
ಶ್ರದ್ಧಾ ಜೈನ್ ಅವರು ಅಯ್ಯೋ ಶ್ರದ್ಧಾ ( Aiyyo Shraddha ) ಎಂದು ಫೇಮಸ್ ಆಗಿದ್ದಾರೆ. ಜಾಗತಿಕವಾಗಿ ಟೆಕ್ ಉದ್ಯೋಗ ಲೇಆಫ್ ಬಗ್ಗೆ ಇವರು ವಿಡಿಯೋ ಮಾಡಿದಾಗಿನಿಂದ ಸಿಕ್ಕಾಪಟ್ಟೆ ಫೇಮಸ್ ಆದರು. ಈಗ ಅವರ ಯಶಸ್ಸಿನ ನಾಗಾಲೋಟಕ್ಕೆ ಬ್ರೇಕ್ ಇಲ್ಲ ಬಿಡಿ. ಇತ್ತೀಚಿಗೆ ಅವರದ್ದೇ ಆದ ಯೂಟ್ಯೂಬ್ ಚಾನೆಲ್‌ನಲ್ಲಿ ಸ್ಟ್ಯಾಂಡ್ ಅಪ್ ಕಾಮಿಡಿಯೊಂದನ್ನು ಅಪ್‌ಲೋಡ್ ಮಾಡಿದ್ದು ಈ ಬಗ್ಗೆ ಚರ್ಚೆ ಶುರುವಾಗಿದೆ.
ವಿಶೇಷವಾಗಿ ರಾಜ್ಯಗಳು ಮತ್ತು ಪ್ರದೇಶಗಳಾದ್ಯಂತ ಭಾಷಾ ವಿವಾದವು ಜನರನ್ನು ವಿಭಜಿಸಿರುವ ಸಮಯದಲ್ಲಿ, ಇದೇ ವಿಚಾರವಾಗಿ ಅವರು ಮಿಮಿಕ್ರಿ ಮಾಡಿರೋದು ಒಂದಿಷ್ಟು ಜನರಿಗೆ ಬೇಸರ ತಂದಿದೆ. ದೇಶದ 79ನೇ ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಈ ವಿಡಿಯೋ ರಿಲೀಸ್ ಆಗಿದೆ. "ಸೋ ಮಿನಿ ಥಿಂಗ್ಸ್" ಸಿರೀಸ್ ವಿಡಿಯೋದಲ್ಲಿ "ಭಾರತಕ್ಕಾಗಿ ಒಂದು ಆಶಯ..." ಎಂಬ ಟೈಟಲ್ ಇಡಲಾಗಿದೆ.
ಪ್ರೇಕ್ಷಕರಿಗೆ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳನ್ನು ಕೋರಿದ ಶ್ರದ್ಧಾ ಅವರು, ದೇಶದಲ್ಲಿ ಮಾತನಾಡುವ ಕೆಲವು ಪ್ರಮುಖ ಭಾಷೆಗಳನ್ನು ಕಲಿಯಲು "ಮಿಲೆ ಸೂರ್ ಮೇರಾ ತುಮ್ಹಾರಾ" ಹಾಡು ಸಹಾಯ ಮಾಡಿತು ಎಂದು ಧನ್ಯವಾದಗಳನ್ನು ಸಲ್ಲಿಸಿದ್ದಾರೆ. ಈ ಮೂಲಕ ಮಾತು ಆರಂಭಿಸಿದ್ದಾರೆ. ಇವರ ಸ್ಟ್ಯಾಂಡ್‌ಅಪ್ ಕಾಮಿಡಿಯು ಅನೇಕ ಕನ್ನಡಿಗರ ಭಾವನೆಗಳಿಗೆ ಧಕ್ಕೆ ತಂದಿದ್ದು, ಈಗ ವಿವಾದದ ಕೇಂದ್ರವಾಗಿದ್ದಾರೆ.
ಈ ಹಾಡನ್ನು ಇಂದು ರಿಲೀಸ್ ಮಾಡಿದರೆ ಎದುರಾಗಬಹುದಾದ ಕಾಲ್ಪನಿಕ ಟೀಕೆಯನ್ನು ಅವರು ವ್ಯಂಗ್ಯ ಮಾಡಿ ಹೇಳಿದ್ದರು. ಮಹಾರಾಷ್ಟ್ರ, ಕರ್ನಾಟಕ, ಕೇರಳ, ತಮಿಳುನಾಡಿನಂತಹ ರಾಜ್ಯಗಳು ಹಿಂದಿಯನ್ನು ವಿರೋಧಿಸುತ್ತವೆ ಎಂಬರ್ಥದಲ್ಲಿ ಜೋಕ್ ಮಾಡಿದ್ದರು. "ಈ ಹಾಡಿನಲ್ಲಿ ಇಷ್ಟೊಂದು ಹಿಂದಿ ಏಕೆ?" ಎಂಬ ತಮಾಷೆಯ ಮಾತು ವಿವಾದವನ್ನು ಸೃಷ್ಟಿ ಮಾಡಿದೆ. ದಕ್ಷಿಣದ ರಾಜ್ಯಗಳಲ್ಲಿ ಹಿಂದಿ ಒತ್ತಾಯವನ್ನು ವಿರೋಧಿಸುವವರಿದ್ದಾರೆ. ಈ ವ್ಯಂಗ್ಯವು ಗುರಿ ತಪ್ಪಿದೆ, ಭಾಷಾ ಪ್ರಾಬಲ್ಯವನ್ನು ವಿರೋಧಿಸುವವರನ್ನು ಗೇಲಿ ಮಾಡಿದೆ ಎಂದು ಭಾವಿಸಿದ್ದಾರೆ.
