ಅಮೃತಧಾರೆಯ ಗೌತಮ್ ಭೂಮಿಕಾ ಮದುವೆಯ ಶುಭ ಘಳಿಗೆಗೆ ಇಂದು ಸಾಕ್ಷಿಯಾಗಲಿದ್ದಾರೆ ಸೀತಾ- ಸಿಹಿ. ಮಹಾ ಸಂಚಿಕೆಯಲ್ಲಿ ಇಂದು ಕುತೂಹಲ.
ಹಲವು ಕಾರಣಗಳಿಂದ ಮದುವೆಯಾಗದೇ ಉಳಿದ ಹಿರಿ ಜೀವಗಳು ಮದುವೆಯಾಗುವ ಕಥೆಯುಳ್ಳ ಅಮೃತಧಾರೆ ಹಾಗೂ ಸಿಂಗಲ್ ಪೇರೆಂಟ್ ಕಥೆಯುಳ್ಳ ಸೀತಾರಾಮ ಧಾರಾವಾಹಿಗಳು ಪ್ರೇಕ್ಷಕರಿಗೆ ಅತ್ಯಂತ ಹತ್ತಿರವಾಗುತ್ತಿದೆ. ದಿನದಿಂದ ದಿನಕ್ಕೆ ಈ ಧಾರಾವಾಹಿಗಳು ಕುತೂಹಲ ಕೆರಳಿಸುತ್ತಿವೆ. ವಿಭಿನ್ನ ಕತೆಯ ಮೂಲಕ ಪ್ರೇಕ್ಷಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿರುವ ಅಮೃತಧಾರೆ ಸೀರಿಯಲ್ (Amruthadhaare) ನಲ್ಲಿ ಸದ್ಯ ಮದುವೆಯ ಸಂಭ್ರಮ ಮನೆ ಮಾಡಿದೆ. ಅಮೃತಧಾರೆ ಧಾರಾವಾಹಿಯಲ್ಲಿ ಸಂಪ್ರದಾಯವನ್ನು ಮಾನವೀಯ ನೆಲೆಯಲ್ಲಿ ನೋಡೋ ರೀತಿಯನ್ನು ಪ್ರೇಕ್ಷಕರು ಮೆಚ್ಚಿಕೊಂಡಿದ್ದಾರೆ. ನಾಯಕ ಗೌತಮ್ ಮತ್ತು ನಾಯಕಿ ಭೂಮಿಕಾ ಮದುವೆ ನಡೆಯುತ್ತಿದೆ. ಗೌತಮ್ ನಲವತ್ತರ ಹರೆಯದ ಮಧ್ಯವಯಸ್ಕ. ಭೂಮಿಕಾಗೂ ಮೂವತ್ತೈದರ ಹರೆಯ. ವಯಸ್ಸಿನ ಕಾರಣಕ್ಕೆ ಇಬ್ಬರಲ್ಲೂ ಮೆಚ್ಯೂರಿಟಿ ಇದೆ. ಈ ಇಬ್ಬರ ಮದುವೆಯ ಸಂಭ್ರಮ ಇದೀಗ ಶುರುವಾಗಿದೆ. ಇದಾಗಲೇ ಮದುವೆಗೂ ಮುನ್ನದ ಸನ್ನಿವೇಶಗಳನ್ನು ಕೂಡ ಅಷ್ಟೇ ಇಂಟರೆಸ್ಟಿಂಗ್ ಆಗಿ ತೆಗೆದುಕೊಳ್ಳಲಾಗಿದೆ.
