
ಇಂದು ಅಂದರೆ ಮೇ 16 ನಟಿ ಛಾಯಾ ಸಿಂಗ್ ಅವರಿಗೆ ಹುಟ್ಟುಹಬ್ಬದ ಸಂಭ್ರಮ. ಅಷ್ಟಕ್ಕೂ ಛಾಯಾ ಸಿಂಗ್ ಎಂದರೆ ಬಹುತೇಕರಿಗೆ ತಿಳಿಯಲು ಆಗಲಿಕ್ಕಿಲ್ಲ. ಇವರೇ ಅಮೃತಧಾರೆ ಭೂಮಿಕಾ (Bhoomika) . ಹೌದು. ಭೂಮಿಕಾ ಅವರ ನಿಜವಾದ ಹೆಸರು ಛಾಯಾ ಸಿಂಗ್. ಇಂದು ಅವರು ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದು, ಈ ಸಂದರ್ಭದಲ್ಲಿ ಜೀ ಕನ್ನಡ ವಾಹಿನಿ ಛಾಯಾ ಸಿಂಗ್ ಕುರಿತು ವಿಶೇಷ ವಿಡಿಯೋ ಒಂದನ್ನು ರಿಲೀಸ್ ಮಾಡಿದೆ. ಇದರಲ್ಲಿ ಅಮೃತಧಾರೆ ಭೂಮಿಕಾ ಹೇಗಿದ್ದಳು, ಹೇಗಾದಳು ಎನ್ನುವುದನ್ನು ತೋರಿಸಲಾಗಿದೆ. ವಯಸ್ಸಾದರೂ ಮದುವೆಯಾಗದೇ ಉಳಿದ ಮಧ್ಯಮ ಕುಟುಂಬದ ಹೆಣ್ಣುಮಗಳೊಬ್ಬಳು ಒತ್ತಾಯಪೂರ್ವಕವಾಗಿ ವಯಸ್ಸಾಗಿರುವ ಕೋಟ್ಯಧಿಪತಿ ಬಿಜಿನೆಸ್ಮೆನ್ ಜೊತೆ ಮದುವೆಯಾಗಿ ಸಂಸಾರದಲ್ಲಿ ಹೊಂದಿಕೊಳ್ಳಲು ಪರದಾಡಿದ, ನಂತರ ಹೇಗೆ ಗಂಡನ ಪ್ರೀತಿಯ ತೆಕ್ಕೆಗೆ ಬಿದ್ದಳು ಎನ್ನುವ ಪಾತ್ರ ಈ ಭೂಮಿಕಾಳದ್ದು. ಭೂಮಿಕಾ ಪಾತ್ರಕ್ಕೆ ಜೀವ ತುಂಬಿರೋ ನಟಿಯ ಅಸಲಿ ಹೆಸರೇ ಛಾಯಾ ಸಿಂಗ್.
