
ಭೂಮಿಕಾ (Bhoomika) ಎಂದಾಕ್ಷಣ ಧಾರಾವಾಹಿ ಪ್ರಿಯರ ಕಣ್ಣಮುಂದೆ ಬರುವುದು ಅಮೃತಧಾರೆ ಸೀರಿಯಲ್ ನಾಯಕಿ. ವಯಸ್ಸಾದರೂ ಮದುವೆಯಾಗದೇ ಉಳಿದ ಮಧ್ಯಮ ಕುಟುಂಬದ ಹೆಣ್ಣುಮಗಳೊಬ್ಬಳು ಒತ್ತಾಯಪೂರ್ವಕವಾಗಿ ವಯಸ್ಸಾಗಿರುವ ಕೋಟ್ಯಧಿಪತಿ ಬಿಜಿನೆಸ್ಮೆನ್ ಜೊತೆ ಮದುವೆಯಾಗಿ ಸಂಸಾರದಲ್ಲಿ ಹೊಂದಿಕೊಳ್ಳಲು ಪರದಾಡುತ್ತಿರುವ ಪಾತ್ರ ಈ ಭೂಮಿಕಾಳದ್ದು. ಭೂಮಿಕಾ ಪಾತ್ರಕ್ಕೆ ಜೀವ ತುಂಬಿರೋ ನಟಿಯ ಅಸಲಿ ಹೆಸರು ಛಾಯಾ ಸಿಂಗ್. ಸಾಮಾಜಿಕ ಜಾಲತಾಣದಲ್ಲಿಯೂ ಆ್ಯಕ್ಟೀವ್ ಆಗಿರೋ ಛಾಯಾ ಸಿಂಗ್ ಆಗಾಗ್ಗೆ ಕೆಲವೊಂದು ರೀಲ್ಸ್ ಮಾಡುತ್ತಿರುತ್ತಾರೆ, ಕೆಲವೊಂದು ಮಾಹಿತಿ ಶೇರ್ ಮಾಡಿಕೊಳ್ಳುತ್ತಿರುತ್ತಾರೆ. ಅಮೃತಧಾರೆ ಸೀರಿಯಲ್ ಇದೀಗ ಮಹತ್ವದ ಘಟ್ಟ ತಲುಪಿದ್ದು, ಪತಿ ಗೌತಮ್ ಸ್ನೇಹಿತನ ಕಾರಣ, ಪಾನೀಯದಲ್ಲಿ ಮದ್ಯ ಸೇವನೆ ಮಾಡಿದ್ದಾಳೆ ಭೂಮಿಕಾ. ಸದಾ ಕಚ್ಚಾಡುವ ದಂಪತಿಯನ್ನು ಒಂದು ಮಾಡಲು ಸ್ನೇಹಿತ ಈ ಪ್ಲ್ಯಾನ್ ಮಾಡಿದ್ದು, ಅದು ಸಕ್ಸಸ್ ಕೂಡ ಆಗಿದೆ. ಪತಿ-ಪತ್ನಿ ನಡುವೆ ಪ್ರೀತಿ ಮೂಡಿದೆ. ಕುಡಿದ ಅಮಲಿನಲ್ಲಿಯೇ ಹನಿಮೂನ್ ಪ್ಲ್ಯಾನ್ ಕೂಡ ಮಾಡಿಯಾಗಿದೆ. ಇವರ ಅಭಿನಯಕ್ಕೆ ಫ್ಯಾನ್ಸ್ ಫಿದಾ ಆಗಿದ್ದು, ಸೋಷಿಯಲ್ ಮೀಡಿಯಾದಲ್ಲಿ ಶ್ಲಾಘನೆಗಳ ಮಹಾಪೂರವನ್ನೇ ಹರಿಸುತ್ತಿದ್ದಾರೆ.
ಅದೇ ಭೂಮಿಕಾ ಅವರ ರಿಯಲ್ ಲೈಫ್ ಕುರಿತು ಹೇಳುವುದಾದರೆ, ಇವರ ರಿಯಲ್ ಲೈಫ್ ಪತಿಯ ಹೆಸರು ಕೃಷ್ಣ. ಭೂಮಿಕಾ ಹೆಸರು ಛಾಯಾ ಸಿಂಗ್. ಛಾಯಾ ಅವರು ಆಗ್ಗಾಗ್ಗೆ ಇನ್ಸ್ಟಾಗ್ರಾಮ್ನಲ್ಲಿ ಪತಿಯ ಜೊತೆಗಿನ ಫೋಟೋ, ವಿಡಿಯೋ ಶೇರ್ ಮಾಡಿಕೊಳ್ಳುತ್ತಿರುತ್ತಾರೆ. ಇವರ ಮದುವೆಯಾಗಿ 11 ವರ್ಷಗಳಾಗಿವೆ. ನಿಜ ಜೀವನದಲ್ಲಿ ಛಾಯಾ ಸಿಂಗ್ ನಿಜ ಜೀವನದಲ್ಲಿ ತುಂಬಾ ಸಾಫ್ಟ್ ಅಂತೆ. ಅವರಿಗೆ ಕೃಷ್ಣ ಅವರ ಪರಿಚಯವಾದದ್ದು, ತಮಿಳು ಚಿತ್ರದಲ್ಲಿ ನಟಿಸುವ ಸಮಯದಲ್ಲಿ. ಕೃಷ್ಣ ಅವರೂ ಸಿನಿಮಾರಂಗದಲ್ಲೇ ಇದ್ದು, ತಮಿಳು ಕಿರುತೆರೆಯ ಜನಪ್ರಿಯ ನಟ. 2010ರಲ್ಲಿ ತಮಿಳು ನಟ ಕೃಷ್ಣರನ್ನು ಮೊದಲು ಭೇಟಿಯಾಗಿದ್ದರು.