ಕನ್ನಡ ಲೇಖಕ ಗುರುಪ್ರಸಾದ್ ಡಿಎನ್, ಮೂಲತಃ ಕನ್ನಡದಲ್ಲಿ ಹಂಚಿಕೊಂಡ ಒಂದು ಪೋಸ್ಟ್‌ನಲ್ಲಿ, ಈ ಸ್ಕಿಟ್ ತಪ್ಪಾಗಿದೆ ಎಂದು ಕರೆದು, ಕಾಮಿಡಿಯನ್ಸ್ ತಾವು ಮಾಡುತ್ತಿರುವ ವ್ಯಂಗ್ಯವು ಯಾವುದಕ್ಕೆ, ಯಾರ ವಿರುದ್ಧ ಗುರಿಯಾಗಿದೆ ಎಂಬುದರ ಬಗ್ಗೆ ಆಳವಾಗಿ ಚಿಂತಿಸಬೇಕು. ಸಮಾಜವು ಕ್ರಮೇಣ ಕೆಲವು ವಿವೇಕ ಹೊಂದುತ್ತಿದ್ದಂತೆ, ವಿವಿಧ ವಿಷಯಗಳ ಬಗ್ಗೆ ನಿಜಕ್ಕೂ ಪ್ರಶ್ನೆಗಳು ಉದ್ಭವಿಸಬೇಕು; ಕಾಮಿಡಿ ಅಥವಾ ವ್ಯಂಗ್ಯವು ಯಾವುದರ ವಿರುದ್ಧ ಅಥವಾ ಯಾವುದರ ಬಗ್ಗೆ ಇರಬೇಕು ಎಂಬುದು ಮೊದಲು ಪ್ರತಿಯೊಬ್ಬ ಕಲಾವಿದರಿಗೆ ಮುಖ್ಯವಾಗಿರಬೇಕು, ಅರ್ಥ ಆಗಬೇಕು" ಎಂದಿದ್ದಾರೆ.
"ಇಂದು, ಹಿಂದಿ ಹೇರಿಕೆಯು ಬಹಳ ಗಂಭೀರ ವಿಷಯವಾಗಿದೆ. ಕೇಂದ್ರ ಸರ್ಕಾರವು ಹಿಂದಿಯನ್ನು ಇತರ ಭಾಷೆಗಳ ಮೇಲೆ ಹೇರುತ್ತಿದೆ. ಇದು ಸಾಮಾನ್ಯ ಜನ ಜೀವನದ ಮೇಲೆ ನೆಗೆಟಿವ್ ಪರಿಣಾಮ ಬೀರುತ್ತಿದೆ. ಈ ಟೈಮ್‌ನಲ್ಲಿ ಕಾಮಿಡಿಯು ಅಧಿಕಾರವನ್ನು ಟೀಕಿಸುವ ಸಾಧನವಾಗಿರಬೇಕು, ಅದನ್ನು ವಿರೋಧಿಸುವ ಜನರನ್ನು ಟೀಕಿಸುವುದಲ್ಲ” ಎಂದು ಹೇಳಿದ್ದಾರೆ.
ಶ್ರದ್ಧಾ, ಮಂಗಳೂರಿನವರಾಗಿ ಈಗ ಬೆಂಗಳೂರಿನಲ್ಲಿ ವಾಸ ಮಾಡುತ್ತಿದ್ದಾರೆ. ಕನ್ನಡ ಭಾಷಾ ಹೆಮ್ಮೆಯ ಆಳವನ್ನು ಗ್ರಹಿಸಲು ಸೋತಿದ್ದಾರೆ. ಓರ್ವ ಹೊರಗಿನವರಿಗೆ, ಕನ್ನಡ ಹೆಮ್ಮೆಯು ವಿದೇಶಿ ಕಾನ್ಸೆಪ್ಟ್ ಆಗಿದೆ" ಎಂದು ಓರ್ವ ಸೋಶಿಯಲ್ ಮೀಡಿಯಾ ಬಳಕೆದಾರರು ಹೇಳಿದ್ದಾರೆ.
"ಭಾರತವು ಎಲ್ಲ ಭಾಷೆಗಳನ್ನೂ, ಭಾರತೀಯರನ್ನು ಗೌರವಿಸುತ್ತದೆ ಎಂಬುದಕ್ಕೆ ಆ ಹಾಡು ಸಾಕ್ಷಿಯಾಗಿತ್ತು. ಆದರೆ ಅವರು ತಪ್ಪಾಗಿ ಅರ್ಥ ಮಾಡಿಕೊಂಡರು. ಒಂದು ಭಾಷೆಯ ಹೇರಿಕಯನ್ನು ವಿರೋಧಿಸುವವರನ್ನು ಪರೋಕ್ಷವಾಗಿ ಆಕ್ರಮಣ ಮಾಡಲಾಗಿದೆ. ಟಾಕ್ಸಿಕ್" ಎಂದಿದ್ದಾರೆ.
ಆದರೆ, ಕೆಲವರು ಅಯ್ಯೋ ಶ್ರದ್ಧಾರ ಮಾತನ್ನು ಸಮರ್ಥಿಸಿಕೊಂಡಿದ್ದಾರೆ. ಖ್ಯಾತ ಕಾರ್ಟೂನಿಸ್ಟ್ ಸತೀಶ್ ಆಚಾರ್ಯ ಇದನ್ನು "ತಮಾಷೆ ಹಾಗೂ ಬುದ್ಧಿವಂತ" ಎಂದು ಹೇಳಿದರು. ಆದರೆ ಇತರರು ಈ ವಿಡಿಯೋವನ್ನು ನೆಗೆಟಿವ್ ಆಗಿ ನೋಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.