ಇವರ ವಿಡಿಯೋ ಶೇರ್ ಆಗುತ್ತಿದ್ದಂತೆಯೇ ನೆಟ್ಟಿಗರು ನಟಿಯ ಕಾಲೆಳೆಯುತ್ತಿದ್ದಾರೆ. ಏಕೆಂದರೆ ಅಮೃತಧಾರೆಯಲ್ಲಿನ ಗಂಡ ಗೌತಮ್, ಪತ್ನಿ ಹುಟ್ಟುಹಬ್ಬಕ್ಕೆ ಚಿಕ್ಕಮಗಳೂರಿನ ಎಸ್ಟೇಟ್ ಬರೆದು ಕೊಟ್ಟಿದ್ದಾನೆ. ಹಾಗಿದ್ದರೆ ರಿಯಲ್ ಲೈಫ್ ಗಂಡ ಏನು ಕೊಡ್ತಾರೆ ಎಂದು ಹೇಳಿ ಎಂದು ನಟಿಗೆ ಫ್ಯಾನ್ಸ್ ಪ್ರಶ್ನಿಸುತ್ತಿದ್ದಾರೆ. ಅಂದಹಾಗೆ, ಅಮೃತಧಾರೆಯ ರೀಲ್ ಲೈಫ್ನಲ್ಲಿ ಗೌತಮ್ ಈಕೆಯ ಪತಿಯಾದರೆ, ರಿಯಲ್ ಲೈಫ್ ಪತಿಯ ಹೆಸರು. ಕೃಷ್ಣ. ಕೃಷ್ಣ ಎನ್ನುವವರ ಜೊತೆ ಛಾಯಾ ಅವರ ಮದುವೆಯಾಗಿದ್ದು, ಇನ್ಸ್ಟಾಗ್ರಾಮ್ನಲ್ಲಿ ಅವರು ಪತಿಯ ಜೊತೆ ಆಗಾಗ ಫೋಟೋ ಶೇರ್ ಮಾಡಿಕೊಳ್ಳುತ್ತಿರುತ್ತಾರೆ. ಮದುವೆಯಾಗಿ 11 ವರ್ಷಗಳೇ ಕಳೆದಿವೆ. ಬೆಂಗಳೂರಿನ ಬೆಡಗಿ ಛಾಯಾ ಸಿಂಗ್ ನಿಜ ಜೀವನದಲ್ಲಿ ತುಂಬಾ ಸಾಫ್ಟ್ ಅಂತೆ. ಅವರಿಗೆ ಕೃಷ್ಣ ಅವರ ಪರಿಚಯವಾದದ್ದು, ತಮಿಳು ಚಿತ್ರದಲ್ಲಿ ನಟಿಸುವ ಸಮಯದಲ್ಲಿ. ಕೃಷ್ಣ ಅವರೂ ಸಿನಿಮಾರಂಗದಲ್ಲೇ ಇದ್ದು, ತಮಿಳು ಕಿರುತೆರೆಯ ಜನಪ್ರಿಯ ನಟ. 2010ರಲ್ಲಿ ತಮಿಳು ನಟ ಕೃಷ್ಣರನ್ನು ಮೊದಲು ಭೇಟಿಯಾಗಿದ್ದರು.
ಕೆಂಡ ಸಂಪಿಗೆ ಸೀರಿಯಲ್ ಬಿಡಲು ಕಾರಣವೇನು? ಸುಮನಾ ಪಾತ್ರಧಾರಿ ನಟಿ ಕಾವ್ಯ ಹೇಳಿದ್ದೇನು?
'ಆನಂದಪುರತು ವೀಡ್' (Anandhapurathu Veedu) ಎಂಬ ಸಿನಿಮಾದ ವೇಳೆ ಭೇಟಿಯಾದ ಇವರು ಪರಸ್ಪರ ಇಷ್ಟಪಟ್ಟು ನಂತರ ಹಿರಿಯರ ಒಪ್ಪಿಸಿ, ಅವರ ಆಶೀರ್ವಾದ ಪಡೆದು 2012ರಲ್ಲಿ ಮದುವೆಯಾಗಿದ್ದಾರೆ. 