
ಇದ್ದರೆ ಇರಬೇಕು, ಅಮೃತಧಾರೆಯ ಗೌತಮ್‌ನಂಥ ಪತಿ ಎನ್ನುವ ಮಾತು ಬಹುತೇಕ ಸೀರಿಯಲ್ ಪ್ರಿಯರ ಮನಸ್ಸಿನಲ್ಲಿ ಮೂಡುವುದು ಸಹಜ. ಅಷ್ಟಕ್ಕೂ ಸೀರಿಯಲ್ಗಳು ಇರುವುದೇ ಅದಕ್ಕಾಗಿ. ಎಷ್ಟೋ ಮಂದಿ ಧಾರಾವಾಹಿಗಳನ್ನು ಕೇವಲ ಧಾರಾವಾಹಿಯಾಗಿ ಮಾತ್ರವಲ್ಲದೇ, ಅದರಲ್ಲಿನ ಪ್ರತಿಯೊಂದು ಪಾತ್ರಗಳನ್ನೂ ಆಹ್ವಾನಿಸಿಕೊಳ್ಳುವುದು ಉಂಟು. ತಮ್ಮ ಜೀವನಕ್ಕೆ ಅದನ್ನು ಹೋಲಿಕೆ ಮಾಡಿಕೊಂಡು ಖುಷಿಪಡುವುದು, ದುಃಖಿಸುವುದು ಉಂಟು. ಇದೇ ಕಾರಣಕ್ಕೆ ಇಂದು ವೀಕ್ಷಕರಿಗೆ ಅದರಲ್ಲಿಯೂ ಹೆಚ್ಚಾಗಿ ಮಹಿಳೆಯರಿಗೆ ಸೀರಿಯಲ್ಗಳು ಎಂದರೆ ಜೀವನಾಧಾರವಾಗಿಬಿಟ್ಟಿದೆ. ಇದೇ ಕಾರಣಕ್ಕೆ ಸೀರಿಯಲ್ಗಳ ಸಂಖ್ಯೆಗಳೂ ಏರುತ್ತಲೇ ಇವೆ.
ಹಲವಾರು ಸೀರಿಯಲ್ಗಳು, ಎಲ್ಲಾ ಭಾಷೆಗಳ ಕಥೆಗಳೂ ಒಂದೇ ರೀತಿ ಚರ್ವಿತಚವಣ ಆಗಿದ್ದರೂ ಸೀರಿಯಲ್ ಬೇಕು ಒಟ್ಟಿನಲ್ಲಿ. ಆದರೆ ಸ್ವಲ್ಪ ವಿಭಿನ್ನ ಕಥಾಹಂದರ ಹೊಂದಿರುವ ಸೀರಿಯಲ್ಗಳ ಪೈಕಿ ಜೀ ಕನ್ನಡದ ಅಮೃತಧಾರೆ ಒಂದು. ಅದರಲ್ಲಿನ ಭೂಮಿಕಾ ಮತ್ತು ಗೌತಮ್ ಪಾತ್ರವನ್ನು ಬಹಳಷ್ಟು ಮಂದಿ ಮೆಚ್ಚಿಕೊಂಡಿದ್ದಾರೆ. ಆದರೆ ಇತ್ತೀಚಿನ ಕೆಲವು ಎಪಸೋಡ್ ನೋಡಿದ ಮೇಲೆ ಗೌತಮ್ ಪಾತ್ರಕ್ಕೆ ಯುವತಿಯರು ಮರುಳಾಗಿದ್ದಾರೆ. ಪತ್ನಿಗಾಗಿ ಆತ ಪರಿತಪಿಸುವ ರೀತಿ, ಪತ್ನಿ ಸಿಕ್ಕರೂ ಆಕೆ ಕೋಪ ಮಾಡಿಕೊಂಡಾಗ, ಗೌತಮ್ ನಿರ್ವಹಿಸುವ ರೀತಿ, ಮಗ ಎಂದು ತಿಳಿದರೂ ಅದನ್ನು ಆತನಿಗೆ ತಿಳಿಯದಂತೆಯೇ ಮನಸ್ಸಿನಲ್ಲಿ ನೋವು ಹುದುಗಿಸಿ ಇಟ್ಟುಕೊಂಡಿರುವ ರೀತಿ... ಹೀಗೆ ಬಹುತೇಕ ಹೆಣ್ಣು ತನ್ನ ಗಂಡನಾಗುವಲ್ಲಿ ಏನು ಗುಣಗಳು ಇರಬೇಕು ಎಂದು ಬಯಸುತ್ತಾಳೋ ಅವೆಲ್ಲವನ್ನೂ ಗೌತಮ್ನಲ್ಲಿ ನೋಡಿರುವವರೇ ಹೆಚ್ಚು.
