ ಮಾಡಿತು. ಅಲ್ಲಿಂದ ಮುಂದೆ ಸಂಗೀತಾ ಹಿಂತಿರುಗಿ ನೋಡಿದ್ದೇ ಇಲ್ಲ. ಮೊದಲ ದಿನ ಸಂಗೀತಾ ಕಿಚ್ಚನ ಜೊತೆ ವೇದಿಕೆ ಹಂಚಿಕೊಂಡಾಗ, ‘ನಾನು ತುಂಬ ಕಾಮ್ ಕೂಲ್ಕ ಹುಡುಗಿಯ ಪಾತ್ರದಲ್ಲಿಯೇ ಕಾಣಿಸಿಕೊಂಡಿದ್ದೀನಿ. ಆದರೆ ನಾನೆಷ್ಟು ಬೋಲ್ಡ್ ಅನ್ನುವುದನ್ನು ಜನರು ಬಿಗ್‌ಬಾಸ್ ಮನೆಯಲ್ಲಿ ನೋಡುತ್ತಾರೆ’ ಎಂದು ಹೇಳಿಕೊಂಡಿದ್ದರು. ಅದನ್ನು ಅಕ್ಷರಶಃ ಸಾಧಿಸಿದ್ದಾರೆ ಸಂಗೀತಾ. ಹಾಗಾಗಿ ಸಗಣಿನೀರಿನಲ್ಲಿ ಸ್ನಾನ ಮಾಡಿದ್ದು ಅವರ ಬಿಗ್‌ಬಾಸ್ ಜರ್ನಿಗೆ ಒಳ್ಳೆಯ ಆರಂಭವನ್ನೇ ಒದಗಿಸಿತು ಎನ್ನಬಹುದು.
ಫನ್‌ಫ್ರೈಡೆಯಲ್ಲಿ ಮಿಂಚಿದ ಸಂಗೀತಾ: ಪ್ರತಿ ಶುಕ್ರವಾರ ಬರುತ್ತಿದ್ದ ಫನ್‌ಪ್ರೈಡೆ ಟಾಸ್ಕ್‌ಗಳಲ್ಲಿ ಸಂಗೀತಾ ಹಲವು ಬಾರಿ ಮಿಂಚಿದ್ದಾರೆ. ಅದರಲ್ಲಿಯೂ ‘ಚಂಡ ಮಾರುತ’ ಟಾಸ್ಕ್‌ನಲ್ಲಿ ಸಂಗೀತಾ ಮತ್ತು ಕಾರ್ತಿಕ್ ಸೇರಿ ಗೆಲುವಿನ ನಗೆ ಬೀರಿದ್ದೊಂದು ಗಮನಾರ್ಹ ಗಳಿಗೆ. ಅಂತಿಮ ಘಟ್ಟದಲ್ಲಿ ವಿನಯ್ ಮತ್ತು ತುಕಾಲಿ ಸಂತೋಷ್ ಅವರು ಎದುರಾದಾಗ, ಸಂಗೀತಾ, ಕಾರ್ತಿಕ್ ಜೊತೆಗೂಡಿ ತುಂಬ ಚೆನ್ನಾಗಿ ಆಡಿ ಗೆಲುವು ದಾಖಲಿಸಿದ್ದರು. ಸಂಗೀತಾ- ಕಾರ್ತೀಕ್ ಜೊತೆಗೂಡಿ ಗೆಲುವು ದಾಖಲಿಸಿದ ಮತ್ತೊಂದು ಫನ್‌ಫ್ರೈಡೆ ಟಾಸ್ಕ್ ‘ಬ್ರೇಕ್ ದ ಬಲೂನ್’. ಈ ಸಲ ಅವರಿಗೆ ಎದುರಾಗಿದ್ದು ತುಕಾಲಿ ಸಂತೋಷ್ ಮತ್ತು ವರ್ತೂರು ಸಂತೋಷ್ ಜೋಡಿ. ಅವರನ್ನು ಯಶಸ್ವಿಯಾಗಿ ಹಿಂದಿಕ್ಕಿದ ಸಂಗೀತಾ ಜೋಡಿ ಟಾಸ್ಕ್‌ನಲ್ಲಿ ಗೆಲುವು ದಾಖಲಿಸಿತ್ತು.
