ಮದುವೆಗೂ ಮುನ್ನ ಕನಸಿನ ಮನೆ ಕಟ್ಟಲು ವರುಣ್ ಆರಾಧ್ಯ ಸಜ್ಜು.. 30x40 ಸೈಟ್‌ಗೆ ಕುಟುಂಬ ಸಮೇತ ಭೇಟಿ, ಪ್ಲ್ಯಾನ್ ಹೇಗಿದೆ?

Published : Oct 24, 2026, 05:30 PM IST
Varun Aradhya new house

ಸಾರಾಂಶ

Varun Aradhya new house: ಬಾಡಿಗೆ ಮನೆಗೆ ಗುಡ್‌ಬೈ ಹೇಳಿ, ಮದುವೆ ಹೊಸ್ತಿಲಲ್ಲೇ ಸ್ವಂತ ಮನೆ ಪ್ರವೇಶಿಸಲು ಯೂಟ್ಯೂಬ್ ಸ್ಟಾರ್ ವರುಣ್ ಆರಾಧ್ಯ ಭರ್ಜರಿ ತಯಾರಿ ನಡೆಸಿದ್ದಾರೆ. ತಮ್ಮ 30x40 ಸೈಟ್‌ಗೆ ಕುಟುಂಬ ಸಮೇತ ಭೇಟಿ ನೀಡಿರುವ ಅವರ ‘ಡ್ರೀಮ್ ಹೋಮ್’ ಪ್ಲ್ಯಾನ್ ಹೇಗಿದೆ? ಇಲ್ಲಿದೆ ಡಿಟೇಲ್ಸ್.

ಬಾಡಿಗೆ ಮನೆಯ ವಾಸಕ್ಕೆ ವಿದಾಯ ಹೇಳಿ, ಮದುವೆಗೂ ಮುನ್ನವೇ ತಮ್ಮದೇ ಆದ ಕನಸಿನ ಮನೆ (Dream Home) ನಿರ್ಮಿಸಲು ಜನಪ್ರಿಯ ಯೂಟ್ಯೂಬರ್, ʻಬೃಂದಾವನʼ ಧಾರಾವಾಹಿ ಖ್ಯಾತಿಯ ನಟ ವರುಣ್‌ ಆರಾಧ್ಯ ಸಜ್ಜಾಗಿದ್ದಾರೆ. ಇತ್ತೀಚೆಗಷ್ಟೇ ಖರೀದಿಸಿದ್ದ 30x40 ಅಳತೆಯ ನಿವೇಶನಕ್ಕೆ ಕುಟುಂಬಸ್ಥರೊಂದಿಗೆ ತೆರಳಿದ್ದು, ಶೀಘ್ರದಲ್ಲೇ ಮನೆ ನಿರ್ಮಾಣ ಕಾಮಗಾರಿಗೆ ಅಧಿಕೃತ ಚಾಲನೆ ನೀಡುವುದಾಗಿ ತಿಳಿಸಿದ್ದಾರೆ.

ಮೂರು ತಿಂಗಳ ಬಳಿಕ ಸೈಟ್‌ಗೆ ಭೇಟಿ

ಸೈಟ್ ಖರೀದಿಸಿ ಬರೋಬ್ಬರಿ ಮೂರು ತಿಂಗಳಾಗಿದ್ದರೂ, ನಿಶ್ಚಿತಾರ್ಥ ಹಾಗೂ ಬಿಡುವಿಲ್ಲದ ಚಿತ್ರೀಕರಣದ ಶೆಡ್ಯೂಲ್‌ನಿಂದಾಗಿ ಸ್ಥಳಕ್ಕೆ ಭೇಟಿ ನೀಡಲು ಸಾಧ್ಯವಾಗಿರಲಿಲ್ಲ. ಇದೀಗ ಬಿಡುವು ಮಾಡಿಕೊಂಡು ತಾಯಿ, ಸಹೋದರಿ ಚೈತ್ರಾ, ಖುಷಾನಿ ಹಾಗೂ ಆಪ್ತ ಆರ್ಕಿಟೆಕ್ಟ್ ಶ್ರೀಧರ್ ಅವರೊಂದಿಗೆ ಸೈಟ್‌ಗೆ ಭೇಟಿ ನೀಡಿದ್ದಾರೆ. ಸದ್ಯ ಜಾಗವನ್ನು ಸಮತಟ್ಟುಗೊಳಿಸಿ, ಕಾಂಪೌಂಡ್ ನಿರ್ಮಿಸುವ ಕೆಲಸಕ್ಕೆ ಮೊದಲ ಆದ್ಯತೆ ನೀಡಲಾಗಿದೆ.