ಇದೇ ಕಾರಣಕ್ಕೆ, ಇದೀಗ ಈಚೆಗೆ ನಡೆದ ಅಮೃತಧಾರೆಯ ಸಂಕ್ರಾಂತಿ ಜಾತ್ರೆ ಕಾರ್ಯಕ್ರಮದಲ್ಲಿ, ಯುವತಿಯೊಬ್ಬಳು ಭೂಮಿಕಾಗೆ ಅರ್ಥಾತ್ ನಟಿ ಛಾಯಾ ಸಿಂಗ್ ಅವರಿಗೆ ನನಗೆ ಗೌತಮ್‌ನಂಥ ಹುಡುಗ ಬೇಕು. ಹಾಗಿದ್ದರೆ ನಾನು ಏನು ಮಾಡಬೇಕು ಎಂದು ಪ್ರಶ್ನಿಸಿದ್ದಾರೆ. ಅದಕ್ಕೆ ಆರಂಭದಲ್ಲಿ ಸ್ವಲ್ಪ ಕಕ್ಕಾಬಿಕ್ಕಿಯಾದ ಛಾಯಾ ಸಿಂಗ್ ಅವರು ಕೊನೆಗೆ ತಮಾಷೆಯಾಗಿ ಉತ್ತರಿಸುತ್ತಾ, ಅಮೃತಧಾರೆಯ ನಿರ್ದೇಶಕರನ್ನು ಕೇಳಬೇಕು ಎಂದಾಗ ಎಲ್ಲರೂ ಜೋರಾಗಿ ನಕ್ಕಿದ್ದಾರೆ.
ಬಳಿಕ ಆ್ಯಂಕರ್ ನಿರಂಜನ ಅವರು ನಿಮಗೆ ಯಾಕೆ ಗೌತಮ್ ಇಷ್ಟ ಎಂದು ಪ್ರಶ್ನಿಸಿದಾಗ, ಯುವತಿ ಅವರು ಎಲ್ಲರನ್ನೂ ಕೇರ್ ಮಾಡುವ ರೀತಿ, ಅವರ ಗುಣ, ಅವರ ನೋಟ ಎಲ್ಲವೂ ಇಷ್ಟ. ಅದಕ್ಕಾಗಿ ಅಂಥದ್ದೇ ಪತಿ ನನಗೂ ಬೇಕು ಎಂದಿದ್ದಾರೆ. ಆಗ ನಟಿ ಛಾಯಾ ಸಿಂಗ್ ಅವರು, ಭೂಮಿಕಾ, ಗೌತಮ್ನನ್ನು ಗಂಡನಾಗಿ ಪಡೆಯುವಾಗ ಏನೂ ಆಸೆಯನ್ನು ಇಟ್ಟುಕೊಂಡಿರಲಿಲ್ಲ. ಇಂಥವನೇ ಬೇಕು ಎಂದುಕೊಂಡಿರಲಿಲ್ಲ. ನೀವೂ ಹಾಗೆಯೇ ಮಾಡಿದರೆ ಒಳ್ಳೆಯ ಗಂಡ ಸಿಗುತ್ತಾನೆ ಎಂದಿದ್ದಾರೆ! ಆಗ ಎಲ್ಲರೂ ಜೋರಾದ ಚಪ್ಪಾಳೆ ತಟ್ಟಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.