ಟಾಸ್ಕ್‌ಗಳಲ್ಲಿ ಸೂಪರ್ ಪವರ್: ಎರಡನೇ ವಾರದಲ್ಲಿ ಸಂಗೀತಾ ಇದ್ದ ರಣಶಕ್ತಿ ತಂಡ, ವಿನಯ್ ಅವರಿದ್ದ ಮಾಣಿಕ್ಯ ತಂಡದ ವಿರುದ್ಧ ಸೋತಿತ್ತು. ಆ ಸಮಯದಲ್ಲಿ ವಿನಯ್ ಮತ್ತು ಸಂಗೀತಾ ಮಧ್ಯೆ ಮಾತಿನ ಚಕಮಕಿ ನಡೆದಿತ್ತು. ಈ ಬಿರುಕು ಹಲವು ವಾರಗಳ ಕಾಲ ಉರಿಯುತ್ತಲೇ ಹೋಗಿತ್ತು.
ಬ್ಯಾಂಗಲ್ ಕ್ವೀನ್: ಹಳ್ಳಿ ಟಾಸ್ಕ್ ಈ ಸೀಸನ್ ಅತಿ ಹೆಚ್ಚು ಸದ್ದು ಮಾಡಿದ ಕೆಲವು ಗಳಿಗೆಳಲ್ಲಿ ಹಳ್ಳಿ ಟಾಸ್ಕ್ ಕೂಡ ಒಂದು. ಮನೆಯೊಳಗೆ ಹಳ್ಳಿಯ ವಾತಾವರಣವನ್ನು ಸೃಷ್ಟಿ ಮಾಡಿ ಎರಡು ಕುಟುಂಬಗಳಾಗಿ ಮನೆಯ ಸದಸ್ಯರನ್ನು ವಿಂಗಡಿಸಲಾಗಿತ್ತು. ಅವರ ನಡುವೆ ವಿವಿಧ ಟಾಸ್ಕ್‌ಗಳನ್ನು ನೀಡಲಾಗಿತ್ತು. ಈ ಸಂದರ್ಭದಲ್ಲಿ ವಿನಯ್ ಒಂದು ಕುಟುಂಬದ ಯಜಮಾನನಾಗಿದ್ದರೆ, ಇನ್ನೊಂದು ಕುಟುಂಬಕ್ಕೆ ಸಂಗೀತಾ ಯಜಮಾನ್ತಿಯಾಗಿದ್ದರು. ಈ ಸಂದರ್ಭದಲ್ಲಿ ವಿನಯ್ ಮತ್ತು ಕಾರ್ತಿಕ್ ನಡುವೆ ಜಗಳ ನಡೆದಿತ್ತು. ಆ ಸಂದರ್ಭದಲ್ಲಿ ವಿನಯ್, ‘ನಾವೇನು ಬಳೆ ತೊಟ್ಕೊಂಡು ಕೂತಿಲ್ಲ’ ಎಂದು ಮಾತಾಡಿದ್ದರು. ಇದರಿಂದ ಸಿಟ್ಟಿಗೆದ್ದ ಸಂಗೀತಾ ಅವರ ಮಾತನ್ನು ಪ್ರತಿಭಟಿಸಿದ್ದಲ್ಲದೇ ಉಳಿದ ಟಾಸ್ಕ್‌ಗಳನ್ನು ಕೈ ತುಂಬ ಬಳೆ ತೊಟ್ಟುಕೊಂಡೇ ಆಡಿದ್ದರು. ಹಾಗೂ ವಿನಯ್ ಅವರಿಗೆ ‘ಬಳೆ ತೊಟ್ಕೊಂಡಿದೀನಿ ಬಳೆ’ ಎಂದು ಕೈಯೆತ್ತಿ ತೋರಿಸಿದ್ದರು ಕೂಡ. ಬಳೆಯ ಕುರಿತ ತಪ್ಪು ಮಾತುಗಳಿಗೆ ಸಂಗೀತಾ ನೀಡಿದ ಉತ್ತರ ಮನೆಯೊಳಗಷ್ಟೇ ಅಲ್ಲ, ಮನೆಯ ಹೊರಗೂ ಸಾಕಷ್ಟು ಚರ್ಚೆಗೆ ಒಳಗಾಗಿತ್ತು.