ಇದು ಅಮೃತಧಾರೆಯ ಕಥೆಯಾದರೆ, ಇನ್ನು ಸೀತಾರಾಮ ಧಾರಾವಾಹಿಯ ಕಥೆಯೇ ವಿಭಿನ್ನ. ಬಿಲಿಯನೇರ್ ರಾಮ ಹಾಗೂ ಮಧ್ಯಮ ಕುಟುಂಬದ ಸೀತಾರ ನಡುವಿನ ನವಿರಾದ ಕಥಾಹಂದರವುಳ್ಳಿ ಈ ಧಾರಾವಾಹಿ ದಿನದಿಂದ ದಿನಕ್ಕೆ ಕುತೂಹಲದ ತಿರುವು ಪಡೆಯುತ್ತಲೇ ಸಾಗಿದೆ. ಟಿಆರ್ಪಿಯಲ್ಲಿಯೂ ಸಾಕಷ್ಟು ಮುಂದಿರುವ ಈ ಧಾರಾವಾಹಿ ಮಧ್ಯಮವರ್ಗದ ಕುಟುಂಬ ಅದರಲ್ಲಿಯೂ ಸಿಂಗಲ್ ಪೇರೆಂಟ್ (Single Parent) ಮಹಿಳೆಯೊಬ್ಬಳ ಜೀವನ ಯುದ್ಧವನ್ನು ಸೊಗಸಾಗಿ ಕಟ್ಟಿಕೊಡಲಾಗಿದೆ. ಎಲ್ಲರ ಜೊತೆ ಬೆರೆಯೋ ಮುದ್ದಿನ ಮಗು ಸಿಹಿ ಕಾರಣಕ್ಕೆ ರಾಮ ಸಿಹಿಯ ಬೆಸ್ಟ್ ಫ್ರೆಂಡ್ ಆಗಿದ್ದಾನೆ. ಹಾಗೇ ಸೀತಾಗೂ ಫ್ರೆಂಡ್ ಆಗಿದ್ದಾನೆ. ಸ್ವಲ್ಪ ಸಮಯದಲ್ಲೇ ಇವರ ನಡುವೆ ಸ್ನೇಹಲೋಕ ಶುರುವಾಗಿದೆ. ಈಗ ರಾಮ್ ಟೈಮ್ ಇದ್ದಾಗಲೆಲ್ಲ ಸಿಹಿಯನ್ನು ಹುಡುಕಿಕೊಂಡು ಬರುತ್ತಾನೆ. ಅವಳ ಜೊತೆ ಆಟ ಆಡ್ತಾ, ಅವಳ ತುಂಟಾಟಗಳನ್ನು ನೋಡ್ತಾ ಅವನಿಗೆ ಜಗತ್ತು ಸುಂದರವಾಗಿದೆ ಅನಿಸಲಾರಂಭಿಸಿದೆ. ರಾಮ ಹಾಗೂ ಸೀತಾ ನಡುವೆ ಶುರುವಲ್ಲಿ ಬರೀ ಕೊಲೀಗ್ ಗಳ ನಡುವೆ ಇರುವ ಸಂಬಂಧ ಮಾತ್ರ ಇತ್ತು. ಈಗ ಸಿಹಿ ಕಾರಣಕ್ಕೆ ಇದು ಸ್ನೇಹಕ್ಕೆ ತಿರುಗಿದೆ.
ಅಮೃತಧಾರೆಯಲ್ಲಿ ಮಾವನ ಪಾದವನ್ನೇ ತೊಳೆದ ಅಳಿಯ, ಗೌತಮ್ ನಡೆಗೆ ಜೈ ಎಂದ್ರ ಮಂದಿ!
ಇತ್ತೀಚಿಗೆ ಧಾರಾವಾಹಿಗಳಲ್ಲಿ ಭಿನ್ನ ಟ್ರೆಂಡ್ ಶುರುವಾಗಿದೆ. ಅದೇನೆಂದರೆ ಎರಡು ವಿಭಿನ್ನ ಧಾರಾವಾಹಿಗಳನ್ನು ಒಂದೇ ಧಾರಾವಾಹಿಯಲ್ಲಿ ತೋರಿಸುವುದು. ಯಾವುದೋ ಒಂದು ಸಂದರ್ಭದಲ್ಲಿ ಎರಡು-ಮೂರು ಧಾರಾವಾಹಿಗಳ ನಟರು ಒಂದೇ ಧಾರಾವಾಹಿಯಲ್ಲಿ ತೋರಿಸಿ, ಕಥೆಗೆ ಯಾವುದೇ ಚ್ಯುತಿ ಬರದಂತೆ ಮಾಡಲಾಗುತ್ತಿದೆ. ಹಿಂದಿಯಲ್ಲಷ್ಟೇ ಇದ್ದ ಈ ಟ್ರೆಂಡ್ ಕೆಲ ವರ್ಷಗಳಿಂದ ಬಹುತೇಕ ಎಲ್ಲಾ ಭಾಷೆಗಳ ಧಾರಾವಾಹಿಗಳಲ್ಲಿಯೂ ಕಾಣಸಿಗುತ್ತದೆ. ಎರಡು ಧಾರಾವಾಹಿಗಳನ್ನು ಒಟ್ಟಿಗೇ ತೋರಿಸಿ ಒಂದು ಗಂಟೆಗಳ ಮಹಾ ಸಂಚಿಕೆ ಮಾಡಲಾಗುತ್ತದೆ.
