Kaun Banega Crorepati 15: Amitabh Bachchan reveals he wanted to join the Indian Air Force, but was rejected for having ‘long legs’
ಅಮಿತಾಭ್ ಬಚ್ಚನ್ (Amitabh Bachchan) ಬಾಲಿವುಡ್ ಕಂಡ ಅಪರೂಪದ ನಟ. ಬ್ಲ್ಯಾಕ್ ಆ್ಯಂಡ್ ವೈಟ್ ಚಿತ್ರದಿಂದ ಹಿಡಿದು ಈ 80ರ ಹರೆಯದಲ್ಲಿಯೂ ಅಷ್ಟೇ ಉತ್ಸಾಹದ ಚಿಲುಮೆಯಾಗಿ, ನಗೆಯ ಬುಗ್ಗೆಯಾಗಿ ಚಿಮ್ಮುತ್ತಿದ್ದಾರೆ. ಹಿರಿತೆರೆ, ಕಿರುತೆರೆ, ನಿರ್ದೇಶನ, ನಿರ್ಮಾಣ ಎಲ್ಲದರಲ್ಲಿಯೂ ಇವರದ್ದು ಎತ್ತಿದ ಕೈ. 1970ರ ದಶಕದಲ್ಲಿ ಜಂಜೀರ್, ದೀವಾರ್, ಆನಂದ್, ರೋಟಿ ಕಪಾಡಾ ಮತ್ತು ಮಕಾನ್ ಚಿತ್ರಗಳ ಮೂಲಕ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದ ಅಮಿತಾಭ್ ಬಚ್ಚನ್ ಅವರಿಗೆ ಈ ವಯಸ್ಸಿನಲ್ಲಿಯೂ ಉತ್ಸಾಹ ಬತ್ತಿಲ್ಲ. ಅವರ ಎನರ್ಜಿ ಇನ್ನೂ ಹಾಗೆಯೇ ಇದೆ. ವಯಸ್ಸೆನ್ನುವುದು ಮನಸ್ಸಿಗಲ್ಲ ಎನ್ನುವ ಮಾತು ಅಕ್ಷರಶಃ ಇವರಿಗೆ ಅನ್ವಯ ಆಗುತ್ತದೆ. 80ರ ಹರೆಯದಲ್ಲಿ ಬಿಗ್ ಬಿ ಫುಲ್ ಎನರ್ಜಿಯಿಂದ ಕಾಣಿಸಿಕೊಳ್ಳುತ್ತಿದ್ದಾರೆ. ಕೂಲಿ ಚಿತ್ರದಲ್ಲಿ ಮಾರಣಾಂತಿಕ ಗಾಯಗಳಿಂದ ಬದುಕಿ ಬಂದಿದ್ದ ಅಮಿತಾಭ್ ಅವರು ಇತ್ತೀಚೆಗೆ ಪ್ರಾಜೆಕ್ಟ್ ಕೆ ಚಿತ್ರದ ಚಿತ್ರೀಕರಣದ ವೇಳೆಯಲ್ಲಿಯೂ ಗಂಭೀರ ಗಾಯಗಳಾಗಿದ್ದವು. ಇವೆಲ್ಲವುಗಳ ಹೊರತಾಗಿಯೂ ಅಮಿತಾಭ್ ಬಚ್ಚನ್ ಇಂದಿಗೂ ಅದೇ ಎನರ್ಜಿಯನ್ನು ಉಳಿಸಿಕೊಂಡಿದ್ದಾರೆ.