ವಿನಯ್ ಆಡಿದ ಮಾತಿನ ಬಗ್ಗೆ, ಅದಕ್ಕೆ ಸಂಗೀತಾ ಕೊಟ್ಟ ಉತ್ತರದ ಬಗ್ಗೆ ಮೆಚ್ಚುಗೆಯ ಮಾತುಗಳು ಕೇಳಿಬಂದಿದ್ದವು. ಇದು ಸಂಗೀತಾ ಅವರ ಗಟ್ಟಿ ಮತ್ತು ದಿಟ್ಟ ವ್ಯಕ್ತಿತ್ವವನ್ನು ತೆರೆದಿಟ್ಟಿತ್ತು. ಆ ವಾರಾಂತ್ಯದ ಪಂಚಾಯ್ತಿಯಲ್ಲಿ ಕಿಚ್ಚ ವಿನಯ್ ಮಾತುಗಳಿಗೆ ತರಾಟೆ ತೆಗೆದುಕೊಂಡಿದ್ದಲ್ಲದೆ, ಸಂಗೀತಾ ಅವರ ದಿಟ್ಟ ವರ್ತನೆಯನ್ನು ಪ್ರಶಂಸಿಸಿದ್ದರು. ಅಲ್ಲದೇ ಆ ವಾರದ ಕಿಚ್ಚನ ಚಪ್ಪಾಳೆಯನ್ನು ‘ಬಳೆ’ಗೇ ನೀಡಿದ್ದರು. ಸಂಗೀತಾ ಕೈಯಲ್ಲಿನ ಬಳೆಯ ಫೋಟೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದಲ್ಲದೆ, ಹಲವು ಸೆಲೆಬ್ರಿಟಿಗಳ ಪೇಜುಗಳಲ್ಲಿ ಕಾಣಿಸಿಕೊಂಡಿತ್ತು. ಇದೊಂದೇ ಸಂದರ್ಭವಲ್ಲ. ತಮ್ಮ ಅಭಿಪ್ರಾಯಗಳನ್ನು ತಿಳಿಸುವ ಯಾವುದೇ ಸಂದರ್ಭಗಳಲ್ಲಿ ಸಂಗೀತಾ ಯಾವತ್ತೂ ಹಿಂಜರಿಕೆಗೆ ತೋರಿಸಿದ್ದಿಲ್ಲ. ರಿಸ್ಕ್ ತೆಗೆದುಕೊಳ್ಳಲು ಹಿಂದೆಮುಂದೆ ನೋಡಿದ್ದಿಲ್ಲ. ಹಾಗಾಗಿಯೇ ಸಂಗೀತಾ ಬಹುತೇಕ ಎಲ್ಲ ವಾರಗಳಲ್ಲಿಯೂ ನಾಮಿನೇಷನ್ ಲೀಸ್ಟ್‌ನಲ್ಲಿ ಇದ್ದೇ ಇರುತ್ತಿದ್ದರು. ಆದರೆ ಅದನ್ನೆಲ್ಲ ಗಣನೆಗೇ ತೆಗೆದುಕೊಳ್ಳದ ಅವರು, ತಮ್ಮ ಆಟವನ್ನು ಆಡುತ್ತ, ತಮಗೆ ಅನಿಸಿದ್ದನ್ನು ಹೇಳುತ್ತಲೇ ಇದ್ದರು.