ಡ್ಯೂಪ್ಲೆಕ್ಸ್ ಜತೆಗೆ ಬಾಡಿಗೆ ಮನೆ ಪ್ಲ್ಯಾನ್

ಮನೆಯ ವಿನ್ಯಾಸದ ಬಗ್ಗೆ ತಜ್ಞರೊಂದಿಗೆ ಚರ್ಚಿಸಿದ ಅವರು, ಬೇಸ್‌ಮೆಂಟ್‌ನಲ್ಲಿ ವಿಶಾಲ ಪಾರ್ಕಿಂಗ್, ಮೊದಲ ಮಹಡಿಯಲ್ಲಿ ಬಾಡಿಗೆ ಮನೆ ಹಾಗೂ ಮೇಲ್ಭಾಗದಲ್ಲಿ ಸುಸಜ್ಜಿತ ಡ್ಯೂಪ್ಲೆಕ್ಸ್ ಮನೆ ನಿರ್ಮಿಸುವ ಉದ್ದೇಶ ಹೊಂದಿದ್ದಾರೆ. ಮನೆ ಹೇಗಿರಬೇಕು ಎಂಬ ಐಡಿಯಾಗಾಗಿ ಅದೇ ಬಡಾವಣೆಯಲ್ಲಿ 30x40 ಸೈಟ್‌ನಲ್ಲಿ ನಿರ್ಮಾಣವಾಗಿರುವ ಮಾದರಿ ಮನೆಯೊಂದನ್ನು ಖುದ್ದಾಗಿ ಪರಿಶೀಲಿಸಿದ್ದಾರೆ. ಕಾರ್ ಪಾರ್ಕಿಂಗ್, ವಿಶಾಲವಾದ ಲಿಫ್ಟ್, ಮಾಡ್ಯುಲರ್ ಕಿಚನ್ ಹಾಗೂ ಬಾಲ್ಕನಿ ವಿನ್ಯಾಸವನ್ನು ವೀಕ್ಷಿಸಿ, ತಮಗೆ ಬೇಕಾದ ಬದಲಾವಣೆಗಳನ್ನು ಗುರುತು ಮಾಡಿಕೊಂಡಿದ್ದಾರೆ.

ನಿರ್ಮಾಣ ವೆಚ್ಚ ಎಷ್ಟು?

ಪ್ರಸ್ತುತ ಮಾರುಕಟ್ಟೆ ದರದಂತೆ, ಒಟ್ಟು ಸುಮಾರು 46 ಚದರ ಅಳತೆಯ ಈ ಮನೆಗೆ ಇಂಟೀರಿಯರ್ ಸೇರಿ ಒಂದು ಚದುರಕ್ಕೆ ₹2.80 ಲಕ್ಷದಿಂದ ₹3.50 ಲಕ್ಷದವರೆಗೆ ಖರ್ಚಾಗಬಹುದು ಎಂದು ಅಂದಾಜಿಸಲಾಗಿದೆ. ಒಟ್ಟಾರೆ ಬಜೆಟ್ 1 ಕೋಟಿ ರೂ. ದಾಟುವ ಸಾಧ್ಯತೆಯಿದೆ. ಈ ವೇಳೆ ಸಹೋದರಿ ಚೈತ್ರಾ ತಮಾಷೆಯಾಗಿ "ತಮ್ಮನ ಮನೆಗೆ ₹50 ಲಕ್ಷ ನೆರವು ನೀಡುತ್ತೇನೆ" ಎಂದು ಕಾಲೆಳೆದಿದ್ದು ವ್ಲಾಗ್‌ನಲ್ಲಿ ಗಮನ ಸೆಳೆದಿದೆ.

ಅಭಿಮಾನಿಗಳಲ್ಲಿ ಸಲಹೆ ಕೇಳಿದ ಯೂಟ್ಯೂಬರ್

ಸೈಟ್ ವೀಕ್ಷಣೆ ಮುಗಿಸಿ ಮರಳುವಾಗ ಕುಟುಂಬ ಸಮೇತರಾಗಿ ಹೋಟೆಲ್‌ನಲ್ಲಿ ತಟ್ಟೆ ಇಡ್ಲಿ ಸವಿದು ಸಂಭ್ರಮಿಸಿದ್ದಾರೆ. ವ್ಲಾಗ್‌ನ ಕೊನೆಯಲ್ಲಿ, "ಸ್ವಂತ ಮನೆ ಕಟ್ಟುವುದು ನಮ್ಮ ಜೀವಮಾನದ ಬಹುದೊಡ್ಡ ಆಸೆ. ನಾವೇ ನಿಂತು ಪ್ರೀಮಿಯಂ ಕ್ವಾಲಿಟಿಯಲ್ಲಿ ಮನೆ ನಿರ್ಮಿಸಬೇಕಿದೆ. ನಿಮ್ಮ ಗಮನದಲ್ಲಿ ಅತ್ಯುತ್ತಮ ಹಾಗೂ ನಂಬಿಕಸ್ಥ ಆರ್ಕಿಟೆಕ್ಟ್‌ಗಳು ಇದ್ದರೆ ದಯವಿಟ್ಟು ಸಂಪರ್ಕಿಸಿ" ಎಂದು ತಮ್ಮ ಅಪಾರ ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ.

