ಸೀತಾ ಮತ್ತು ರಾಮ ಜೋಡಿಗಿಂತ ನಿಮ್ಮ ಜೋಡಿಯೇ ಚಂದ ಅಂತ 'ಸೀತಾರಾಮ' ಸೀರಿಯಲ್ ಅಶೋಕ್ ಪ್ರಿಯಾ ಜೋಡಿಗೆ ಜನ ಕಾಮೆಂಟ್ ಮಾಡ್ತಿದ್ದಾರೆ. ಈ ಜೋಡಿಯ ಪ್ರೋಮೋ ನಾಲ್ಕೂವರೆ ಮಿಲಿಯನ್‌ನಷ್ಟು ವೀಕ್ಷಣೆ ದಾಖಲಿಸಿದೆ.
'ಸೀತಾರಾಮ' ಸೀರಿಯಲ್ ನೋಡೋರಿಗೆ ಅಶೋಕ್ ಮತ್ತು ಪ್ರಿಯಾ ಜೋಡಿ ಮೇಲೆ ಯಾವ ಪರಿ ಇಷ್ಟ ಇದೆ ಅನ್ನೋದು ಈ ವಾರ ಸಾಬೀತಾಗಿದೆ. ಈ ಜೋಡಿಯ ರೊಮ್ಯಾಂಟಿಕ್ ಸೀನ್ ಒಂದನ್ನು ಹದಿನಾಲ್ಕೂವರೆ ಲಕ್ಷ ಜನ ನೋಡಿದ್ದಾರೆ. ಎಷ್ಟೋ ಸಾವಿರ ಜನ ಲೈಕ್ ಕಾಮೆಂಟ್ ಮಾಡಿದ್ದಾರೆ. ವಿಶೇಷ ಅಂದರೆ ಈ ಸೀರಿಯಲ್‌ನ ಹೀರೋ ಹೀರೋಯಿನ್‌ಗಿಂತಲೂ ಹೆಚ್ಚು ಈ ಸೆಕೆಂಡ್ ಹೀರೋ ಹೀರೋಯಿನ್ ಜನರಿಗೆ ಸಖತ್ ಇಷ್ಟ ಆಗಿದ್ದಾರೆ. ಇದಕ್ಕೆ ಕಾರಣ ಈ ಜೋಡಿಯ ಕೆಮೆಸ್ಟ್ರಿ. ಸಣ್ಣಗೆ ಉದ್ದಕ್ಕಿರೋ ಅಶೋಕ್ ಮತ್ತು ಗುಂಡಗೆ ಮುದ್ದು ಮುದ್ದಾಗಿರೋ ಪ್ರಿಯಾ ಜೋಡಿ ಕಂಡ್ರೆ ಶುರುವಿಂದಲೇ ಜನರಿಗೆ ಬಹಳ ಇಷ್ಟ. ಪ್ರಿಯಾ ಪಾತ್ರ ಹೆಚ್ಚು ಸಹಜವಾಗಿದೆ ಅನ್ನೋದು ಬಹಳ ಮಂದಿ ಮಾಡೋ ಕಾಮೆಂಟ್. ಅದಕ್ಕೆ ತಕ್ಕ ಹಾಗೆ ಈಕೆ ಸ್ಟ್ರೆಸ್ ಆದಾಗ ಒಂದೇ ಸಲಕ್ಕೆ ಮೂರ್ನಾಲ್ಕು ಪ್ಲೇಟ್ ಪಾನಿಪುರಿ ತಿನ್ನೋದು, ಪೇಶೆನ್ಸ್ ಇಲ್ಲದೇ ಸ್ಟಾರ್ಟ್ ಆಗದ ಗಾಡಿಗೇ ಒದೆಯೋದು, ಸಿಟ್ಟು ಬಂದ್ರೆ ಹಿಂದೆ ಮುಂದೆ ನೋಡದೇ ಎಕ್ಸ್‌ಪ್ರೆಸ್ ಮಾಡೋದು ಇಂಥ ವರ್ತನೆಗಳೆಲ್ಲ ಜನರಿಗೆ ಬಹಳ ಇಷ್ಟ ಆಗಿದೆ.