ಕಣ್ಣಿಗಾದ ಗಾಯ: ಈ ಸೀಸನ್‌ನ ಇನ್ನೊಂದು ಬಹುದೊಡ್ಡ ಮಟ್ಟದಲ್ಲಿ ಸದ್ದು ಮಾಡಿದ ಸಂದರ್ಭವೆಂದರೆ ರಕ್ಕಸ ಮತ್ತು ಗಂಧರ್ವರ ಟಾಸ್ಕ್. ಟಾಸ್ಕ್ ಎಂಬುದು ಸೇಡಿನ ರೀತಿ ಬದಲಾಗಿ ಮನೆಯ ವಾತಾವರಣವೂ ಪೂರ್ತಿ ಬದಲಾಗಿಬಿಟ್ಟ ವಾರವದು. ಆ ವಾರದಲ್ಲಿ ಇನ್ನೊಂದು ವಿಷಾದನೀಯ ಘಟನೆಯೂ ನಡೆಯಿತು. ಕುರ್ಚೆಯಲ್ಲಿ ಕೂರಿಸಿ ಮುಖಕ್ಕೆ ನೀರು ಸೋಕುವ ಟಾಸ್ಕ್‌ನಲ್ಲಿ, ಸಂಗೀತಾ ಮತ್ತು ಪ್ರತಾಪ್ ಇಬ್ಬರಿಗೂ ಕಣ್ಣಿಗೆ ಹಾನಿಯಾಗಿ ಆಸ್ಪತ್ರೆಗೆ ಸೇರುವಂತಾಗಿತ್ತು. ಇದರಿಂದ ಹಲವು ದಿನಗಳ ಕಾಲ ಸಂಗೀತಾ ಮತ್ತು ಪ್ರತಾಪ್ ಇಬ್ಬರೂ ಆಸ್ಪತ್ರೆಯಲ್ಲಿ ಕಳೆಯುವಂತಾಗಿತ್ತು. ಹಾಗೆ ಹೊರಗೆ ಹೋದ ಸಂಗೀತಾ ವಾಪಸ್ ಬರುತ್ತಾರೋ ಇಲ್ಲವೋ ಎಂದು ಎಲ್ಲರೂ ಅಂದುಕೊಳ್ಳುತ್ತಿರುವಾಗಲೇ ಕಪ್ಪು ಕನ್ನಡಕ ತೊಟ್ಟ ಸಂಗೀತಾ ಮತ್ತು ಪ್ರತಾಪ್ ರೀ ಎಂಟ್ರಿ ಕೊಟ್ಟಿದ್ದರು. ಹಾಗೆಯೇ ಹಿಂದೆಂದಿಗಿಂತ ಹೆಚ್ಚಿನ ಉತ್ಸಾಹದೊಂದಿಗೆ, ಹಟದೊಂದಿಗೆ ಮನೆಗೆ ಬಂದಿದ್ದರು. ಅದನ್ನು ತಮ್ಮ ಆಟಗಳಲ್ಲಿ ತೋರಿಸಿಯೂ ಕೊಟ್ಟರು. ಹಲವು ಸಂದರ್ಭದಲ್ಲಿ ಇಡೀ ಮನೆಯ ಎಲ್ಲರನ್ನೂ ಎದುರುಹಾಕಿಕೊಂಡು ಒಬ್ಬಂಟಿಯಾಗಿದ್ದ ಸಂದರ್ಭವೂ ಸಾಕಷ್ಟಿವೆ. ಆ ಸಂದರ್ಭದಲ್ಲಿಯೂ ಸಂಗೀತಾ ಹಿಂಜರಿಕೆ ತೋರಿದ್ದಿಲ್ಲ.
ಸ್ನೇಹ-ದ್ರೋಹಗಳ ಏರಿಳಿತ: ಮೊದಲ ವಾರದಲ್ಲಿ ಅಸಮರ್ಥರ ಗುಂಪಿನಲ್ಲಿದ್ದ ಸಂಗೀತಾ, ತನಿಷಾ ಮತ್ತು ಕಾರ್ತಿಕ್ ಈ ಮೂವರೂ ಸಾಕಷ್ಟು ಆಪ್ತರಾದರು. ತ್ರಿಕೋನ ಸ್ನೇಹ ಹಲವು ವಾರಗಳ ಕಾಲ ಅಬಾಧಿತವಾಗಿ ಉಳಿದಿತ್ತು. ಈ ಸ್ನೇಹಸಂಬಂಧದಲ್ಲಿಯೂ ಸಂಗೀತಾ ಅವರ ವ್ಯಕ್ತಿತ್ವದ ಆಯಾಮಗಳು ಬಿಚ್ಚಿಕೊಂಡವು. ಲುಡೊ ಟಾಸ್ಕ್‌ನಲ್ಲಿ ಸಂಗೀತಾಳನ್ನು ಉಳಿಸುವ ಅವಕಾಶ ಇದ್ದಾಗಲೂ ಸೇವ್ ಮಾಡದಿರುವುದು ಸಂಗೀತಾ ಅವರಲ್ಲಿ ಅಸಮಧಾನ ಹುಟ್ಟಿಸಿತ್ತು. ಅದನ್ನು ಅವರು ನೇರವಾಗಿಯೇ ಹೇಳಿಕೊಂಡಿದ್ದರು