ಇದೀಗ ಕೌನ್ ಬನೇಗಾ ಕರೋರ್ಪತಿ (KBC)ಯ 15ನೇ ಸೀಸನ್ನಲ್ಲಿ ಅದೇ ಉತ್ಸಾಹದಲ್ಲಿ ನಟ ಕಾಣಿಸಿಕೊಳ್ಳುತ್ತಿದ್ದಾರೆ. ಇದೇ 11ರಂದು 81ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿರೋ ಅಮಿತಾಭ್ ಬಚ್ಚನ್ ಅವರು ಕನಸಿಗೆ ಕಾಲೇ ಅಡ್ಡಿಯಾಗಿತ್ತಂತೆ! ಹೌದು. ಅಸಲಿಗೆ ಅಮಿತಾಭ್ ಏನಾದರೂ ಇಷ್ಟು ಉದ್ದ ಇರದಿದ್ದರೆ, ಅವರ ಕಾಲು ಸಾಮಾನ್ಯ ಜನರಂತೆ ಇದ್ದಿದ್ದರೆ ಬಹುಶಃ ಅವರು ಇಂದು ಸಿನಿಮಾ ಕ್ಷೇತ್ರದಲ್ಲಿ ಗುರುತಿಸಿಕೊಳ್ಳುತ್ತಿರಲಿಲ್ಲವೇನೋ. ಏಕೆಂದರೆ ಅವರ ಆಸೆಯೇ ಬೇರೆಯಾಗಿತ್ತಂತೆ! ಈ ಕುರಿತು ‘ಕೌನ್ ಬನೇಗಾ ಕರೋಡ್ಪತಿ’ ಕಾರ್ಯಕ್ರಮದಲ್ಲಿ ಹಿಂದಿನದ್ದನ್ನು ಮೆಲುಕು ಹಾಕಿದ್ದಾರೆ ನಟ.
undefined
KBC ವೇದಿಕೆಯಲ್ಲಿಯೇ ಕಣ್ಣೀರು ಹಾಕಿದ ಅಮಿತಾಭ್: ಅದೆಷ್ಟು ಅಂತ ನನ್ನ ಅಳಿಸುವಿರಿ ಎಂದ ಬಿಗ್-ಬಿ
ಮೊನ್ನೆ ಅಂದರೆ 19 ರಂದು ಪ್ರಸಾರವಾದ ಕೌನ್ ಬನೇಗಾ ಕರೋಡ್ಪತಿ’ಯ ಸಂಚಿಕೆಯಲ್ಲಿ, ಅವರು ತಮ್ಮ ಜೀವನದಲ್ಲಿ ಎದುರಿಸಿದ ಅನುಭವವನ್ನು ಪ್ರೇಕ್ಷಕರೊಂದಿಗೆ ಹಂಚಿಕೊಂಡಿದ್ದಾರೆ. ನಾನು ದೆಹಲಿಯಲ್ಲಿ ಕುಟುಂಬದವರ ಜೊತೆ ಇದ್ದ ದಿನಗಳು. ಶಾಲೆ ಮುಗಿಸಿದ ನಂತರ ಏನು ಮಾಡಬೇಕೆಂದು ನನಗೆ ತಿಳಿದಿರಲಿಲ್ಲ. ಸೇನಾಪಡೆಯ ಮೇಜರ್ ಜನರಲ್ ಒಬ್ಬರು ನಮ್ಮ ಮನೆಯ ಬಳಿಯೇ ವಾಸವಾಗಿದ್ದರು. ಒಮ್ಮೆ ಅವರು ಮನೆಗೆ ಬಂದಿದ್ದರು. ಹೀಗೆಯೇ ಮಾತನಾಡುತ್ತಾ ಅವರು, ನನ್ನನ್ನು ಸೇನೆಯಲ್ಲಿ ಹಿರಿಯ ಅಧಿಕಾರಿಯನ್ನಾಗಿ ಮಾಡುತ್ತೇನೆ ಎಂದು ಚಿಕ್ಕಪ್ಪನಿಗೆ ಹೇಳಿದರು. ಅದನ್ನು ಕೇಳಿ ನನ್ನ ತಂದೆಗೂ ಖುಷಿಯಾಯಿತು. ತಂದೆಯವರು ನನ್ನನ್ನು ಅವರೊಂದಿಗೆ ಕಳುಹಿಸಿದರು. ನಾನು ವಾಯುಸೇನೆಗೆ ಸೇರಲು ಬಯಸಿದ್ದೆ. ಆದರೆ ಆಗಿದ್ದೇ ಬೇರೆ ಎಂದು ಅಮಿತಾಭ್ ನೆನಪಿಸಿಕೊಂಡಿದ್ದಾರೆ.
