
ಕಿರುತೆರೆಯ ಜನಪ್ರಿಯ ನಟಿ, ಲೇಖಕಿ ಹಾಗೂ ನಿರ್ದೇಶಕಿಯಾಗಿ ಹೊಸ ಅಧ್ಯಾಯ ಆರಂಭಿಸಿರುವ ರಂಜನಿ ರಾಘವನ್ ಇದೀಗ ಇಟಲಿಯ ಸುಂದರ ತಾಣಗಳಲ್ಲಿ ಸೋಲೋ ಟ್ರಿಪ್ ಎಂಜಾಯ್ ಮಾಡಿ ಬಂದಿದ್ದಾರೆ. 'ಪುಟ್ಟಗೌರಿ ಮದುವೆ' ಮತ್ತು 'ಕನ್ನಡತಿ' ಧಾರಾವಾಹಿಗಳ ಮೂಲಕ ಮನೆಮಾತಾಗಿರುವ ರಂಜನಿ, ಸಿನಿಮಾ ಕೆಲಸದ ನಡುವೆಯೂ ತಮ್ಮ ಬಿಡುವಿನ ಕ್ಷಣಗಳನ್ನು ವಿದೇಶ ಪ್ರವಾಸದಲ್ಲಿ ಕಳೆದಿದ್ದಾರೆ.
ಪ್ರಸ್ತುತ ತಮ್ಮ ಚೊಚ್ಚಲ ನಿರ್ದೇಶನದ 'ಡೀ ಡೀ ಢಿಕ್ಕಿ' ಸಿನಿಮಾದಲ್ಲಿ ಬ್ಯುಸಿಯಾಗಿರುವ ರಂಜನಿ, ಕೆಲಸದಿಂದ ಸ್ವಲ್ಪ ವಿರಾಮ ಪಡೆದು ಏಕಾಂಗಿಯಾಗಿ ಇಟಲಿ ಪ್ರವಾಸ ಕೈಗೊಂಡಿದ್ದಾರೆ. ಪ್ರವಾಸದ ವೇಳೆ ಮಿಲಾನ್, ಅಮಾಲ್ಫಿ ಕೋಸ್ಟ್, ಬ್ಲೂ ಗ್ರೊಟ್ಟೊ ಹಾಗೂ ಸೊರೆಂಟೊ ಸೇರಿದಂತೆ ಹಲವು ಪ್ರಸಿದ್ಧ ಪ್ರವಾಸಿ ತಾಣಗಳಿಗೆ ಭೇಟಿ ನೀಡಿ ಅಲ್ಲಿನ ಪ್ರಕೃತಿ ಸೌಂದರ್ಯವನ್ನು ಸವಿದಿದ್ದಾರೆ.
ಪ್ರಯಾಣದ ನೆನಪುಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ರಂಜನಿ, ಇಟಲಿಯ ಸುಂದರ ಹಿನ್ನೆಲೆಯಲ್ಲಿರುವ ತಮ್ಮ ಫೋಟೋಗಳ ಮೂಲಕ ಅಭಿಮಾನಿಗಳ ಗಮನ ಸೆಳೆದಿದ್ದಾರೆ. ಈ ಚಿತ್ರಗಳಿಗೆ ಸಾವಿರಾರು ಲೈಕ್ಸ್ ಮತ್ತು ಕಾಮೆಂಟ್‌ಗಳು ಹರಿದುಬರುತ್ತಿದ್ದು, ಅಭಿಮಾನಿಗಳು ಅವರ ಹೊಸ ಲುಕ್ ಹಾಗೂ ಪ್ರವಾಸದ ಕ್ಷಣಗಳನ್ನು ಮೆಚ್ಚಿಕೊಂಡಿದ್ದಾರೆ.
ಜೊತೆಗೆ 'ನಾನು ಒಬ್ಬಳೇ ಇಟಲಿಯ ಬೇರೆ ಬೇರೆ ಊರಿಗೆ ಹೋದ ಬಗ್ಗೆ caption ಬರೆಯೋಣ ಅಂತ ಹೋದೆ. But, ಪ್ರವಾಸಗಳು ಹೊಸ ಸ್ಥಳಗಳನ್ನು ತೋರಿಸುವುದಕ್ಕಿಂತ, ನಮ್ಮೊಳಗಿನ ಹೊಸ ವ್ಯಕ್ತಿಯನ್ನು ಪರಿಚಯಿಸುತ್ತದೆ' ಎಂದು ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.
ಇನ್ನು ರಂಜನಿ ರಾಘವನ್ 1994ರ ಮಾರ್ಚ್ 29ರಂದು ಬೆಂಗಳೂರಿನಲ್ಲಿ ಜನಿಸಿದ್ದು, ಶೇಷಾದ್ರಿಪುರಂ ಕಾಲೇಜಿನಲ್ಲಿ ಎಂಬಿಎ ಪದವಿ ಪಡೆದಿದ್ದಾರೆ. ನಟನೆಯ ಜೊತೆಗೆ ಬರವಣಿಗೆಯಲ್ಲೂ ತಮ್ಮದೇ ಛಾಪು ಮೂಡಿಸಿರುವ ಅವರು, 2014ರಲ್ಲಿ 'ಪುಟ್ಟಗೌರಿ ಮದುವೆ' ಧಾರಾವಾಹಿಯ ಮೂಲಕ ಕಿರುತೆರೆಗೆ ಪದಾರ್ಪಣೆ ಮಾಡಿದರು. ಬಳಿಕ 'ಪೌರ್ಣಮಿ', 'ಇಷ್ಟದೇವತೆ' ಹಾಗೂ 'ಕನ್ನಡತಿ' ಧಾರಾವಾಹಿಗಳಲ್ಲಿ ಅಭಿನಯಿಸಿ ಅಪಾರ ಜನಪ್ರಿಯತೆ ಗಳಿಸಿದರು.
2017ರಲ್ಲಿ 'ರಾಜಹಂಸ' ಚಿತ್ರದ ಮೂಲಕ ನಾಯಕಿಯಾಗಿ ಬೆಳ್ಳಿತೆರೆಗೆ ಕಾಲಿಟ್ಟ ರಂಜನಿ, ಬಳಿಕ 'ಪುಣ್ಯ', 'ಕ್ಷಮಿಸಿ ನಿಮ್ಮ ಖಾತೆಯಲ್ಲಿ ಹಣವಿಲ್ಲ', 'ನೈಟ್ ಕರ್ಫ್ಯೂ' ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಇದೀಗ ನಿರ್ದೇಶಕಿಯಾಗಿಯೂ ಹೊಸ ಜವಾಬ್ದಾರಿ ಹೊತ್ತಿರುವ ಅವರು, 'ಡೀ ಡೀ ಢಿಕ್ಕಿ' ಚಿತ್ರದ ಮೂಲಕ ಮತ್ತೊಂದು ಹೊಸ ಪ್ರಯಾಣಕ್ಕೆ ಚಾಲನೆ ನೀಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.