ಕೂಡ. ಆ ಹಂತದಲ್ಲಿ ಕಾರ್ತೀಕ್ ಮತ್ತು ಸಂಗೀತಾ ಮಧ್ಯ ಸಣ್ಣ ಬಿರುಕು ಕಾಣಿಸಿಕೊಂಡಿತ್ತು. ‘ನಾನು ಯಾರನ್ನೂ ಅಷ್ಟಾಗಿ ನಂಬುವುದಿಲ್ಲ. ಯಾರನ್ನಾದರೂ ನಂಬಿದ್ದೇನೆ ಅಂದರೆ ಅವರಿಂದ ಬೆಂಬಲವನ್ನು ನಿರೀಕ್ಷಿಸುತ್ತೇನೆ’ ಎಂಬುದು ಸಂಗೀತಾ ನಿಲುವು. ಇದು ಕೆಲವೊಮ್ಮೆ ಕಿರಿಕಿರಿ ಹುಟ್ಟಿಸಿದ್ದೂ ಇದೆ. ಆದರೆ ಆ ಸ್ವಭಾವದಿಂದ ಬಹುಬೇಗ ಹೊರಬಂಧ ಸಂಗೀತಾ ಸ್ವತಂತ್ರವಾಗಿ ಆಡಲು, ಇರಲು ಪ್ರಾರಂಭಿಸಿದ್ದರು. ಹಾಗಾಗಿಯೇ ಎಲ್ಲರ ಜೊತೆಗೂ ಸ್ನೇಹದಿಂದಲೂ ಇರುತ್ತಲೂ, ಅಷ್ಟೇ ನೇರವಾಗಿ ಜಗಳವಾಡಲೂ ಅವರಿಗೆ ಸಾಧ್ಯವಾಗುತ್ತಿತ್ತು.
ಕೊನೆಯ ವಾರದಲ್ಲಿ ವಾಲ್ ಆಫ್ ಮೆಮೊರಿ ನೋಡಿದರೆ ಸಂಗೀತಾ ಎಂಥ ನೆನಪುಗಳನ್ನು ಮನೆಯೊಳಗೆ ಕಟ್ಟಿಕೊಂಡಿದ್ದಾರೆ ಎಂಬುದು ಗೊತ್ತಾಗುವಂತಿತ್ತು. ಆರಂಭದ ದಿನಗಳಲ್ಲಿ ಸಂಗೀತಾ ಅವರನ್ನು ದ್ವೇಷಿಸುತ್ತಿದ್ದ ನಮೃತಾ ಕೊನೆಕೊನೆಯ ದಿನಗಳಲ್ಲಿ ಅವರ ಸ್ನೇಹಿತೆಯಾಗಿದ್ದು, ‘ನಾನು ನಿಮ್ಮನ್ನು ತಪ್ಪಾಗಿ ತಿಳಿದುಕೊಂಡಿದ್ದೆ’ ಎಂದು ಉದ್ಘರಿಸಿದ್ದೇ ಸಂಗೀತಾ ಅವರ ವ್ಯಕ್ತಿತ್ವಕ್ಕೆ ಸಾಕ್ಷಿ. ಸ್ನೇಹಕ್ಕೆ ಜೊತೆಯಾಗಿ ನಿಲ್ಲುತ್ತಿದ್ದ ಅವರು ನಂಬಿಕೆದ್ರೋಹವನ್ನು ಎಂದಿಗೂ ಸಹಿಸಿಕೊಂಡಿಲ್ಲ. ಹಿಂದೊಂದು ಮುಂದೊಂದು ಮಾತಾಡುವವರನ್ನು ದೂರವೇ ಇಟ್ಟುಕೊಂಡು ಬಂದರು. ಕಾರ್ತಿಕ್ ಜೊತೆಗೆ ಸ್ನೇಹ ಮುರಿದುಕೊಂಡ ನಂತರ ‘ನಾನೆಂದಿಗೂ ಅವರನ್ನು ಕ್ಷಮಿಸಲಾರೆ’ ಎಂದು ಒಂದಲ್ಲ ಹಲವು ಬಾರಿ ಹೇಳಿಯೂ ಅವರು ಕಾರ್ತಿಕ್ ಅವರನ್ನು ಕ್ಷಮಿಸಿದರು. ಫಿನಾಲೆ ವೀಕ್‌ನಲ್ಲಿ ಕಾರ್ತಿಕ್, ಸಂಗೀತಾಗೆ ಪತ್ರ ಬರೆದಾಗ, ಸಂಗೀತಾ ಮನಸಾರೆ ಮೆಚ್ಚಿಕೊಂಡು, ತಾನೂ ಪತ್ರ ಬರೆದಿದ್ದಲ್ಲದೇ ಜರ್ಕೀನ್ ಮತ್ತು ಲಿಪ್‌ಸ್ಟಿಕ್ ಅನ್ನು ಉಡುಗೊರೆಯಾಗಿ ಕೊಟ್ಟಿದ್ದರು. ವಿನಯ್ ಜೊತೆಗೂ ಮುನಿಸನ್ನು ಮರೆತು ಸ್ನೇಹದಿಂದ ಉಳಿದಿದ್ದರು.