ಸಂಪೂರ್ಣ ಡಾಕ್ಯುಮೆಂಟರಿ ಪ್ರಸಾರ

ವಿಶೇಷವೆಂದರೆ, ಸೈಟ್ ಸ್ವಚ್ಛತೆ, ಭೂಮಿಪೂಜೆ ಮತ್ತು ಕಾಂಪೌಂಡ್ ನಿರ್ಮಾಣದಿಂದ ಹಿಡಿದು ಗೃಹಪ್ರವೇಶದವರೆಗಿನ ಸಮಗ್ರ ಕಾಮಗಾರಿಯನ್ನು ‘ಡಾಕ್ಯುಮೆಂಟರಿ’ ಮಾದರಿಯಲ್ಲಿ ಸೆರೆಹಿಡಿಯಲು ವರುಣ್‌ ನಿರ್ಧರಿಸಿದ್ದಾರೆ. ತಮ್ಮ ಈ ಕನಸಿನ ಮನೆಯ ಪ್ರತಿಯೊಂದು ಹಂತದ ಬೆಳವಣಿಗೆಯನ್ನು ವ್ಲಾಗ್ ಮೂಲಕ ಅಭಿಮಾನಿಗಳೊಂದಿಗೆ ನಿರಂತರವಾಗಿ ಹಂಚಿಕೊಳ್ಳುವುದಾಗಿ ತಿಳಿಸಿದ್ದಾರೆ.

ವೀಕ್ಷಕರಿಗೆ ಕಿವಿಮಾತು

ಇದೇ ವೇಳೆ ಸೆಕೆಂಡ್ ಹ್ಯಾಂಡ್ ಕಾರು ಡೀಲಿಂಗ್ ಹೆಸರಿನಲ್ಲಿ ನಡೆಯುವ ದಂಧೆಯ ಬಗ್ಗೆ ವರುಣ್‌ ಸಾರ್ವಜನಿಕರಿಗೆ ಮಹತ್ವದ ಎಚ್ಚರಿಕೆ ನೀಡಿದ್ದಾರೆ. ತಮ್ಮ ಆಪ್ತರೊಬ್ಬರು ದೆಹಲಿಯಲ್ಲಿ ಐಷಾರಾಮಿ ಕಾರು ಖರೀದಿಸಲು ಹೋಗಿ ನಕಲಿ ಡೀಲರ್ ಕೈಯಲ್ಲಿ ಬರೋಬ್ಬರಿ ₹10 ಲಕ್ಷ ಕಳೆದುಕೊಂಡ ಘಟನೆಯನ್ನು ಬಹಿರಂಗಪಡಿಸಿದ ಅವರು, "ಕಡಿಮೆ ಬೆಲೆಗೆ ಕಾರು ಸಿಗುತ್ತದೆ ಎಂಬ ಆಮಿಷಗಳಿಗೆ ಯಾರೂ ಬಲಿಯಾಗಬೇಡಿ. ಪರಿಶೀಲಿಸದೆ ಅಪರಿಚಿತ ಡೀಲರ್‌ಗಳಿಗೆ ಮುಂಗಡ ಹಣ ನೀಡಿ ಮೂರುನಾಮ ಹಾಕಿಸಿಕೊಳ್ಳಬೇಡಿ" ಎಂದು ವೀಕ್ಷಕರಿಗೆ ಕಿವಿಮಾತು ಹೇಳಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

DKD ವೇದಿಕೆಯಲ್ಲಿ 'ನಿನ್ನಂಥ ಅಪ್ಪ ಇಲ್ಲ' ಹಾಡು ರೀಕ್ರಿಯೇಟ್​: ಆ ದಿನಗಳ ನೆನೆದು ಕಣ್ಣೀರಿಟ್ಟ ಸುಧಾರಾಣಿ
Amruthadhaare: ಭೂಮಿಕಾಗೆ 2 ಬಾರಿ ಕುಡಿಸಾಯ್ತು- ಈಗ ದೀಪಿಕಾ ಸರದಿ! ಬಾಯಿ ಬಿಡೋ ಟೈಮ್​ ಬಂದಾಯ್ತು