ಅದೇ ರೀತಿ ಇಂದು ಅಮೃತಧಾರೆ ಹಾಗೂ ಸೀತಾರಾಮ (Seetarama) ಧಾರಾವಾಹಿಗಳನ್ನು ಒಟ್ಟಿಗೇ ತೋರಿಸಲಾಗುತ್ತಿದೆ. ಒಂದು ಗಂಟೆಗಳ ಮಹಾ ಸಂಚಿಕೆಯಲ್ಲಿ ಗೌತಮ್- ಭೂಮಿಕಾ ಮದುವೆಗೆ ಸೀತಾ ತಮ್ಮ ಪುಟಾಣಿ ಮಗಳು ಸಿಹಿ ಜೊತೆ ಹಾಜರಿದ್ದಾಳೆ. ಮದುವೆಗೆ ಶುಭ ಕೋರುತ್ತಿದ್ದಾಳೆ. ಈ ಕುತೂಹಲದ ಕ್ಷಣವನ್ನು ಕಣ್ತುಂಬಿಸಿಕೊಳ್ಳಲು ಪ್ರೇಕ್ಷಕರು ಕಾತರದಿಂದ ಕಾಯುತ್ತಿದ್ದಾರೆ. ಇದು ಧಾರಾವಾಹಿ ಎಂಬ ಅರಿವಿದ್ದರೂ ನಿಜ ಜೀವನದ ಕಥೆಯೇ ಎಂದುಕೊಳ್ಳುವಷ್ಟರ ಮಟ್ಟಿಗೆ ಜನರು ಅದರಲ್ಲಿಯೂ ಹೆಚ್ಚಾಗಿ ಮಹಿಳೆಯರು ಧಾರಾವಾಹಿಗಳನ್ನು ಪ್ರೀತಿಸುತ್ತಿದ್ದು, ಕಮೆಂಟ್ಗಳ ಸುರಿಮಳೆಯನ್ನೇ ಹರಿಸುತ್ತಿದ್ದಾರೆ.
ಮದುವೆಗೂ ಮೊದಲೇ ದೊಡ್ಡ ಫಚೀತಿ ಎದುರಾಗಿದೆ. ಇವರ ಮದುವೆ ನಡೆಯೋ ಕಲ್ಯಾಣ ಮಂಟಪದಲ್ಲೇ ಮತ್ತೊಂದು ಮದುವೆ ನಡೀತಿದೆ. ಆ ಮದುವೆ ಮುಗಿದ ಬಳಿಕವೇ ಇವರ ಕಡೆಯವರಿಗೆ ಕಲ್ಯಾಣ ಮಂಟಪಕ್ಕೆ ಎಂಟ್ರಿ. ಬಿಲಿಯನೇರ್ ಬ್ಯುಸಿನೆಸ್‌ಮೆನ್ ಗೌತಮ್ ದಿವಾನ್‌ಗೆ ಹೀಗೂ ನಡೆಯಬಹುದು ಅನ್ನೋ ಕಲ್ಪನೆಯೂ ಇಲ್ಲ. ಇದೊಂಥರ ಮಧ್ಯಮ ವರ್ಗದ ಲೈಫ್‌ಸ್ಟೈಲ್ ಅನ್ನು ಹೇಳುವ ಹಾಗಿದೆ. ಇನ್ನೊಂದು ಕಡೆ ಕಲ್ಯಾಣ ಮಂಟಪಕ್ಕೆ ಬರುವ ದಾರಿಯಲ್ಲಿ ವೈಟ್ ಟಾಪಿಂಗ್ ನಡೆದು ದಾರಿ ಸಿಗದೇ ಒದ್ದಾಡುತ್ತಿರುವಾಗ ಮದು ಮಗಳು ಭೂಮಿಕಾನೇ ಚೌಲ್ಟ್ರಿ ಹೊರಬಂದು ಗೌತಮ್‌ನ ರಿಸೀವ್ ಮಾಡಿದ್ದಾಳೆ. ಯಾರನ್ನೋ ಕಳಿಸ್ತಾಳೆ ಅಂದುಕೊಂಡರೆ ಸ್ವತಃ ಭೂಮಿಕಾನೇ ಮದುಮಗಳ ಅವತಾರದಲ್ಲಿ ಬಂದಿರೋದನ್ನು ನೋಡಿ ಗೌತಮ್ ತಬ್ಬಿಬ್ಬಾಗಿದ್ದಾನೆ. ಈ ಟೈಮಲ್ಲಿ ಇಬ್ಬರೂ ಕಾಸು ಕೊಡದೇ ಜ್ಯೂಸ್ ಕುಡಿದ ಸನ್ನಿವೇಶವೂ ಮಜವಾಗಿ ಮೂಡಿ ಬಂದಿದೆ.
SEETARAMA: ನೀವಿರೋ ಮನೆಗೆ ಎಷ್ಟು ಬಾಡಿಗೆ ಕೇಳಿದ ಮಿಡ್ಲ್ಕ್ಲಾಸ್ ಸೀತಾ: ಬಿಲೇನಿಯರ್ ರಾಮ ಕಕ್ಕಾಬಿಕ್ಕಿ- ಮುಂದೆ?