2010ರಲ್ಲಿ ತೆರೆ ಕಂಡ ಈ ಚಿತ್ರ ಸೂಪರ್‌ನ್ಯಾಚುರಲ್ ಮಿಸ್ಟರಿ ಸಿನಿಮಾವಾಗಿದ್ದು, ಇವರಿಬ್ಬರೂ ನಟಿಸಿದ್ದಾರೆ. ನಿರ್ದೇಶಕ ಶಂಕರ್ ನಿರ್ಮಾಣದ ಈ ಚಿತ್ರಕ್ಕೆ ಪಾಸಿಟಿವ್ ಪ್ರತಿಕ್ರಿಯೆ ಹೆಚ್ಚು ಸಿಕ್ಕಿತ್ತು. ಈ ಸಿನಿಮಾದಲ್ಲಿ ಛಾಯಾ ಅವರು ನಾಯಕಿ ಪಾತ್ರ ಮಾಡಿದ್ದರೆ ಕೃಷ್ಣ (Krishna) ಅವರು ನೆಗೆಟಿವ್ ಪಾತ್ರ ಮಾಡಿದ್ದರು. ಇನ್ನು ರನ್ ಎನ್ನುವ ಧಾರಾವಾಹಿಯಲ್ಲಿ ಕೃಷ್ಣ, ಛಾಯಾ ಸಿಂಗ್ ಒಟ್ಟಿಗೆ ನಟಿಸಿದ್ದರು. 2019ರಲ್ಲಿ ಈ ಧಾರಾವಾಹಿ ಪ್ರಸಾರ ಆಗಿ 197 ಎಪಿಸೋಡ್ ಪ್ರಸಾರ ಆಗಿತ್ತು. ಟಿಆರ್‌ಪಿ ಕಾರಣದಿಂದವೋ ಅಥವಾ ಇನ್ಯಾವುದೋ ಕಾರಣಕ್ಕೋ ಏನೋ ಈ ಸೀರಿಯಲ್ ಬಹುಬೇಗ ಅಂತ್ಯ ಆಗಿತ್ತು.
ಇನ್ನು ಛಾಯಾ ಅವರ ಹಿನ್ನೆಲೆ ಕುರಿತು ಹೇಳುವುದಾದರೆ, ಇವರ ಪಾಲಕರು ಉತ್ತರ ಪ್ರದೇಶದಿಂದ ಬಂದು ಕರ್ನಾಟಕದಲ್ಲಿ ನೆಲೆಸಿದ ರಜಪೂತರು. ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಛಾಯಾ, ಕನ್ನಡ ಮಾತ್ರವಲ್ಲದೇ ತಮಿಳು, ಮಲಯಾಳಂ, ಬಂಗಾಳಿ, ಬೋಜಪುರಿ, ತೆಲುಗು ಮತ್ತು ಓರಿಯಾ ಚಿತ್ರಗಳಲ್ಲಿ ನಟಿಸಿದ್ದಾರೆ. ಕನ್ನಡ ಸಿನಿಮಾರಂಗದಿಂದ ನಟನೆ ಆರಂಭಿಸಿದ ಛಾಯಾ ಸಿಂಗ್, 2000ನೇ ಇಸವಿಯಲ್ಲಿ ತೆರೆಕಂಡ ಪಿ ಶೇಷಾದ್ರಿ ನಿರ್ದೇಶನದ `ಮುನ್ನಡಿ' ಚಿತ್ರದಲ್ಲಿ ನಟಿಸುವ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟರು. ಇವರು ನಟಿಸಿದ ಮೊದಲ ಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿ ಲಭಿಸಿತ್ತು. ಬಳಿಕ ರಾಷ್ಟ್ರಗೀತೆ, ಚಿಟ್ಟೆ, ಗುಟ್ಟು ಸಿನಿಮಾಗಳಲ್ಲಿ ನಟಿಸಿದರು. ನಂತರ ಅನಿರುದ್ಧ್ ನಟನೆಯ 'ತುಂಟಾಟ' ಸಿನಿಮಾದಲ್ಲಿ ಅಭಿನಯಿಸಿದರು. ಈ ಸಿನಿಮಾ ಅವರಿಗೆ ಒಳ್ಳೆಯ ಹೆಸರು ತಂದುಕೊಟ್ಟಿತು.
ಬಾಯ್ಫ್ರೆಂಡ್ ಜತೆ ಸಂಬಂಧ ಹೊಂದುವ ಮೊದ್ಲೇ ಎಗ್ ಫ್ರೀಜ್ ಮಾಡಿದ್ರಂತೆ ನಟಿ ಈಶಾ ಗುಪ್ತಾ!
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.