ಪ್ರತಾಪ್ ಜೊತೆಗಿನ ಸಹೋದರತ್ವ: ‘ಪ್ರತಾಪ್ ಕಂಡರೆ ನನಗೆ ನನ್ನ ಅಣ್ಣನೇ ನೆನಪಾಗುತ್ತಾನೆ. ಸದಾ ಮನಸೊಳಗೆ ಮುಚ್ಚಿಟ್ಟುಕೊಂಡು ಕೊನೆಗೆ ಒಮ್ಮೆಲೇ ಸ್ಫೋಟಗೊಳ್ಳುತ್ತಾನೆ. ಬಿಗ್‌ಬಾಸ್ ಮನೆಯೊಳಗೆ ನನ್ನ ಜರ್ನಿಗೂ ಪ್ರತಾಪ್ ಜರ್ನಿಗೂ ಸಾಕಷ್ಟು ಸಾಮ್ಯತೆಗಳಿವೆ’ ಎಂದು ಸಂಗೀತಾ ಹಲವು ಬಾರಿ ಹೇಳಿದ್ದಾರೆ. ಪ್ರತಾಪ್ ರೂಪದಲ್ಲಿ ನನಗೊಬ್ಬ ತಮ್ಮ ಸಿಕ್ಕಿದ್ದಾನೆ ಎಂದು ಹೇಳಿದ್ದಷ್ಟೇ ಅಲ್ಲ, ಅವಕಾಶ ಸಿಕ್ಕಾಗೆಲ್ಲ ಪ್ರತಾಪ್ ಅವರಿಗೆ ಬೆಂಬಲ ನೀಡುತ್ತಲೇ ಬಂದಿದ್ದಾರೆ ಸಂಗೀತಾ. ಒಂದು ಹಂತದಲ್ಲಿ ಪ್ರತಾಪ್, ಸಂಗೀತಾ ಅವರನ್ನು ಆಟದಿಂದ ಹೊರಗೆ ಹಾಕಿದ್ದರೂ ಸಂಗೀತಾ, ಪ್ರತಾಪ್‌ಗೆ ನೀಡುವ ಬೆಂಬಲ ನಿಲ್ಲಿಸಲಿಲ್ಲ. ಹೀಗೆ ಹಲವು ಏರಿಳಿತಗಳುಳ್ಳ ಸಂಗೀತಾ, ಬಿಗ್‌ಬಾಸ್ ಜರ್ನಿಯಲ್ಲಿ ಸಾಕಷ್ಟು ಏರಿಳಿತಗಳು ಇದ್ದಿದ್ದಂತೂ ನಿಜ. ಆದರೆ ಈ ಏರಿಳಿತಗಳನ್ನು ಹಾದುಬಂದ ಅವರು ಇನ್ನಷ್ಟು ಗಟ್ಟಿಗೊಳ್ಳುತ್ತಲೇ ಬಂದರು. ಹಾಗಾಗಿಯೇ ಫಿನಾಲೆ ವೀಕ್‌ನ ಆರು ಸ್ಪರ್ಧಿಗಳಲ್ಲಿ ಎಲ್ಲರಿಗಿಂತ ಮೊದಲು ಕಾಲಿಡಲು ಅವರಿಗೆ ಸಾಧ್ಯವಾಗಿದ್ದು . ಅವರನ್ನೂ ದ್ವೇಷಿಸುವವರೂ ಅವರ ಸಾಮರ್ಥ್ಯವನ್ನು ಮೆಚ್ಚಿಕೊಳ್ಳುವಂತೆ ಬೆಳೆದಿದ್ದು ಸಂಗೀತಾ ಅವರ ಶಕ್ತಿ. ಅವರ ಈ ಏರಿಳಿತಗಳ ಪ್ರಯಾಣವನ್ನು ಜಿಯೊ ಸಿನಿಮಾದಲ್ಲಿ ಉಚಿತವಾಗಿ ವೀಕ್ಷಿಸಬಹುದು.