ಹಾಗೆ ನೋಡಿದರೆ 'ಸೀತಾರಾಮ' ಸೀರಿಯಲ್‌ನ ಹೀರೋ ಹೀರೋಯಿನ್ ಸೀತಾ ಮತ್ತು ರಾಮ. ಇದು ಒಂದು ಸೀರಿಯಲ್ ಫಾರ್ಮ್ಯಾಟ್‌ನಲ್ಲೇ ಬರುವ ಅತೀ ಒಳ್ಳೆತನದ ಜೋಡಿಗಳು. ಸೀತಾ ಅಂದರೆ 80ರ ದಶಕದ ಹೆಣ್ಮಗಳ ಹಾಗೆ ಅತೀ ಒಳ್ಳೆತನ ತುಂಬಿದ, ನೋಡಲು ತಿದ್ದಿ ತೀಡಿದ ಹಾಗಿರುವ, ತಾನು ನೋವು ತಿಂದು ಪರರಿಗೆ ಒಳ್ಳೆದು ಮಾಡುವಂಥಾ ಸೋ ಕಾಲ್ಡ್ ಪಕ್ಕಾ ಸೀರಿಯಲ್ ನಾಯಕಿ ಫಾರ್ಮ್ಯಾಟ್‌ನ ಪಾತ್ರ. ಆದರೆ ರಿಯಾಲಿಟಿಗೂ ಈ ಪಾತ್ರಕ್ಕೂ ಅಜಗಜಾಂತರ. ಹೀಗಾಗಿ ಜನ ಒಂದು ಡಿಸ್ಟೆನ್ಸ್‌ನಲ್ಲೇ ಇಂಥಾ ಪಾತ್ರಗಳನ್ನು ನೋಡ್ತಾರೆ. ಆ ಪಾತ್ರಕ್ಕೆ ಹೆಚ್ಚು ಕನೆಕ್ಟ್ ಆಗೋದು ಈ ಕಾಲದ ಜನರಿಗೆ ಕಷ್ಟ. ಜಸ್ಟ್ ಕಥೆಯ ಭಾಗವಾಗಿ ಎನ್‌ಜಾಯ್ ಮಾಡ್ತಾರಷ್ಟೇ. ಆದರೆ ಮಗು ಸಿಹಿಯ ಪಾತ್ರ ಮಾತ್ರ ಮಗುವಿನ ಸಹಜ ತುಂಟಾಟ, ಸ್ವಭಾವಕ್ಕೆ ತಕ್ಕಂತೆ ಬಂದಿದೆ. ಕೆಲವೊಮ್ಮೆ ಅತೀ ಒಳ್ಳೆತನವನ್ನು ಈ ಪಾತ್ರಕ್ಕೆ ಕಟ್ಟಿದರೂ ಅದು ಅಸಹಜ ಅನಿಸೋದಿಲ್ಲ.