ಅವರು ಹೇಳಿದಾಗ ನನಗೂ ಸೇನೆಗೆ ಸೇರುವ ಆಸೆಯಾಗಿತ್ತು. ಆದರೆ ಆ ಕನಸು ನನಸಾಗಲಿಲ್ಲ. ಏಕೆಂದರೆ, ಮೇಜರ್ ಜನರಲ್ ಜೊತೆ ನನ್ನಪ್ಪ ನನ್ನನ್ನೇನೋ ಕಳುಹಿಸಿದರು. ಆದರೆ ನಾನು ಸಂದರ್ಶನಕ್ಕೆ ಹೋದಾಗ, ನನ್ನ ಕಾಲುಗಳು ತುಂಬಾ ಉದ್ದವಾಗಿದ್ದ ಕಾರಣ ನನ್ನನ್ನು ತಿರಸ್ಕರಿಸಲಾಯಿತು. ನಾನು ವಾಯುಪಡೆಗೆ ಅರ್ಹನಾಗಿರಲಿಲ್ಲ. ಒಂದು ವೇಳೆ ಕಾಲುಗಳು ಗಿಡ್ಡ ಇರುತ್ತಿದ್ದರೆ ನನ್ನ ಕನಸಿನಂತೆ ಸೇನೆಯಲ್ಲಿ ಇರುತ್ತಿದ್ದೆ ಎಂದು ಹೇಳಿದ್ದಾರೆ ಬಿಗ್ ಬಿ. ಹಿಂದಿನ ಸಂಚಿಕೆಯಲ್ಲಿ, ಇನ್ನು ಮತ್ತೊಂದು ಜನ್ಮವಿದ್ದರೆ ಏನು ಆಗಬೇಕು ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ್ದ ಅಮಿತಾಭ್ ಬಚ್ಚನ್ ಅವರು, ಈ ಜನ್ಮದಲ್ಲಿ ನನಗೆ ಬೇಕಾದಷ್ಟು ಸ್ಟಾರ್ಡಮ್ ಸಿಕ್ಕಿದೆ. ಕೋಟ್ಯಂತರ ಅಭಿಮಾನಿಗಳು ಸಿಕ್ಕಿದ್ದಾರೆ. ಈ ಅಭಿಮಾನ, ಸ್ಟಾರ್ಡಮ್ ಎಲ್ಲವೂ ಈ ಜನ್ಮಕ್ಕೆ ಸಾಕು. ಒಂದು ವೇಳೆ ಮುಂದಿನ ಜನ್ಮ ಎಂದೇನಾದರೂ ಇದ್ದರೆ, ನಾನು ಬಯಸುವುದು ನನ್ನ ತಂದೆ ತಾಯಿಯಾದ ಹರಿವಂಶ್ ಮತ್ತು ತೇಜಿ ಬಚ್ಚನ್ ಅವರ ಮಗನಾಗಿ ಮತ್ತೊಮ್ಮೆ ಹುಟ್ಟಲು ಬಯಸುವುದು ಎಂದಿದ್ದರು. ಸದ್ಯ ಅವರು ಪ್ರಭಾಸ್ ನಾಯಕರಾಗಿ ತಯಾರಾಗುತ್ತಿರುವ ‘ಪ್ರಾಜೆಕ್ಟ್ ಕೆ’ ಚಿತ್ರದಲ್ಲಿ ನಟಿಸುತ್ತಿದ್ದಾರೆ. ನಾಗ್ ಅಶ್ವಿನ್ ನಿರ್ದೇಶನದ ಈ ಸಿನಿಮಾದಲ್ಲಿ ಪ್ರಭಾಸ್ ಜೊತೆ ಬಾಲಿವುಡ್ ಸ್ಟಾರ್ ಹೀರೋಯಿನ್ ದೀಪಿಕಾ ಪಡುಕೋಣೆ ನಟಿಸುತ್ತಿದ್ದಾರೆ.
ಮರು ಜನ್ಮವಿದ್ದರೆ ನನಗಿರುವ ಒಂದೇ ಆಸೆ ಎಂದರೆ... 80 ವರ್ಷದ ಅಮಿತಾಭ್ ಹೇಳಿದ್ದೇನು?