'ಆನಂದಪುರತು ವೀಡ್' (Anandhapurathu Veedu) ಎಂಬ ಸಿನಿಮಾದ ವೇಳೆ ಭೇಟಿಯಾದ ಇವರು ಪರಸ್ಪರ ಇಷ್ಟಪಟ್ಟು ನಂತರ ಹಿರಿಯರ ಒಪ್ಪಿಸಿ, ಅವರ ಆಶೀರ್ವಾದ ಪಡೆದು 2012ರಲ್ಲಿ ಮದುವೆಯಾಗಿದ್ದಾರೆ. 2010ರಲ್ಲಿ ತೆರೆ ಕಂಡ ಈ ಚಿತ್ರ ಸೂಪರ್‌ನ್ಯಾಚುರಲ್ ಮಿಸ್ಟರಿ ಸಿನಿಮಾವಾಗಿದ್ದು, ಇವರಿಬ್ಬರೂ ನಟಿಸಿದ್ದಾರೆ. ನಿರ್ದೇಶಕ ಶಂಕರ್ ನಿರ್ಮಾಣದ ಈ ಚಿತ್ರಕ್ಕೆ ಪಾಸಿಟಿವ್ ಪ್ರತಿಕ್ರಿಯೆ ಹೆಚ್ಚು ಸಿಕ್ಕಿತ್ತು. ಈ ಸಿನಿಮಾದಲ್ಲಿ ಛಾಯಾ ಅವರು ನಾಯಕಿ ಪಾತ್ರ ಮಾಡಿದ್ದರೆ ಕೃಷ್ಣ (Krishna) ಅವರು ನೆಗೆಟಿವ್ ಪಾತ್ರ ಮಾಡಿದ್ದರು. ಇನ್ನು ರನ್ ಎನ್ನುವ ಧಾರಾವಾಹಿಯಲ್ಲಿ ಕೃಷ್ಣ, ಛಾಯಾ ಸಿಂಗ್ ಒಟ್ಟಿಗೆ ನಟಿಸಿದ್ದರು. 2019ರಲ್ಲಿ ಈ ಧಾರಾವಾಹಿ ಪ್ರಸಾರ ಆಗಿ 197 ಎಪಿಸೋಡ್ ಪ್ರಸಾರ ಆಗಿತ್ತು. ಟಿಆರ್‌ಪಿ ಕಾರಣದಿಂದವೋ ಅಥವಾ ಇನ್ಯಾವುದೋ ಕಾರಣಕ್ಕೋ ಏನೋ ಈ ಸೀರಿಯಲ್ ಬಹುಬೇಗ ಅಂತ್ಯ ಆಗಿತ್ತು.
ಇದೀಗ ಪತಿಯ ಜೊತೆಗಿನ ಭಾವುಕ ಕ್ಷಣಗಳನ್ನು ಛಾಯಾ ಅವರು ಶೇರ್ ಮಾಡಿಕೊಂಡಿದ್ದಾರೆ. ಕೃಷ್ಣ ಅವರು ರೋಸ್ ಹಿಡಿದು ಪತ್ನಿಗೆ ಪ್ರಪೋಸ್ ಮಾಡುತ್ತಿದ್ದ ವಿಡಿಯೋ ಇದಾಗಿದ್ದು, ಅದನ್ನು ನೋಡಿ ಛಾಯಾ ಭಾವುಕರಾಗಿ ಕಣ್ಣೀರು ಹರಿಸಿರುವುದನ್ನು ನೋಡಬಹುದು. ಇದರ ವಿಡಿಯೋ ಅವರು ಶೇರ್ ಮಾಡಿಕೊಂಡಿದ್ದಾರೆ. ಇದಕ್ಕೆ ಫ್ಯಾನ್ಸ್ ಹಾರ್ಟ್ ಇಮೋಜಿಗಳನ್ನು ತುಂಬಿಸಿದ್ದಾರೆ. ಕೆಲವರು ಮೇಡಂ ಪ್ಲೀಸ್ ನೀವು ಸಿನಿಮಾದಲ್ಲಿ ನಟಿಸಿ ಎನ್ನುತ್ತಿದ್ದಾರೆ. ನಿಮ್ಮ ನಟನೆಗೆ ಹ್ಯಾಟ್ಸ್ಆಫ್ ಎನ್ನುತ್ತಿದ್ದಾರೆ. ಇನ್ನು ಕೆಲವರು ನಾವು ನಿಮ್ಮನ್ನು ಇಷ್ಟೆಲ್ಲಾ ಹೊಗಳುತ್ತೇವೆ. ಕೊನೆಯ ಪಕ್ಷ ಥ್ಯಾಂಕ್ಸ್ ಆದ್ರೂ ಹೇಳಿ. ನಮಗೆ ಖುಷಿಯಾಗುತ್ತದೆ ಎನ್ನುತ್ತಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.