ಆದರೆ ಪ್ರಿಯಾ ಹಾಗೂ ಅಶೋಕ್ ಜೋಡಿ ಸಾಮಾನ್ಯರ ನಡುವಿನಿಂದ ಎದ್ದು ಬಂದಿರುವಂಥಾ ಜೋಡಿ. ಇಂಥವರನ್ನು ನಮ್ಮ ನಡುವೆಯೇ ಕಾಣಬಹುದು ಅಥವಾ ನಾವೇ ಇವರ ಹಾಗೆ ಇರಬಹುದು. ಹೀಗಾಗಿ ಈ ಪಾತ್ರ ಹೆಚ್ಚು ಜನಕ್ಕೆ ಕನೆಕ್ಟ್ (Connect) ಆಗುತ್ತೆ. ಈ ವಾರವಂತೂ ಈ ಜೋಡಿಯ ರೊಮ್ಯಾಂಟಿಕ್ ಸೀನ್‌ಗಳು ಜನರ ಮನಸ್ಸನ್ನು ಮುಟ್ಟಿದೆ. ನೇರಾ ನೇರ ಇಬ್ಬರೂ ತಮ್ಮ ಪ್ರೇಮವನ್ನು ವ್ಯಕ್ತಪಡಿಸಿದ್ದಾರೆ. ರಾಮ ಸೀತಾ ನಡುವೆ ಇರುವಂಥಾ ಸಮಸ್ಯೆಗಳು ಇವರ ಮಧ್ಯೆ ಇಲ್ಲ. ಈ ಇಬ್ಬರೂ ಸಾಮಾನ್ಯ ಮಿಡಲ್ ಕ್ಲಾಸ್‌ನವರು. ಆದರೆ ಮನಸ್ಸಲ್ಲಿ ಒಳ್ಳೆತನ ಇದೆ. ಇಬ್ಬರ ಚಾಯ್ಸ್ ಉತ್ತರ ದಕ್ಷಿಣ ಆದರೂ ಪ್ರೇಮ ಈ ಜೋಡಿಯನ್ನು ಒಂದು ಮಾಡಿದೆ.
ಸೋ ಈ ಜೋಡಿ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ (Social Media) ಮೆಚ್ಚುಗೆಯ ಸುರಿಮಳೆಯೇ ಹರಿದು ಬರ್ತಾ ಇದೆ. ಹೆಚ್ಚಿನವರು ಸೀತಾ ರಾಮ ಜೋಡಿಗಿಂತ ಈ ಜೋಡಿನೇ ಇಷ್ಟ ಅಂದಿದ್ದಾರೆ. ಕೆಲವ್ರಂತೂ ನಿಮ್ ಜೋಡಿ ತುಂಬಾ ಚೆನ್ನಾಗಿದೆ, ಇಬ್ರೂ ಮದ್ವೆ ಆಗ್ಬಿಡಿ ಅಂತ ಬೇರೆ ಹೇಳ್ಬಿಟ್ಟಿದ್ದಾರೆ. ಇನ್ನೊಬ್ರು ಇವ್ರ ಮೇಲೆ ಯಾವ ಕಾರಣಕ್ಕೂ ಭಾರ್ಗವಿಯ ಕೆಟ್ಟ ದೃಷ್ಟಿ ಬೀಳೋ ಹಾಗೆ ಮಾಡಬೇಡಿ ಅಂತ ರಿಕ್ವೆಸ್ಟ್ ಮಾಡಿಕೊಂಡಿದ್ದಾರೆ.
ಹೆಂಡ್ತಿ, ತಾಯಿ ಸ್ಥಾನವನ್ನು ಕೆಲಸದಾಕೆ ತುಂಬಲು ಸಾಧ್ಯನಾ? ಭಾಗ್ಯಲಕ್ಷ್ಮಿ ಹೇಳಿದ್ದೇನು ಕೇಳಿ...
ಅಂದಹಾಗೆ ಮೇಘನಾ ಶಂಕರಪ್ಪ ಹಾಗೂ ಅಶೋಕ್ ಶರ್ಮಾ ಸೀತಾರಾಮ ಸೀರಿಯಲ್‌ನಲ್ಲಿ ಪ್ರಿಯಾ ಹಾಗೂ ಅಶೋಕ್ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಮೇಘನಾ ಭರತನಾಟ್ಯ ಕಲಾವಿದೆ, ನಟಿ, ನಿರೂಪಕಿಯಾಗಿದ್ದರೆ, ಅಶೋಕ್ ಸಿನಿಮಾ, ಸೀರಿಯಲ್ ಕಲಾವಿದ, ಗಾಯಕನಾಗಿಯೂ ಗಮನ ಸೆಳೆದಿದ್ದಾರೆ.